‘ಕಥಾಜ್ಞಾನ’ ನೆನಪುಗಳು-ಡಾ. ಯಲ್ಲಮ್ಮ ಕೆ

ಇದೊಂದು  ಕಥಾ ಮೂಲವನ್ನು ಅರಸಿ ಅಂಡಲೆದ ಸುದೀರ್ಘ ಪಯಣ. ಅಡಗೋಲಜ್ಜಿ ಕಥೆಯಂತೆ –  ಒಂದಾನೊಂದು ಕಾಲದಲ್ಲಿ ಒಂದು ಊರು, ಊರೆಂದರೆ ಊರು ಅದುವೇ ಅವನ ಸಾಮ್ರಾಜ್ಯ, ಅವನೇ ರಾಜ, ಆ ರಾಜನಿಗೊಂದು ಕೊರಗು.., ಹೀಗೆ ಸಾಗುವ ಅಡಗೋಲಜ್ಜಿ ಕಥೆಯಲ್ಲ, ಕಥೆಯಲ್ಲದ ಕಥೆ ನಮ್ಮಜ್ಜಿಯದ್ದು..,

ನಮ್ಮದು ಹೇಳಿಕೊಳ್ಳುವಂಥ ಹಳ್ಳಿಯಲ್ಲ, ಹೇಳದೆ ಇರುವಂತದ್ದೂ ಅಲ್ಲ! ಅಲೆಮಾರಿಯ ಬದುಕಿಗೆ ಒಂದು ವಿರಾಮ ನೀಡಲೆಂದು ಕೆರೆ ಅಂಗಳದಿ ಬಂದು ನಮ್ಮಪ್ಪ ಒಂದು ಜೋಪಡಿಯ ಹಾಕಿದ, ಒಂದು ಕುರಿ ಬ್ಯಾ.., ಎಂದರೆ ಇಡೀ ಹಿಂಡೆ ಬ್ಯಾ..,ಬ್ಯಾ.., ಎನ್ನುವಂತೆ ಎಲ್ಲ ಕುರಿಗಳು ಒಂದೆಡೆ ಸೇರಿ ಒಂದು ದೊಡ್ಡಿಯಾಯಿತು. ಕೆರೆ ಅಂಗಣದ ಮುಂದಿನ ಗುಡಿಯ ಹೆಸರೇ ಆ ದೊಡ್ಡಿಗೆ ಸಂದಿತು.

ನಾನು ಚಿಕ್ಕಂದಿನಿಂದಲೂ ಓಣಿ ಹುಡುಗಿ[ಗ] ರೊಂದಿಗೆ ಆಡಿಕೊಂಡೆ ಬೆಳೆದವಳು. ನನ್ನ ದೊಡ್ಡಣ್ಣನ ವಯೋಮಾನದ ‘ಬಸವರಾಜ’ ಎಂಬಾತನನ್ನು ನಾವು ಅಣ್ಣ ಎನ್ನದೇ ಅಕ್ಕ ಎಂದು ಕರೆಯುತ್ತಿದ್ದೆವು. ನಾವು ಹಾಗೆ ಕರೆದಾಗಲೆಲ್ಲ ಅವನು ನಮ್ಮನ್ನು ದುರ್ಗುಟ್ಟಿ ನೋಡಿ ಗದರಿಸಿ ಬೆನ್ನತ್ತಿ ಹೊಡೆಯಲು ಬರುತ್ತಿದ್ದ, ಅವನ ಕೈಯಿಂದ ತಪ್ಪಿಸಿಕೊಂಡು ಮನೆ ಸೇರುತ್ತಿದ್ದೆವು. ಆದರೆ ಆ ಬಸವರಾಜ ಅಣ್ಣನಿಗೆ ನಾವೆಲ್ಲ ಅಕ್ಕ ಎಂದು ಕರೆಯುತ್ತಿದ್ದದ್ದು ಏಕೆ ಎಂಬುದೇ ಕುತೂಹಲದ ಸಂಗತಿ! ನಮಗೆ ತಿಳಿಯದೆ ಅಕ್ಕ ಎಂದು ಕರೆಯತ್ತಿದ್ದೆವು, ತಿಳಿದವರಾರು ಆ ಬಗ್ಗೆ ನಮಗೆ ಕೇಳಿದರೆ ಏನೆಂದು ಹೇಳುತ್ತಿರಲಿಲ್ಲ, ಯಾಕೆಂದರೆ ನಾವಿನ್ನು ಚಿಕ್ಕ ಮಕ್ಕಳು. ಈ ಬಗ್ಗೆ ನಮ್ಮ ಅಜ್ಜಿಯನ್ನ ದುಂಬಾಲು ಬಿದ್ದು ಕೇಳಿದಾಗ ಅವಳು ಆ ಕಥೆಯನ್ನು ಬಿಚ್ಚಿದಳು ಕೇಳಿದ ನಾವು ಬೆಚ್ಚಿದೆವು!

ಬಸವರಾಜ ಅ[ಕ್ಕ]ಣ್ಣ ಒಬ್ಬ ಯಥಾರೀತಿ ಮನುಷ್ಯ! ಶಾಲೆಯ ಮುಖ ನೋಡದವನು ಜಂಗಳದನ ಕಾಯ್ದವನು. ಬುದ್ಧಿ ಬೆಳೆಯದಿದ್ದರೂ ದೇಹ ಬೆಳದಿತ್ತು, ಹೆತ್ತ ತಂದೆ ತಾಯಿಗೆ ಕೈಗೆ ಬಂದ ಮಗನಿಗೆ ಒಂದು ಹೆಣ್ಣು ತೆಗೆದು ಮದುವೆ ಮಾಡಬೇಕು, ಮೊಮ್ಮಕ್ಕಳನ್ನ ಎತ್ತಿ ಆಡಿಸಬೇಕು ಎಂಬ ಹೆಬ್ಬಯಕೆ. ಅವನನ್ನು ನೋಡಿದರೆ ಯಾರೂ ಹೆಣ್ಣು ಕೊಡುವಂತಿರಲಿಲ್ಲ, ಕೊಡದಂತೆಯೂ ಇರಲಿಲ್ಲ! ಯಾಕೆಂದರೆ ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದಂತೆ, ಒಂದು ಗಂಡಿಗೆ ಒಂದು ಹೆಣ್ಣು ಅಂತ ಆ ದೇವರು ಸೃಷ್ಟಿ ಮಾಡಿಯೇ ಇರುತ್ತಾನಂತೆ  ಅಂತೆಯೇ ಮದುವೇ ಕೂಡ ಆಯ್ತು! ಮದುವೆ ಬಗ್ಗೆ ಆತನಿಗೆ ಯಾವುದೇ [ಅ]ಸ್ಪಷ್ಟ ಪರಿಕಲ್ಪನೆ ಇರಲಿಲ್ಲ, ಗೇಲಿ ಮಾಡುವ ಆತನ ಗೆಳೆಯರ ಗುಂಪಿಗೆ ಈತ ರಸವತ್ತಾದ ಸರಕು.

ಆತನ ಗೆಳೆಯರೆಲ್ಲರೂ ಸೇರಿ ಪ್ರಸ್ಥದ ದಿನದ ಕುರಿತಾಗಿ  ಮೊದಲ ರಾತ್ರಿಯೆಂದರೆ ಎಲ್ಲರೂ ಜೀವನದಲ್ಲೂ ನೆನಪಿನಲ್ಲಿಟ್ಟು ಕೊಳ್ಳಬಹುದಾದ ಒಂದು ಶುಭದಿನ, ನಿನ್ನನ್ನೇ ನಂಬಿಕೊಂಡು ಬಂದಿರುವ ಆ ಹೆಣ್ಣು ಮಗಳನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು, ಗಂಡ ಹೆಂಡತಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮುನ್ನ ಪೂಜೆ ಮಾಡಿ, ಊದಿನಕಡ್ಡಿ ಬೆಳಗಿ, ಕಾಯಿಒಡೆದು ಭಕ್ತಿಯಿಂದ ನಮಸ್ಕರಿಸುತ್ತಾ ಮುಂದಡಿಯಿಡಬೇಕು ಎಂದು ಇಲ್ಲದ್ದನ್ನೆಲ್ಲ ಆತನ ತಲೆಯಲ್ಲಿ ತುಂಬಿದ್ದರು.

ಬಸವಣ್ಣನು ತೀರಾಮುಗ್ಧ ಮನುಷ್ಯ, ಹಾಲಿಗೂ ಸುಣ್ಣದ ನೀರಿಗೂ ವ್ಯತ್ಯಾಸ ತಿಳಿಯದವ, ಬೆಳ್ಳಗಿರುವುದೆಲ್ಲಾ ಹಾಲೆಂದೇ ನಂಬುವವ, ‘ಮೂಢರಿಗೆ ಕೇಡಿಲ್ಲ’ ಎಂಬ ಗಾದೆಮಾತಿದ್ದರೂ ಆತ ಅಪಹಾಸ್ಯಕ್ಕೆ ಗುರಿಯಾಗಿದ್ದ. ಆ ಮೊದಲ ರಾತ್ರಿದಿನ ಗೆಳೆಯರ ಅಣತಿಯಂತೆ ನಡೆದುಕೊಂಡ, ಆತನ ಹೆಂಡತಿಯು ಮುಗ್ಧೆ ಸಾದಾಸೀದ ಹಳ್ಳಿ ಹುಡುಗಿ ಬೆಳ್ಳಿ ಬೆಡಗಿ! ಆ ರಾತ್ರಿ ಹೇಗೋ ಕಳೆದು ಹೋಯಿತು.

ಇತ್ತ ಅವನ ಬರುವಿಗಾಗಿ ಕಾದು ಕುಳಿತ ಗೆಳೆಯರ ಬಳಗ ಮೊದಲ ರಾತ್ರಿಯ ಅನುಭವವನ್ನು ಕೇಳಿ ತಿಳಿದುಕೊಳ್ಳುವ ಚಪಲದಿ ಕಾಯ್ದಿತ್ತು, ಅವನ ಬಾಯಿಂದಲೇ ಎಲ್ಲವನ್ನು ಕೇಳಿ ತಿಳಿದ ಇವರು ನಗೆದಾಡಿದರು, ಮತ್ತೆ ಮೊದಲು ನಿನ್ನ ಹೆಂಡತಿಯನ್ನು ನೀನು ಏನೆಂದು ಕರೆದೆ ಎಂದೊಡನೆ ಅಕ್ಕ ಎಂದು ಹೇಳಿದ! ಬಳ್ಳಾರಿ ಬೀಚಿಯ ನಗೆ ಹನಿಯಂತೆ ಆಕೆಯ ಹೆಸರು ಅಕ್ಕಮ್ಮ! ಅಕ್ಕ ಎಂದು ಕರೆಯಲೋ ಅಮ್ಮ ಎಂದು ಕರೆಯಲೋ, ಅಕ್ಕಮ್ಮ ಎಂದು ಕರೆಯಲೋ ಎಂಬ ಗೊಂದಲದ ನಡುವೆಯೂ ಅಕ್ಕ ಎಂದು ಕರೆದಿದ್ದ, ಇದನ್ನು ಕೇಳಿದ ಗೆಳೆಯರ ಗುಂಪು ಇಡೀ ಊರೂ ತುಂಬಾ ಡಂಗೂರ ಸಾರಿದ್ದರು, ಅಂದಿನಿಂದ ಊರಿನಲ್ಲಿ ಆತನನ್ನ ಅಕ್ಕ ಎಂದೇ ಕರೆಯುತ್ತಿದ್ದರು, ಇದನ್ನು ಕೇಳಿ ಆತ ಎಲ್ಲರ ಮೇಲೆ ರೇಗುತ್ತಿದ್ದ ಹೊಡೆಯಲು ಹೋಗುತ್ತಿದ್ದ! ಎಳೆಯ ಮಕ್ಕಳಾದ ನಮಗೆ ಆತನಿಗೆ ಅಕ್ಕ ಅಕ್ಕ ಎಂದು ಕರೆದು ಚೇಡಿಸುವುದು, ಅವನು ನಮ್ಮನ್ನಟ್ಟಿಕೊಂಡು ಬರುವುದು ನಾವು ಅವನ ಕೈಯಿಂದ ತಪ್ಪಿಸಿಕೊಂಡು ಓಡುವುದು ನಿತ್ಯವೂ ನಮಗೆ ಒಂದು ಆಟವಾದಂತಿತ್ತು, ಆ ಆಟ ಎಂದೋ  ಮರೆತುಹೋಗಿತ್ತು. ಮುಂದೆ ನಾವು ಪಿಎಚ್ಡಿಯ  ಸಂಶೋಧನಾ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುವಾಗ ನಮ್ಮ ನಮ್ಮ ಅಧ್ಯಾಪಕರಾದ ಗಾಯಕ್ವಾಡ್ ರ ವಿಚಾರಗಳು ‘ಲಜ್ಜಾಗೌರಿ’ಯಲ್ಲಿ ಉಲ್ಲೇಖಿತ ಯೋನಿ ಪೂಜೆ, ಹಾಗೂ ನೇಮಿಚಂದ್ರ ರವರ ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಎಂಬ ಪ್ರವಾಸ ಕಥನದಲ್ಲಿ ಉಲ್ಲೇಖಿತ ಶಿಶ್ನುಪೂಜೆ ಮತ್ತು ಆರಾಧನೆಯ ಗುಡಿಗಳ ಚಿತ್ರಪಟಗಳು, ಶೆಟ್ಟರ್ ರವರ ತಮ್ಮ ‘ಬದಾಮಿ ಶಾಸನಗಳು’ ಕೃತಿಗಳಲ್ಲಿ ನೀಡಿದ ಸಾಕ್ಷಾಧಾರಗಳು, ಓಶೋ ರಜನೀಶ್ ಅವರ ‘ಖುಜರಾಹೊ ದೇವಾಲಯಗಳು’ ಕೃತಿಯಲ್ಲಿನ ಚಿತ್ರಪಟಗಳು  ಹಾಗೂ ‘ಸಂಭೋಗದಿಂದ ಸಮಾಧಿಯೆಡೆಗೆ’ ಕೃತಿಯಲ್ಲಿನ  ರಥಗಳ ಮೇಲೆ, ದೇವಸ್ಥಾನಗಳಲ್ಲಿನ ಉಬ್ಬು ಶಿಲ್ಪಗಳ ಹಿಂದೆ ಅಡಗಿರುವ ಲೈಂಗಿಕ ಜ್ಞಾನದ ಹೊಳವು ರೋಮಾಂಚನವನ್ನುಂಟು ಮಾಡಿತ್ತು, ಅಲ್ಲದೇ ನಾವು ಎಳೆತನದಲ್ಲಿ ಕೇಳಿದ ಒಂದು ಕಥೆಯಲ್ಲದ ಕಥೆ,  ನಮ್ಮ ಪುರಾತನ ಸಂಸ್ಕೃತಿಯ, ಮನುಕುಲದ ಪೀಳಿಗೆಯ ಉತ್ಪಾದಕತ್ವದ ಬಗೆಗಿನ ಜ್ಞಾನವನ್ನು ನಾವು ನಗೆಯ ಪ್ರಸಂಗವೆಂದು ತಿಳಿದು ಇಡೀ ಊರೆಲ್ಲಾ ಗೇಲಿ ಮಾಡಿದ ಬಗೆ! ಅಜ್ಞಾನವನ್ನು ಎತ್ತಿ ಹಿಡಿದಿತ್ತು.

ಈ ಜ್ಞಾನದ ಬೆಂಬತ್ತಿ ಹೊರಟು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಸಿದ್ದನಕೊಳಕ್ಕೆ ಖುದ್ದಾಗಿ  ಭೇಟಿ ನೀಡಿ ಕಣ್ಣಾರೆ ಕಂಡು, ಸಿದ್ದನಕೊಳದ ಸ್ಥಳಪುರಾಣ, ಯೋನಿಪೂಜೆಯ ಬಗೆಗಿನ ವಿವರಗಳನ್ನು ಸ್ಥಳೀಯರ ಬಾಯಿಂದ, ಅಲ್ಲಿಗೆ ಬಂದ ಭಕ್ತಾದಿಗಳಿಂದ ಕಿವಿಯ್ಯಾರೆ ಕೇಳಿ ಬಂದಿದ್ದೆ, ಬದಾಮಿ, ಇಟಗಿ, ಸೂಡಿ ಮತ್ತು ಗಜೇಂದ್ರಗಡದ ಸುತ್ತಮುತ್ತಲು ಹೆಸರಾದ ಹುಚ್ಚು ಈರಪ್ಪ ಅಜ್ಜನ “ಯಾವುದು ಹೌದೋ ಅದು ಅಲ್ಲ, ಯಾವುದು ಅಲ್ಲವೋ ಅದು ಹೌದು!” ಎಂಬ ಹೇಳಿಕೆ ನೆನಪಿಗೆ ಬಂದಿತು. ಯಾವುದನ್ನ ನಾವು ಅಶ್ಲೀಲ ಎಂದು ಕರೆದಿದ್ದೇವೆಯೋ ಅದೇ ನಿಜವಾದ ಶೀಲವಾಗಿದೆ, ಮನುಕುಲದ ನೆಲೆ ಬೆಲೆಯ ಮೂಲವಾಗಿದೆ. ಈ ಬಗ್ಗೆ ಮಾತನಾಡಿದರೆ, ಬರೆದರೆ ಶಿಷ್ಟರು ಮೂಗು ಮುರಿಯುತ್ತಾರೆ, ಓದುತ್ತಾ ಓದುತ್ತಾ ಒಳೊಳಗೆ ಹುಳಿ ನೀರು ಕುಡಿಯುತ್ತಾರೆ ಆ ಮಾತು ಬೇರೆ.

ಸಿಂಧೂ ನದಿ ಬಯಲಿನಲ್ಲಿ ಬೆಳೆದು ಬಂದ ನಾಗರಿಕತೆ ಮೂಲವಾಗಿ ಮಾತೃ ಪ್ರಧಾನವಾಗಿದ್ದು, ಉತ್ಪಾದಕತೆಯ ಮೂಲ ಹೆಣ್ಣು, ಹೆಣ್ಣನ್ನ ಭೂತಾಯಿಗೆ ಹೋಲಿಸುವುದರ ಮುಖೇನ ಫಲವತ್ತತೆಯನ್ನು ಬೇಡಿ ಯೋನಿ ಪೂಜೆಯನ್ನು ಮಾಡುವುದು ಆಚರಣೆಯಲ್ಲಿತ್ತು. ಆಚಾರ್ಯರು ಸಾರಿದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಪ್ರತಿಪಾದನೆಗಿಂತಲೂ ಬಸವಣ್ಣ ಸಾರಿದ ಶಕ್ತಿ ವಿಶಿಷ್ಟಾದ್ವೈತವು ನಮ್ಮ ನಾಡಿನಲ್ಲಿ ಹೆಚ್ಚು ಪ್ರಚುರಗೊಂಡು ನಾಡಿನ ತುಂಬೆಲ್ಲ ಶಕ್ತಿಪೀಠಗಳನ್ನು ನಾವು ಇಂದು ಕಾಣುತ್ತೇವೆ. ಇದನ್ನೆಲ್ಲ ಕಂಡುಂಡ ಪು ತಿ ನ ರವರು :

ದೇವ ಬೊಂಬೆ
ಪೂಜೆ ಆಟ
ಭಕ್ತಿ ಸೋಜಿಗ!

ಎಂದು ಕವಿತೆಯೊಂದನ್ನು ಬರೆದದ್ದಕ್ಕೆ ಪ್ರೇರಣೆ ಇರಬಹುದೆ..?


Leave a Reply

Back To Top