ಸಂಗಾತಿ ವಾರ್ಷಿಕ ವಿಶೇಷಾಂಕ

ಜಿ. ಹರೀಶ್ ಬೇದ್ರೆ-

ಕನ್ನಡ ಸಾಹಿತ್ಯದ ಬೆಳವಣಿಗೆಗೆ

ಜಾಲತಾಣಗಳ ಕೊಡುಗೆಯೇನು?

ಸಾಮಾಜಿಕ ಜಾಲತಾಣಗಳು ಉಗಮವಾಗಿ ಅದು ಸಾಹಿತ್ಯದ ಓದು ಬರಹಗಳಿಗೆ ಅಸ್ಪದವಾಗುವವರೆಗೂ ಸಾಕಷ್ಟು ಪ್ರತಿಭಾನ್ವಿತ ಬರಹಗಾರರು ಅವಕಾಶ ವಂಚಿತರಾಗಿದ್ದರು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಏಕೆಂದರೆ ನಾವು ಯಾವುದಾದರೂ ಪತ್ರಿಕೆಗಳಿಗೆ ಯಾವುದೇ ರೀತಿಯ ಬರಹಗಳನ್ನೋ, ಕತೆ ಕವನಗಳನ್ನು ಬರೆದು ಕಳಿಸಿದರೆ ಪ್ರಕಟವಾಗುವುದು ಸಂದೇಹಾಸ್ಪದ ಆಗಿರುತ್ತಿತ್ತು. ಕೊನೆಯ ಪಕ್ಷ ನಮ್ಮ ಬರಹ ಪ್ರಕಟಣೆಗಾಗಿ ಆಯ್ಕೆ ಆಗಿದೆಯೋ ಇಲ್ಲವೋ ಎನ್ನುವುದು ಕೂಡ ತಿಳಿಯುತ್ತಿರಲಿಲ್ಲ. ಹಿಂದೆ ನಾವು ಬರಹಗಳನ್ನು ಪತ್ರಗಳ ಮೂಲಕ ಕಳಿಸುತ್ತಿದ್ದೆವು ಹಾಗಾಗಿ ಅವರೂ ಸಹ ನಮಗೆ ಪತ್ರದ ಮೂಲಕವೇ ಉತ್ತರಿಸಬೇಕಾದ್ದರಿಂದ ಆಯ್ಕೆಯ ಬಗ್ಗೆ ಹೇಳುತ್ತಿರಲಿಲ್ಲ ಎಂದುಕೊಂಡರೆ, ಈಗ ನಾವು ನಮ್ಮ ಬರಹಗಳನ್ನು ಮಿಂಚಂಚೆ ಮೂಲಕ ಕಳಿಸಲು ಅವಕಾಶವಿದೆ. ಹೇಗೂ ನಾವು ಕಳಿಸಿದ ಬರಹವನ್ನು ಪತ್ರಿಕೆಯವರು ಓದುತ್ತಾರೆ, ಓದಿ ಮುಗಿಸಿದ ಮೇಲೆ ಅದು ಪ್ರಕಟಣೆಗೆ ಯೋಗ್ಯವಲ್ಲ ಎಂದಾದರೆ ತಕ್ಷಣ, ನಿಮ್ಮ ಬರಹವನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ ಎನ್ನುವ ಮರುತ್ತರು ನೀಡಬಹುದು, ಆದರೆ ಯಾವ ಪತ್ರಿಕೆಯವರೂ ಹೀಗೆ ಮಾಡುತ್ತಿಲ್ಲ ಎನ್ನುವುದು ವಿಷಾದನೀಯ. ಹೀಗೆ ಹತ್ತು ಹಲವು ಬಾರಿ ನಾವು ಪತ್ರಿಕೆಗಳಿಗೆ ಬರೆದು ಕಳಿಸಿದರೂ ಪ್ರಕಟವಾಗಲಿಲ್ಲ ಎಂದಾದಾಗ, ನಾವು ಬರೆಯುವುದೆಲ್ಲಾ ಕಸದ ಬುಟ್ಟಿ ಸಾಹಿತ್ಯ, ಇದಕ್ಕಾಗಿ ಸಮಯ ಮತ್ತು ಹಣ ಖರ್ಚು ಮಾಡುವುದು ವ್ಯರ್ಥ ಎಂದು ಸಾಕಷ್ಟು ಜನ ಪ್ರತಿಭಾನ್ವಿತರು ಬರೆಯುವುದನ್ನು ನಿಲ್ಲಿಸಿದ್ದು ಸತ್ಯ.

ಆದರೆ ಈಗ ಕಾಲ ಬದಲಾಗಿದೆ, ಜಾಲತಾಣಗಳ ಸಹಾಯದಿಂದಾಗಿ, ಪತ್ರಿಕೆಗಳಿಗೆ ಕಳಿಸುವ ಗೋಜಿಗೆ ಹೋಗದೆ, ನಾವು ಬರೆದಿದ್ದನ್ನು ವಾಟ್ಸಪ್ ಬಳಗಗಳಲ್ಲಿ, ಫೇಸ್ಬುಕ್ ಸಾಹಿತ್ಯದ ಗುಂಪುಗಳಲ್ಲಿ, ಜಾಲತಾಣ ಆಧಾರಿತ ಸಾಹಿತ್ಯ ಪತ್ರಿಕೆಗಳಲ್ಲಿ ನಮ್ಮ ಬರಹಗಳನ್ನು ಪ್ರಕಟಿಸಬಹುದು. ವಾಟ್ಸಪ್, ಫೇಸ್ಬುಕ್, ಇನ್ಸಟ್ರಗ್ರಾಂ, ಟೆಲಿಗ್ರಾಂ ಮುಂತಾದವುಗಳ ನಮ್ಮ ಗೋಡೆಯ ಮೇಲೆ ಯಾರೊಬ್ಬರ ಸಹಾಯ, ಸಹಕಾರವನ್ನು ಬೇಡದೆ ಪ್ರಕಟಿಸಬಹುದು. ಫೇಸ್ಬುಕ್ ಸಾಹಿತ್ಯದ ಗುಂಪುಗಳಲ್ಲಿ ಎಂದಾದರೆ, ನಾವು ಬರೆದಿದ್ದನ್ನು ನಿರ್ಧಿಷ್ಟ ಗುಂಪಿಗೆ ಕಳಿಸಿದಾಗ, ಆ ಗುಂಪಿನ ನಿರ್ವಾಹಕರು ನಮ್ಮ ಬರಹವನ್ನು ಓದಿ ಅನುಮೋದನೆ ನೀಡಿದರೆ, ಅಲ್ಲಿ ಇರುವ ಎಲ್ಲರಿಗೂ ಓದಲು ಹಾಗೂ ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶ ದೊರೆಯುತ್ತದೆ. ಹಾಗೆಯೇ ಜಾಲತಾಣ ಆಧಾರಿತ ಪತ್ರಿಕೆಗಳಲ್ಲೂ, ನಾವು ಕಳಿಸಿದ ಬರಹಗಳು ಸಂಪಾದಕರ ಅನುಮೋದನೆಯೊಂದಿಗೆ ಮತ್ತು ಬರಹಕ್ಕೆ ಪೂರಕವಾದ ಚಿತ್ರಗಳೊಂದಿಗೆ ಅದ್ಭುತ ಎನ್ನುವ ರೀತಿಯಲ್ಲಿ ಪ್ರಕಟವಾಗುತ್ತವೆ.

ಇಲ್ಲಿ ಅತಿಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯ ಪತ್ರಿಕೆಗಳಲ್ಲಿ ಅದರ ಪ್ರಸಾರದ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಹೆಸರಾಂತ ಲೇಖಕರಿಗೆ ಮಣೆ ಹಾಕುವುದು ಹೆಚ್ಚು. ಆದರೆ ಇಲ್ಲಿ ಅಂತಹಾ ಯಾವುದೇ ವಿಚಾರಕ್ಕೂ ಆಸ್ಪದವಿಲ್ಲದೆ, ಕೇವಲ ಭಾಷಾ ಶುದ್ಧತೆ, ಯಾವುದೇ ಆಂತರಿಕ ಜಗಳಗಳಿಗೆ ಅವಕಾಶವಾಗದಂತ ಮತ್ತು ಉತ್ತಮ ಸಂದೇಶ ಹೊತ್ತ ಬರಹಗಳನ್ನು ಗಮನಿಸಿ ಪ್ರಕಟಿಸಲಾಗುವುದು. ದಿನಪತ್ರಿಕೆಗಳು ಮುಂಜಾನೆಯಿಂದ ರಾತ್ರಿಯವರೆಗೆ ಸಂಗ್ರಹವಾದ ಮಾಹಿತಿಯನ್ನು ಮುದ್ರಿಸಿ ಮುಂಜಾನೆ ಓದುಗರ ಮಡಿಲಿಗೆ ಇಡುತ್ತಾರೆ. ಅಲ್ಲದೆ ದಿನಪತ್ರಿಕೆಗಳು ಇಷ್ಟೇ ಪುಟಗಳು, ಇಂತಹಾ ವಿಚಾರ ಇದೇ ಪುಟದಲ್ಲಿ ಮುಂತಾದ ನಿಯಮಗಳನ್ನು ಹಾಕಿಕೊಂಡಿರುತ್ತವೆ. ಅಲ್ಲದೆ ಅವು ದಿನಕ್ಕೊಮ್ಮೆ ಮಾತ್ರ ಪ್ರಕಟವಾಗುತ್ತವೆ ಮತ್ತು ಇದರ ಪರಿಧಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಸೀಮಿತವಾಗಿರುತ್ತದೆ.

ಸಾಹಿತ್ಯದ ಜಾಲತಾಣಗಳಿಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲಿ ಆಗಾಗಿನ ಸುದ್ದಿ, ಬರಹಗಳನ್ನು ಆಗಾಗೇ ಪ್ರಕಟಿಸಬಹುದು. ಇಲ್ಲಿ ಪ್ರಕಟವಾದ ಬರಹಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ಓದಬಹುದು. ಆದರೆ ಅದನ್ನು ಓದಲು, ಬರೆದು ಪ್ರಕಟಿಸಲು ಆ ಬಳಗದ ಸದಸ್ಯನಾಗಿರುವುದು ಅನಿವಾರ್ಯ. ಇಲ್ಲಿ ಪ್ರಕಟಿಸುವ ಸಮಯದ, ಪುಟಗಳ ಮಿತಿ ಇಲ್ಲದ ಕಾರಣ ಯಾರು ಬೇಕಾದರೂ, ಎಷ್ಟು ಬೇಕಾದರೂ, ಯಾವಾಗ ಬೇಕಾದರೂ ಬರೆದು ಕಳುಹಿಸಬಹುದು. ನಿರ್ವಾಹಕರು, ಸಂಪಾದಕರು ಅನುಮೋದನೆ ನೀಡಿ ಪ್ರಕಟಿಸಬಹುದು. ಅಕ್ಷರಶಃ ಇದು ತಿಮ್ಮಪ್ಪನ ಹುಂಡಿ ಇದ್ದಂತೆ, ಎಂದಿಗೂ ತುಂಬುವುದೇ ಇಲ್ಲ. ಹಾಗಾಗಿ ಪ್ರತಿಯೊಂದು ಸಾಹಿತ್ಯಿಕ ಜಾಲತಾಣದವರು ತಮ್ಮ ಸದಸ್ಯರಿಂದ ಹೊಸ ಹೊಸ ಬರಹಗಳಿಗಾಗಿ ಕಾಯುತ್ತಿರುತ್ತಾರೆ. ಕೆಲವೊಮ್ಮೆ ತಮ್ಮ ಸದಸ್ಯರಿಗಾಗಿ ತಾವೇ ಯಾವುದಾದರೂ ವಿಷಯ ನೀಡಿ ಅಥವಾ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರತಿಯೊಬ್ಬರೂ ಬರೆಯುವಂತೆ ಪ್ರೇರೇಪಣೆ ನೀಡುತ್ತಾರೆ. ಇದರ ಫಲವಾಗಿ ದಿನದಿಂದ ದಿನಕ್ಕೆ ಬರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಡುತ್ತಾ ಹಾಡುತ್ತಾ ರಾಗ ಎನ್ನುವಂತೆ ಬರೆಯುತ್ತಾ ಬರೆಯುತ್ತಾ ಉತ್ತಮ ಸಾಹಿತಿಯೂ ಆಗಬಹುದು. ಇದರ ಶ್ರೇಯಾ ಜಾಲತಾಣಗಳಿಗೇ ಅಲ್ಲದೆ ಮತ್ಯಾರಿಗೆ.

ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆಯಲ್ಲಿ ನಮ್ಮ ನೆಚ್ಚಿನ ಸಂಗಾತಿ ಸಾಹಿತ್ಯ ಪತ್ರಿಕೆ ಮುಂಚೂಣಿಯಲ್ಲಿ ಇದೆ ಎನ್ನುವುದೇ ಹೆಮ್ಮೆಯ ಸಂಗತಿ. ಹಾಗೆಯೇ ಇದು ತನ್ನ ಐದನೇ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ.


ಜಿ. ಹರೀಶ್ ಬೇದ್ರೆ

3 thoughts on “

Leave a Reply

Back To Top