ಸಂಗಾತಿ ವಾರ್ಷಿಕ ವಿಶೇಷಾಂಕ
-ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಸಾಹಿತ್ಯದ ಬೆಳವಣಿಗೆಗೆ
ಜಾಲತಾಣಗಳ ಕೊಡುಗೆ
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕವಿರಾಜಮಾರ್ಗಕಾರ ಹಾಗೂ ಅದಕ್ಕೂ ಹಿಂದಿನ ಸಾಹಿತ್ಯದಿಂದ ಇಂದಿನ ಆಧುನಿಕ ಕಾಲಘಟ್ಟದವರೆಗೆ ಕನ್ನಡ ಸಾಹಿತ್ಯ ನಾನಾ ಹಂತಗಳಲ್ಲಿ ನಾನಾ ತಿರುವು, ಏರಿಳಿತದೊಂದಿಗೆ ಸಾಗುತ್ತಾ ಬಂದಿದೆ. ಇಂತಹಾ ಕನ್ನಡ ಸಾಹಿತ್ಯ ಲೋಕಕ್ಕೆ ಇಂದಿನ ಆಧುನಿಕ ಕಾಲದಲ್ಲಿ ಸಾಮಾಜಿಕ ತಾಣಗಳು ಸಹ ಸಾಕಷ್ಟು ನೆರವಾಗಿದೆ. ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಾಮಾಜಿಕ ತಾಣಗಳ ಬಳಕೆ ಹೇಗೆ ನೆರವಿಗೆ ಬಂದಿದೆ ಎನ್ನುವುದನ್ನು ನಾವಿಲ್ಲಿ ಸ್ಥೂಲವಾಗಿ ನೋಡೋಣ.
ಸಾಮಾಜಿಕ ಜಾಲತಾಣಗಳ ದಾಳಿಯಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊಸ ಪುಸ್ತಕಗಳ ಮುದ್ರಣ ಸಂಖ್ಯೆ ಕಡಿಮೆಯಾಗುತ್ತಿದೆ, ಓದುವವರ ಸಂಖ್ಯೆ ಹೆಚ್ಚಾಗಬೇಕಾದರೆ ಸಾಹಿತ್ಯ ವೈಜ್ಞಾನಿಕವಾಗಿ ಬೆಳವಣಿಗೆಯನ್ನು ಕಾಣಬೇಕು ಎನ್ನುವುದು ಅರಿತವರ ಮಾತು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ ಎನ್ನುವುದು ಹಿರಿಯ ಜೀವಿಗಳ ಅಳಲು. ಅದರಲ್ಲಿಯೂ ಸಾಮಾಜಿಕ ತಾಣಗಳು ಎಲ್ಲೆಡೆ ಪಾರಮ್ಯ ಮೆರೆಯುತ್ತಿದ್ದು ವಾಟ್ಸಪ್, ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ನಿತ್ಯ ಜೀವನದಲ್ಲಿ ತಮ್ಮ ಆಸಕ್ತಿ ಅಭಿರುಚಿಗೆ ತಕ್ಕಂತೆ ಅಸಂಖ್ಯ ಜನರು ಸಾಮಾಜಿಕ ತಾಣ ಬಳಕೆ ಮಾಡುತ್ತಾರೆ. ಇಂದು ಸಾಮಾಜಿಕ ಮಾದ್ಯಮಗಳು ಮಾನವನನ್ನು ಕೇವಲ ಓದುಗನನ್ನಾಗಿ ಮಾತ್ರವಲ್ಲ ಏಕಕಾಲದಲ್ಲಿ ಸಂಪಾದಕರೂ, ಅಭಿಪ್ರಾಯ ರೂಪಿಸಬಲ್ಲವನನ್ನಾಗಿಯೂ ಮಾಡಿದೆ. ಇಂದು ಕೋಟ್ಯಾಂತರ ಜನರು ದಿನನಿತ್ಯ ಪಠ್ಯ, ಚಿತ್ರ, ವ್ಯಂಗ್ಯಚಿತ್ರ, ಎಮೋಜಿ, ಗ್ರಾಫಿಕ್ ಮತ್ತು ಧ್ವನಿಗಳುಳ್ಳ ಕೋಟ್ಯಂತರ ಮಿಶ್ರ ಸಂದೇಶಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಕೆಲವೇ ಸೆಂಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನೆರವಾಗಿವೆ. ಇದರಿಂದ ಎಷ್ಟೋ ಜನರು ದಿನನಿತ್ಯದ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಲೇ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತಿದ್ದಾರೆ. ಈ ಮೂಲಕ ಹಲವು ಅವಕಾಶಗಳನ್ನೂ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಭೆಯ ಅನಾವರಣಕ್ಕೆ ಸಾಮಾಜಿಕ ಮಾಧ್ಯಮಗಳು ಇಂದು ಬಹುದೊಡ್ಡ ವೇದಿಕೆಯನ್ನು ಒದಗಿಸಿವೆ. ಎಲೆಮರೆಯಲ್ಲಿದ್ದ ಸಾವಿರಾರು ಪ್ರತಿಭೆಗಳು ಸೋಷಿಯಲ್ ಮೀಡಿಯಾಗಳಿಂದ ಜನಪ್ರಿಯಗೊಂಡಿವೆ. ಹರಟೆ, ಭರಪೂರ ಮನರಂಜನೆಯೂ ಇಲ್ಲಿಯೇ ದೊರೆಯುತ್ತಿದೆ. ಸಂಗೀತ, ಸಿನಿಮಾ, ವೈರಲ್ ವಿಡಿಯೋಗಳು, ಸಾಹಸ, ವಿಜ್ಞಾನ ತಂತ್ರಜ್ಞಾನದ ವಿಡಿಯೋಗಳು ಇಲ್ಲಿ ದೊರೆಯುತ್ತಿರುವುದರಿಂದ ಯುವ ಜನರನ್ನು ಸೋಷಿಯಲ್ ಮೀಡಿಯಾ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.
ಹೀಗಿರುವಾಗ ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಹ ಇದೇ ಸಾಮಾಜಿಕ ತಾಣಗಳು ಪ್ರೇರಕ ದಾರಿಯಾಗುತ್ತಿದೆ ಎನ್ನುವುದು ಸಹ ಸುಳ್ಳಲ್ಲ. ಉದಾಹರಣೆಗೆ ಹಿಂದೆಲ್ಲ ಕೆಲವೇ ಸಾಹಿತ್ಯಾಸಕ್ತ ಗುಂಪುಗಳಲ್ಲಿ ನಡೆಯುತ್ತಿದ್ದ ಕವಿಗೋಷ್ಟಿ, ವಿಚಾರ ಸಂಕಿರಣ, ಸಾಹಿತ್ಯ ಸ್ಪರ್ಧೆ ಈಗ ರಾಜ್ಯಾದ್ಯಂತ ನಡೆಯುತ್ತಿದೆ. ವಾಟ್ಸಾಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳಾಗುತ್ತವೆ. ಶಾಲಾ ಶಿಕ್ಷಕ/ಶಿಕ್ಷಕಿಯರು, ಮಾಹಿತಿ ತಂತ್ರಜ್ಞಾನದ ಆಧುನಿಕ ಜೀವನ ಶೈಲಿಯ ಹುಡುಗ/ಹುಡುಗಿಯರು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಾಹಿತ್ಯದ ಕುರಿತು ಮಾತನಾಡುವುದು ಪ್ರತಿಭಾವಂತ ಬರಹಗಾರರಾಗಿ ಮೂಡಿಬರುತ್ತಿರುವುದಕ್ಕೆ ವೇದಿಕೆ ಒದಗಿಸಿ ಕೊಟ್ಟಿರುವುದು ಇದೇ ಸಾಮಾಜಿಕ ಮಾದ್ಯಮಗಳು.
ಸುಮಾರು ಎರಡು ಸಾವಿರದನೇ ಇಸವಿಯ ನಂತರ ಇಂಟರ್ ನೆಟ್ ನಲ್ಲಿ ಕನ್ನಡ ಬಳಕೆ ಹೆಚ್ಚುತ್ತಾ ಸಾಗಿತ್ತು. ಬ್ಲಾಗ್ ಮೂಲಕ ಅದೆಷ್ಟೋ ಓದುಗರು ಹೊಸ ಬರಹಗಾರರಾಗಿ ಬಂದರು. ಈಗ ಯಾರು ಬೇಕಿದ್ದರೂ, ಏನು ಬೇಕಿದ್ದರೂ ಬರೆದು ಜಾಲತಾಣಗಳಲ್ಲಿ ಹರಿಬಿಡಬಹುದಾಗಿದ್ದು ಮೊದಲಿನಂತೆ ಯಾವುದೋ ಪತ್ರಿಕೆ, ನಿಯತಕಾಲಿಕಕ್ಕೆ ಕಥೆ, ಕವಿತೆ ಕಳುಹಿಸಿ ತಿಂಗಳು, ವಾರಗಟ್ಟಲೆ ಕಾಯುವ ಉಸಾಬರಿ ಈಗಿಲ್ಲ. ಇನ್ನು ಯುನಿಕೋಡ್ ತಂತ್ರಜ್ಞಾನವನ್ನು ಬಳಸಿ ಅಂತರ್ಜಾಲದಲ್ಲಿ ಕನ್ನಡ ಬರೆಯುವ ಸುಲಭ ವಿಧಾನ ಎಲ್ಲರಿಗೂ ಸಾಮಾಜಿಕ ಮಾದ್ಯಮಗಳಲ್ಲಿ ಕನ್ನಡ ಬಳಕೆಯನ್ನು ಮತ್ತಷ್ಟು ಸರಳವಾಗಿಸಿದೆ. ಬ್ಲಾಗುಗಳಿಂಡ ಪ್ರಾರಂಭವಾದ ಬರವಣಿಗೆ ಇಂದು ಫೇಸ್ ಬುಕ್ ವಾಲ್ ವಾಟ್ಸಪ್ ಗ್ರೂಪ್ ಕಥಾಕೂಟದವರೆಗೆ ಬಂದು ನಿಂತಿದೆ ಎಂದರೆ ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ ತಾಣಗಳು ಅದೆಷ್ಟು ಪೂರಕ ಎನ್ನುವುದನ್ನು ನಾವು ಮನಗಾಣಬಹುದು.
ಇಂದು ಫೇಸ್ ಬುಕ್ ಒಂದನ್ನೇ ನೋಡಿದರೂ ಸಾಕು ಇಲ್ಲಿ ಕನ್ನಡ ಭಾಷೆಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಹಲವು ಮಂದಿ ಇದ್ದಾರೆ. ಕನ್ನಡ ಸಾಹಿತ್ಯ-ಕಥೆ ಕವನಗಳ-ಕಾದಂಬರಿಗಳ, ಕನ್ನಡದ ಹಳೆಯ ಅಮೂಲ್ಯ ಕೃತಿಗಳ ಬಗ್ಗೆ ಚರ್ಚೆ ಮಾಡುವ ಹಲವು ಪುಟಗಳು ಫೇಸ್ ಬುಕ್ ನಲ್ಲಿದೆ.
ಯೂಟ್ಯೂಬ್ ನಲ್ಲಿ ಸಹ ಕನ್ನಡ ಭಾಷೆ, ಸಾಹಿತ್ಯ ಸಂಬಂಧ ಹಲವಾರು ಚಾನೆಲ್ ಗಳು ಪ್ರಾರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕಿರುಚಿತ್ರಗಳು-ಹಾಡುಗಳು- ಸಿನಿಮಾಗಗಳು ಎಲ್ಲೆಡೆಗೆ ತಲುಪುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಪ್ರತಿಭಾವಂತರನ್ನು ಗುರುತಿಸುವ ಕೆಲಸ ಆಗುತ್ತಿದೆ. ಕನ್ನಡ ಸ್ಟ್ಯಾಂಡಪ್ ಕಾಮಿಡಿ, ಕನ್ನಡ ರ್ಯಾಪ್ ಸಾಂಗ್ ಗಳು, ಹೊಸ ಅಲೆಯ ಕಥೆಯುಳ್ಳ ಕಿರುಚಿತ್ರ, ಸಿನಿಮಾಗಳನ್ನು ನಾವು ಯೂಟ್ಯೂಬ್ ಮೂಲಕ ನೋಡಬಹುದು. ಪ್ರತಿನಿತ್ಯ ಒಂದಲ್ಲ ಒಂದು ಕಿರುಚಿತ್ರ, ಡಾಕ್ಯುಮೆಂಟರಿಗಳು ಯೂಟ್ಯೂಬ್ ನಲ್ಲಿ ಸೆರ್ಪಡೆಯಾಗುತ್ತದೆ.
ಇಷ್ಟು ಮಾತ್ರವಲ್ಲ ಇಂದಿನ ಸಮಕಾಲೀನ ಖ್ಯಾತ ಕವಿಗಳು, ಬರಹಗಾರರಿಗೆ ಸಹ ಸಾಮಾಜಿಕ ತಾಣಗಳು ವರದಾನವಾಗಿದೆ. ಅವರು ತಮ್ಮ ಓದುಗ ಅಭಿಮಾನಿಗಳೊಂದಿಗೆ ಪ್ರತಿಸ್ಪಂದಿಸಲು ಈ ಸಾಮಾಜಿಕ ತಾಣಗಳು ವೇದಿಕೆ ಒದಗಿಸುತ್ತಿದೆ. ಕನ್ನಡದ ಹಿರಿಯ ಕವಿಗಳಾದ ಬಿ.ಆರ್. ಲಕ್ಷ್ಮಣರಾವ್ ಸೇರಿ ಹಲವಾರು ಕವಿಗಳು ಫೇಸ್ ಬುಕ್ ನಲ್ಲಿದ್ದಾರೆ. ಇನ್ನು ಅಂಕಣಕಾರರು, ನಾನಾ ಬಗೆಯ ಸಾಹಿತ್ಯಾಸಕ್ತರು ಲಕ್ಷ ಸಂಖ್ಯೆಯಲ್ಲಿ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದ್ದು ಇದೆಲ್ಲಾ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ.
ಈ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಯೂಟ್ಯೂಬ್ ಗಳಲ್ಲಿ ಸಾಹಿತ್ಯವು ನಿತ್ಯ ಜೀವನ ಅನುಭವಗಳ ಹರಿವಾಗಿದೆ. ಸಾಮಾಜಿಕ ತಾಣಗಳ ಬಹುದೊಡ್ಡ ಲಾಭವೇ ಇದು. ಇಲ್ಲಿ ಯಾರಾದರೂ ಸರಿ ತನ್ನ ಅನುಭವ, ಆಸಕ್ತಿ, ಅಭಿರುಚಿಗಳನ್ನು ಅಕ್ಷರಗಳಲ್ಲಿ, ದೃಶ್ಯಗಳಲ್ಲಿ ಹೆಣೆದು ಇತರರೊಡನೆ ಹಂಚಿಕೊಳ್ಳುವುದು ಸಾಧ್ಯವಿದೆ. ಹಾಗಾಗಿಯೇ ಇಂದಿನ ಹಲವು ಲೇಖಕರು ತಮ್ಮ ಸಾಹಿತ್ಯವನ್ನು ಸಾಮಾಜಿಕ ತಾಣಗಳಲ್ಲಿ, ಬ್ಲಾಗರ್ ಗಳಲ್ಲಿ ಬರೆದುಕೊಳ್ಳುತ್ತಾರೆ. ಇದಲ್ಲದೆ ಇತರೆ ಸಾಹಿತಿಗಳ ಕೃತಿಗಳನ್ನು ಸಹ ಓದುತ್ತಾರೆ.
ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳ್ಳುವ ಹನಿಗವನ, ಹಾಸ್ಯ, ಕಾರ್ಟೂನ್ ಗಳು ಇಂದಿನ ಆಧುನಿಕ ಯುಗದ ಒತ್ತಡ ಹಾಗೂ ಜಂಜಾಟದ ಬದುಕಿನ ಚಿತ್ರಗಳಗಿದೆ. ಇದು ಓದುಗರನ್ನು ಬೇಗನೇ ಆಕರ್ಷಿಸುತ್ತದೆ. ಇದಕ್ಕೆ ಓದುಗರು ಬೇಗನೆ ಪ್ರತಿಕ್ರಯಿಸುತ್ತಾರೆ ಮಾತ್ರವಲ್ಲದೆ ತಮ್ಮ ಅನಿಸಿಕೆಗಳನ್ನು ತನ್ನ ಬರವಣೆಗೆ, ಲೆಖನದ ಮೂಲಕ ಸಹ ಕೊಡುತ್ತಾರೆ. ಇದಲ್ಲದೆ ವಾಟ್ಸಪ್ ಗುಂಪುಗಳಲ್ಲಿ ಸಹ ಸಾಹಿತ್ಯಕ್ಕೆ ಮೀಸಲಾಗಿರುವ ಅನೇಕ ಗುಂಪುಗಳಿದ್ದು ಪುಸ್ತಕ ವಿಮರ್ಶೆ, ಪುಸ್ತಕ ಪರಿಚಯ ಸೇರಿ ಅನಾನಾ ವಿಧದ ಕಥೆ, ಕವಿತೆಗಳನ್ನು ಸಹ ನಾವು ಇಲ್ಲಿ ಕಾಣಬಹುದು. ಈ ಎಲ್ಲದರ ಮೂಲಕ ಇಂದು ಬರಹಗಾರರಿಗೆ ಬರಹಗಾರರು ಸ್ಫೂರ್ತಿಯಾಗುತ್ತಿದ್ದಾರೆ ಅಲ್ಲದೆ ಓದುಗರಿಗೆ ಸಹ ಪ್ರೇರಣೆ ಒದಗಿಸುತ್ತಿದ್ದಾರೆ.
ಕೆಲವೊಂದು ತಾಣಗಳಲ್ಲಿ ಓದುಗರನ್ನು ಮತ್ತಷ್ಟು ಹುರಿದುಂಬಿಸುವ ಸಲುವಾಗಿ ವಿವಿಧ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗುತ್ತದೆ. ಅದು ರಸ ಪ್ರಶ್ನೆ ಇರಬಹುದು, ಲೇಖನ, ಕಥೆ, ಕವಿತೆ ರಚನೆ ಸ್ಪರ್ಧೆಗಳಿರಬಹುದು, ಇದರಲ್ಲಿ ಭಾಗವಹಿಸಿ ವಿಜೇತರಾದವರಿಗೆ ವಿಶೇಷ ಕಾರ್ಯಕ್ರಮದ ಮೂಲಕ ಸನ್ಮಾನಿಸಲಾಗುತ್ತದೆ. ಈ ಮೂಲಕ ಇತರೆ ಬರಹಗಾರರಲ್ಲಿ ಪ್ರೋತ್ಸಾಹ ಪ್ರೇರಣೆ ಒದಗಿಸುವ ಕೆಲಸ ಮಾಗುತ್ತಿದೆ. ಇದಲ್ಲದೆ ಯುವ ಬರಹಗಾರರು ಬರೆದ ಸಾಹಿತ್ಯವನ್ನು ಹಿರಿಯ ಕವಿ, ಲೆಖಕರು ಓದಿ ಸಲಹೆ ಸೂಚನೆ ನೀಡುವುದರ ಮೂಲಕ ಯುವ ಪ್ರತಿಭೆಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಕಾರ್ಯವೂ ಇಲ್ಲಿ ನಡೆಯುತ್ತದೆ.
ಸಾಮಾಜಿಕ ಮಾದ್ಯಮಗಳ ಗುಂಪುಗಳಿಂದಾಗಿ ಇದಕ್ಕೂ ಹಿಂದೆ ಅಸ್ತಿತ್ವದಲ್ಲಿದ್ದ ಪ್ರಾದೇಶಿಕ ಭಿನ್ನತೆಗಳು, ತಾರತಮ್ಯಗಳು ಅಳಿಸಿ ಹೋಗುತ್ತಿದ್ದು ಆ ಬದಲಾಗಿ ಒಗ್ಗೂಡುವಿಕೆ, ಸಾಮರಸ್ಯಗಳು ಮೂಡುತ್ತಿರುವ್ದುಉ ಸ್ವಾಗತಾರ್ಹ ಬೆಳವಣಿಗೆ.
ಇನ್ನು ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ, ಗಟ್ಟಿ ಸಾಹಿತ್ಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಾಮಾಜಿಕ ತಾಣಗಳು ಇದೀಗ ವೇದಿಕೆ ಒದಗಿಸುತ್ತಿದೆ. ಅಗ್ಗದ ಸಾಹಿತ್ಯ ಬಿಟ್ಟು ಸದಭಿರುಚಿಯ ಸಾಹಿತ್ಯ ಓದುವಂತೆ ಎಚ್ಚರಿಸುತ್ತಿವೆ. ಆನ್ ಲೈನ್ ಪತ್ರಿಕೆಗಳು, ಫೇಸ್ ಬುಕ್ ಪೇಜ್, ವಾಟ್ಸಾಪ್ ಗ್ರೂಪ್ ಇವೆಲ್ಲವೂ ಹಲವಾರು ಎಲೆಮರೆಯ ಕಾಯಿಗಳನ್ನು ಜಗತ್ತಿನ ನಾನಾ ಭಾಗಗಳಲ್ಲಿ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಇದರಿಂದ ನಾಡಿನ ನಾನಾ ಬಾಗಗಳ ವೈವಿದ್ಯಮಯ ಜೀವನ ದರ್ಶನವಾಗುತ್ತಿದೆ.
ಒಟ್ಟಾರೆಯಾಗಿ ಸಾಮಾಜಿಕ ತಾಣಗಳು ಇಂದು ಕನ್ನಡ ಸಾಹಿತ್ಯದ ಮನಸುಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತವಾಗಿದೆ. ಕೆಲವರೆಂದುಕೊಂಡಂತೆ ಸಾಹಿತ್ಯವು ಸಾಮಾಜಿಕ ತಾಣಗಳ ಅಬ್ಬರದಲ್ಲಿ ಕಳೆದು ಹೋಗುವುದಿಲ್ಲ ಬದಲಾಗಿ ಬದಲಾವಣೆಯೊಂದಿಗೆ ಹೊಸ ದಾರಿಯಲ್ಲಿ ದಾಪುಗಾಲು ಹಾಕುತ್ತಾ ಸಾಗಿದೆ.
-ರಾಘವೇಂದ್ರ ಅಡಿಗ ಎಚ್ಚೆನ್.