ಓರೆಕೋರೆ ರೇಖೆಗಳ ಜಾದುಗಾರ ನೀರ್ನಳ್ಳಿ ಗಣಪತಿಯವರ ಪರಿಚಯ ಗೊರೂರು ಅನಂತರಾಜು

ಪರಿಚಯ ಸಂಗಾತಿ

ಓರೆಕೋರೆ ರೇಖೆಗಳ ಜಾದುಗಾರ

ನೀರ್ನಳ್ಳಿ ಗಣಪತಿ

ಗೊರೂರು ಅನಂತರಾಜು

ಹಾಸ್ಯದ ಲೇಪವನ್ನು ಹಚ್ಚಿ ರಾಜಕೀಯ ಅಥವಾ ಸಾಮಾಜಿಕ ಅವಗುಣಗಳನ್ನು ಟೀಕಿಸಿ ರಚಿಸುವ ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಪ್ರಮುಖ ಆಕರ್ಷಣೆ. ಒಬ್ಬ ವ್ಯಕ್ತಿಯ ಅಂಗಾಂಗಗಳ ವಿಶೇಷತೆಗಳನ್ನು ಗುರುತಿಸಿ ಅವನ್ನು ಅತಿಶಯಿಸಿ ರೇಖಿಸುವ ವಿಡಂಬನಾ ವ್ಯಂಗ್ಯ ಚಿತ್ರಗಳು ಪ್ರೇಕ್ಷಕನಿಗೆ ಸಂತೋಷವನ್ನುಂಟು ಮಾಡುತ್ತವೆ. ವ್ಯಂಗ್ಯ ಚಿತ್ರಕಾರನು ರೇಖೆಗಳ ಚಾದೂಗಾರ, ಹಲವು ವಾಕ್ಯಗಳಲ್ಲಿ ಹೇಳುವಷ್ಟನ್ನು ಒಂದು ವ್ಯಂಗ್ಯ ಚಿತ್ರವು ಕಣ್ಮನಗಳನ್ನು ಸೆಳೆದು ಹೇಳಬಲ್ಲದು.
ವಾರಪತ್ರಿಕೆಗಳು, ಮಾಸಿಕಗಳ ಪುಟಗಳಲ್ಲಿ ಕೊಂಚ ಉಳಿದು ಬಿಡುವ ಜಾಗವನ್ನು ಭರ್ತಿ ಮಾಡಲು ಬಳಸಿಕೊಳ್ಳುವ ವ್ಯಂಗ ಚಿತ್ರಗಳು ಓದುಗರ ಗಮನವನ್ನು ಕೂಡಲೇ ಸೆಳೆದು ಬಿಡುತ್ತವೆ. ಇವುಗಳ ಜನಪ್ರಿಯತೆಯನ್ನು ಗಮನಿಸಿಯೇ ಪತ್ರಿಕೆಯ ಪುಟಗಳಲ್ಲಿ ವ್ಯಂಗ್ಯ ಚಿತ್ರಗಳಿಗಾಗಿಯೇ ಜಾಗವನ್ನು ಕಾದಿರಿಸಲಾಗುತ್ತಿದೆ. ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಆಕರ್ಷಣೆ ಅಷ್ಟು ಬೆಳೆಯುತ್ತಿದೆ.
ವ್ಯಂಗ್ಯ ಚಿತ್ರಕಾರರಿಗೆ ಪ್ರತಿನಿತ್ಯದ ಸುದ್ದಿಗಳೇ ಗ್ರಾಸ, ರಾಜಕೀಯ ಘಟನೆಗಳು. ರಾಜಕಾರಣಿಗಳು ವ್ಯಂಗ್ಯಚಿತ್ರಕಾರರಿಗೆ ಸ್ಫೂರ್ತಿ. ಇಂದಿನ ಒಂದು ರಾಜಕೀಯ ನಿರ್ಣಯ, ಘಟನೆ, ಹೇಳಿಕೆ ನಾಳಿನ ದಿನಪತ್ರಿಕೆಗಳಲ್ಲಿ ವ್ಯಂಗ್ಯ ವಿಡಂಬನೆ. ವ್ಯಂಗ್ಯಚಿತ್ರಕಾರರು ಅವ್ಯಕ್ತವಾಗಿ ಟೀಕಾಕಾರರೂ ಹೌದು. ವ್ಯಂಗ್ಯ, ಹಾಸ್ಯ, ವಿಡಂಬನೆ ಕಟಕಿ  ಮುಖಾಂತರ ಓದುಗರಿಗೆ ರಂಜನೆ ಒದಗಿಸುವ ಕಲಾಕಾರರು ಹೌದು. ಗಂಟು ಮುಖದಲ್ಲೂ ನಗೆ ತರಿಸುವ ವ್ಯಂಗ್ಯ ಚಿತ್ರಗಳಲ್ಲಿ ಬರೆ ಚಿತ್ರ ನೋಡಿ ಅರ್ಥೈಸಿಕೊಳ್ಳುವ ವ್ಯಂಗ್ಯ ಚಿತ್ರಗಳು, ಸಂಭಾಷಣೆ ಅಥವಾ ವಿವರಣೆಯನ್ನೊಳಗೊಂಡ ವ್ಯಂಗ್ಯ ಚಿತ್ರಗಳು ಮತ್ತು ಪ್ರಚಲಿತ ರಾಜಕಾರಣಿಗಳು, ಸಿನಿಮಾ ನಟನಟಿಯರ ಕ್ಯಾರಿಕೇಚರ್‌ಗಳು ಪ್ರಮುಖವಾದವು. ಹವ್ಯಾಸಿ ವ್ಯಂಗ್ಯಚಿತ್ರಕಾರರ ಪೈಕಿ ಬರೇ ವ್ಯಂಗ್ಯಚಿತ್ರ ನೋಡಿ ಇದು ನೀರ್ನಳ್ಳಿ ಕೆಲಸ ಎಂದು ತಟ್ಟನೆ ಗುರುತಿಸಲ್ಪಡುವ ತಮ್ಮದೇ ಆದ ವಿಶಿಷ್ಟ ಶೈಲಿ ರೂಢಿಸಿಕೊಂಡಿರುವ ನೀರ್ನಳ್ಳಿ ಗಣಪತಿಯವರು ಜನಪ್ರಿಯ ವ್ಯಂಗ್ಯಚಿತ್ರಕಾರರಾರು. ಸ್ವಂತಿಕೆಯ ಶೈಲಿಯಲ್ಲಿ ಪ್ರಚಲಿತ ಸಂಗತಿಗಳನ್ನು ಆಧರಿಸಿ ಓರೆಕೋರೆ ನೋಟದೊಂದಿಗೆ ಹಾಸ್ಯ ವ್ಯಂಗ್ಯ ಬರಹಗಳನ್ನು ಸಮ್ಮಿಳಿತಗೊಳಿಸಿ ವಿಡಂಬನಾತ್ಮಕವಾಗಿ ಚಿತ್ರಿಸುವುದು ಅವರ ಅಭ್ಯಾಸ ಮತ್ತು ಹವ್ಯಾಸ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಇವರು ಶಿರಸಿ ತಾಲ್ಲೂಕಿನ ನೀರ್ನಳ್ಳಿ ಗ್ರಾಮದವರು.
ಇವರ ಸಾವಿರಗಟ್ಟಲೆ ವ್ಯಂಗ್ಯ ಚಿತ್ರಗಳು ನಾಡಿನ ಎಲ್ಲಾ ಜನಪ್ರಿಯ ಕನ್ನಡ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ೧೯೮೩ ಯಲ್ಲಾಪುರ ೧೯೯೦ ಡಿಸೆಂಬರ್‌ ಶಿವಮೊಗ್ಗದಲ್ಲಿ ನೀರ್ನಳ್ಳಿಯವರ ವ್ಯಂಗ್ಯಚಿತ್ರ ಪ್ರದರ್ಶನ ನಡೆದಿದೆ. ೧೯೮೯ ಜನವರಿಯಲ್ಲಿ ಕಾಸರಗೋಡಿನ ಎಡನೀರಿನಲ್ಲಿ ನಡೆದ ಎರಡು ದಿನದ ತರಬೇತಿ ಶಿಬಿರದಲ್ಲಿ ಉಪನ್ಯಾಸಕರಾಗಿ, ೧೯೯೧  ಡಿಸೆಂಬರ್‌ನಲ್ಲಿ ಕಾಸರಗೋಡಿನಲ್ಲಿ ನಡೆದ ವ್ಯಂಗ್ಯಚಿತ್ರ ತರಬೇತಿ ಶಿಬಿರದ ಉಪನ್ಯಾಸಕರಾಗಿದ್ದರು.
ಯಲ್ಲಾಪುರ ಜೀಸಿಸ್ ಸಂಸ್ಥೆ ೧೯೮೬ ರ ಸ್ವಾತಂತ್ರ‍್ಯ ದಿನಾಚರಣೆಯಂದು ಅವರ ಕಲೆಯನ್ನು ಗುರುತಿಸಿ ಪುರಸ್ಕರಿಸಿದೆ. ೧೯೮೮ ಯಲ್ಲಾ ಪುರದ ಪ್ರಥಮ ದರ್ಜೆ ಕಾಲೇಜಿನ ಸಮಿತಿಯಿಂದ ೧೯೯೦ ವಜ್ರಳ್ಳಿಯ ಗಣೇಶೋತ್ಸವ ಸಮಿತಿಯಿಂದ ಸನ್ಮಾನಿಸಲಾಗಿದೆ. ಶಿವಮೊಗ್ಗದ ಅರಣ್ಯ ಇಲಾಖೆ ನಡೆಸಿದ ವನ್ಯಜೀವಿ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ನೀರ್ನಳ್ಳಿ ಗಣಪತಿಯವರು ವಚನಗಳ ಮಾದರಿಯಲ್ಲಿ ರಚಿಸಿರುವ ‘ಮರ್ಮಜ್ಞ ವಚನ ಎಂಬ ವ್ಯಂಗ್ಯಚಿತ್ರ ಸಂಕಲನ ಪ್ರಕಟಿಸಿದ್ದಾರೆ.
 ನೀನ೯ಳ್ಳಿ ಗಣಪತಿ ಅವರು ನನಗೆ ೩೦ ವಷ೯ಗಳಿಂದ ವರಿಚಿತರು. ನನ್ನ ಹನಿಗವನಗಳಿಗೆ ವ್ಯಂಗ್ಯ ಚಿತ್ರಗಳನ್ನು ಬರೆದುಕೊಡುತ್ತಿದ್ದರು. “. ನೀನ೯ಳ್ಳಿ ಸಾರ್, ನಿಮ್ಮ ವ್ಯಂಗ್ಯ ಚಿತ್ರದ ಬದುಕನ್ನು ಒಮ್ಮೆ ಹಿಂತಿರುಗಿ ನೋಡಿ ನಿಮ್ಮದೇ ಮಾತಿನಲ್ಲಿ ಬರೆದು ವ್ಯಾಟ್ಸಪ್ ಮಾಡಿ” ಎಂದು ಮೆಸೇಜ್ ಹಾಕಿದೆ.


ಅದು ೧೯೭೭.ಆಗ ತಾನೇ ಚಿತ್ರಕಲಾ ಶಿಕ್ಷಕನಾಗಿ ಯಲ್ಲಾಪುರ ಹೈಸ್ಕೂಲಿನಲ್ಲಿ ಕೆಲಸ ಆರಂಭಿಸಿದ್ದೆ.ಮುಂಚಿನಿಂದಲೂ ತಮಾಷೆಯಾಗಿ ಮಾತಾಡಿ ಜನರನ್ನು ನಗಿಸುವ ಪ್ರವೃತ್ತಿ ನನ್ನದಾಗಿತ್ತು.ಎಲ್ಲರನ್ನೂ ನಗಿಸಿ ನಾನೂ ನಗುವದು ನನಗೆ ಖುಷಿ ನೀಡುವ ಸಂಗತಿ ಆಗಿತ್ತು. ಎಲ್ಲಾ ಸಹೋದ್ಯೋಗಿ ಮಿತ್ರರನ್ನು ನಗಿಸುತ್ತ ಕೆಣಕುವ, ಅಣಕಿಸುವ ಕೆಲಸ ಮಾಡುತ್ತಿದ್ದೆ. ಆವಾಗಲೇ ಖ್ಯಾತರಾಗಿದ್ದ ಆರ್.ಕೆ.ಲಕ್ಷ್ಮಣ್, ಬಿ.ವಿ.ರಾಮಮೂತಿ೯ ಮುಂತಾದ ಹಿರಿಯ ವ್ಯಂಗ್ಯಚಿತ್ರಕಾರರ ಚಿತ್ರಗಳನ್ನು ನೋಡಿ ಪ್ರಭಾವಕ್ಕೊಳಗಾಗಿದ್ದೆ. ನನ್ನ ಸಹೋದ್ಯೋಗಿಗಳು “ನೀವೂ ಯಾಕೆ ವ್ಯಂಗ್ಯಚಿತ್ರ ಬರೆಯಬಾರದು?” ಎಂದು ಒತ್ತಾಯಿಸಿ ಪ್ರೋತ್ಸಾಹ ನೀಡಿದಾಗ ಹುರುಪುಗೊಂಡು ಬರೆಯಲು ಮುಂದಾದೆ. ಮೊದಲಿಗೆ ನಮ್ಮ ಊರಲ್ಲೇ ಪ್ರಕಟವಾಗುತ್ತಿದ್ದ “ಯಕ್ಷಗಾನ” ಮಾಸಪತ್ರಿಕೆಗೆ ಚಿತ್ರ ಕಳಿಸಿದೆ.  ಪ್ರಕಟವಾಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಆಮೇಲೆ ನಿಲ್ಲಲಿಲ್ಲ ವಿವಿಧ ಪತ್ರಿಕೆ ಗಳಿಗೆ ವ್ಯಂಗ್ಯ ಚಿತ್ರ ಕಳಿಸಿದೆ ಬಹಳಷ್ಟು ಪ್ರಕಟಣೆ ಕಂಡವು. ವಿನೋದ, ಮಲ್ಲಿಗೆ, ಮಯೂರ, ತುಷಾರ, ಉತ್ಥಾನ ಮಾಸಪತ್ರಿಕೆಗಳು, ಮಂಗಳ, ತರಂಗ, ಸುಧಾ, ಕಮ೯ವೀರ ಮುಂತಾದ ವಾರಪತ್ರಿಕೆಗಳು ನನ್ನ ವ್ಯಂಗ್ಯಚಿತ್ರ ಗಳನ್ನು ಪ್ರಕಟಗೊಳಿಸಿದವು. ನಾನು ಬಹಳ ಹಷ೯ದಿಂದ ಮುಂದುವರಿದೆ. ಸುಮಾರು ನಲವತ್ತು ವಷ೯  
ವೃಂಗ್ಯಚಿತ್ರಕಾರನಾಗಿ ಚಿತ್ರ ಬರೆದು ೧೫ ಸಾವಿರ ಮೀರಿದ ಸಂಖ್ಯೆಯಲ್ಲಿ ಪ್ರಕಟಿತ ಚಿತ್ರಗಳು ನನ್ನದಾಗಿವೆ ! ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ದೈನಂದಿನ ಸಾಂಸಾರಿಕ ಜೀವನ,  ಇವುಗಳಲ್ಲಿ ಮೂಡುವ ವಿಡಂಬನೆ ವಿಪರ‍್ಯಾಸಗಳೇ ನನ್ನ ವ್ಯಂಗ್ಯ ಚಿತ್ರ ಗಳಿಗೆ ಆಹಾರ, ಪ್ರೇರಣೆ, ಸ್ಪೂತಿ೯ ಆಯಿತು.
ಹಲವರಿಂದ ಹೊಗಳಿಕೆ, ಕೆಲವರಿಂದ ತೆಗಳಿಕೆ ಇವುಗಳ ಮಧ್ಯೆ ನಡೆಯಿತು ಪ್ರಯಾಣ. ಅನೇಕ ಶಿಬಿರಗಳನ್ನು ನಡೆಸಿದೆ. ಕಾಯಾ೯ಗಾರಗಳಾದವು, ಪ್ರದಶ೯ಗಳಾದವು.


 ಎಲ್ಲದರಲ್ಲೂ ಉತ್ಸಾಹದಿಂದ ಭಾಗಿಯಾದೆ. ಹಲವು ಹನಿಗವನಗಳು, ನಗೆ ಬರಹಗಳು, ಹಾಸ್ಯ ಸಂಚಿಕೆಗಳು, ನಾಮ ಫಲಕಗಳು, ಇನ್ನೂ ಹಲವಾರು ವಿಭಾಗಗಳು ನನ್ನ ವ್ಯಂಗ್ಯ ಚಿತ್ರಗಳಿಗೆ ಸ್ವಾಗತ ನೀಡಿದವು.
ನನಗೆ ಹಲವು ಸನ್ಮಾನ-ಪುರಸ್ಕಾರಗಳಾಗಿವೆ. ಪ್ರಶಸ್ತಿಗಳಿಗಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದೆ.
ಈಗಲೂ (ನನಗೀಗ ೭೨ ವಷ೯) ಕೆಲಸ ನಡೆದಿದೆ, ವ್ಯಂಗ್ಯ ಚಿತ್ರ ಕಡಿಮೆ, ಆದರೆ ರೇಖಾ ಚಿತ್ರಣ, ವಣ೯ ಚಿತ್ರಗಳು , ಪುಸ್ತಕಗಳ ಹೊದಿಕೆ ಚಿತ್ರಗಳು ನನ್ನಿಂದ ಆಗ್ತಾ ಇದೆ ,ಇದು ನನ್ನ ಕಲಾ ಯಾತ್ರೆ.ನಮಸ್ಕಾರಗಳು.


ಗೊರೂರು ಅನಂತರಾಜು


Leave a Reply

Back To Top