ಅಕ್ಕಮಹಾದೇವಿಯ ವಚನ-ಪ್ರೊ.ಜಿ.ಎ ತಿಗಡಿ

ವಚನ ಸಂಗಾತಿ

ಅಕ್ಕಮಹಾದೇವಿಯ ವಚನ-

ಪ್ರೊ.ಜಿ.ಎ ತಿಗಡಿ

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೆ ಲೇಸು ಕಂಡಯ್ಯಾ.
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ.
ತಾಯಿ ರಕ್ಕಸಿಯಾದಂತೆ ಕಾಯವಿಕಾರವು.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೊಲಿದವರು ಕಾಯಗೊಂಡಿದ್ದರೆನಬೇಡ.
*********

       ಹಾವಿನ ವಿಷವಿರುವುದು ಅದರ ಹಲ್ಲಿನಲ್ಲಿ.   ಹಲ್ಲನ್ನೇ ಕಿತ್ತರೆ, ಹಾವು ಅಪಾಯಕಾರಿಯಲ್ಲ.  ಆಗ ನಾವು ಅದರ ಸಂಗ – ಸ್ನೇಹ – ಸಹವಾಸ ಮಾಡುವುದರಲ್ಲಿ ಏನೂ ಕೆಡಕಿಲ್ಲ, ಅಪಾಯವಿಲ್ಲ.   ಅದರಂತೆ ಈ  ಶರೀರದ ಗುಣಗಳೂ ಕೂಡ ತುಂಬಾ ಅಪಾಯಕಾರಿಯಾಗಿವೆ.   ದೇಹದ  ಮೇಲಿನ ಪ್ರೀತಿ, ಮೋಹ – ಮಮಕಾರಗಳು ಬೆಳೆದರೆ ತೀರಿತು,  ಅದು ರಾಕ್ಷಸಿಯ ರೂಪ ತಾಳುತ್ತದೆ.   ಹೆತ್ತ ತಾಯಿಯೇ ರಾಕ್ಷಸಿಯಾದಂತೆ ದೇಹ ವರ್ತಿಸುತ್ತದೆ ಎನ್ನುತ್ತಾಳೆ ಅಕ್ಕಮಹಾದೇವಿ.   ಈ ರೀತಿ ಕೆಡುಕನ್ನುಂಟು ಮಾಡುವ ಈ ಕೆಟ್ಟ ಗುಣಗಳನ್ನು ದೂರೀಕರಿಸಿದರೆ ಮಾತ್ರ ಕಾಯದ ಸ್ನೇಹ – ಸಹವಾಸ – ಸಂಗಗಳು ಹಿತಕಾರಿ ಮತ್ತು ಪ್ರಯೋಜನಕಾರಿಯಾಗುತ್ತವೆ. ಇಂತಹ ಶರಣರೆ ಚೆನ್ನಮಲ್ಲಿಕಾರ್ಜುನನ ಪ್ರೀತಿಗೆ ಪಾತ್ರರಾಗುತ್ತಾರೆ.    ಕಾಯಗೊಂಡವರಿಗೆ ಪರಮಾತ್ಮನ ಸನ್ನಿಧಿಗೆ ಪ್ರವೇಶವೇ ಇಲ್ಲವೆನ್ನುತ್ತಾಳೆ ಅಕ್ಕ.

   ಪ್ರಸ್ತುತ ವಚನದಲ್ಲಿ ಅಕ್ಕ ಮಹಾದೇವಿ ಹಾವು ಮತ್ತು ಕಾಯಗಳೆರಡರ ಹೋಲಿಕೆ ಮಾಡುತ್ತಾ ಕಾಯ ವಿಕಾರವನ್ನು ಗೆಲ್ಲುವ ರೀತಿಯನ್ನು  ತುಂಬಾ ಸುಂದರವಾಗಿ  ನಿರೂಪಿಸಿದ್ದಾಳೆ.  ಮನವೆಂಬುದು ಆಸೆಯೆಂಬ ಹಾವಿಗೆ ಜನ್ಮ ನೀಡುತ್ತದೆ.   ಈ ಆಸೆಗೆ (ಮಾಯೆಗೆ) ಮಿತಿ ಎಂಬುದಿಲ್ಲ.   ಅದರ ದಾಹ ಎಂದಿಗೂ ತೀರುವುದಿಲ್ಲ.   ಇದರ  ಪರಿಣಾಮವೇ ದುಃಖ ಸಂಕಷ್ಟಗಳ ಸರಮಾಲೆ.    ಲೌಕಿಕದ ದೈಹಿಕ ಕ್ಷಣಿಕ ಸುಖದಾಸೆಯ  ರುಚಿಯನ್ನು ಶರೀರಕ್ಕೆ ತೋರುತ್ತಾ, ಭೋಗದಾಸೆಗೆಳಸುತ್ತ ಅದರಲ್ಲಿ ಮುಳುಗಿಸಿ ಬಿಡುತ್ತದೆ.    ವಿಷಯ ಸುಖದ ಲೋಲುಪತೆಯಲ್ಲಿ ದೇಹವು ಕಾಯವಿಕಾರಕ್ಕೊಳಗಾಗುತ್ತದೆ.  ಆಗ ಅದು ಸಹಜವಾಗಿ ರಾಕ್ಷಸಿ ಗುಣಗಳನ್ನು ಅಳವಡಿಸಿಕೊಂಡು ರಾಕ್ಷಸ ರೂಪ ತಾಳುತ್ತದೆ.   ಮಾಡಬಾರದ ಕುಕೃತ್ಯಗಳನ್ನೆಸಗುತ್ತದೆ.  ಕೊನೆಗೆ ಅದ: ಪಾತಾಳಕ್ಕಿಳಿದು  ವ್ಯಕ್ತಿತ್ವ  ಹನನವಾಗುತ್ತದೆ .

ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾಳೆ.

ಆಸೆಯುಳ್ಳನ್ನಕ್ಕ ರೋಷ ಬಿಡದು
ಕಾಮವುಳ್ಳನ್ನಕ್ಕ ಕಳವಳ ಬಿಡದು

ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು;.

          ಹಾಗಾದರೆ  ಇದಕ್ಕೆ ಪರಿಹಾರವೇನು?  ಅದನ್ನೂ  ಅಕ್ಕಮಹಾದೇವಿಯೇ ಸೂಚಿಸುತ್ತಾಳೆ.   ಹಾವಿನ ವಿಷಪೂರಿತ ಹಲ್ಲನ್ನು ಕಿತ್ತು ಆ ಹಾವನ್ನು ಆಡಿಸಲು ಸಮರ್ಥನಾದರೆ ಅಂತಹ ಹಾವಿನ ಸಹವಾಸವೇ ಲೇಸೆನ್ನುತ್ತಾಳೆ.  ಮನದ ಮಾನಸ ಪುತ್ರಿಯಾದ ‘ ಆಶೆ ‘ (ಮಾಯೆ) ಎಂಬ ವಿಷದ ಹಲ್ಲನ್ನು ಕಿತ್ತೆಸೆಯಬೇಕು.   ಆಶೆಯನ್ನು ಪೂರ್ತಿ ಬಿಡಬೇಕೆಂದಲ್ಲ,  ವಿಷದ ಮಾರ್ಗದಿಂದ ಸನ್ಮಾರ್ಗದತ್ತ ಅದನ್ನು ಹೊರಳಿಸುವುದು ಮುಖ್ಯವಾದುದಾಗಿದೆ.   ಅಂತರಂಗದಲ್ಲಿ ಸ್ಥಿತನಾದ ಅರಿವೆಂಬ ಗುರುದೇವನನ್ನು ಬಯಸಿ  ಸೇರುವತ್ತ ಆಶೆ ಸಾಗಬೇಕು.    ಆಗ ಕಾಯವಿಕಾರವಳಿದು ಕಾಯ ಅಕಾಯವಾಗುತ್ತದೆ.   ಅರಿವೆಂಬ ಗುರುವಿನ ಸಂಗ ಮಾಡಿದ ಮನ ದೇಹಗಳೆರಡೂ   ಜ್ಯೋತಿ ಮುಟ್ಟಿದ ಜ್ಯೋತಿಯಂತೆ , ಬೆಳಗಿನಲ್ಲಿ ಮಹಾಬೆಳಗಾಗಿ ಪರಮಾನಂದದಲ್ಲಿ  ಲೀನವಾಗುತ್ತವೆ.  
ಇದನ್ನೇ ಅಲ್ಲಮರು ;

ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ ಸಮ್ಯಕ್ ಜ್ಞಾನವೆಂಬ  ಶಾಂತಿ  ದೊರಕೊಂಡಿತ್ತು.  ……

ಎಂದಿದ್ದಾರೆ .   ದೇವನೊಲುಮೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಇಂತಹ ಶರಣರು ಮಾತ್ರ ಅಕಾಯರಾಗಿರುತ್ತಾರೆ ಎಂಬುದು ಅಕ್ಕನ ನಿಲುವಾಗಿದೆ.

———————————

ಪ್ರೊ.ಜಿ.ಎ ತಿಗಡಿ

Leave a Reply

Back To Top