ಡಿವಿಜಿ ಪುಣ್ಯಸ್ಮರಣೆ
ಕನ್ನಡ ಸಾಹಿತ್ಯದ ಮೇರುಪ್ರತಿಭೆ
ಡಿ. ವಿ. ಗುಂಡಪ್ಪನವರು-
ಎಲ್. ಎಸ್. ಶಾಸ್ತ್ರಿ
ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಮೇರುಪ್ರತಿಭೆ ಡಿ. ವಿ. ಗುಂಡಪ್ಪನವರು. ಘನ ವಿದ್ವಾಂಸರೂ , ಪತ್ರಿಕಾರಂಗಕ್ಕೆ ಘನತೆ ತಂದುಕೊಟ್ಟವರೂ , ಕನ್ನಡದ ಭಗವದ್ಗೀತೆಯೆಂದೇ ಬಣ್ಣಿಸಲ್ಪಡುವ ಕಗ್ಗವನ್ನು ನೀಡಿ ಆಧುನಿಕ ಸರ್ವಜ್ಞರೆನಿಸಿಕೊಂಡವರೂ ಆದ ದೇವನಹಳ್ಳಿಯ ವೆಂಕಟರಮಣಯ್ಯನವರ ಮಗ ಗುಂಡಪ್ಪನವರು ಎಲ್ಲದರಲ್ಲೂ ನಿಜವಾದ ಅರ್ಥದಲ್ಲಿ ದೊಡ್ಡವರು ಎಂದು ಅನಿಸಿಕೊಂಡವರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಮತ್ತು ಪತ್ರಿಕಾ ರಂಗಕ್ಕೆ ಭದ್ರ ಅಡಿಗಲ್ಲನ್ನು ಹಾಕಿಕೊಟ್ಟವರು. ಹಾಮಾನಾ ಅವರು ಹೇಳುವಂತೆ –
” ಡಿವಿಜಿಯವರು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷ”.
ಕೋಲಾರ ಜಿಲ್ಲೆಯ ಮುಳುಬಾಗಿಲ ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದ ಗುಂಡಪ್ಪನವರ ಪೂರ್ವಿಕರು ಮೂಲತಃ ತಮಿಳ್ನಾಡಿನ ಕಡೆಯವರು. ೧೮೮೭ ರ ಮಾರ್ಚ ೧೭ ರಂದು ಜನಿಸಿದ ಗುಂಡಪ್ಪನವರ ಬಾಲ್ಯ ಕಷ್ಟ ಕಾರ್ಪಣ್ಯಗಳಲ್ಲಿ ಕಳೆಯಿತು. ಹೇಗೋ ಮ್ಯಾಟ್ರಿಕ್ ವರೆಗೆ ಬಂದರಾದರೂ ಅದೇಕೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಆದರೆ ಇಂಗ್ಲಿಷ , ಸಂಸ್ಕೃತ ಮತ್ತು ಕನ್ನಡ ಭಾಷೆಗಳನ್ನು ಅವರು ಚೆನ್ನಾಗಿ ಅರಿತಿದ್ದರು. ಏನಾದರೂ ಕೆಲಸ ಮಾಡುವದು ಅನಿವಾರ್ಯವಿತ್ತು. ಕೆಲ ಕಾಲ ಬದಲಿ ಶಿಕ್ಷಕರ ಕೆಲಸ ಮಾಡಿದರು. ನಂತರ ಚಿನ್ನದ ಗಣಿಯ ಸೋಡಾ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿದರು. ಆದರೆ ಅದು ಅವರಿಗೆ ಒಗ್ಗದ ಕೆಲಸವಾಗಿತ್ತು. ಬೆಂಗಳೂರಿಗೆ ಹೋಗಿ ಸೂರ್ಯೋದಯ ಪ್ರಕಾಶಿಕ ಎಂಬ ಒಂದು ಸಣ್ಣ ಪತ್ರಿಕೆ ಯನ್ನು ಸೇರಿಕೊಂಡರು. ಅಲ್ಲಿಂದ ಮದ್ರಾಸಿನ ವೀರಕೇಸರಿ ಉಪಸಂಪಾದಕರಾದರು. ಈ ನಡುವೆ ” ದಿ ಹಿಂದೂ” ಸಹಿತ ಇಂಗ್ಲಿಷ್ ಪತ್ರಿಕೆಗಳಿಗೆ ಸುದ್ದಿ, ಲೇಖನ ಬರೆಯುತ್ತಲೇಇದ್ದರು. ಮುಂದೆ ಮೈಸೂರ ಟೈಮ್ಸ್ ಪತ್ರಿಕೆ ಉಪಸಂಪಾದಕರಾದರು. ೧೯೧೩ ರಲ್ಲಿ “ಕರ್ನಾಟಕ ” ಎಂಬ ಇಂಗ್ಲಿಷ್ ಪತ್ರಿಕೆಯನ್ನು ತಾವೇ ಆರಂಭಿಸಿ ೧೮ ವರ್ಷ ನಡೆಸಿದರು. ಪತ್ರಿಕೆಗಳ ಮೂಲಕ ಓದುಗರಿಗೆ ಹೊಸ ಹೊಸ ವಿಷಯಗಳನ್ನೇ ನೀಡಬೇಕು ಎನ್ನುವದು ಅವರ ನಿಲುವಾಗಿತ್ತು. ಅದಕ್ಕೆ ತಕ್ಕಂತೆ ಅವರು ಯಾವತ್ತೂ ಹೊಸದರ ಹುಡುಕಾಟದಲ್ಲಿರುತ್ತಿದ್ದರು. ಕನ್ನಡ ಪತ್ರಿಕಾ ರಂಗಕ್ಕೆ ಡಿವಿಜಿಯವರ ಕೊಡುಗೆ ಬಹಳ ಮಹತ್ವದ್ದು. ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಅವರು ಬರೆದ “ವೃತ್ತಪತ್ರಿಕೆ ” ಎಂಬ ಪುಸ್ತಕ ಇಂದಿಗೂ ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದೆ.
ಡಿವಿಜಿಯವರು ಸುಮಾರು ೬೬ ಕನ್ನಡ ಕೃತಿ, ಏಳೆಂಟು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ತತ್ವಶಾಸ್ತ್ರ, ಕಾವ್ಯ, ಅನುವಾದ, ಅಧ್ಯಾತ್ಮ, ರಾಜ್ಯಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಅವರು ಬರೆದ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ.
ಆದರೆ ಡಿವಿಜಿಯವರು ಸಮಸ್ತ ಕನ್ನಡಿಗರಿಗೆ ಪ್ರಿಯರಾದದ್ದು ಅವರ ಮಂಕುತಿಮ್ಮನ ಕಗ್ಗ ಮತ್ತು ಮರುಳುತಿಮ್ಮನ ಕಗ್ಗ ಕೃತಿಗಳಿಂದ. ಆಧುನಿಕ ಕನ್ನಡ ಭಗವದ್ಗೀತೆ ಎಂದೇ ಹೆಸರಾಗಿರುವ ಕಗ್ಗ ಕೇವಲ ನಾಲ್ಕು ನಾಲ್ಕು ಸಾಲುಗಳಲ್ಲೇ ಮಹತ್ತರ ಜೀವನ ಸಿದ್ಧಾಂತಗಳನ್ನು ಹೇಳುವ ಮೂಲಕ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಇಂದು ತಮ್ಮ ಉಪನ್ಯಾಸ, ಲೇಖನಗಳಲ್ಲಿ ಡಿವಿಜಿಯವರ ಕಗ್ಗದ ಸಾಲುಗಳನ್ನು ಉಪಯೋಗಿಸದೇ ಇರುವವರೇ ಕಡಿಮೆ ಎನ್ನುವದು ಅದರ ಹೆಗ್ಗಳಿಕೆ.
ಹಾಗೆಯೇ ಅವರು ಬರೆದ ಭಗವದ್ಗೀತಾ ತಾತ್ಪರ್ಯ, ಜೀವನಧರ್ಮಯೋಗ ಗ್ರಂಥ ಅವರ ಘನವಿದ್ವತ್ತಿನ ಪ್ರತೀಕವೆನಿಸಿದೆ. ಆ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರಕಿದೆ. ಬಾಳಿಗೊಂದು ನಂಬಿಕೆ, ಮಹನೀಯರು, ಜ್ಞಾಪಕ ಚಿತ್ರಶಾಲೆ, ಶ್ರೀ ರಾಮ ಪರೀಕ್ಷಣಂ, ಅಂತ:ಪುರಗೀತೆ, ಉಮರನ ಒಸಗೆ, ಗೀತಶಾಕುಂತಲಾ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ ಮೊದಲಾದವು ಅವರ ಕೃತಿಗಳು.
ಡಿವಿಜಿಯವರ ಸಾಹಿತ್ಯ ಪತ್ರಿಕಾ ಸೇವೆಗಳಿಗೆ ತಕ್ಕಂತೆ ೧೯೩೨ ರಲ್ಲಿ ೧೮ ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೬೧ ರಲ್ಲಿ ಮೈಸೂರು ವಿ. ವಿ. ಗೌರವ ಡಿಲಿಟ್, ೧೯೭೪ ರಲ್ಲಿ ಭಾರತ ಸರಕಾರದ ಪದ್ಮಭೂಷಣ ಗೌರವಗಳು ದೊರಕಿದವು.
೧೯೩೫ ರಲ್ಲಿ ಅವರು ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಿದರು. ಅದು ಕರ್ನಾಟಕದ ಅತ್ಯಂತ ಮಹತ್ವದ ಸಂಸ್ಥೆಯಾಗಿ ಬೆಳೆದುನಿಂತಿದೆ. ೧೯೩೯ ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿ, ಮೈಸೂರು ವಿವಿ.ಇಂಗ್ಲಿಷ ಕನ್ನಡ ನಿಘಂಟಿನ ಸಂಪಾದಕ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ತಮ್ಮದೇ ಸುಮತಿ ಗ್ರಂಥಮಾಲೆ ಎಂಬ ಪ್ರಕಾಶನ ಸ್ಥಾಪಿಸಿ ಆ ಮೂಲಕವೂ ಅವರು ಅನೇಕ ಅಮೂಲ್ಯ ಗ್ರಂಥಗಳನ್ನು ಹೊರತಂದಿದ್ದಾರೆ.
ಪ್ರಾಮಾಣಿಕತೆ, ಸರಳ ಜೀವನ, ವೃತ್ತಿನಿಷ್ಠೆ, ಉನ್ನತ ಚಿಂತನೆ, ನಿರಂತರ ಕಾರ್ಯೋತ್ಸಾಹ, ಅಧ್ಯಯನ ಪ್ರವೃತ್ತಿ, ಡಿವಿಜಿಯವರ ಘನ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿದ್ದವು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅವರು ಪರೀಕ್ಷೆಗಳಿಗೂ ಪ್ರತಿಭೆಗೂ ಸಂಬಂಧವಿಲ್ಲವೆನ್ನುವದನ್ನು ತಮ್ಮ ಬದುಕಿನಿಂದಲೇ ತೋರಿಸಿಕೊಟ್ಟರು. ೮೮ ವರ್ಷಗಳ ಸಾರ್ಥಕ ಜೀವನ ನಡೆಸಿದ ಗುಂಡಪ್ಪನವರು ೧೯೭೫ ರ ಅಕ್ಟೋಬರ್ ಏಳರಂದು ನಿಧನರಾದರು. ಆದರೆ ” ಡಿ. ವಿ. ಜಿ. ” ಎಂಬ ಮೂರಕ್ಷರ ಕನ್ನಡಿಗರ ನಿರಂತರ ಮಂತ್ರವಾಗಿ ಉಳಿದುಕೊಂಡಿದೆ.
————————-
ಎಲ್. ಎಸ್. ಶಾಸ್ತ್ರಿ