ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ-
ಕನಸಿಗಿಟ್ಟ ಕೊಳ್ಳಿ
ಕೂಡಿಟ್ಟ ಕನಸಿಗೇಕೆ ಕೊಳ್ಳಿ
ಹೂತಿಟ್ಟ ಬಯಕಗೇಕೆ ಚಿಗುರು
ಮತ್ತೆ ಮತ್ತೆ ಮೆತ್ತಗೆ ಮಾಡುತಿಹುದು
ಧೋ ಎಂದು ಸುರಿವ ಬಿರುಮಳೆಗೆ.
ಆಸೆ ಅಂಬರಕೆ ರಂಧ್ರ
ಆಸರೆಯ ಮನದಾಸೆಗೆ ಬೇಲಿ
ಬೇಸರಕೂ ಕಿರಿಕಿರಿ
ನೇಸರನ ಕ್ರೌರ್ಯದ ಬಿಸಿಲಂತೆ.
ಕೊಸರಿ ಹೋಗದಂತೆ ತಾಕೀತು
ಎದುರಿಸು ಧೈರ್ಯ ಸಂಚಕಾರದಿ
ಬಳಸಿದ ಕರವು ಶಪಿಸುತಿದೆ
ಕೆರಳಿ ಕೆಂಡಾಮಂಡಲವಾಗಿ.
ನೆರಳು ನೀವ ಮರ ಬರಿದೇ
ಬೆರಳು ಹಿಡಿವ ಒಲವು ತೊರೆದು
ಸ್ವಾರ್ಥದ ಗೆಲುವಿಗೆ
ನಂಬಿದವರ ಹತವಾಗಿಸಿ.
ಬೇಷರತ್ತಾಗಿ ಒಲಿದ ನೋಟ
ನರಳುತಿದೆ ಕೊರಳಿಗೆ ಕೊಡಲಿಯಾಗಿ
ಛಿದ್ರ ಮನೆ ಮನ ಅಭದ್ರತೆಯಲಿ
ಮುದ್ರೆ ಹೊತ್ತಿದ್ದ ಸಬಂಧ ಬರೀ ಮಾತಾಗಿದೆ.
ಏನೆನ್ನಲಿ ಭಿನ್ನವಾದಕೆ
ಒಂದುಗೂಡುವುದು ಮರಿಚೀಕೆ
ಭ್ರಮೆಯ ಬದುಕಿಗೆ ಹಂಲವೇಕೆ
ವಾಸ್ತವದ ನೆಲೆಯ ಹುಡುಕಿ ಬಿಡು.
ರೇಷ್ಮಾ ಕಂದಕೂರ