ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ನಾ ಕಂಡಂತೆ ಅಧ್ಯಾತ್ಮ

ಅಧ್ಯಾತ್ಮ ಎಂದರೇನು ಜೀವನದ ಒಂದಲ್ಲ ಒಂದು ಹಂತದಲ್ಲಿ ಎಲ್ಲರಿಗೂ ಮೂಡುವ ಕಾಡುವ ಪ್ರಶ್ನೆ ಇದು ಕೆಲವರಿಗೆ ಇದು ಬೇರೆಯದೇ ಒಂದು ಲೋಕ, ಕೆಲವರಿಗೆ ಅದ್ಭುತ ವಿಚಿತ್ರ ಅನುಭವ, ಹಲವರಿಗೆ
ಇದೇ ಜೀವನ ಹಲಕೆಲವರಿಗೆ ಇದು ಉದ್ಯೋಗ.  ಉತ್ತರ ಕಂಡು ಹಿಡಿಯಲು ಕಷ್ಟ ಸಾಧ್ಯವಾದ ಪ್ರಶ್ನೆ . ಬಾಳೆಲ್ಲ ಇದರ ಹುಡುಕಾಟದಲ್ಲಿ ಕಳೆದಿದ್ದಾರೆ ಎಷ್ಟೋ ಋಷಿ ಮುನಿ ಯೋಗಿಗಳು. ಧರ್ಮವೆಂದರೆ ಅಧ್ಯಾತ್ಮವೇ ಎಂದರೆ ಖಂಡಿತಾ ಅಲ್ಲ.  ಸಂಸ್ಕೃತಿ ಪರಂಪರೆಗಳಾಗಲಿ ರೂಢಿಗತ ಮೂಲಗತ ನಂಬಿಕೆಗಳು ಅಧ್ಯಾತ್ಮವಾಗಲು ಸಾಧ್ಯವಿಲ್ಲ ಅವರವರ ಮಿತಿಯಲ್ಲಿನ ಪರಿಭಾವಿಸುವಿಕೆಯಲ್ಲಿ ಇದರ ವ್ಯಾಖ್ಯಾನ ಮಾಡುವವರಿದ್ದಾರೆ.

ಹಾಗಾದರೆ ಅಧ್ಯಾತ್ಮ ಎಂದರೇನು ?ಸ್ಥೂಲವಾಗಿ ಹೇಳಬಹುದಾದರೆ ಅಂತರಂಗದ ಅನುಭವ, ಅಂತರ್ಮುಖೀ ಶೋಧನೆ ಹಾಗೂ ಹುಡುಕಾಟ .ಉಪನಿಷತ್ಗಳ ಉದ್ದೃತದಂತೆ “ಆತ್ಮಾನಂ ವಿದ್ದಿ” ನಿನ್ನ ನೀನು ಅರಿ . ಆತ್ಮದ ಹಾಗೂ ಪ್ರಪಂಚದ ಪರಸ್ಪರ ಸಂಬಂಧ ಅವಲಂಬನೆ ಅರಿಯುವಿಕೆಯ ನಿರಂತರ ಕ್ರಿಯೆಯೇ ಆಧ್ಯಾತ್ಮ . ಇದು ಆದಿಯೂ ಅಲ್ಲ ಗಮ್ಯವೂ ಅಲ್ಲ .ಇವೆರಡರ ನಡುವಿನ ಸತತ ಗ್ರಹಿಸುವಿಕೆಯ ಪಯಣ.

ಆಧ್ಯಾತ್ಮಿಕ ಕೋಶಗಳು:  
ಉಪನಿಷತ್ತಿನಲ್ಲಿ ಪ್ರೋಕ್ತವಾಗಿರುವ ಕೋಶಗಳ ಆಧಾರದ ಮೇಲೆ ಆಧ್ಯಾತ್ಮಿಕತೆಯನ್ನು ಅರಿಯುವ ಪ್ರಯತ್ನ ಮಾಡಿದರೆ ..ಪ್ರತಿ ಜೀವಿಯೂ ಐದು ಆಧ್ಯಾತ್ಮಿಕ ಕೋಶಗಳನ್ನು ಹೊಂದಿರುತ್ತಾನೆ.  
(೧) ಬೌದ್ಧಿಕ ಆಯಾಮದ ಅನ್ನಮಯ ಕೋಶ (೨)ಮಾನವೀಯ ಬಯಕೆ ಭಾವನೆಗಳ ಜೈವಿಕ ಪ್ರಾಣಮಯ ಕೋಶ
(೩) ಇಂದ್ರಿಯಗಳ ಗ್ರಹಿಕೆಗೆ ಸಂಬಂಧಿತ ಮನೋಮಯ ಕೋಶ
(೪) ಅವೆಲ್ಲಕ್ಕಿಂತ ಅತ್ಯುನ್ನತ ಮಟ್ಟದ ಅಂತರಾಳದ ಜ್ಞಾನ ಅಂತರ್ಬೋಧೆ ಬುದ್ಧಿಶಕ್ತಿ ಹಾಗೂ ಆಧ್ಯಾತ್ಮಿಕ ವಲಯದ ವಿಶ್ವ ಸಮಾನತೆಯ ವಿಜ್ಞಾನಮಯ ಕೋಶ ಮತ್ತು
(೫) ಎಲ್ಲಕ್ಕಿಂತ ಮುಖ್ಯವಾದ ಸಂಪೂರ್ಣ  ಆನಂದ (ತುರೀಯತೆ)ದ  ಬೆಳಕಿನ ಆನಂದಮಯ ಕೋಶ. ಒಂದೊಂದೇ ಹಂತಗಳನ್ನು ದಾಟುತ್ತಾ ಉತ್ತುಂಗದಲ್ಲಿರುವ ಆನಂದಮಯ ಕೋಶದ ಸಮಾಧಿ ಸ್ಥಿತಿಗೆ ತಲುಪಿಸುವ ಸಾಧನವೇ ಅಧ್ಯಾತ್ಮ .

ಮೋಕ್ಷ ಶಾಸ್ತ್ರದಲ್ಲಿ ಮೂರು ರೀತಿಯ ಪ್ರಪಂಚದ ಬಗ್ಗೆ ಹೇಳುತ್ತದೆ ಆದಿ ಭೂತ ಆದಿ ದೈವ ಮತ್ತು ಆದಿ +ಆತ್ಮ ಆಧ್ಯಾತ್ಮ .
ನಮ್ಮ ಕಣ್ಣಿಗೆ ಕಂಡು ಬರುವ ಈ ಜಗತ್ತು ಪಂಚಭೂತಗಳ ಈ ಲೋಕವೇ ಆದಿ ಭೂತ . ತೋರಿಬರುವ ಸಮಾಜ ವೈಜ್ಞಾನಿಕ ತಾಂತ್ರಿಕ ಬದಲಾವಣೆಗಳು ಇದರ ಅಂಶಗಳು. ಇಂದ್ರಿಯ ಗೋಚರ ಎನ್ನಬಹುದು.

ದೇವತೆಗಳು ಪರಲೋಕ ಇವುಗಳ ಬಗೆಗಿನ ಚಿಂತನೆ ಆದಿದೈವ .ಹಿಂದೆ ಜೀವನದ ಹಾಸು ಹೊಕ್ಕಾಗಿದ್ಧ ಈ ಅಂಶ ಈಗ ಹೆಚ್ಚಿನ ಪ್ರಾಮುಖ್ಯತೆ ಆದ್ಯತೆ ಕಳೆದುಕೊಂಡಿದೆ .

ಅಧ್ಯಾತ್ಮ ಎಂದರೆ ಸಾರ್ವಕಾಲಿಕ ಅಂತರ್ಗತ ಆತ್ಮನ ಬಗ್ಗೆ ಇದು ಇಂದ್ರಿಯಾತೀತವಲ್ಲ ನಂಬಿಕೆಯೂ ಅಲ್ಲ.  ನಿಜವಾದ ಆತ್ಮನ ಸ್ವರೂಪದ ಬಗ್ಗೆ ತಿಳಿಯುವುದೇ ಮಾನವ ಜೀವನದ ಗುರಿ.

 #ಚತುರ್ವಿಧ ಪುರುಷಾರ್ಥಗಳು ಮತ್ತು ಅಧ್ಯಾತ್ಮ

(೧) ಧರ್ಮ:  ಸಮಸ್ತ ಪ್ರಪಂಚವನ್ನು ನೋಡಿ ನಮ್ಮಲ್ಲಿ ಸಂತೋಷ ಪ್ರೀತಿಯ ಭಾವ ಒಡಮೂಡಿದರೆ ಅದುವೇ ಧರ್ಮ
(೨) ಅರ್ಥ:  ಅರ್ಥವೆಂದರೆ ಸಮೃದ್ಧಿ ಸಂಪತ್ತು ಬದುಕಿಗೆ ಅನ್ನ ನೀರು ಗಾಳಿ ಬೆಳಕು ಎಲ್ಲವೂ ಬೇಕು ಪಂಚಮಹಾಭೂತಗಳೇ ದೇವರ ಸ್ವರೂಪ . ಅಂತರಂಗದಲ್ಲಿ ಧರ್ಮದ ಜ್ಯೋತಿ ಬೆಳಗಬೇಕು ಬಹಿರಂಗದಲ್ಲಿ ಅರ್ಥದ ಹೂವು ಅರಳಬೇಕು.

(೩) ಕಾಮ ;  ಕಾಮವೆಂದರೆ ಆನಂದ .ಈ ಸತ್ಯಂ ಶಿವಂ ಸುಂದರವಾದ ಸೃಷ್ಟಿಯನ್ನು ನೋಡಿ ಆನಂದವಾದರೆ ಅದೇ ಕಾಮ .ಜಗತ್ತಿನ ಒಳಿತನ್ನೆಲ್ಲ ನೋಡಿ ಸಂತಸಪಟ್ಟು ಅದನ್ನು ವ್ಯಕ್ತಪಡಿಸುವುದೇ ಮೂರನೇ ಪುರುಷಾರ್ಥ.

(೪)  ಮೋಕ್ಷ : ಮೋಕ್ಷ ಎಂದರೆ ನಿಶ್ಚಿಂತವಾಗಿ ಶಾಂತವಾಗಿ ತಣ್ಣಗಿರುವುದು. ಸುಖ_ದುಃಖ ಮಾನ_ಅಪಮಾನ ಸೋಲು_ಗೆಲುವು ನೋವು_ನಲಿವು ಕೂಡು_ಅಗಲುವಿಕೆ ಈ ಎಲ್ಲಾ ದ್ವಂದ್ವಗಳಿದ್ದರೂ ಮನಕ್ಕೆ ತೆಗೆದುಕೊಳ್ಳದೆ ನಿಶ್ಚಿಂತರಾಗಿ ನಗು ನಗುತ್ತಿರುವುದು ಮೋಕ್ಷ .ಇದು ಆನಂದಮಯ ಕೋಶದ ಪ್ರಾಪ್ತಿ ಅಧ್ಯಾತ್ಮದ ಸಿದ್ದಿ.

#ಅಧ್ಯಾತ್ಮದ ಅಗತ್ಯತೆ:

ಸಂಹರಿಸಿದಷ್ಟೂ ಹುಟ್ಟುತ್ತಲೇ ಇರುವ ರಕ್ತ ಬೀಜಾಸುರನ ಸಂತತಿ ಮಾನವ ಮನದ ಬಯಕೆಗಳು. “ಅಷ್ಟು ದೊರಕಿದರೆ ಮತ್ತಷ್ಟರಾಸೆ” ಎಂಬ ದಾಸವರೇಣ್ಯರ ನುಡಿಯಂತೆ ಇದು ಅನಂತ ..ಕೊನೆ ಮೊದಲಿಲ್ಲದ ಕಾಮನೆಗಳ ತೃಪ್ತಿಗಾಗಿ ಶರೀರ ಇಂದ್ರಿಯಗಳನ್ನು ಹಿಂಸಿಸಿ, ದಂಡಿಸಿ, ದುಡಿಸಿ ಮಾನಸಿಕ, ಶಾರೀರಿಕ ವ್ಯಾಧಿಗಳಿಗೆ ತುತ್ತಾಗುತ್ತಿರುವ ಈ ಆಧುನಿಕ ಯುಗದಲ್ಲಿ ಅಧ್ಯಾತ್ಮದ ಅರಿವು ಹರಿವು ಅತ್ಯಂತ ಪ್ರಸ್ತುತ ಪ್ರಮುಖವಾಗುತ್ತದೆ. ಸ್ವಾರ್ಥ ಬಿಟ್ಟು ಆಸೆಗಳನ್ನು ಕಡಿಮೆ ಮಾಡಿಕೊಂಡು ಆತ್ಮತೃಪ್ತಿಯಿಂದ ಪರಮಾತ್ಮ ಚಿಂತನೆ, ಸದ್ವಿದ್ಯ ಅಧ್ಯಯನ, ಸದ್ಗ್ರಂಥಗಳ ಪಠಣ, ಜ್ಞಾನಿಗಳ ಸತ್ಸಂಗ, ಪರೋಪಕಾರ ಇವುಗಳಲ್ಲಿ ತೊಡಗಿದರೆ ಅದೇ ಅಧ್ಯಾತ್ಮವಿದ್ಯೆಯ ಸಂಪಾದನೆ. ಇವೆಲ್ಲವುಗಳ ಅಭ್ಯಾಸ ಅಧ್ಯಾತ್ಮ ವಿದ್ಯೆಗೆ ಮಾತ್ರ ಅಲ್ಲ ಲೌಕಿಕ ಜಗತ್ತಿನ ನೆಮ್ಮದಿ ಶಾಂತಿಗೂ ಅಷ್ಟೇ ಸಹಾಯಕ .

ಒಟ್ಟಿನಲ್ಲಿ ಅಧ್ಯಾತ್ಮ ಎಂದರೆ ಶಾಶ್ವತ ಸತ್ಯದ ಅನ್ವೇಷಣೆ. ಆತ್ಮದ ಅರಿವು.  ಆತ್ಮ ಅಂದರೆ ಪರಮಾತ್ಮ .ಆತ್ಮದ ಎಡೆಗಿನ ಕೇಂದ್ರೀಕೃತ ಲಕ್ಷ್ಯವೇ ಅಧ್ಯಾತ್ಮ . ಹುಡುಕ ಹೊರಟವರೆಲ್ಲ ಮೊದಲು ಕೇಳಿಕೊಳ್ಳುವುದು ಕೋ ಅಽಹಂ? ಅಂದರೆ ನಾನು ಯಾರು ಎಂದು. ಪ್ರಕೃತಿಯಲ್ಲಿ ಬೆರೆತು ಬಾಳುವುದೇ ಅಧ್ಯಾತ್ಮ. ಇದು ದೇಹ ಮನಸ್ಸು ಬುದ್ಧಿ ಶಕ್ತಿಗಳಿಗೂ ಮೀರಿದ ಆಯಾಮದ ಅನ್ವೇಷಣೆ ಹಾಗೂ ಸಾಧನೆ. ಇದನ್ನು ಸಾಧಿಸಿದವರು ಶಿವೋಽಹಂ ಅಂದರೆ ನಾನೇ ಶಿವ ಎಂಬ ಅರಿವನ್ನು ಪಡೆಯುತ್ತಾರೆ . ಮಾನವೀಯ ಅರಿವು ಪ್ರಜ್ಞೆಗಳ ಮೂಲಕ ಕೇಂದ್ರೀಕೃತ ಆತ್ಮದ ಕಡೆಗಿನ ಲಕ್ಷ್ಯವೇ ಆಧ್ಯಾತ್ಮ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top