ಡಾ. ವೀಣಾ ಪಿ., ಹರಿಹರ-ಕವಿತೆ ‘ಹುಳಿ ದ್ರಾಕ್ಷಿ’

ಕಾವ್ಯಸಂಗಾತಿ

ಡಾ. ವೀಣಾ ಪಿ., ಹರಿಹರ-ಕವಿತೆ

‘ಹುಳಿ ದ್ರಾಕ್ಷಿ’

ಆಗಷ್ಟೇ ಪ್ರೇಮ-ಮೋಹಗಳ
ಕನಸು ಕುಡಿಯೊಡೆದು
ಮನದ ಮೊಗ್ಗರಳಿ
ಉಲಿದೊಲಿದ ಜೋಡಿ ಹಕ್ಕಿಯ
ಮರಿಗೆ ಗೂಡು ಕಟ್ಟುವ
ಸಂಭ್ರಮದ ಸನ್ನಾಹದ
ತಾರುಣ್ಯದ ಹೊಸ್ತಿಲಲ್ಲೇ
ನೀನು ನನ್ನ ತೊರೆದು ಹೋದುದಕ್ಕೆ
ಬೇಸರವೇನಿಲ್ಲ ಇನಿಯ!

ನೀನು ಹಾಗೆ ಹೋಗಿದ್ದಿಲ್ಲವಾದಲ್ಲಿ
ನಿನ್ನ ಕಣ್ಣಿಗೆ ನಾನು
ಸುರ-ಸುಂದರವಾಗಿಯೇ
ಕಾಣಬೇಕೆಂಬ ಇರಾದೆಯಲ್ಲಿ
ಈ ನಡು ವಯಸ್ಸಿನಲ್ಲಿ
ಬೇಡವೆಂದರೂ ಇಣುಕುವ
ಬಿಳಿಗೂದಲನ್ನು ಹೆಕ್ಕಿ ಕಿತ್ತುವ;
ಇಲ್ಲವೇ ಬಣ್ಣ ಹಚ್ಚುವ
ತ್ರಾಸದ ಕೆಲಸದಲ್ಲಿ ತೊಡಗಲು
ಸಮಯವನ್ನು ನಾನೆಲ್ಲಿ ಹೆಕ್ಕಬೇಕಿತ್ತು?
ಈಡೇರಿಸಿಕೊಳ್ಳಬೇಕಾದ ನನ್ನ
ಖಾಸಗಿ ಕನಸುಗಳ ಮೂಟೆಯ
ಭಾರವೇ ಅಧಿಕವಿರುವಾಗ
ನಿನ್ನ; ಮತ್ತು ನಿನ್ನ ಮಕ್ಕಳು-ಮರಿಗಳ
ಭಾರವನ್ನೂ ಹೆಗಲಿಗೇರಿಸಿ
ಬಸವಳಿಯುವ ಸ್ಥಿತಿ ನನಗೇಕೆ ಬೇಕು?!

ಕೈಬಿಟ್ಟು ಹೋದ ದ್ರಾಕ್ಷಿ ಹುಳಿಯೆಂದು
ಬಣ್ಣಿಸುತ್ತಿದ್ದೇನೆಂದೆನ್ನಿಸುತ್ತಿದೆಯೇನು?
ನಾನಾದರೂ ಮಾಡಲೇನು?
ಕೈಗೆಟುಕದ ನಿನ್ನ; ಮತ್ತು
ನಿನ್ನೊಂದಿಗಿನ ಸಾಹಚರ್ಯವನ್ನು
ಸಿಹಿಯೆಂದು ನೆನೆದು ನರಳುವಲ್ಲಿ
ನನಗೆ ಲಾಭವಾದರೂ ಇದೆಯೇನು?!

-------------------------------------
ಡಾ. ವೀಣಾ ಪಿ., ಹರಿಹರ.

Leave a Reply

Back To Top