ಅಂಕಣ ಬರಹ
ಪ್ರಿಯ ಓದುಗರೆ,
ಸಂಗಾತಿಯಲ್ಲಿ ಸತತವಾಗಿ ನಲವತ್ತೊಂದು ವಾರಗಳ ಕಾಲ ‘ಕ್ಷಿತಿಜ’ಎನ್ನುವ ಅಂಕಣವನ್ನು ಬರೆದ ಭಾರತಿ ನಲವಡೆಯವರು ತಮ್ಮ ಕಾರ್ಯದೊತ್ತಡಗಳ ಕಾರಣದಿಂದ ಈ ವಾರಕೊನೆಯ ಕಂತನ್ನು ಕಳಿಸಿದ್ದಾರೆ.ಅವರಿಗೆ ಸಂಗಾತಿ ಸಂಪಾದಕೀಯ ಬಳಗ ಮತ್ತು ಓದುಗರ ಕಡೆಯಿಂದ ಧನ್ಯವಾದಗಳನ್ನುಅರ್ಪಿಸುತ್ತಿದ್ದೇವೆ.
ಸಂಪಾದಕೀಯ ಮಂಡಳಿ
ಕ್ಷಿತಿಜ
ಭಾರತಿ ನಲವಡೆ
ಅವಕಾಶವೆಂಬ ಅಮೃತ ಘಳಿಗೆ
“ಯಾಕಾದ್ರೂ ನನ್ನ ಹೊಟ್ಟೆ ಉರಿಸ್ತಿಯೋ ನಿನಗೆ ನಿಮ್ಮ ತಂದೆ ಏನ್ ಕಡಿಮೆ ಮಾಡಿದ್ದಾರೆ, ನಿನಗೆ ಒಳ್ಳೆ ಕಾಲೇಜ್ಗೆ ಸೇರಿಸಿದ್ದಾರೆ, ತಾವು ಹಗಲಿರುಳು ದುಡಿದು ನಿನ್ನನ್ನ ಚನ್ನಾಗಿ ಓದಿಸ್ತಾ ಇದಾರೆ, ಆದ್ರೆ ನೀ ತೆಗೆದುಕೊಳ್ಳುವ ಅಂಕ ನೋಡಿದ್ರೆ ನಿನ್ನ ಪ್ರಯತ್ನ ಕಡಿಮೇನೆ “ಎಂದು ಸುಂದರನ ತಾಯಿ ವಟಾಗುಡುತ್ತ ಅವನಿಗೆ ಮಧ್ಯಾಹ್ನದ ಊಟಕ್ಕೆ ಡಬ್ಬಿಯನ್ನು ಕೈಗಿಟ್ಟಳು. ಆದರೆ ತನ್ನ ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ಅಂಕಗಳನ್ನು ಗಿಟ್ಟಿಸಲು ಪರಿಶ್ರಮ ಪಡುತ್ತಿದ್ದ ಸುಂದರನಿಗೆ ಈ ಮಾತುಗಳಿಂದ ಬೇಸರವಾಗಿ ತನ್ನ ತಾಯಿಗೆ ಸಂತೈಸಲು ತಾನು ಮುಂದಿನ ಟೆಸ್ಟ ನಲ್ಲಿ ಮಾಡಿ ತೋರಿಸುತ್ತೇನೆ ಎನ್ನುತ್ತಾ ಕಾಲೇಜ್ಗೆ ಹೊರಟ. ನಿಜ ಸುಂದರನಂತ ಎಷ್ಟೋ ಮಕ್ಕಳು ದೃತಿಗೆಡದೆ ಮುಂದಿನಸಾರಿ ಎನ್ನುವ ಅವಕಾಶಗಳನ್ನೇ ತಮ್ಮ ಬದುಕಿನ ಅಮೃತ ಘಳಿಗೆಗಳನ್ನಾಗಿಸಿಕೊಳ್ಳುತ್ತಾರೆ. ನಡೆವರೆಡುವದೇ ಕುಳಿತವರೆಡುವುದುಂಟೇ?
ಮಾಡುವ ಮನದಲ್ಲಿ ಸಾಧಿಸುವ ಗುರಿ ನಿಚ್ಚಳವಾಗಿದ್ದಾಗ ಅದು ನೆರವೇರುವದು ದಿಟ.
ಇತ್ತೀಚಿನ ಒಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ಧಿ ನನ್ನ ಮನವನ್ನೇ ಘಾಸಿಗೊಳಿಸಿತು. ಅದೇನೆಂದರೆ ಚನ್ನೈನಲ್ಲಿ ನಡೆದ ಘಟನೆ ಈಗ ನೆನಪಿಸಿಕೊಂಡರು ತುಂಬಾ ಖೇದಕರ ಎನಿಸುತ್ತದೆ. ವೈದ್ಯಕೀಯ ಶಿಕ್ಷಣ ಪ್ರವೇಶದ ನೀಟ್ ನಲ್ಲಿ ಎರಡು ಸಾರಿ ಅನುತ್ತಿರ್ಣನಾದ ಕಾರಣ 19ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಅಗಲಿಕೆಯ ನೋವಿನಿಂದ ಮಾರನೇ ದಿನವೇ ತಂದೆ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಮನಕಲಕುವಂತಿದೆ. ಇಷ್ಟೇನಾ? ಜೀವನ ಅಂದ್ರೆ.. ಮರಳಿ ಯತ್ನವ ಮಾಡಬಹುದಿತ್ತಲ್ಲವೇ.. ತಾಳ್ಮೆ ಯಿಂದ ಎದುರಿಸಬೇಕಿತ್ತು. ಮಕ್ಕಳಿಗೆ ಹೆತ್ತವರು ಆಗಾಗ ಅವರ ಸೋಲಿನಲ್ಲಿಯೂ ಬೆಂಬಲವಾಗಿ ನಿಂತು ಮಕ್ಕಳ ಹಂಬಲವನ್ನರಿತು ಅವರು ಒಮ್ಮೆ ಆ ಪ್ರಯತ್ನದಲ್ಲಿ ಸೋತರೆ ಅವಕಾಶದ ಗಡುವನ್ನು ನೆನಪಿಸಿ ಧೈರ್ಯ ತುಂಬುತ್ತಾ ಜೀವನ ದೀರ್ಘವಾಗಿದೆ ಒಂದು ಬಿಟ್ಟು ಮೂರು ಸಾರಿ ವಿಫಲನಾದರೂ ಎದೆಗುಂದದೆ ಮುಂದುವರೆಯಲು ಆತ್ಮಸ್ಥೈ ರ್ಯವನ್ನು ತುಂಬುತ್ತಾ ಆಗಲೂ ವಿಫಲನಾದರೆ ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿರುವ ಇತರೆ ಕೋರ್ಸ್ಗಳ ಕುರಿತು ತಿಳಿ ಹೇಳಬೇಕಿದೆ.
ಎಲ್ಲರ ಜೀವನದಲ್ಲಿ ಸಂದರ್ಭಗಳು ಬಂದೇ ಬರುತ್ತವೆ, ಬರದೇ ಹೋಗುವದಿಲ್ಲ. “ಇದು ಒಳ್ಳೇ ಅವಕಾಶ ಬಾಳಿನಲ್ಲಿ ಮುಂದೇಹೋಗಲು ಸರಿಯಾದ ಮಾರ್ಗ “ಎಂಬುದು ಎಷ್ಟೋ ಮಂದಿಗೆ ತಿಳಿಯುವುದಿಲ್ಲ. ಅವಕಾಶ ತಪ್ಪಿ ಹೋಗುತ್ತದೆ. ಆದರೆ ಮತ್ತೊಬ್ಬರು ಸಾಧನೆ ಮಾಡಿ ತೋರಿಸಿದಾಗ “ಅರೆ, ನನಗೆ ಈ ಸಂದರ್ಭ ಆಗಲೇ ಒದಗಿ ಬಂದಿತ್ತು. ಉಪಯೋಗಿಸಿಕೊಳ್ಳಲಿಲ್ಲವಲ್ಲ “ಎಂದು ತಮ್ಮ ಜೀವನದ ಅಮೃತ ಘಳಿಗೆಯನ್ನೇ ಕಳೆದುಕೊಳ್ಳುತ್ತಾರೆ. ಈ ಅರಿವು ಬಂದ ಮೇಲಾದರೂ ಮುಂದಿನ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ನಮ್ಮನ್ನು ನಾವೇ ತಟ್ಟಿ ಎಚ್ಚರಿಸಿಕೊಂಡು ಮುಂದೆ ಸಾಗಬೇಕು. ಯಾರೋ ಒಬ್ಬರು ಬಂದು ಬಾರಯ್ಯಾ, ನನ್ನ ವಾಹನವನ್ನೇರು ಎಂದು ಹೇಳುವುದಿಲ್ಲ. ಬಸ್ಸಿನಲ್ಲಿ ಹೋಗಬೇಕಾದವನು ಬಸ್ ಸ್ಟ್ಯಾಂಡಿಗೆ ಹೋಗಬೇಕಷ್ಟೆ.
ನಿವೃತ್ತಿಯಾದ ಅಧಿಕಾರಿಯೊಬ್ಬರು “ಅಯ್ಯೋ!ಇಷ್ಟು ದೊಡ್ಡ ಕೆಲಸವನ್ನು ಕಳೆದುಕೊಂಡು ಬಿಟ್ಟೇನಲ್ಲ “ಎಂದುಕೊಳ್ಳುತ್ತಾರೆ. ಆದರೆ ಅವರು ಪಡೆದುಕೊಂಡ ಅನುಭವಗಳನ್ನೇ ಮರೆಯುತ್ತಾರೆ.ಬಿಡುವಿನ ಜೀವನವು ಒಂದು ಅವಕಾಶ. ಹೊಸದೇನನ್ನಾದರೂ ಮಾಡುತ್ತೇನೆ ಎಂದೇಕೆ? ಅಂದುಕೊಳ್ಳುವದಿಲ್ಲ.
ನಮ್ಮ ಬದುಕಲ್ಲಿ ಸಂದರ್ಭಗಳು ಒಮ್ಮೊಮ್ಮೆ ನಮಗೆ ಋಣಾತ್ಮಕ ವಿಚಾರಗಳನ್ನು ಹುಟ್ಟುಹಾಕುತ್ತವೆ. ಅದನ್ನೇ ನಾವು ಧನಾತ್ಮಕವಾಗಿ ತೆಗೆದುಕೊಂಡು ಆ ಅವಕಾಶವನ್ನು ಬಳಸಿಕೊಂಡು ಅದ್ಭುತವಾದ ಸಾಧಕರಾಗಬಹುದು. ಸಂಕಟಕರವಾದ ಪರಿಸ್ಥಿತಿಯು ಒಂದು ಸಂದರ್ಭವಾಗಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯ. ಯಾಕೆಂದರೆ ಬದಲಾವಣೆ ಜಗದ ನಿಯಮ, ಪ್ರಗತಿಯ ಸಂಕೇತ ಕೂಡ. ಬಾಲಗಂಗಾಧರ ತಿಲಕರವರು ಎಷ್ಟೋ ವರ್ಷ ಸೆರೆಮನೆ ವಾಸ ಅನುಭವಿಸಿದರು. ಅದು ಬಲು ಸಂಕಟಕರವಾದ ಪರಿಸ್ಥಿತಿ. ಆದರೆ ‘ಗೀತಾ ರಹಸ್ಯ’ಎಂಬ ವಿಚಾರ ಪೂರ್ಣ ಗ್ರಂಥ ಬರೆದರು. ಸಂದರ್ಭ ಅವರಿಗೆ ಒಳ್ಳೆಯ ಅವಕಾಶವನ್ನೇ ನೀಡಿತು ಎನ್ನುವುದಕ್ಕಿಂತ ಅವರು ಅದನ್ನು ಬಳಸಿಕೊಳ್ಳುವ ಸಮಯ ಪ್ರಜ್ಞೆ ಅಮೋಘ. ಅದರಂತೆ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಚರಕ ನೂತು ಬಟ್ಟೆ ತಯಾರಿಸಿದರು. ಇಂಥ ಮಹಾನ್ ನಾಯಕರ ಜೀವನ ನಮಗೆಲ್ಲ ಮಾದರಿ. ಬಾಲ್ಯದಲ್ಲಿ ನಮ್ಮ ಮಕ್ಕಳು ಮಾಡುವ ತಪ್ಪುಗಳನ್ನೇ ಒತ್ತಿ ಹೇಳದೆ ತಪ್ಪನ್ನು ಮನ್ನಿಸಿ ಮುನಿಸ ತೋರದೆ ಜೀವನ ಸುದೀರ್ಘ ಪಯಣದಲ್ಲಿ ಅವಕಾಶದ ನಾವೆಯ ಯಶಸ್ವೀ ನಾವಿಕರಾಗಿಸುವಲ್ಲಿ ಡಿಕ್ಸುಚಿಗಳಾಗುವ ಜವಾಬ್ದಾರಿ ಇದೆ.ನಾವು ಅವಕಾಶವಾಡಿಯಾಗುವದರೊಂದಿಗೆ ಆಶಾವಾದಿಯಾದಾಗ ಭವಿಷ್ಯದ ಬದುಕು ಸುಂದರ.
“ಗಾಳಿ ಬಂದಾಗ ತೂರಿಕೋ”ಎಂಬಂತೆ ಅವಕಾಶ ಬಂದಾಗ ಉಪಯೋಗಿಸಿಕೊಂಡು ನಾವಿಟ್ಟುಕೊಂಡ ಗುರಿಯನ್ನು ತಲುಪುವ ಅಪೇಕ್ಷೆಯನ್ನು ಹೊಂದಿ ಅದರ ಫಲವನ್ನು ನೀರಿಕ್ಷಿಸುವ ನಿಟ್ಟಿನಲ್ಲಿ ಸಾಗೋಣ ಅಲ್ಲವೇ?
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ
ಮೇಡಂ