ಎ.ಎನ್.ರಮೇಶ್.ಗುಬ್ಬಿ-ಮೇರಾ ಭಾರತ್ ಮಹಾನ್.!

ಎ.ಎನ್.ರಮೇಶ್.ಗುಬ್ಬಿ

ಮೇರಾ ಭಾರತ್ ಮಹಾನ್.!

ಮನೆ ಮನೆಯಲು ಹಾರುತಿದೆ ತ್ರಿವರ್ಣ ತಿರಂಗ
ಮನ ಮನದಲು ಹರಿದಿದೆ ದೇಶಭಕ್ತಿಯ ಗಂಗ
ಪರತಂತ್ರ್ಯದ ತಮಕಳೆದು ಬೆಳಕಾದ ಮಹಾದಿನ
ಆಂಗ್ಲರ ಹುಟ್ಟಡಗಿಸಿ ಸ್ವಾತಂತ್ರ್ಯಗೊಂಡ ಸುದಿನ.!

ಎಲ್ಲೆಡೆ ಹರಡಿದೆ ರಾಷ್ಟ್ರಗೀತೆಯ ಸ್ವರ ಸಂಚಲನ
ಎಲ್ಲರ ಹೃದಯದಿ ರಾಷ್ಟ್ರಪ್ರೇಮದ ರೋಮಾಂಚನ
ನೆನೆದಿದೆ ಪ್ರತಿಮನ ಹುತಾತ್ಮರ ತ್ಯಾಗ ಬಲಿದಾನ
ಮಾರ್ದನಿಸಿದೆ ಕಣಕಣದಿ ದೇಶಭಕ್ತರ ಸಂಕೀರ್ತನ.!

ಸುಭಾಷ್ ಗಾಂಧಿ ಶಾಸ್ತ್ರಿ ತಿಲಕರ ಸೇವೆಯ ಧ್ಯಾನ
ಚೆನ್ನಮ್ಮ ಅಬ್ಬಕ್ಕ ಝಾನ್ಸಿರಾಣಿಯ ಶೌರ್ಯದ ಗಾನ
ಕಂಡಲೆಲ್ಲಾ ಸ್ವಾತಂತ್ರ್ಯ ಸೇನಾನಿಗಳ ಗೀತಾಂಜಲಿ
ಕಣ್ಣಂಚುಗಳಲ್ಲಿ ಹೆಮ್ಮೆ ಗೌರವಗಳ ಭಾಷ್ಪಾಂಜಲಿ.!

ಕನ್ಯಾಕುಮಾರಿಯ ಕಡಲದಂಡೆಯಲ್ಲು ನವ್ಯಕಂಪನ
ಹಿಮಾಲಯದ ಗೌರಿಶಂಕರಶೃಂಗದಲು ಭವ್ಯಸ್ಪಂದನ
ಸಂಭ್ರಮಿಸಿವೆ ಮರಗಿಡ ನದಿನಾಲೆ ಬೆಟ್ಟಗುಡ್ಡ ಕಾನನ
ಸಕಲೆಡೆ ಪ್ರತಿಫಲಿಸಿದೆ ಭಾರತಾಂಬೆಯ ನಗೆವದನ.!

ಪ್ರತಿ ಭಾರತೀಯನಿಗೂ ಇಂದು ರಾಷ್ಟ್ರಹಬ್ಬದ ಸುಗ್ಗಿ
ಹಾರುತಿಹುದು ರಾಷ್ಟ್ರಧ್ವಜ ದಿಗ್ದಿಗಂತಗಳಲೂ ಹಿಗ್ಗಿ
ಕೆಂಪುಕೋಟೆಯಿಂದ ಮೊಳಗುತಿದೆ ವಿಶ್ವಕೆ ಸಂದೇಶ
ಸುಭದ್ರ ಸದೃಢ ಸಮೃದ್ದವೀ ಸ್ವತಂತ್ರ ಭಾರತ ದೇಶ.!

ತ್ಯಾಗ ಅಹಿಂಸೆಗಳಿಂದ ಉದಿಸಿದ ಜಗದ ಏಕೈಕ ದೇಶ
ನೀಡಿದೆ ಲೋಕಕೆ ದಯೆ ಪ್ರೀತಿ ಶಾಂತಿಯ ದಿವ್ಯಕೋಶ
ವಿವಿಧತೆಯಲ್ಲೂ ಏಕತೆ ಐಕ್ಯತೆಯ ನಿತ್ಯಸತ್ಯ ಪ್ರದರ್ಶನ
ಭಾರತವಿದು ವಿಶ್ವಕೇ ಉಜ್ವಲ ಭವಿತವ್ಯದ ನಿದರ್ಶನ.!

ನನ್ನ ಹೆಮ್ಮೆ ನನ್ನ ಗರ್ವ ನನ್ನ ದೇಶ ನನ್ನದೀ ಭಾರತ
ಮೇರು ಸಂಸ್ಕಾರ ಸಂಪ್ರೀತಿ ಸಂಸ್ಕೃತಿಗಳ ಮಹಾದಿಗಂತ
ಉಸಿರುಸಿರಲು ನಮಿಸುವೆನು ‘ಭಾರತಾಂಬೆಗೆ ನಮನ’!
ಸಹಸ್ರ ಜನ್ಮಗಳಲ್ಲಿಯೂ ಬೇಡುವೆನು ಇಲ್ಲಿಯೇ ಜನನ.!!


ಎ.ಎನ್.ರಮೇಶ್.ಗುಬ್ಬಿ

Leave a Reply

Back To Top