ವಿಶ್ವ ಜನಸಂಖ್ಯಾ ದಿನ : ಒಂದು ಚಿಂತನೆ-ಕೆ. ಎನ್. ಚಿದಾನಂದ

ಲೇಖನ ಸಂಗಾತಿ

ಕೆ. ಎನ್. ಚಿದಾನಂದ

ವಿಶ್ವ ಜನಸಂಖ್ಯಾ ದಿನ : ಒಂದು ಚಿಂತನೆ

ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ವಿಶ್ವ ಸಂಸ್ಥೆಯು ಒಂದು ಮಹತ್ತರವಾದ ಥೀಮ್ ಅಥವಾ ಸಂದೇಶವನ್ನು ಸಾರುವ ಮೂಲಕ ತನ್ಮಲ್ಲಾ ಸದಸ್ಯ ರಾಷ್ಟ್ರಗಳಿಗೆ ಈ ಕೆಳಗಿನಂತೆ ನಿರ್ದೇಶಿಸಿದೆ. ಅದೇನೆಂದರೆ , “ಲಿಂಗ ಸಮಾನತೆಯ ಶಕ್ತಿಯನ್ನು ಬಿಚ್ಚಿಡುವುದು” ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮನ ಬಿಚ್ಚಿ ಮಾತನಾಡುವಂತೆ ಮಾಡಲು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಧ್ವನಿಯನ್ನು ಎತ್ತಿ ಹಿಡಿಯುವುದು. ” ಈ ಮೂಲಕ ಜನಸಂಖ್ಯಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು.

ಒಂದು ದೇಶದ ಬಹಳ ಮಹತ್ವದ ಆಸ್ತಿ ಎಂದರೆ ಆ ದೇಶದ ಜನಸಂಖ್ಯೆ . ಜನಸಂಖ್ಯೆ ಒಂದು ದೇಶದ ಸಂಪತ್ತೂ ಹೌದು ಮತ್ತು ದೇಶದ ಅನಿವಾರ್ಯ ಜವಾಬ್ದಾರಿಯೂ ಹೌದು. ಯಾವುದೇ ಒಂದು ದೇಶದ ಅಭಿವೃದ್ಧಿ ಆ ದೇಶದ ಜನಸಂಖ್ಯೆ ಅಥವಾ ಮಾನವ ಸಂಪನ್ಮೂಲದ ಆಧಾರದ ಮೇಲೆ ನಿಂತಿರುತ್ತದೆ. ದೇಶದ ಜನಸಂಖ್ಯೆಯು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಸದೃಢತೆಯನ್ನು ಹೊಂದಿರಬೇಕು. ಆಗ ಮಾತ್ರ ಆ ದೇಶವು ಸದೃಢ ಮಾನವ ಸಂಪತ್ತನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಜನಸಂಖ್ಯೆ ಅಥವಾ ಮಾನವ ಸಂಪನ್ಮೂಲ ಎಂದರೆ ಕೇವಲ ಅಂಕಿ ಸಂಖ್ಯೆ ಪ್ರಮಾಣ ಗಾತ್ರದಲ್ಲಿ ಹೇಳುವ ವಿಷಯವಲ್ಲ. ಮುಖ್ಯವಾಗಿ ಅದು ಜನಸಂಖ್ಯೆಯ ಗುಣಾತ್ಮಕ ಮೌಲ್ಯವನ್ನು ಸೂಚಿಸುತ್ತದೆ. ಆರೋಗ್ಯವಂತ , ಸದೃಢ ಮತ್ತು ಉತ್ಪಾದನಾ ಶಕ್ತಿ ಹಾಗೂ ಬುದ್ಧಿವಂತ ಜನಸಂಖ್ಯೆ ನಿಜವಾಗಿಯೂ ದೇಶದ ಅಮೂಲ್ಯ ಆಸ್ತಿಯಾಗಿದೆ.

ಮಿತಿಮೀರಿದ ಜನಸಂಖ್ಯೆಯಿಂದ ಕೂಡಿದ ಜನಸಂಖ್ಯಾ ಸ್ಫೋಟವು ರಾಷ್ಟದ ಪ್ರಗತಿಗೆ ಮಾರಕವಾಗಿಯೂ ಪರಿಣಮಿಸಬಹುದು. ಅಥವಾ ಅತೀ ಕಡಿಮೆ ಪ್ರಮಾಣದ ಜನಸಂಖ್ಯೆಯ ಒಂದು ರಾಷ್ಟ್ರವು ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಒಂದು ದೇಶವು ತನ್ನ ಪ್ರಗತಿಗೆ ಎಷ್ಟು ಬೇಕೋ ಅಷ್ಟೇ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ್ದರೆ ಒಳಿತು. ಈ ಅಂಶವನ್ನು ಚಿಂತಿಸಬೇಕಾದದು ಆ ದೇಶದ ಜನಸಂಖ್ಯೆಯೇ ಆಗಿದೆ. ಒಂದು ದೇಶವು ಮಿತಿಮೀರಿದ ಜನಸಂಖ್ಯೆಯಿಂದಾಗಿ ಅನೇಕ ವಿಧವಾದ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಬೇಕು. ಏಕೆಂದರೆ ಜನಸಂಖ್ಯೆ ಮಿತಿಮೀರಿ ಬೆಳೆಯಬಹುದು ಆದರೆ ವಾಸಕ್ಕೆ ಯೋಗ್ಯವಾಗಿರುವ ಭೂಮಿಯ ಪ್ರಮಾಣ ಮಾತ್ರ ಎಂದಿಗೂ ಬೆಳೆಯುವುದಿಲ್ಲ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆಯು ಪ್ರತಿ ವರ್ಷ ಜುಲೈ 11 ನೇ ತಾರೀಖಿನಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಬೇಕೆಂದು ಘೋಷಿಸಿತು. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ 1987 ರಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತೆಂದು ಅಧ್ಯಯನದಿಂದ ತಿಳಿದು ಬರುತ್ತದೆ. ಹೀಗೆ ಈ ದಿನವನ್ನು ಆಚರಿಸುವುದರ ಮೂಲಕ ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿದ ಪರಿಣಾಮವಾಗಿ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಅಂಸ್ಥೆಯಾದ ‘ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಿತು ಮತ್ತು ತನ್ನ ಸದಸ್ಯ ರಾಷ್ಟ್ರಗಳಲ್ಲಿ ಆಚರಿಸಲು ಕರೆನೀಡಿತು. ಅಂದಿನಿಂದ ಈಚೆಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

2023 ನೇ ವರ್ಷದ ಇತ್ತೀಚಿನವರೆಗೂ ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೆಂದರೆ ಚೀನಾ ದೇಶವೇ ಆಗಿತ್ತು. ಇತ್ತೀಚಿನ ಸಮೂಹ ಮಾಧ್ಯಮಗಳ ವರದಿಗಳ ಪ್ರಕಾರ ಭಾರತ ದೇಶವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಮೀರಿಸಿದೆ. ಅಂದರೆ ಭಾರತದಂತಹ ರಾಷ್ಟ್ರಗಳಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆದಿದೆ. ಈ ರೀತಿಯ ಮಿತಿಮೀರಿದ ಜನಸಂಖ್ಯಾ ಸ್ಫೋಟಕ್ಕೆ ವಿಭಿನ್ನ ಹಾಗೂ ವೈವಿಧ್ಯಮಯ ಕಾರಣಗಳಿವೆ. ಅಧಿಕ ಜನನ ಪ್ರಮಾಣ , ಕಡಿಮೆ ಮರಣ ಪ್ರಮಾಣ, ವಿವಾಹವು ಭಾರತದಂತಹ ರಾಷ್ಟ್ರಗಳಲ್ಲಿ ಸಾರ್ವತ್ರಿಕವಾದ ಪರಂಪರೆಯಾಗಿರುವುದು, ನಿರಕ್ಷರತೆ ಮತ್ತು ಅಜ್ಞಾನಬಡತನ, ವಲಸೆ, ಸುಧಾರಿತ ಆರೋಗ್ಯ ವ್ಯವಸ್ಥೆ, ನೈರ್ಮಲ್ಯಗಳ ಸೌಲಭ್ಯ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣವಾಗಿರುವುದು, ಚಿಕ್ಕ ವಯಸ್ಸಿನ ವಿವಾಹ, ವಿಧವಾ ವಿವಾಹ, ಕುಟುಂಬ ಯೋಜನೆಯ ವೈಫಲ್ಯತೆ, ವ್ಯವಸಾಯ ಪ್ರಧಾನ ಅರ್ಥವ್ಯವಸ್ಥೆ, ಅವಿಭಕ್ತ ಕುಟುಂಬ, ಜನನ ನಿಯಂತ್ರಣ ಮಾರ್ಗಗಳಿಗೆ ವಿರೋಧ , ಗಂಡುಮಕ್ಕಳನ್ನು ಪಡೆಯಲೇ ಬೇಕೆಂಬ ಹಂಬಲ ಮುಂತಾದ ಕಾರಣಗಳು ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಿದೆ.

ಜನಸಂಖ್ಯಾಸ್ಫೋಟದಿಂದ ಹಲವಾರು ರೀತಿಯ ದುಷ್ಪರಿಣಾಮಗಳನ್ನು ದೇಶವು ಎದುರಿಸ ಬೇಕಾಗುತ್ತದೆ. ಅವುಗಳೆಂದರೆ : ಆಹಾರದ ಸಮಸ್ಯೆ , ಬಡತನ ಹೆಚ್ಚಳ , ನಿರುದ್ಯೋಗ ಸಮಸ್ಯೆ , ಕೃಷಿ ವ್ಯವಸ್ಥೆಯ ಮೇಲೆ ಅಧಿಕ ಒತ್ತಡ , ಸಾಮಾಜಿಕ ಸೇವೆಗಳ ಸಮಸ್ಯೆ , ಆರ್ಥಿಕ ಬೆಳವಣಿಗೆಗೆ ತಡೆ, ಪರಿಸರದ ಅಸಮತೋಲನ ಹಾಗೂ ಮಾಲಿನ , ನೀರಿನ ಕೊರತೆ, ಮನೆಗಳ ಕೊರತೆ, ಕೊಳಚೆ ಪ್ರದೇಶಗಳ ಹೆಚ್ಚಳ , ಶೈಕ್ಷಣಿಕ ಸೌಲಭ್ಯದ ಕೊರತೆ , ಆರ್ಥಿಕ ನಷ್ಟ , ಜನರ ಅನಾರೋಗ್ಯದಲ್ಲಿ ಹೆಚ್ಚಳ, ವೈದ್ಯಕೀಯ ಸಮಸ್ಯೆಗಳಲ್ಲಿ ಹೆಚ್ಚಳ ಹೀಗೆ ಒಂದಲ್ಲಾ ಒಂದು ದುಷ್ಪರಿಣಾಮಗಳು ತಲೆದೋರುತ್ತವೆ.

ಜನಸಂಖ್ಯೆ ಸಮಸ್ಯೆಯನ್ನು ಪರಿಣಾಮಕಾರಿ ಯಾಗಿ ನಿಯಂತ್ರಿಸಲು ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಜನತೆ ಹಲವಾರು ಕ್ರಮಗಳನ್ನು ಕೈಕೊಳ್ಳಬಹುದು.

ಅತ್ಯಂತ ಪರಿಣಾಮಕಾರಿ ಒಂದು ಕ್ರಮವೆಂದರೆ ಜನನ ಪ್ರಮಾಣವನ್ನು ನಿಯಂತ್ರಿಸಲು ಸರ್ವರೂ ಕುಟುಂಬ ಯೋಜನೆಯ ಮಹತ್ವವನ್ನು ತಿಳಿಯಬೇಕು. ಪ್ರತಿಯೊಂದು ಕುಟುಂಬವೂ ಒಂದು ಅಥವಾ ಎರಡು ಮಕ್ಕಳನ್ನು ಮಾತ್ರ ಹೊಂದಬೇಕು. ಕುಟುಂಬ ಯೋಜನೆಯನ್ನು ಪಾಲಿಸುವ ದಂಪತಿಗಳಿಗೆ ಸರಕಾರ ಹಲವಾರು ಪ್ರೋತ್ಸಾಹಗಳನ್ನೂ ನೀಡಬಹುದು.

ಕುಟುಂಬ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ನೀಡಬೇಕಾ ಗುತ್ತದೆ. ಇದಕ್ಕಾಗಿ ಜನ ಸುಶಿಕ್ಷಿತರನ್ನಾಗಿ ಮಾಡಬೇಕಾಗುತ್ತದೆ. ಶಿಕ್ಷಣದ ಪ್ರಸಾರ ಹೆಚ್ಚಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಮತ್ತು ಪುರುಷರಿಗೆ ಶಿಕ್ಷಣ ಸೌಲಭ್ಯಗಳನ್ನು ನೀಡುವ ಮೂಲಕ ಜನಸಂಖ್ಯೆಯ ನಿಯಂತ್ರಣಕ್ಕೆ ಕ್ರಮ ವಹಿಸಬಹುದಾಗಿದೆ. ಸಾಕ್ಷರತೆಯು ಜನಸಂಖ್ಯೆ ನಿಯಂತ್ರಣದ ಒಂದು ಉತ್ತಮ ಸಾಧನವಾಗಿದೆ.

ದೇಶದ ಸಮಸ್ತ ಸಮೂಹ ಮಾಧ್ಯಮಗಳು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದಾಗಿರು ತ್ತದೆ. ವೃತ್ತಪತ್ರಿಕೆ, ರೇಡಿಯೋ ಮತ್ತು ದೂರದರ್ಶನಗಳು ಚಿಕ್ಕ ಕುಟುಂಬದ ಮಹತ್ವದ ಕುರಿತು ನಿರಂತರವಾಗಿ ಜನರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಿ ವಿಷಯಗಳನ್ನು ತಿಳಿಸಬೇಕು.

ಈ ಕಾರ್ಯದಲ್ಲಿ ದೇಶದ ಸರಕಾರದ ಜೊತೆಗೆ, ಸಂಘ ಸಂಸ್ಥೆಗಳು, ಯುವ ಜನತೆ ಮತ್ತು ವಿದ್ಯಾರ್ಥಿ ವೃಂದವು ಸಹಕಾರ ನೀಡಬೇಕಾಗುತ್ತದೆ. ಜನ ಜಾಗೃತಿ ಮಾಡಬೇಕು ಮತ್ತು ಕುಟುಂಬ ಯೋಜನೆಯಂತಹ ಕಾರ್ಯಕ್ರಮಗಳು ಜನರಿಂದಲೇ ಸ್ವ-ಪ್ರೇರಣೆಯಿಂದ ಹೊರ ಹೊಮ್ಮಬೇಕು.

ಜನಸಂಖ್ಯಾ ಸ್ಫೋಟದ ನಿಯಂತ್ರಣಕ್ಕೆ ಒಂದು ಅತ್ಯುತ್ತಮ ಪರಿಹಾರವೆಂದರೆ ಆರ್ಥಿಕ ಪ್ರಗತಿ, ಆಹಾರ ಮತ್ತು ಔದ್ಯಮಿಕ ವಸ್ತುಗಳ ಉತ್ಪಾದನೆ ಹೆಚ್ಚಬೇಕು. ಜನರ ಆದಾಯ ಹೆಚ್ಚಾಗಬೇಕು, ಜೀವನಮಟ್ಟ ಸುಧಾರಿಸಬೇಕು, ಆದರೆ ಇವೆಲ್ಲ ದೀರ್ಘಾವಧಿಯಲ್ಲಿನ ಕಾರ್ಯಕ್ರಮಗಳಾಗಿರುತ್ತವೆ. ಒಟ್ಟಾರೆ ಜನ ಜಾಗೃತಿ, ಶಿಕ್ಷಣ, ಸಂಪನ್ಮೂಲಗಳ ಮಿತ ಬಳಕೆ ಮತ್ತು ಸರ್ವರ ಸಹಕಾರದಿಂದ ಜನಸಂಖ್ಯೆ ಸ್ಫೋಟದ ಸಮಸ್ಯೆಯನ್ನು ಪರಿಣಾಮಕಾರಿ ಯಾಗಿ ಎದುರಿಸಲು ಸಾಧ್ಯವಾಗುತ್ತದೆ.

ವಿಶ್ವ ಜನಸಂಖ್ಯಾ ದಿನದಂದು ಯಾವ ಯಾವ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇದೆಯೋ ಅಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಅಥವಾ ಸಮಪ್ರಮಾಣದಲ್ಲಿ ನಿರ್ವಹಣೆ ಮಾಡುವ ಯೋಜನಾ ವಿಧಾನಗಳನ್ನು ರೂಪಿಸುವುದು. ಹಾಗೆಯೇ ಯಾವ ಯಾವ ದೇಶಗಳಲ್ಲಿ ಯಥೇಚ್ಚವಾದ ಜನಸಂಖ್ಯೆ ಇದೆಯೋ ಅಲ್ಲಿ ಜನಸಂಖ್ಯಾ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸುವುದು. ಜನಸಂಖ್ಯೆ ಕಡಿಮೆ ಮಾಡಲು ಇರುವಂತಹ ಯೋಜನೆಗಳನ್ನು ಹೆಚ್ಚು ಪ್ರಚಾರ ಪಡಿಸುವ ಮೂಲಕ ಜನಜಾಗೃತಿ ಮೂಡಿಸುವುದು. ಆರೋಗ್ಯಕರ ಉತ್ಪಾದಕ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಜನಸಂಖ್ಯೆಯನ್ನು ವಾಸ್ತವವಾಗಿ ಒಂದು ದೇಶದ ಸಮಗ್ರ ಅಭಿವೃದ್ಧಿಗೆ ಆಸ್ತಿಯನ್ನಾಗಿಸುವುದು.


ಕೆ. ಎನ್. ಚಿದಾನಂದ

Leave a Reply

Back To Top