ಕಾವ್ಯ ಸಂಗಾತಿ
ಆರಕ್ಷಕರಿಗೂ ಮನಸ್ಸಿದೆ.
ಸುರೇಶ ತಂಗೋಡ
ಅಪ್ಪ-ಅವ್ವನ ಕಡು ಕಷ್ಟವ ಕಂಡು
ಅವರಿಗೊಂದು ಹೆಗಲಾಗಲೆಂದು
ಕಿಚ್ಚಿನಿಂದ ಓದಿದವ ಪಡೆದನು ಆರಕ್ಷಕ ಹುದ್ದೆಯ.
ತನ್ನ ಗುರಿ-ಕನಸುಗಳನ್ನೆಲ್ಲ ಮಾರಿ
ಮನೆಯ ಆರ್ಥಿಕತೆಗಿದೊಂದೆ ದಾರಿ
ಎಂದವನೇ ಸೇರಿ ಬಿಟ್ಟ ಆರಕ್ಷಕನಾಗಿ
ಅವನ ಮನೆಯವರ ಕಣ್ಣುಗಳ ಸಂತಸವ ನೋಡಿ
ಹಿರಿ-ಹಿರಿ ಹಿಗ್ಗಿದನು ನಿಶ್ಕಲ್ಮಸದಿ.
ತರಬೇತಿಗೆಂದು ಹೊರಟು ನಿಂತವನಿಗೆ
ಅವ್ವನ ಸೆರೆಗಿನ ಅಂಚಿನ ದುಡ್ಡು ದಕ್ಕಿತ್ತು
ಅಪ್ಪನ ಒಳ ಜೇಬಿನ ಬೆವರಿಗೆ ತೊಯ್ದ್ ನೋಟು
ಮಗನ ಕಿಸೆ ಸೇರಿತ್ತು
ಮತ್ತೆ ಹುಡುಗನ ಕಣ್ಣಲ್ಲಿ ನೀರು.
ಮೊದಲ ಪಗಾರ ಬಂದಾಗ ಜಗತ್ತು ಗೆದ್ದ ಖುಷಿ
ಅವ್ವನ ಹರಿದ ಸೀರಿ,ಅಪ್ಪನ ತೂತಾದ ಬನಿಯನ್ ನೆನಪಾದವು
ತಂಗಿಯ ತ್ಯಾಪೆ ಹಚ್ವಿದ ಅಂಗಿ ಕಣ್ತುಂಬಿಕೊಂಡ್ತು
ಸೀದಾ ಬಟ್ಟೆಯಂಗಡಿಗೆ ಹೋಗಿ
ಎಲ್ಲರಿಗೂ ಬಟ್ಟೆ ತಂದ ಹರ್ಷದಲಿ,
ತನ್ನ ಹರಿದ ಬನಿಯನ್ ಕಾಣಲಿಲ್ಲ ಅವನ ಕಣ್ಣಲ್ಲಿ
ಕಾರಣವಿಷ್ಟೆ ಜವಾಬ್ದಾರಿ.
ಕಾಲಗಳುರಿಳಿದವು ತಾಯಿ ಚಡಪಡಿಸುವಳು
ನೌಕರಿ ಪಡೆದ ದಿನದಿಂದ ಮನೆಯ ಮರೆತವನ
ಹೊತ್ತಿಗೆ ಸರಿಯಾಗಿ ಉಣ್ಣದವನ
ಮಳೆ -ಚಳಿ,ಬಿಸಿಲೆನ್ನದೆ ದುಡಿಯುವವನ
ಕಂಡು ಹೆತ್ತ ಕರಳು ಹಿಚುಕುವುದು
ಆದರೂ ಅವನ ನೋಡಿದಾಗೊಮ್ಮೆ
ಏನೊ ಧೈರ್ಯ ಅವಳಿಗೆ;ಅದೇನೊ ಹೇಳಲಾಗದ ಹೆಮ್ಮೆ ಅವಳಿಗೆ.
ಮಗ ನಡುರಾತ್ರಿ ಬಂದು “ಅವ್ವ” ಎಂದಾಗ
ಬಾಗಿಲು ಪಟಕ್ಕನೆ ತಗೆದು ‘ತುಂಬಾ ಹೊತ್ತಾಯ್ತಲ್ಲ ಪಾ’
ಎಂದಾಗ “ಹೂ ಅಮ್ಮ ಕೆಲಸ್”ಅದೊಂದೆ ಉತ್ತರ
ಮಗನಿಗೆ ಊಣಿಸಿ ತಾನು ಅದರೊಳಗೊಂದಿಷ್ಟು ಉಂಡು
ಮಲಗುವ ಹೊತ್ತಿಗೆ ಮಗನಿಗೆ ತಾಯಿಯ ಮಡಿಲಿನ ಹಂಬಲ
ಅವಳಿಗೂ ಅದೊಂದು ಸ್ವರ್ಗದನುಭೂತಿ.
ಸುಮ್ಮನೆ ತಾಯಿಯ ಮಡಿಲಲ್ಲಿ ಒರಗಿದವನೂ
ಪ್ರಶ್ನೆಯೊಂದು ಕೇಳಿಯೇ ಬಿಟ್ಟ ತಾಯಿಗೆ
ಅಮ್ಮ ನಾವು ಮನುಷ್ಯರಲ್ಲವೇ ನಮಗೆ ಈ ರೀತಿಯ ಗೋಳು
ಎಂದ ಮೆಲ್ಲಗೆ
ತಾಯಿ ಗಂಟಲು ಹಿಡಿದಿತ್ತು ,ಕಣ್ಣಿರು ಅಡ್ಡಗೋಡೆ ಕಟ್ಟಿಕೊಂಡಿತು
ಮಗನೇ”ದೇವರು ಕಷ್ಟ ತಡೆದುಕೊಳ್ಳುವ ಶಕ್ತಿಯಿರುವವರಿಗೆ ಮಾತ್ರ ಕಷ್ಟಗಳನ್ನು ನೀಡುತ್ತಾನೆ ;ಅಂಜುಬುರುಕರಿಗಲ್ಲ”
ನೀನು ನನ್ನ ವೀರ ಪುತ್ರ…ಈ ನಾಡ ಸುಪುತ್ರ ಎಂದಾಗ ಆರಕ್ಷಕನಿಗೆ ತನ್ನ ವೃತ್ತಿ ಯ ಮೇಲಿನ ಗೌರವ ಹೆಚ್ಚುತ್ತೆ…
ಆರಕ್ಷಕನು ಜಗದ ರಕ್ಷಕನು
ಪ್ರಜೆಗಳ ಪ್ರಾಣ ಕಾಪಾಡುವ ಸೇವಕನು
ಶಾಂತಿ ದೋತಕನು
ಆರಕ್ಷಕರನ್ನು ಅಭಿನಂದಿಸಿ ಎಂದಿಗೂ ಅವಹೇಳಿಸದಿರಿ
ಯಾಕೆಂದರೆ ಅವರು ಮನುಷ್ಯರಲ್ಲವೇ?.
ಸುರೇಶ ತಂಗೋಡ