ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ನಂಬಿಕೆ

ನಮ್ಮ ಮಗ ಈ ವರ್ಷ ಹತ್ತನೇ ತರಗತಿಯಲ್ಲಿ ಪಾಸಾಗುತ್ತಾನೆಂಬ ನಂಬಿಕೆಯೇ ನನಗಿಲ್ಲ “ಎಂದು ಸ್ವತಃ ಹೆತ್ತ ತಂದೆಯೇ ಹೇಳುವ ಮಾತು ತಾವೆಷ್ಟು ಅವನ ಅಧ್ಯನದ ಕಡೆಗೆ ಗಮನ ಹರಿಸುತ್ತಾರೆಂಬುದನ್ನು ಸೂಚಿಸುತ್ತದೆ.  ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡು’ ಎಂಬಂತೆ ನಿರಂತರವಾಗಿ ಅಧ್ಯನಶೀಲರಾಗದ ಮಕ್ಕಳು ಪರೀಕ್ಷೆ ಸಮೀಪ ಬಂದಾಗ ಓದಲು ಪ್ರಾರಂಭಿಸಿ ಪೂರ್ತಿ ಓದಲಾಗದೇ ಗೊಂದಲವನ್ನುಂಟು ಮಾಡಿಕೊಳ್ಳುತ್ತಾರೆ.’ಇಲ್ಲಿ ಸಲ್ಲುವವನು ಎಲ್ಲಿಯೂ ಸಲ್ಲುತ್ತಾನೆ’ ಎಂಬ ಮಾತಿನಂತೆ ಛಲವಿದ್ದವರು ಎಲ್ಲಿದ್ದರೂ ಸಾಧನೆ ಮಾಡುತ್ತಾರೆ.ತನ್ನನ್ನು ತಾನು ನಂಬಬೇಕು. ತನ್ನ ಶ್ರಮ,ಗುರಿ ಇನ್ನೂ ಮಾಡಿಕೊಳ್ಳಬೇಕಾದ ಪೂರ್ವ ತಯಾರಿಯ ಕುರಿತು ಯೋಜನೆ ಯೋಚನೆ ಮಾಡಬೇಕು.
ನಾವು ಬಸ್ಸಿನಲ್ಲಿ ಹತ್ತಿ ಹೋಗುತ್ತೇವೆ.ಮಧ್ಯದಲ್ಲಿ ಬಸ್ಸು ಆಪತ್ತಿಗೆ ಗುರಿಯಾಗಿನಾವೆಲ್ಲ ಇಹಲೋಕ ತ್ಯಜಿಸಿಬಿಡುತ್ತೇವೇನೋ ಎಂಬ ಸಂದೇಹಬಾರದು.ಅಂದರೆ ನಮ್ಮ ಬದುಕೆಲ್ಲ ನಂಬಿಕೆಯ ಅಡಿಪಾಯದ ಮೇಲೆ ನಿಂತಿರುತ್ತದೆ.ಅದೇ ನಂಬಿಕೆಯಿಂದ ನಾವು ಜೀವದಿಂದಿದ್ದೇವೆ.ಮಾನವನಾಗಿ ಹುಟ್ಟಿದ ಮೇಲೆ ನಂಬಿಕೆ ಅವಶ್ಯಕ.ಕುಟುಂಬದಲ್ಲಿ ನಂಬಿಕೆ,ರಾಷ್ಟ್ರದಲ್ಲಿ ನಂಬಿಕೆ,ದೈವದಲ್ಲಿ ನಂಬಿಕೆ ಹೆಚ್ಚಾಗಿ ತಮ್ಮ ಮೇಲೆ ತಮಗೆ ನಂಬಿಕೆ ಇರಬೇಕು.
‘ಸಂಶಯದಿಂದ ಇರುವವನು ನಾಶವಾಗುತ್ತಾನೆ’ಎಂಬ ಮಾತನ್ನು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ.
ಹಾಗಾದರೆ ಕಣ್ಣು ಮುಚ್ಚಿ ಎಲ್ಲರನ್ನೂ,ಎಲ್ಲವನ್ನೂ ನಂಬಿಬಿಡಲು ಹೇಳುತ್ತಿದ್ದೇವೆಯೇ?ಸುತಾರಾಂ ಇಲ್ಲ.ಚನ್ನಾಗಿ ಆಲಿಸಿ,ಪರೀಕ್ಷಿಸಿ ನೋಡಿ ನಂಬಬೇಕು.ದಿನನಿತ್ಯ ಜೀವನದಲ್ಲಿ ಯಾರದೋ ಮಾತನ್ನು ನಂಬಿ ಕೆಲವೊಮ್ಮೆ ಅನಾಹುತ,ಅಪಾರ್ಥಕ್ಕೆ ಗುರಿಯಾಗದ  ಸಂದರ್ಭ ಇಲ್ಲವೆಂದಿಲ್ಲ.ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ಅರಿತು,ಅಳೆದು ತೂಗಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕು.
ನಾವು ಇತರರನ್ನು ನಂಬುವುದರ ಜೊತೆಗೆ, ನಂಬಿಕೆಗೆ ಪಾತ್ರರಾಗುವಂತ ನಡೆಯನ್ನು ರೂಢಿಸಿಕೊಳ್ಳಬೇಕು.ನಾವು ಕೆಲಸ ಮಾಡುವ ಸ್ಥಳ,ಓದುವ ಶಾಲೆಯಲ್ಲಿ,ಕುಟುಂಬದಲ್ಲಿ ನಮ್ಮ ಬಗ್ಗೆ ನಂಬಿಕೆ,ಗೌರವ ದೊರಕುವಂತೆ ಪ್ರಾಮಾಣಿಕವಾದ  ಕರ್ತವ್ಯವನ್ನು ಮಾಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು.


ಜಗಕೆ ಅನ್ನ ನೀಡುವ ಅನ್ನದಾತನು ಕೂಡ ಮಳೆಯನ್ನು ನಂಬಿ ತನ್ನ ಹೊಲವನ್ನು ಶುಚಿಗೊಳಿಸಿ ಆಗಸದತ್ತ ವಾಲುತ್ತಾನೆ. ವಸುಮತಿಯ ಮಡಿಲ ಹಸಿರಾಗಿಸಲು ಮೇಘರಾಜನ ಆಗಮನದ ಸುವಾಸನೆ ಮಣ್ಣಿನ ಸುವಾಸನೆಯಾಗಿ ಮುಂಗಾರಿನ ಪುಳಕದ ಝಲಕನ್ನು ಮೈ ಮನದಲ್ಲಿ ಮೇಳೈಸುವಂತೆ ಪ್ರಕೃತಿ ತನ್ನ ಸೌಂದರ್ಯಕೆ ಕಾಲಘಟ್ಟದ ನಂಬಿಕೆಯಿಂದ ನಾಚಿ ಸಂಭ್ರಮಿಸುವ ಲಾಲಿಹಾಡನ್ನು ಮೆಲ್ಲುಸಿರ  ತಂಗಾಳಿಯಲಿ ತೀಡಿ ಅಮೃತವನ್ನು ಹರಿಸುತ್ತದೆ.
ಇಂದು ನಂಬಿಕೆಗೆ ಪಾತ್ರನಾದ ಯಜಮಾನನೋ ಕೆಲಸಗಾರನೋ, ಗುಮಾಸ್ತನೋ,ಜವಾನನೋ,ಮಿತ್ರನೋ  ಈಗೀಗ ಸಿಗುವದು ವಿರಳ.ನಾವೇ ಅನದ ಬಗ್ಗೃ ಕನವರಿಸುತ್ತ ‘ಯಾರನ್ನೂ ನಂಬಲು ಸಾಧ್ಯವಿಲ್ಲ’ಎಂದು ನಮ್ಮಷ್ಟಕ್ಕೆ ನಾವೇ ಹತಾಶೆಯ ಬೇಲಿಹಾಕುವ ಜಾಯಮಾನಕ್ಕೆ ಕಟ್ಟು ಬೀಳುತ್ತೇವೆ.
ನಮ್ಮನ್ನು ಯಾರೂ ನಂಬುವದಿಲ್ಲ, ನಾವು ಯಾರನ್ನೂ ನಂಬುವದಿಲ್ಲ. ಈ ರೀತಿಯ ವಿಷವೃತ್ತವನ್ನು ಅಂತ್ಯಗೊಳಿಸಲು ಇರುವದೊಂದೇ ದಾರಿ ಇದೆ.ಧ್ಯೇಯವಾದಿಗಳಾದ ಕೆಲವರಾದರೂ ಮೊದಲೂ ನಂಬಿಕೆಗೆ ಪಾತ್ರರಾಗಿ,ನಂಬಿಕೆ ಉಳ್ಳವರಾಗಿ ಬದುಕ ಸವೆಸುವ ಪಣ ತೊಡಬೇಕು.
ಇಂದು ಕೂಡ ನಂಬಿಕಸ್ಥನಾದ ವ್ಯಾಪಾರಿಗೆ ಕೆಲಸಗಾರನಿಗೆ,ಅವರವರ ವೃತ್ತಿ ಹಾಗೂ ವ್ಯಕ್ತಿಗತವಾದ ಪ್ರಾಮಾಣಿಕತೆ ಶ್ರದ್ಧೆ ಇದ್ದಾಗ ಗೆಲುವು ತಾನಾಗಿಯೇ ಒಲಿದು ಬರುವಲ್ಲಿ ಸಂಶಯವಿಲ್ಲ.
ತಂತ್ರಜ್ಞಾನದ ಯುಗದಲ್ಲೂ ಕೂಡ ವೈಜ್ಞಾನಿಕತೆಯ ನೆಲೆ ಅರಿಯದ ಮೂಢನಂಬಿಕೆ ಕೂಡ ಮೌಢ್ಯತೆಯ ಅನಾವರಣ ಮಾಡಿ ಕಾಲಘಟ್ಟದೊಡನೆ ದೂಡಿ ನೋಡುವ ಪ್ರವೃತ್ತಿ ಇಲ್ಲವೆಂದಲ್ಲ.

ಸ್ವಾಮಿ ವಿವೇಕಾನಂದರವರು ಹೇಳುವಂತೆ”ಒಂದು ವಿಚಾರವನ್ನು ನಂಬಿರಿ ಕನಸನ್ನಾಗಿಸಿ,ಯೋಚಿಸಿದಾಗ ನಮ್ಮ ಹೃದಯ ಹಾಗೂ ಮೆದುಳಿನಲ್ಲಿ ಹೋರಾಟ  ಪ್ರಾರಂಭವಾಗುತ್ತದೆ.ಆಗ ನಮ್ಮ ಹೃದಯದ ಮಾತನ್ನು ಆಲಿಸಬೇಕು”ಎಂದು ಹೇಳಿದ್ದಾರೆ.

‘ಮನೆಗೆದ್ದು ಮಾರು ಗೆದಿ ‘ಎಂಬಂತೆ ಯಾವುದೇ ಕೆಲಸವನ್ನು ನಾವು ಆಯ್ಕೆ ಮಾಡಿಕೊಂಡಾಗ ಅದರ ಬಗ್ಗೆ ಮೊದಲು ನಾನು ಮಾಡೇ ತೀರುತ್ತೇನೆ! ನಾ ಮಾಡಬಲ್ಲೆ ಎಂಬುದರ ಬಗ್ಗೆ ನಮ್ಮ ಮೇಲೆ ನಮಗೆ  ನಂಬಿಕೆ ಇದ್ದಾಗ ಮಾತ್ರ ಅಂದುಕೊಂಡಂತಹ ಕಾರ್ಯ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ನಮ್ಮ ಜೀವನದಲ್ಲೂ ಕುಟುಂಬದಲ್ಲಿರುವ ಮಕ್ಕಳಿಗೆ ತಂದೆತಾಯಿಗಳ ನಂಬಿಕೆ ಇರುತ್ತದೆ.ಅದರಂತೆ ಮಕ್ಕಳು ಹೆತ್ತವರು ತಮ್ಮ ಮೇಲೆ ಇಟ್ಟ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅವರ ನಂಬಿಕೆಯನ್ನು ಗೌರವದಿಂದ ಕಾಪಿಟ್ಟು ನಡೆಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ನಿಜವಾಗಿಸಿದಾಗ ಜನ್ಮವೆತ್ತಿ ಬಂದದ್ದಕ್ಕೂ ಸಾರ್ಥಕತೆ ಸಂತಸವನ್ನು ತರುತ್ತದೆ.
ಹೆತ್ತವರಲ್ಲೂ ನಂಬಿಕೆ ವಿಶ್ವಾಸದ ಅಡಿಪಾಯದ ಸಂಸ್ಕಾರ ಧನ್ಯತೆಯನ್ನು ಹೊರಹೊಮ್ಮಿಸುತ್ತದೆ. ರಾತ್ರಿಯಾದ ಮೇಲೆ ಹಗಲಾಗುತ್ತದೆ ಎಂಬ ನಂಬಿಕೆ ಕೂಡ ಕಷ್ಟ ಬಂದ ಮೇಲೆ ಸುಖ ಬಂದೆ ಬರುವದು ಎಂಬುದನ್ನು ಸಮರ್ಥಿಸುತ್ತ ನಮ್ಮ ಪಾತ್ರವನ್ನು ನಂಬಿಕೆ ಶ್ರದ್ಧೆಯ ಸೂತ್ರದೊಂದಿಗೆ ಮುನ್ನಡೆವ ದಾರಿ ಸುಗಮವಾಗುತ್ತದೆ. ನಮ್ಮ ಭವಿಷ್ಯದ ಗುರಿಯೂ ಕೂಡ ಪರಿಶ್ರಮ ಪಟ್ಟರೆ ಈಡೇರುತ್ತದೆ. ಅದೃಷ್ಟವೆನ್ನುವದು ಲಿಫ್ಟಾದರೆ ಮೆಟ್ಟಿಲೆನ್ನುವದು ಪರಿಶ್ರಮದ ಗುರಿಯಾಗಿದೆ ಎಂಬ ನಂಬಿಕೆ ಲಿಫ್ಟ ಕೈ ಕೊಟ್ಟರೂ ಪ್ರಯತ್ನದಿ ಮೆಟ್ಟಿಲೇರುವ ತಥ್ಯ ಎಂದಿಗೂ ಅಮರ

ಸತ್ಯ,ಧರ್ಮದ ಸಹಬಾಳ್ವೆಯು ವಿಶ್ವಾಸ ನಂಬಿಕೆಯ ಪಥದಲ್ಲಿದ್ದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರೆ ಅತಿಶಯೋಕ್ತಿಯಾಗಲಾರದು


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

Leave a Reply

Back To Top