ಪ್ರಜ್ವಲಾ ಶೆಣೈ ಕವಿತೆ-ಕೋರಿಕೆ

ಕಾವ್ಯ ಸಂಗಾತಿ

ಪ್ರಜ್ವಲಾ ಶೆಣೈ

ಕೋರಿಕೆ

ಅಂಬರ ಚುಂಬಿತ ಮಿನುಗು ತಾರೆಗಳೇ
ನನ್ನೊಡಲಿನ ಅಂಧಕಾರಕೆ ಬೆಳಕಾಗುವಿರಾ?
ಚಂದಿರನ ಬೆಳಕು ಸಾಗರದ ಅಲೆಯ ತುಂಬಾ
ಹಬ್ಬಿರಲು ಎನ್ನೆದೆಯ ಕೋಲ್ಮಿಂಚು ಪುಟಿದೆದ್ದಿತು

ಆಗಸದಿ ಅಡಗಿ ನಿಂದಿರುವ ಮೇಘಗಳೇ
ಕಾದು ಕೆಂಪಾದ ಮನವ ತಂಪಾಗಿಸುವಿರಾ?
ಹೂ ಮಳೆಯ ಸಿಹಿ ಮುತ್ತು ಧರೆಯ ತುಂಬಾ
ಮುತ್ತಿರಲು ಮಣ್ಣ ಸುವಾಸನೆಯು ಘಮ್ಮೆಂದಿತು

ಬಾಂದಳದಿ ಹಾರಾಡುತಿಹ ಪಕ್ಷಿಗಳೇ
ಎನಗೂ ದಿಗಂತದೆಡೆ ಹಾರಲು ಕಲಿಸುವಿರಾ?
ತೊಳ್ಬಲಕೆ ಭರವಸೆಯೆ ಬೆಳಕು ಎಂಬಾ
ಮಾತಿರಲು ಹೊಸ ಕನಸೊಂದು ರೆಕ್ಕೆ ಕಟ್ಟಿತು

ದಿಗಂತದಿ ಹೊಳೆಯುವ ಸೂರ್ಯಚಂದ್ರರೇ
ವಸುಂಧರೆಯ ಹಸಿರಿಗೆ ಉಸಿರಾಗುವಿರಾ?
ಪಶು ಪಕ್ಷಿ ಸರ್ವ ಜೀವಜಂತುಗಳೆಂಬಾ
ಜಗವಿರಲು ಭೂಮಂಡಲ ಸಾರ್ಥಕವಾಯಿತು..

———————————-


ಪ್ರಜ್ವಲಾ ಶೆಣೈ

12 thoughts on “ಪ್ರಜ್ವಲಾ ಶೆಣೈ ಕವಿತೆ-ಕೋರಿಕೆ

  1. ವಿವಿಧ ಸಂಗಾತಿ ಯ ವರ್ಣನೆ ಚೆನ್ನಾಗಿತ್ತು

Leave a Reply

Back To Top