ಬಸವ ಜಯಂತಿ ವಿಶೇಷ

ಅನ್ನಪೂರ‍್ಣ. ಸು. ಸಕ್ರೋಜಿ

ಸಮೃದ್ಧಿಯ ಸಮಬಾಳು

ಸಮೃದ್ಧಿಯ ಸಮಬಾಳು

ಭಾರತದ ಸಂಸ್ಕೃತಿ ಮೂಲತಃ ಅಧ್ಯಾತ್ಮಿಕವಾದದ್ದು. ಅದು ನಿಜವಾಗಿಯೂ ನಮ್ಮ ದೇಶದ ಜೀವ ಜೀವಾಳ. “ಸಾಧನೆಗೆ ಸಾವಿರ ಪಥಗಳು” ಎಂಬುದು ವಿಚಾರಶೀಲ ವೃತ್ತಿಗಳ ಉದ್ಗಾರವಾಗಿದೆ. ಸಾಧನೆಯೆಂದರೆ, ಮಾನವನು ತನ್ನ ಪ್ರಾಮಾಣಿಕ ಪ್ರಯತ್ನ, ಪರಿಶ್ರಮಗಳಿಂದ ಪಡೆದ ಪರಮಸಿದ್ಧಿ. ಇದನ್ನೇ ಕಾರ‍್ಯಸಾಧನೆ, ಧ್ಯೇಯಸಾಧನೆ ಎನ್ನುತ್ತೇವೆ. ಶರಣ ಶರಣೆಯರು ಶರಣಮಾರ‍್ಗದಲ್ಲಿ ಸಾಗುತ್ತ, ಜ್ಞಾನದೀವಿಗೆಗಳಾಗಿ ಪ್ರಜ್ವಲಿಸುತ್ತ, ಸಮಸಮಾಜದ ಪರಿಕಲ್ಪನೆಯನ್ನು ಜನರಿಗೆ ತೋರಿಸುವ ಮಾರ‍್ಗದರ್ಶಿ ಆಗಿದ್ದಾರೆ. ಎಂಟು ಶತಮಾನಗಳು ಕಳೆದರೂ, ಅವರ ವಚನಗಳು ಅಮೃತಧಾರೆಯಂತೆ ಜನರ ಮನಗಳಲ್ಲಿ ಅನನ್ಯವಾಗಿ, ಅನುಸ್ಯೂತವಾಗಿ ಹರಿಯುತ್ತಲೇ ಇವೆ. ಜಾತಿಭೇದ, ವರ‍್ಗಭೇದ, ವರ‍್ಣಭೇದ, ಲಿಂಗಭೇದಗಳನ್ನು ತೊಡೆದುಹಾಕಿ, ಸಮಾಜದಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಬಾಳು ಎನ್ನುವ ವಿಚಾರಭಾವ ಪುಷ್ಪದ ಸುಗಂಧ ಹರಡುವಂತೆ ಮಾಡಿದರಲ್ಲದೆ ಕೃತಿಯಲ್ಲಿ ತೋರಿಸಿದರು. ವಚನಗಳನ್ನು ರಚಿಸಿ ವ್ಯಷ್ಟಿ, ಸಮಷ್ಟಿ, ಪರಮೇಷ್ಟಿಯಲ್ಲಿ ತಮ್ಮ ದಿವ್ಯತ್ವದಿಂದ ಮೆರೆದರು. ಸೂರ‍್ಯನ ಪ್ರಕಾಶವು ಸಂದಿ-ಗೊಂದಿಗಳಲ್ಲಿಯ ಕತ್ತಲೆಯನ್ನು ಓಡಿಸುವಂತೆ, ಸೂರ‍್ಯನು ಎಲ್ಲರಿಗೂ ಸರಿಸಮಾನ ಪ್ರಕಾಶ ನೀಡುವಂತೆ, ಶರಣರು ಸಮಾಜದಲ್ಲಿದ್ದ ಮೌಢ್ಯತೆಗಳನ್ನು ಕಳೆದು, ಮಾನಸಿಕ, ಭೌತಿಕ, ಆರ‍್ಥಿಕವಾಗಿ ಸಂಪದ್ಭರಿತರನ್ನಾಗಿ ಮಾಡಿದರು. ಶರಣರ ಚಿಂತನೆಯ ಎರಡು ಪ್ರಮುಖ ಮುಖಗಳನ್ನು ಗುರುತಿಸಬಹುದು.  ಒಂದು ಅವರ ಸಮಾಜಮುಖ ಚಿಂತನೆ, ಇನ್ನೊಂದು ಪುರುಷಾರ‍್ಥಸಿದ್ಧಿಯ ಕಾಳಜಿಪರ ಚಿಂತನೆ. “ಜಂಗಮಕ್ಕೆ” ಎಂಬಲ್ಲಿ ಸಮಾಜಮುಖಿ ಚಿಂತನೆ, “ಲಿಂಗಕ್ಕೆ” ಎಂಬಲ್ಲಿ ಪುರುಷಾರ‍್ಥಸಿದ್ಧಿ ಚಿಂತನೆ, ಎಂದು ತಿಳಿಯಬೇಕು.
ಸಮಾಜದಲ್ಲಿಯ ಅಸಮಾನತೆ, ಜಾತೀಯತೆಯ ವಿಮೋಚನೆ, ಅಂಧಶ್ರದ್ಧೆ, ಮೂಢನಂಬಿಕೆ, ತೊಡೆದುಹಾಕಲು, ಸಮಾಜದಲ್ಲಿಯ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ “ಅನುಭವಮಂಟಪ” ಸ್ಥಾಪಿಸಿದರು ಬಸವಣ್ಣನವರು. ಆ ಶರಣ ಬಳಗವು ತತ್ತ್ವಾದರ‍್ಶಗಳಿಂದ ಕೂಡಿದ್ದಾಗಿತ್ತು. ಅಲ್ಲಿ ಎಲ್ಲರೂ ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಚರ‍್ಚೆ ಮಾಡುತ್ತಿದ್ದರು. ಶರಣರಿಗೆ ಧಾರ‍್ಮಿಕ, ರಾಜಕೀಯ, ಸಾಮಾಜಿಕ ವಿಷಯಗಳು ಬೇರೆ ಬೇರೆಯಾಗಿ ಕಾಣಲೇಯಿಲ್ಲ. ಎಲ್ಲವೂ ಎಲ್ಲರಿಗೂ ಸರಿಸಮಾನ ಎನಿಸುತ್ತಿದ್ದವು. “ಕಾಯಕವೇ ಕೈಲಾಸ”ವೆಂಬ ಮೂಲಮಂತ್ರ ಸಾರಿದರು. ಅದು ವಚನ ಚಳುವಳಿಯಿಂದ ಮಾಡುವ ಎಲ್ಲ ಕಾಯಕಗಳಿಗೆ ಏಕರೂಪದ ಗೌರವ ತಂದುಕೊಟ್ಟಿತು. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳು. ಕಾಯಕಯೋಗ ಮಾನವನ ಸಮನ್ವಯಾತ್ಮಕ, ಸರ‍್ವತೋನ್ಮುಖ ಜೀವನದ ಉನ್ನತಿಯನ್ನು ಎತ್ತಿ ತೋರಿಸುವಲ್ಲಿ ಸಫಲವಾಯಿತು. ವೃತ್ತಿಯ ತಾರತಮ್ಯ ಇಲ್ಲವಾಯಿತು. ಮೇಲು-ಕೀಳು ಅಡಗಿಹೋಯಿತು. ಹೀಗೆ ಕಾಯಕಯೋಗವು ಸಮಾನತೆಯನ್ನು ಹುಟ್ಟುಹಾಕುವ ಪ್ರಮುಖ ಅಸ್ತ್ರವಾಯಿತು. ಅಣ್ಣ ಬಸವಣ್ಣನವರ ಒಂದು ವಚನ ಹೀಗಿದೆ :
ಕಾಸಿ ಕಮ್ಮಾರನಾದ,
ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ
ಕರ‍್ಣದಲ್ಲಿ ಜನಿಸಿದವರುಂಟೆ
ಜಗದೊಳಗೆ ಇದ ಕಾರಣ
ನಮ್ಮ ಕೂಡಲಸಂಗಮದೇವಾ
ಲಿಂಗಸ್ಥಲವರಿದವನೆ ಕುಲಜನು
.
ಜಾತಿಯಲ್ಲಿ ಮೇಲು ಕೀಳಿಲ್ಲ. ಲಿಂಗದ ಮೂಲಕ ಪರವಸ್ತು, ಕಾಯಕ ಅರಿತಾಗಲೇ ನಾವು ಉತ್ತಮ ಕುಲಜರು ಎಂದಿದ್ದಾರೆ.
ಜಾತಿವಿಡಿದು ಸೂತಕವನರಸುವರೆ
ಜ್ಯೋತಿವಿಡಿದು ಕತ್ತಲೆಯನರಸುವರೆ
ಇದೇಕೊ ಮರುಳ ಮಾನವಾ
ಜಾತಿಯಲಿ ಅಧಿಕನೆಂಬ ವಿಪ್ರ
ಶತಕೋಟಿಗಳಿದ್ದಲ್ಲಿ ಫಲವೇನು
ಭಕ್ತಶಿಖಾಮಣಿ ಎಂಬುದು ವಚನ
ನಮ್ಮ ಕೂಡಲಸಂಗನ ಶರಣರ ನಂಬು
ಕೆಡಬೇಡ ಮಾನವಾ

ಈ ವಚನವು ಕೆಳಸ್ತರದವರಲ್ಲಿ ಆತ್ಮವಿಶ್ವಾಸ, ಮನೋಧೈರ‍್ಯ ಬೆಳೆಸಿದ ವಚನವಾಗಿದೆ. ಶರಣರು ಸೂತಕಗಳನ್ನು ಅಲ್ಲಗಳೆದರು. ಸರ‍್ವಜ್ಞನ ವಚನ ಹೇಳುತ್ತದೆ.
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ
ಜಾತಿ ವಿಜಾತಿ ಎನಬೇಡ
ದೇವನೊಲಿದಾತನೆ ಜಾತ ಸರ‍್ವಜ್ಞ

ದೇವರನ್ನು ಒಲಿಸಿಕೊಳ್ಳುವ ಮಾನವೀಯ ಗುಣಗಳಿದ್ದಾಗ ಮಾತ್ರ ಅವನು ಉತ್ತಮ ಕುಲಜನು ಎಂದು ಸರ‍್ವಜ್ಞನು ನುಡಿದಿದ್ದಾನೆ.
ಶ್ರೀ ಸಿದ್ಧರಾಮೇಶ್ವರರು ಕೆರೆ ಕಟ್ಟಿಸುವುದು, ಕಾಲುವೆ ತೋಡಿಸುವುದು, ಗುಡಿಗಳ ನಿರ‍್ಮಾಣ ಮಾಡುವದು, ಹೀಗೆ ಅನೇಕ ಸಾಮಾಜಿಕ ಸೇವೆ ಮಾಡಿದ್ದಾರೆ. ಅವರು ಜನಸಾಮಾನ್ಯರ ಸಮಸ್ಯೆ ಪರಿಹರಿಸುವ ಬದ್ಧತೆಯನ್ನು ಹೊಂದಿದ್ದರು. ದಾರಿಯಲ್ಲಿ ಅನಾಥರಾಗಿ ಬಿದ್ದವರನ್ನು ಉದ್ಧರಿಸುವದು, ಹಾಗೂ ಲಿಂಗೈಕ್ಯರಾದವರ ಕ್ರಿಯಾವಿಧಿಗಳನ್ನು ಸ್ವತಃ ಪೂರ‍್ಣಗೊಳಿಸುವುದು, ಮುಂತಾದ ಜವಾಬ್ದಾರಿಗಳನ್ನು ಅವರು ಹೊತ್ತಿದ್ದರು. ಶರಣರ ವಚನಗಳ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಮೂಢನಂಬಿಕೆ, ಅಂಧಃಶ್ರದ್ಧೆ ನಿರ‍್ಮೂಲನೆ, ಒಳ್ಳೆಯದು-ಕೆಟ್ಟದ್ದು ವಿಚಾರಗಳ ಮೇಲೆ ಸಾಕಷ್ಟು ವಚನ ಬರೆದಿದ್ದಾರೆ.
ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೆ?
ಅಭಿಮಾನಿಗೆ ಅಂಜಿಕೆಯಲ್ಲದೆ ಅಪಮಾನಿಗೆ ಅಂಜಿಕೆಯೆ ಅಯ್ಯಾ
ಶುಭಾಶುಭ ಶಿವಾರ‍್ಪಣವೆಂದು ನಂಬು ಮನವೆ
ಕಪಿಲಸಿದ್ಧ ಮಲ್ಲೇಂದ್ರನಾಲಯದಲಿ

ಮನುಷ್ಯನು ಒಳ್ಳೆಯ ಕಾರ‍್ಯಗಳನ್ನು ಮಾಡಬೇಕು. ಅಂತಹ ಕೆಲಸಕ್ಕೆ ಯಾವಾಗಲೂ ಒಳ್ಳೆಯ ಮುಹೂರ‍್ತ ಇದ್ದೇಯಿರುತ್ತದೆ. ಶುಭ-ಅಶುಭಗಳೆರಡನ್ನೂ ಪರಮಾತ್ಮನಿಗೆ ಅರ‍್ಪಿಸಿದಾಗ ಭಯದ ಮಾತೆಲ್ಲಿ ಬರುವದು? ಎಂದು ಶ್ರೀ ಸಿದ್ಧರಾಮೇಶ್ವರರು ಎಲ್ಲ ದಿನ, ವಾರ, ತಿಥಿ ಒಳ್ಳೆಯವೇ ಎಂದು ಹೇಳಿದ್ದಾರೆ.
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸ್ಯೆ
ಮಟ್ಟ ಮದ್ಯಾಹ್ನ ಸಂಕ್ರಾಂತಿ
ಮತ್ತೆ ಅಸ್ತಮಾನ ಪೌರ‍್ಣಿಮೆ ಹುಣ್ಣಿವೆ
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ ರಾಮನಾಥ

ಶರಣರಾದ ದೇವರ ದಾಸಿಮಯ್ಯನವರ ನಿಷ್ಠೆ, ಈ ವೈಚಾರಿಕ ನಿಲುವು, ದೃಢತೆ  ಇವು ಆಧುನಿಕ ಯುವಕರಿಗೆ ಸಾಧ್ಯವಾಗುವುದಿಲ್ಲ. ಮುಹೂರ‍್ತ, ರಾಹುಕಾಲ, ಗುಳಿಕಕಾಲ, ಅಮವಾಸ್ಯೆ ಇಂಥವೆಲ್ಲವನ್ನು ಇಂದಿನ ಜನ ಈಗಲೂ ಪಾಲಿಸುತ್ತಾರೆ.
ಶ್ತ್ರೀ ಸಮಾನತೆಯ ಬಗ್ಗೆ ಶರಣರು ಬರೆದಂತೆ, ಶರಣಿಯರಾದ ಅಕ್ಕಮಹಾದೇವಿ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಇತ್ಯಾದಿ ತಮ್ಮ ಜೀವನದಲ್ಲಿಯ ಅನುಭವಗಳನ್ನು ವಚನಗಳ ರೂಪದಲ್ಲಿ ಬರೆದಿದ್ದಾರೆ. “ನಾಮದಲ್ಲಿ ಹೆಂಗೂಸೆಂಬ ಹೆಸರಾದೊಡೇನು, ಭಾವಿಸಲು ಗಂಡು ರೂಪ ನೋಡಾ” ಎಂದು ಅಕ್ಕಮಹಾದೇವಿಯವರು ವ್ಯಕ್ತಪಡಿಸಿದ್ದಾರೆ. ಶರಣ ಧರ‍್ಮದಲ್ಲಿ ನೈತಿಕ ನಡೆವಳಿಕೆಗೆ ಪ್ರಥಮ ಪ್ರಾಶಸ್ತ್ಯ. ಶೀಲ ಚಾರಿತ್ರ‍್ಯ  ವ್ಯಕ್ತಿಯ ಜೀವರಯ್ನಗಳಿದ್ದಂತೆ, ಎಂದು ನಂಬಿ ನೀತಿಯ ನೆಲೆಗಟ್ಟಿನ ಮೇಲೆ ಸಮ ಸಮಾಜಸೌಧ ನರ‍್ಮಿಸಿದರು, ಮತ್ತು ಸ್ವೀಕರಿಸಿದರು. ಅದರಂತೆಯೇ ಆಚರಿಸಿದರು. ಆತ್ಮವೊಂದೇ ಎಂದು ಸಾರಿದರು.
ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ.

ಹೀಗೆ ಆತ್ಮದ ಸಮಾನತೆಯಲ್ಲಿ ಜೀವನದ ಘನತೆಯನ್ನು ಗೌರವಿಸಿ, ಶರಣ ಜೇಡರ ದಾಸಿಮಯ್ಯನವರು ಹೆಣ್ಣು ಗಂಡೆಂಬ ಭೇದವನ್ನು ತೊಡೆದುಹಾಕಿದ್ದಾರೆ. ಇದೇ ವಿಚಾರವನ್ನು ಶರಣೆ ಸತ್ಯಕ್ಕನ ವಚನದಲ್ಲಿಯೂ ಕಾಣಬಹುದು.
ಮೊಲೆ ಮುಡಿಯದ್ದುದೆ
ಹೆಣ್ಣೆಂದು ಪ್ರಮಾಣಿಸಲಿಲ್ಲ
ಕಾಸೆ ಮೀಸೆ ಕಠಾರವಿದ್ದುದೆ
ಗಂಡೆಂದು ಪ್ರಮಾಣಿಸಲಿಲ್ಲ
ಅದು ಜಗದ ಮಾಯೆ ಬಲ್ಲವರ ನೀತಿಯಲ್ಲ.
ಏತರ ಹಣ್ಣಾದರೂ ಮಧುರವೇ ಕಾರಣ
ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ,
ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರ

ಎಂದು ಹೇಳುತ್ತ ನಿಜವಾದ ಭೇದವಿರುವುದು ರೂಪದಿಂದಲ್ಲ,ಗುಣದಿಂದ; ಎಂಬುದಕ್ಕೆ ಹೆಣ್ಣನ್ನು ಕುಸುಮಕ್ಕೆ ಹೋಲಿಸಿದ್ದಾಳೆ.
ಹೆಣ್ಣು ಹೆಣ್ಣಲ್ಲ, ಹೆಣ್ಣು ಮಾಯೆಯಲ್ಲ
ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ‍್ಜುನ

ಮುಕ್ತಿಗೆ ಸ್ತ್ರೀ ಪುರುಷನೆಂಬ ತಾರತಮ್ಯ ಸಲ್ಲದು, ಎನ್ನುವ ಶ್ರೀ ಸಿದ್ಧರಾಮೇಶ್ವರರ ವಚನದಲ್ಲಿ, ಹೆಣ್ಣಿನಲ್ಲಿ ಅಡಗಿರುವ ಸುಪ್ತಶಕ್ತಿ, ಪ್ರತಿಭೆ, ಸಾಧನೆಯ ಅಂಶಗಳನ್ನು ಕಂಡುಕೊಂಡು ಮಹಿಳೆಯನ್ನು ಭಗವಂತನ ಎತ್ತರಕ್ಕೆ ಕೊಂಡೊಯ್ದರು.
ಶರಣರು ಮಹಿಳೆಗೆ ದುಡಿದು ತಿನ್ನುವ ಹಕ್ಕನ್ನು ಕಲ್ಪಿಸಿ ಸಮಾಜದಲ್ಲಿ ಸಮಾನತೆಯನ್ನು ನೀಡಿದರು. ಸಾವಿರಾರು ವರ‍್ಷಗಳಿಂದ ಹಾಕಲ್ಪಟ್ಟ ಬಂಧನಗಳ ಸಂಕೋಲೆಯನ್ನು ಕಿತ್ತೆಸೆದರು. ಸ್ತ್ರೀಶಕ್ತಿಯು ಸಮಾಜದಲ್ಲಿ ಸಮಾನವೆಂದು ಮೊದಲು ತಿಳಿದುಕೊಂಡದ್ದು ಶರಣ ಸಂಸ್ಕೃತಿ. ಸಾಮಾಜಿಕ, ಆರ‍್ಥಿಕ, ಧಾರ‍್ಮಿಕ, ವೈಚಾರಿಕ ಸ್ವಾತಂತ್ರ‍್ಯವನ್ನು ನೀಡಿ ಗೌರವಿಸಿದ ಕೀರ‍್ತಿ ಅಣ್ಣ ಬಸವಣ್ಣನವರಿಗೆ ಹಾಗೂ ಶರಣರಿಗೆ ಸಲ್ಲುತ್ತದೆ.
ಸತಿ ಪತಿಗಳೊಂದಾದ ಭಕ್ತಿ
ಹಿತವಪ್ಪುದು ನಮ್ಮ ಶಿವಂಗೆ
ಸತಿವಿಡಿದು ನರ‍್ವಾಣ
ಕಾಣ್ವರು ಕೇಳಾ ಪ್ರಭುವೆ

ಎನ್ನುವ ಅಣ್ಣನವರ ಮಾತುಗಳಲ್ಲಿ ಸಂಸಾರದ ಮಹತ್ವ ಹಾಗೂ ಸತಿಯ ಹೆಗ್ಗಳಿಕೆಯನ್ನು ಕಾಣಬಹುದು. ಅಧ್ಯಾತ್ಮಿಕ ಬದುಕಿಗೆ ಕಾಯಕವೆನ್ನುವುದು ಮೂಲಭೂತ ರ‍್ಹತೆಯಾಗಿತ್ತು. “ಶರಣ ಸತಿ, ಲಿಂಗ ಪತಿ” ಎನ್ನುವ ಮಾತನ್ನು ತತ್ತ್ವಶಃ ಪಾಲಿಸಿದ ಶರಣ ಶರಣೆಯರಿಗೆ ನನ್ನ ನಮಸ್ಕಾರಗಳು.
ಜಾತಿರಹಿತ ಶರಣ ಸಂಸ್ಕೃತಿ ಕಟ್ಟುವಲ್ಲಿ ಸಫಲವಾದರೂ, ಮುಂದೆ ಬರಬರುತ್ತಾ ಕಡಿಮೆಯಾಗಿರುವುದು ನೋವಿನ ಸಂಗತಿಯಾಗಿದೆ. ಆಗ ಶರಣೆಯರು ಸಂಸಾರ ನಿಭಾಯಿಸುತ್ತ, ಸಮಾಜದಲ್ಲಿಯ ಅನೇಕ ಮೌಢ್ಯತೆಗಳನ್ನು ನಿರಾಕರಿಸಿ, ಸಕ್ರಿಯವಾಗಿ ಕಾಯಕ ಮಾಡುತ್ತ, ಸಮಾಜವನ್ನು ತಿದ್ದಿದರು. ಊರ ಕಸಗೂಡಿಸುವಾಗ ಸತ್ಯಕ್ಕನಿಗೆ ಹೊನ್ನು ಸಿಕ್ಕರೂ, ಅದು ಶ್ರಮಗಳಿಕೆಯಲ್ಲವೆಂದು ತಿರಸ್ಕರಿಸಿ ಕಸದಂತೆ ಪರಿಗಣಿಸುವ ಧೀಮಂತೆಯಾಗಿದ್ದಳು.
ನೈಸರ‍್ಗಿಕ ಸಮಾನತೆ ಎಲ್ಲ ಜೀವಿಗಳಲ್ಲಿದೆ. ನಿರ‍್ಗ ನರ‍್ಮಿತ ಸಕಲ ಜೀವರಾಶಿಗಳಲ್ಲಿ ಭೇದಭಾವವಿಲ್ಲ. ಹುಲ್ಲು-ವೃಕ್ಷ, ಇರುವೆ-ಆನೆ, ಹುಳ-ಮನುಷ್ಯ ಮುಂತಾದ ಜೀವರಾಶಿಗಳಲ್ಲಿ ತಾರತಮ್ಯವಿಲ್ಲ. ಇಂಥ ಉದಾತ್ತ ನಿಸರ್ಗಸಹಜ ವಿವೇಕವು ನಾಶವಾಗುವುದು ವರ‍್ಣ ಮತ್ತು ವರ‍್ಗ ಹಿತಾಸಕ್ತಿಗಳ ಅನಾಗರಿಕತೆಯಿಂದ ಎನ್ನುವುದು ಆತಂಕದ ವಿಷಯವಾಗಿರುವುದು ಸತ್ಯ.
ಹನ್ನೆರಡನೆ ಶತಮಾನದ ಶರಣ ಶರಣೆಯರ ವಚನಗಳಲ್ಲಿ ನೈರ‍್ಗಿಕ ಸಮಾನತೆಯನ್ನೇ ಸಮಾಜದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ಜಾತಿಪದ್ಧತಿಯನ್ನು ತೊಡೆದುಹಾಕಿ, ಮೂಢನಂಬಿಕೆಗಳನ್ನು ಹೊಡೆದೋಡಿಸಿ, ಮಹಿಳೆಯರು ಪುರುಷರು ಸರಿಸಮಾನರೆಂದು ತೋರಿಸಿ, ಧರ‍್ಮದ ದುರ‍್ಬಳಕೆಯಾಗದಂತೆ, ಸಶಕ್ತರಾಗಿ ಪ್ರತಿಭಟನೆ ತೋರಿದ್ದಾರೆ. ಸಂಪದ್ಭರಿತ, ಸಮಾನತೆಯ, “ಸಮೃದ್ಧಿಯ ಸಮಬಾಳು ಎಲ್ಲರದಾಗಲಿ” ಎಂದು ಅತ್ಯಂತ ಕಳಕಳಿಯಿಂದ, ಕಾಳಜಿಯಿಂದ ವಚನಗಳಲ್ಲಿ ಹೇಳಿದ್ದಾರೆ. ಇಂಥ ಶರಣ ಸಂಪ್ರದಾಯಕ್ಕೆ ನನ್ನ ಅನಂತಾನಂತ ನಮನಗಳು.


One thought on “

  1. ಸೊಗಸಾಗಿದೆ ಅಮ್ಮ ಬಸವ ಜಯಂತಿ ಹಬ್ಬದ ಶುಭಾಶಯಗಳು

Leave a Reply

Back To Top