ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ಆತ್ಮಹತ್ಯೆ ಮನಸ್ಥಿತಿ
ಇತ್ತೀಚೆಗೆ ಎಷ್ಟೋ ಆತ್ಮಹತ್ಯೆಗಳ ವಿಷಯವೇ ಕಿವಿಗೆ ಹೆಚ್ಚು ಹೆಚ್ಚು ಬೀಳುತ್ತಿರುವುದು ಇದರ ಬಗ್ಗೆ ಹೆಚ್ಚಿನ ಆಲೋಚನೆಗೆ ಕಾರಣವಾಗುತ್ತಿದೆ . ತಮ್ಮ ಸ್ವಇಚ್ಛೆಯಿಂದ ಕೈಯಾರೆ ತಮ್ಮ ಜೀವನವನ್ನು ಕೊನೆಗೊಳಿಸಿ ಕೊಳ್ಳುವುದಕ್ಕೆ ಆತ್ಮಹತ್ಯ ಎನ್ನುತ್ತಾರೆ . ಈ ಪ್ರಪಂಚದಲ್ಲಿ ಸಾವಿನ ಕಾರಣಗಳಲ್ಲಿ ಮೊದಲ ಇಪ್ಪತ್ತು ಸ್ಥಾನಗಳಲ್ಲಿ ಆತ್ಮಹತ್ಯೆಯು ಒಂದು. ಪ್ರತಿ ನಲವತ್ತು ಸೆಕೆಂಡಿಗೆ 1ಆತ್ಮಹತ್ಯೆಯ ವರದಿ ಯಾಗುತ್ತದೆ . 1ಆತ್ಮಹತ್ಯೆಯ ಸಂಖ್ಯೆಯ ಹಿಂದೆ ಇಪ್ಪತ್ತೈದು ಅಸಫಲ ಯತ್ನಗಳ ಅಂಕಿಅಂಶ ವಿರುತ್ತದೆ. ಅದಕ್ಕೂ ಹೆಚ್ಚಿನ ಜನ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾ ಇರುತ್ತಾರಂತೆ . ಇದರಿಂದ ಈ ಆತ್ಮಹತ್ಯೆ ಎಂಬುದು 1 ಜ್ವಲಂತ ಸಾಮಾಜಿಕ ಸಮಸ್ಯೆ ಎಂದು ಅದರ ಗಂಭೀರತೆಯ ಬಗ್ಗೆ ಅರಿವು ಮೂಡುತ್ತದೆ . ಮತ್ತದೇ ಅಂಕಿಅಂಶಗಳ ಮೊರೆಹೊಕ್ಕರೆ ಹದಿನೈದರಿಂದ ಇಪ್ಪತ್ತೊಂಬತ್ತರ ವಯೋಮಾನದಲ್ಲಿಯೇ ಇದರ ಸಾಧ್ಯತೆ ಹೆಚ್ಚೆಂದೂ, ಮಹಿಳೆಯರಿಗಿಂತ ಪುರುಷರೇ ಹೆಚ್ಚು ಆತ್ಮಹತ್ಯೆಗೆಸಳುವರೆಂದೂ ಕಂಡು ಬರುತ್ತದೆ.
ಹಾಗಾದರೆ ಈ ಆತ್ಮಹತ್ಯೆಯ ಹಿಂದಿನ ಕಾರಣದ ಮನಃಸ್ಥಿತಿಯನ್ನು ಕೊಂಚ ತಿಳಿಯೋಣವೇ?
ಆತ್ಮಹತ್ಯೆ ಎಂಬ ಈ ಕ್ಷಣಿಕ ಘಾತಕತನ ಕೇವಲ 1ಘಟನೆ ಎಲ್ಲ ಘಟನೆಗಳ ಸರಮಾಲೆ ಗಳೆಂದು ಉದ್ಭವಿಸಿದ ಪರಿಣಾಮ ಯಾವುದೇ 1ಕಾರಣ ಮಾತ್ರದಿಂದ ತೆಗೆದುಕೊಳ್ಳುವ ನಿರ್ಧಾರವಾಗಿರದೆ ಆ ಕಾರಣದ ಹಿಂದಿನ ಉದ್ದೇಶ ಮುಂದಿನ ಪರಿಣಾಮ ಅದನ್ನು ಸಮಾಜ ನೋಡುವ ರೀತಿ ಹಾಗೂ ಕಟ್ಟಕಡೆಯದಾಗಿ ಅದನ್ನು 1ವ್ಯಕ್ತಿ ನೋಡುವ ದೃಷ್ಟಿಕೋನದ ಎದುರಿಸುವ ರೀತಿಯ ಎಲ್ಲದರ ಮೇಲೆ ನಿರ್ಭರ ಅದು 1ಕ್ಷಣದ ನಿರ್ಧಾರವಾದರೂ ಆ ನಿರ್ಧಾರದ ಮೊಳಕೆ ಮುಂಚೆಯೇ ಕುಡಿಯೊಡೆದಿರುತ್ತದೆ ಎಂಬುದು ಗಮನಾರ್ಹ ಆದರೂ ಸ್ಥೂಲವಾಗಿ ವಿಂಗಡಿಸುವುದಾದರೆ
೧. ಕೌಟುಂಬಿಕ ಸಮಸ್ಯೆಗಳು
೨. ಆರ್ಥಿಕ ಸಮಸ್ಯೆಗಳು
೩. ಸಾಮಾಜಿಕ ಔದ್ಯೋಗಿಕ ಒತ್ತಡಗಳು
೪. ಮಾನಸಿಕ ಸಮಸ್ಯೆಗಳು
೫. ಹದಿಹರೆಯದ ಸಮಸ್ಯೆಗಳು
ಎಂಬುದಾಗಿ ಪಟ್ಟಿಮಾಡಬಹುದು .
೧. ಕೌಟುಂಬಿಕ ಸಮಸ್ಯೆಗಳು:
ಮನೆಯ ಸದಸ್ಯರುಗಳ ಮಧ್ಯೆ ಉದಾಹರಣೆಗೆ ಅತ್ತೆ ಸೊಸೆ ಅತ್ತಿಗೆ ನಾದಿನಿ ,ಗಂಡಹೆಂಡತಿಮಕ್ಕಳು ಅಸಮಧಾನ ಇದ್ದು ಹೊಂದಾಣಿಕೆ ಸಾಧ್ಯವಾಗದು ಎಂಬ ಮಟ್ಟಕ್ಕೆ ಹೋದಾಗ ದುರ್ಬಲ ಮನಸ್ಕರು ಮುಂದೆ ಭರವಸೆಯೇ ಕಾಣಿಸದು ಎಂತಲೋ ಅಥವಾ ಬುದ್ಧಿ ಕಲಿಸುವೆ ಎಂಬ ಹುಂಬತನದಿಂದಲೋ ಈ ರೀತಿಯ ಅವಾಂತರಕ್ಕೆ ಇಳಿಯುತ್ತಾರೆ
೨. ಆರ್ಥಿಕ ಸಮಸ್ಯೆಗಳು
ನಿರುದ್ಯೋಗ ಬಡತನ ಮಿತಿಮೀರಿ ಬೆಳೆದ ಸಾಲ ತೀರಿಸಲಾಗದಿರುವುದು ಅಥವಾ ಇದ್ದಕ್ಕಿದ್ದಂತೆ ಸಂಪಾದನೆ ಕುಂಠಿತವಾಗುವುದು ಅಥವಾ ನಿಂತುಹೋಗುವುದು ಇವೆಲ್ಲಾ ಸ್ಥಿತಿಗಳು ಮನುಷ್ಯರನ್ನು ನಿರಾಸೆಯ ಕೂಪಕ್ಕೆ ತಳ್ಳಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಬಹುದು.
೩. ಸಾಮಾಜಿಕ ಔದ್ಯೋಗಿಕ ಒತ್ತಡಗಳು
ವೃತ್ತಿ ಸಮಸ್ಯೆಗಳು ಉದ್ಯೋಗ ಸ್ಥಳದಲ್ಲಿನ ಒತ್ತಡಗಳು ಎದುರಿಸಲಾಗದ ಮಟ್ಟವನ್ನು ಮೀರಿದರೆ ವ್ಯಕ್ತಿ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಾನೆ ಸಾಮಾಜಿಕವಾಗಿಯೂ ಕೆಲವೊಮ್ಮೆ ಕೆಲವು ತೊಳಲಾಟಗಳು ಬಿಡಿಸಲಾಗದ ಗೋಜಲು ಗೊಂದಲ ದ್ವಂದ್ವಗಳು ಒಪ್ಪಿತವಲ್ಲದ ನಡವಳಿಕೆಗಳು ಮನುಷ್ಯರನ್ನು ಕೀಳರಿಮೆಗೆ ದೂಡಿ ಬಳಲುವಂತೆ ಮಾಡಿ ಆತ್ಮಹತ್ಯೆಗೆ
ಪ್ರಚೋದಿಸುತ್ತವೆ
೪. ಮಾನಸಿಕ ಸಮಸ್ಯೆಗಳು
ಖಿನ್ನತೆಯಿಂದ ಬಳಲುವ ರೋಗಿಗಳು ಸರಿಯಾದ ಔಷಧೋಪಚಾರ ಸಿಗದಿದ್ದಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ ಅಂತೆಯೇ ಸ್ಕಿಜೋಫ್ರೇನಿಯಾದಂತಹ ಖಾಯಿಲೆಯಿಂದ ನರಳುವ ರೋಗಿಗಳಲ್ಲೂ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚು
೫. ಹದಿ ಹರೆಯದ ವಯಸ್ಸಿನ ಯುವಕ ಯುವತಿಯರು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಪ್ರೇಮ ಕೈಗೂಡದಿದ್ದಾಗ ಅಥವಾ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗದಿದ್ದಾಗ ಹತಾಶರಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಶರಣಾಗುತ್ತಾರೆ.
ಸೃಷ್ಟಿಯ ಎಲ್ಲ ಜೀವಿಗಳಿಗಿಂತ ಮನುಷ್ಯನು ಮೇಲು ಎನ್ನಿಸುವುದು ಅವನ ವಿಕಸಿತ ಮೆದುಳು ಹಾಗೂ ಬುದ್ಧಿ ಚಾತುರ್ಯದಿಂದ ಆದರೆ ಬೇರೆ ಯಾವ ಜೀವಿಗಳೂ ಹುಳಹುಪ್ಪಟೆಗಳೂ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಹೋರಾಡುತ್ತವೆ. ಆದರೆ ಆಲೋಚನಾ ಸಾಮರ್ಥ್ಯ ವುಳ್ಳ ಮನುಷ್ಯ ಮಾತ್ರ ತನ್ನ ಜೀವವನ್ನೇ ಕೊನೆಗಾಣಿಸಿಕೊಳ್ಳುವ ಹುಂಬತನಕ್ಕೆ ಮುಂದಾಗುತ್ತಾನೆ ಎಂದರೆ ವಿಪರ್ಯಾಸವೇ ಸರಿ . ವಿಶ್ವದ ಎಲ್ಲಾ ಧರ್ಮಗಳು ಆತ್ಮಹತ್ಯೆ ಮಹಾಪಾಪ ಎ್ದೇ ಹೇಳುತ್ತವೆ . ಈಸಬೇಕು ಇದ್ದು ಜಯಿಸಬೇಕು ಎಂಬುವುದೇ ಮೂಲಮಂತ್ರ . ಸಾಯಲು ಒಂದು ಕಾರಣವಿದ್ದರೆ ಬದುಕಬೇಕು ಎನ್ನುವುದಕ್ಕೆ ನಾನಾ ಕಾರಣಗಳಿವೆ .
ಸುಪ್ರಸಿದ್ಧ ವ್ಯಕ್ತಿತ್ವ ವಿಕಸನ ಪುಸ್ತಕಗಳ ಬರಹಕಾರ ಡೇಲ್ ಕಾರ್ನೆಗಿ ಅವರು ತಮ್ಮ How to stop worrying and start living ಎಂಬ ಪ್ರಸಿದ್ಧ ಪುಸ್ತಕದಲ್ಲಿ ಇಂತಹ ಚಿಂತೆಯ ಬಗ್ಗೆ ವಿವರಿಸುತ್ತಾ “ಚಿಂತೆ ಎಂಬುದು ನಿಂತ ನೀರಲ್ಲ ಸದಾ ಹರಿಯುತ್ತಿರುತ್ತದೆ ಎಂದು ಹೇಳುತ್ತಾ ಇಂದಿನ ಬೃಹದಾಕಾರದ ಸಮಸ್ಯೆ ನಾಳೆಗೆ ಹೇಳ ಹೆಸರಿಲ್ಲದಂತಾಗುತ್ತದೆ . ಹಾಗಾಗಿ ಚಿಂತೆ ಅಥವಾ ಸಮಸ್ಯೆಗೆ ಅದರದೇ ಆದ ಪರಿಮಾಣವಿಲ್ಲ ಎಲ್ಲವೂ ನಾವು ನೋಡುವ ದೃಷ್ಟಿ ಹಾಗೂ ತೆಗೆದುಕೊಳ್ಳುವ ರೀತಿಯಲ್ಲಿದೆ ” ಎಂದು ಉದಾಹರಣೆಗಳ ಮೂಲಕ ಹೇಳುತ್ತಾರೆ.
ಆತ್ಮಹತ್ಯೆ ಯೋಜನೆಯನ್ನು ತಡೆಯುವ ಪರಿಹಾರ ಮಾರ್ಗಗಳು :
ಜೀವನದ ಯಾವುದೇ ಸಮಸ್ಯೆಯೂ ಸಾವನ್ನು ಆಹ್ವಾನಿಸುವಷ್ಟು ದೊಡ್ಡದಲ್ಲ ಎಂಬುದನ್ನು ಮೊದಲು ಅರಿಯಬೇಕು . ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಆಪ್ತರೊಡನೆ ಚರ್ಚಿಸಬೇಕು ಸಮಾಲೋಚಿಸಬೇಕು . ಅಂತರ್ಮುಖಿ ಗಳಲ್ಲೇ ಈ ಆತ್ಮಹತ್ಯೆಯ ಸಂಭವನೀಯತೆ ಹೆಚ್ಚು . ಪರಿಚಯದವರೊಡನೆ ಹೇಳಲಾಗದ್ದನ್ನು ವೃತ್ತಿನಿರತ ಆಪ್ತಸಮಾಲೋಚಕರೊಡನೆ ಚರ್ಚಿಸಬಹುದು. ಖಿನ್ನತೆ ಆತ್ಮಹತ್ಯೆಯಂತಹ ಋಣಾತ್ಮಕ ಯೋಚನೆ ಗಳು ಸುಳಿದಾಗ ಈ ರೀತಿಯ ಕ್ರಮ ಸಮಂಜಸ. ಈ ನಿಟ್ಟಿನಲ್ಲಿ ಆಧ್ಯಾತ್ಮ ದೇವರ ಮೇಲಿನ ನಂಬಿಕೆಗಳು ಸಹ ಆಲೋಚನೆಯಿಂದ ಹೊರಬರಲು ಸಹಾಯ ಮಾಡುತ್ತವೆ .
ಪೋಷಕರಾಗಿ ಮಕ್ಕಳನ್ನು ಒತ್ತಡಕ್ಕೆ ತಳ್ಳದ ನಿಟ್ಟಿನಲ್ಲಿ ನಡವಳಿಕೆ ಇರಬೇಕು.
ಯಾರಿಂದಲೂ ಹೆಚ್ಚಿನ ನಿರೀಕ್ಷೆಗಳು ಇಟ್ಟುಕೊಳ್ಳದಾದಾಗ ಭ್ರಮನಿರಸನದ ಸಾಧ್ಯತೆಗಳು ಕಡಿಮೆ.
ನಮ್ಮ ಸುತ್ತ ಮುತ್ತಲಲ್ಲಿ ಸಾವಿನ ಬಗ್ಗೆ ಹೆಚ್ಚು ಮಾತನಾಡುವವರನ್ನೂ ಖಿನ್ನತೆಯಲ್ಲಿರುವವರನ್ನು ಕಂಡಾಗ ಕೌನ್ಸೆಲಿಂಗಿಗೆ ಕಳಿಸುವ ಕರೆದೊಯ್ಯುವ ಪ್ರಯತ್ನ ಮಾಡಬೇಕು .
ಕೆಲವೊಮ್ಮೆ ಒಬ್ಬರ ಕಷ್ಟ ಗಳಿಗೆ ಕಿವಿಯಾದರೆ ಸಾಕು ಅದಕ್ಕಿಂತ ಪರಿಹಾರ ಬೇರೊಂದಿಲ್ಲ.
ಧನಾತ್ಮಕ ಯೋಚನೆಗಳನ್ನು ಮೈಗೂಡಿಸಿಕೊಳ್ಳುವ ಸತತ ಪ್ರಯತ್ನವಿದ್ದರೆ ಆತ್ಮಹತ್ಯೆಯ ಯೋಚನೆ ಬಳಿ ಸುಳಿಯದು. ಆ ನಿಸ್ಸಹಾಯಕ ಗಳಿಗೆಯಿಂದ ಆಚೆ ಬರುವ ಪ್ರಯತ್ನ ಒಮ್ಮೆ ಮಾಡಿದರೆ ಆ ವಿಷಗಳಿಗೆ ಜಾರಿದರೆ ಮುಂದೆ ಸಂಕಟದ ಸ್ಥಿತಿ ಎದುರಾಗದು. ಸತ್ತ ವ್ಯಕ್ತಿಗಿಂತಲೂ ಇರುವ ಕುಟುಂಬದ ಸಂಬಂಧಿತ ವ್ಯಕ್ತಿಗಳಿಗೆ ಇದರ ಪರಿಣಾಮ ಹೆಚ್ಚು ಯಾವುದಕ್ಕೋ ಯಾರಿಗೋ ಕೊರಗಿ ಜೀವ ಕಳೆದುಕೊಂಡು ಕುಟುಂಬದವರಿಗೆ ನೋವು ಕೊಡುವ ಈ ಹೇಡಿತನದ ಪಲಾಯನವಾದಕ್ಕೆ ಧಿಕ್ಕಾರವಿರಲಿ . ತಿಳಿದೂ ತಿಳಿದೂ ತಪ್ಪು ಮಾಡಿದರೆ ಖಂಡಿತ ಕ್ಷಮೆ ಇರದು . ದಾಸವರೇಣ್ಯರ ಈ ನುಡಿ ಸದಾ ಮನದಲ್ಲಿರಲಿ “ಮಾನವ ಜನ್ಮ ದೊಡ್ಡದು ಇದು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ “.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು