ರಮ್ಜಾನ್- ರೋಜಾ- ಕುರಾನ್.-ಹಮೀದಾ ಬೇಗಂ ದೇಸಾಯಿ

ವಿಶೇಷ ಲೇಖನ

ಹಮೀದಾ ಬೇಗಂ ದೇಸಾಯಿ

ರಮ್ಜಾನ್- ರೋಜಾ- ಕುರಾನ್

ರಂಜಾನ್ ಎಂದರೆ ಅರೇಬಿಕ್ ಭಾಷೆಯಲ್ಲಿ ಅಲ್-ರಮದ್ ಅಥವಾ ರಮದ ಅರ್ಥ ಶುಷ್ಕತೆ, ಶಾಖದ ತೀವ್ರತೆ, ದಿನಸಿ ವಸ್ತುಗಳ ಕೊರತೆ ಎಂದಾಗುತ್ತದೆ. ಇಸ್ಲಾಂ ಧರ್ಮದ ಒಂಬತ್ತನೇ ತಿಂಗಳು ಪವಿತ್ರ ಮಾಸ ರಂಜಾನ್.ಕ್ರಿ.ಶ.610 ರಲ್ಲಿ ಮೊಹಮ್ಮದ್ ಪೈಗಂಬರ್ ಅವರಿಗೆ ಜಿಬ್ರಾಯಿಲ್ ಎಂಬ ದೇವದೂತ ಮುಖೇನ ರಂಜಾನ್ ತಿಂಗಳಿನ 27 ನೇದಿನ ಅಲ್ಲಾಹುವಿನ ವಾಣಿಯಂತೆ ಪವಿತ್ರ ಕುರಾನ್ ಬರೆಯಲ್ಪಟ್ಟಿದೆ. ಈ ಪವಿತ್ರ ತಿಂಗಳೆಲ್ಲ ಮುಸಲ್ಮಾನರು ಉಪವಾಸ, ಪ್ರಾರ್ಥನೆ, ದಾನ, ಧಾರ್ಮಿಕ ಕಾರ್ಯಗಳಿಗಾಗಿ ಮೀಸಲಿಡುವರು. ಕೇವಲ ದೈಹಿಕ ಹಸಿವು ಮಾತ್ರವಲ್ಲ, ಮಾನಸಿಕ ಹಸಿವನ್ನು ಕೂಡ ನಿಯಂತ್ರಣದಲ್ಲಿಡುವುದು ಅಷ್ಟೇ ಮುಖ್ಯ. ಇಸ್ಲಾಂ ಧರ್ಮದಲ್ಲಿ ದೇವರ ಮುಂದೆ ಎಲ್ಲರೂ ಸಮಾನರು. ಆರ್ಥಿಕ ಸಮಾನತೆಯನ್ನು ಪ್ರತಿಯೊಬ್ಬರು ಪಾಲಿಸಬೇಕೆಂಬುದು ಇಸ್ಲಾಂ ಧರ್ಮದ ನಿಯಮ. ಶಕ್ತರು ಅಶಕ್ತರಿಗೆ ಸಹಕರಿಸಿ ಸಹಬಾಳ್ವೆ ನಡೆಸಬೇಕೆಂದು ಬೋಧಿಸುವುದೇ ಇಸ್ಲಾಂ ಧರ್ಮದ ಮೂಲ ತತ್ವ..!
ವಿಶ್ವದ ಎಲ್ಲ ಮಾನವ ಜನಾಂಗದ ಸೌಹಾರ್ದತೆಗೆ ರಂಜಾನ್ ಹಬ್ಬದ ಶುಭಾಶಯಗಳು..

ಪ್ರವಾದಿ ಮೊಹಮ್ಮದ್ ಪೈಗಂಬರ್  ಅವರು ಪ್ರತಿ ವರ್ಷವೂ ಮರಳುಗಾಡಿನಲ್ಲಿರುವ, ಮಕ್ಕಾ ನಗರದ ಬಳಿಯಲ್ಲಿರುವ  ಹಿರಾ ಬೆಟ್ಟದ ಗುಹೆಗೆ ಧ್ಯಾನ ಮಾಡಲು ಹೋಗುತ್ತಿದ್ದರು. ಅದಕ್ಕಾಗಿ  ಅವರು  ರಮ್ಜಾನ್ ತಿಂಗಳನ್ನು ಆರಿಸಿಕೊಂಡಿದ್ದರು. ಇಂಥ ಶಾಂತ  ತಿಂಗಳ ಕೊನೆಯಲ್ಲಿ  ಒಂದು ದಿನ ರಾತ್ರಿ ಧ್ಯಾನಸ್ಥ  ಸ್ಥಿತಿಯಲ್ಲಿ ಇದ್ದಾಗ ಅವರಿಗೆ ಒಂದು ವಾಣಿ ಕೇಳಿಸಿತು. ಆ ವಾಣಿ  ಅವರಿಗೆ  ಓದು ಎಂದು ಹೇಳಿದಾಗ , ಅವರು ನನಗೆ ಓದಲು ಬರುವುದಿಲ್ಲ ಎನ್ನುತ್ತಾರೆ. ಯಾಕೆಂದರೆ ಅವರು ಅನಕ್ಷರಸ್ಥರು. ಆದರೂ  ಆ ವಾಣಿ ಬಾರಿ ಬಾರಿ ಅವರಿಗೆ  ಓದಲು  ಆಜ್ಞೆ ಮಾಡುತ್ತದೆ. ಆಗ ಅವರು  ನಾನು ಏನು ಓದಲಿ..? ಎಂದು  ಕೇಳಿದಾಗ ಆ ವಾಣಿ ತಿಳಿಸಿತು. ಓದು, ಸೃಷ್ಟಿಕರ್ತನಾದ  ಪ್ರಭುವಿನ  ಹೆಸರಿನಲ್ಲಿ  ಓದು; ಮಣ್ಣು  ಗಟ್ಟಿಯಿಂದ  ಮನುಷ್ಯನನ್ನು  ಸೃಷ್ಟಿಸಿದವನ  ಓದು; ಆ ನಿನ್ನ ಪ್ರಭುವು ಅತ್ಯಂತ ಸಮೃದ್ಧಶಾಲಿ  , ಲೇಖನಿಯಿಂದ ಪಾಠ ಕಲಿಸುವನು, ಮನುಷ್ಯನಿಗೆ  ತಿಳಿಯದೆ  ಇರುವುದನ್ನು  ತಿಳಿಸುವನು…  ಮೊಹಮ್ಮದ್ ಪೈಗಂಬರ್ ರು ಎಚ್ಚೆತ್ತಾಗ  ಈ ವಾಕ್ಯಗಳು ಅವರ  ಹೃದಯದ  ಮೇಲೆ ಕೆತ್ತಿದಂತಾದವು. ಗುಹೆಯಿಂದ  ಹೊರಗೆ ಬಂದು ಗುಡ್ಡದ ಪಕ್ಕದಲ್ಲಿ  ಬಂದು ನಿಂತರು. ಆಗ ಮತ್ತೆ  ವಾಣಿ ಕೇಳಿಸಿತು.  ಓ…ಮೊಹಮ್ಮದ್ ನೇ, ನೀನು ಅಲ್ಲಾನ ಪ್ರವಾದಿ ನಾನೂ ಗೇಬ್ರಿಯಲ್ ದೇವದೂತ…  ಆಗ ಅವರು ಮೇಲೆ  ಆಕಾಶದತ್ತ  ನೋಡಿದಾಗ  ಅಲ್ಲಿ  ಅಸ್ಪಷ್ಟ  ಮಾನವರೂಪದ ಪ್ರಕಾಶ ಗೋಚರಿಸಿತು. ಮುಂದೆ ಅವರು ಧ್ಯಾನಸ್ಥ  ಸ್ಥಿತಿಯಲ್ಲಿ ಇದ್ದಾಗ ಹೇಳಿದ ಪವಿತ್ರ  ವಾಕ್ಯಗಳೇ  ಅವರ ಬಾಯಿಂದ ಬಂದದ್ದು  ಕುರಾನ್ ಗ್ರಂಥ,  ರಮ್ಜಾನ್ ತಿಂಗಳಲ್ಲಿ  ರೂಪು ಗೊಂಡದ್ದು..! ಮೊಹಮ್ಮದ್ ಪೈಗಂಬರ್ ಅವರು ಅನಕ್ಷರಸ್ಥರಾಗಿದ್ದರೂ , ಓದನ್ನೇ  ದೇವದೂತ ಒತ್ತಾಯಪಡಿಸಿದ್ದರಿಂದ  ಆ ಪವಿತ್ರ  ಗ್ರಂಥಕ್ಕೆ  ಅಲ್- ಕುರಾನ್ ಎಂಬ ಹೆಸರು ಬಂದಿದೆ. ಅಂದರೆ  ಓದಲು  ಬಾರದವನ  ಓದುವಿಕೆ  ಎಂದರ್ಥ.

    ಈ ಎಲ್ಲದರ  ಸ್ಮರಣಾರ್ಥ ಜಗತ್ತಿನ  ಎಲ್ಲಾ ಮುಸ್ಲಿಂ ಜನಾಂಗದವರು  ರಮ್ಜಾನ್  ತಿಂಗಳನ್ನು  ಪವಿತ್ರ ತಿಂಗಳೆಂದು ಭಾವಿಸುತ್ತಾರೆ. ಅದಕ್ಕಾಗಿ ಈ ತಿಂಗಳಲ್ಲಿ, ಒಂದು ತಿಂಗಳ  ಉಪವಾಸ , ಧ್ಯಾನ, ಕುರಾನ್ ಪಠಣ, ದಾನ…ಎಲ್ಲವನ್ನೂ ಕೈಗೊಳ್ಳುವರು.

—————————————————

.

4 thoughts on “ರಮ್ಜಾನ್- ರೋಜಾ- ಕುರಾನ್.-ಹಮೀದಾ ಬೇಗಂ ದೇಸಾಯಿ

  1. ಆತ್ಮೀಯ ಸಹೋದರಿಯವರಿಗೆ ರಂಜಾನ್ ಹಬ್ಬದ ಶುಭಾಶಯಗಳು, ರೋಜಾದ ಮಹತ್ವ ಹಾಗೂ ಹಿನ್ನೆಲೆಯನ್ನು ತಿಳಿಸುತ್ತಲೇ ರಂಜಾನ್ ಹಬ್ಬದ ವೈಜ್ಞಾನಿಕ ಅರ್ಥ, ವೈಶಾಲ್ಯತೆಯ ವಿವರಗಳನ್ನು ಮನಮುಟ್ಟುವಂತೆ ವಿಶ್ಲೇಷಣೆ ಮಾಡಿದ ತಮಗೆ ಕೋಟಿ ಕೋಟಿ ನಮನಗಳು. ಸಾಂದರ್ಭಿಕವಾಗಿ ಕುರಾನ್ ಕುರಿತಾಗಿ ನೀಡಿದ ವಿವರಗಳು ನಮ್ಮ ಕಣ್ಣು ತೆರೆಸಿದವು.ಸೌಹಾರ್ದತೆಯನ್ನು ಮೂಡಿಸುವಲ್ಲಿ ತಮ್ಮ ಲೇಖನ ಸಹಕಾರಿಯಾಗಬಲ್ಲುದು.

  2. ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ಇಬ್ಬರೂ ಆತ್ಮೀಯರಿಗೆ ಧನ್ಯವಾದಗಳು .

    ಹಮೀದಾ ಬೇಗಂ.

  3. ನನಗೆ ಕುರಾನ್ ಬಗ್ಗೆ ತಿಳಿಯುವ‌ ಕುತೂಹಲವಿತ್ತು.
    ನಿಮ್ಮ ಬರವಣಿಗೆ ಸ್ಪಲ್ಪ ಮಟ್ಟಿಗೆ ಸಹಕಾರಿಯಾಯಿತು.ಇನ್ನೂ …
    ಧನ್ಯವಾದಗಳು ಮೇಡಂ

Leave a Reply

Back To Top