ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ತಪ್ಪು ತಿದ್ದುವದು ಹೇಗೆ?

ನಡೆಯುವವನು ಎಡವಲೇಬೇಕು ಎಂಬ ನಾಣ್ಣುಡಿಯಂತೆ ತಪ್ಪುಗಳು ಸಹಜ. ತಪ್ಪಿದಾಗ ಅದನ್ನು ತಂದೆ ತಾಯಿ ಪೋಷಕರು, ಅಜ್ಜ, ಅಜ್ಜಿ, ಗುರುಗಳು ಹಿರಿಯರು ತಿದ್ದಿಹೇಳಬೇಕು. ಈ ರೀತಿ ತಪ್ಪುಗಳನ್ನು ತಿದ್ದುವದು ಹಾಗೂ ಅದರಂತೆ ಸರಿಮಾಡಿಕೊಂಡು ಸಾಗುವದು ನಿರಂತರ ಪ್ರಕ್ರಿಯೆ. ಮುಂಚೆ ಅವಿಭಕ್ತ ಕುಟುಂಬದಲ್ಲಿ ಈ ಕಾರ್ಯ ಸಾಂಗ್ಯವಾಗಿ ಸಾಗುತ್ತಿತ್ತು. ಇದರಿಂದ ತಮ್ಮ ತಪ್ಪುಗಳನ್ನು ಕೇಳಿ ಅರ್ಥೈಸಿಕೊಂಡು ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಸ್ವಭಾವವು ಇತ್ತು. ಆದರೆ ಇತ್ತೀಚಿಗೆ ಈ ರೀತಿಯ ಮನೋಧೋರಣೆ ಸಿಗುತ್ತಿಲ್ಲ. ಶಾಲೆಗಳಲ್ಲಿ ಸಹ ಮಕ್ಕಳು ಅತ್ಯಂತ ಉದ್ಧಟತನದ ವರ್ತನೆ ಕಾಣುತ್ತಿದೆ.
ಇತ್ತೀಚಿಗೆ ಅನೇಕ ಪತ್ರಿಕೆಗಳಲ್ಲಿಯೂ ಸಹ ಕೇಳುತ್ತಿದ್ದೇವೆ. ಅನೇಕ ಯುವಕರು ಯುವತಿಯರು ತಮ್ಮ ತಪ್ಪನ್ನು ಸರಿಪಡಿಸಕೊಳ್ಳಲಾಗದೇ ಹಾಗೂ ಹಿರಿಯರ ಉಪದೇಶ ಕೇಳದೇ ಆತ್ಮಹತ್ಯೆಗೆ ಆಹುತಿ ಆಗುತ್ತಿದ್ದಾರೆ. ಮಾನಸಿಕವಾಗಿ ಅತ್ಯಂತ ದುರ್ಬಲರಾಗುತ್ತಿರುವದು ಸಹ ಕಂಡುಬರುತ್ತಿದೆ. ಯುವಕ ಯುವತಿಯರಿರಲಿ ಶಾಲಾ ವಿದ್ಯಾರ್ಥಿಗಳಿರಲಿ ಅವರಿಗೆ ತಾವು ಮಾಡಿದ ತಪ್ಪು ತಮಗೆ ಅರಿವಾಗುವದಿಲ್ಲ. ತಮ್ಮ ಬೆನ್ನು ತಮಗೆ ನೋಡಲಾಗದು ಎಂಬಂತೆ ಅವರು ದಾರಿ ತಪ್ಪುತ್ತಿರುವದರ ಬಗ್ಗೆ ಶಿಕ್ಷಕರು, ಪಾಲಕರು ಹೇಳಿದಾಗ ಅದನ್ನು ಧನಾತ್ಮಕವಾಗಿ ಕೇಳುವ ಮನೋಧೋರಣೆ ಬೆಳೆಸಿಕೊಳ್ಳಬೇಕಿದೆ. ಆದರೆ, ಅದಕ್ಕೆ ವಿರುದ್ಧವಾಗಿ ಪ್ರತಿಭಟಿಸುವ ಮನಸ್ಥಿತಿಯನ್ನು ಹೊಂದಿದ್ದಾರೆ. ಇದರಿಂದ ಶಾಲೆಯಲ್ಲಿ ಶಿಕ್ಷಕರಿಗೆ, ಹಾಗೂ ಪಾಲಕರಿಗೆ ತಪ್ಪು ತಿದ್ದುವುದು ಹೇಗೆ? ಎಂಬುದು ತಿಳಿಯುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಗಣಿಸುತ್ತಿದೆ.


ಇಂದಿನ ಶಿಕ್ಷಣ ಪದ್ಧತಿ ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಮಕ್ಕಳಿಗೆ ಯಾವುದೇ ರೀತಿಯ ಮಾನಸಿಕ ಹಾಗೂ ದೈಹಿಕ ತೊಂದರೆ ಆಗದಂತೆ ಕಲಿಕೆ ಆಗುವ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದರಿಂಧ ಲಾಟಿ ಚಂ ಚಂ ವಿದ್ಯಾ ಗಂ ಗಂ ಎಂಬ ಪುರಾತನ ನುಡಿ ಇಂದು ಸಂಪೂರ್ಣವಾಗಿ ನಿರಾಕರಿಸಲಾಗಿದೆ. ಮಕ್ಕಳಿಗೆ ಮಕ್ಕಳ ಹಕ್ಕುಗಳ ಮೂಲಕ ಅವರ ವ್ಯಕ್ತಿತ್ವ ರೂಪಿಸುವ ಕಾರ್ಯ ಸಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಶಾಲೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಮಗುಕೇಂದ್ರಿತ ಶಿಕ್ಷಣ ನಡೆಯುತ್ತಿದೆ. ಆದರೆ ಮಗು ತಪ್ಪು ಮಾಡಿದಾಗ ಅದನ್ನು ಸರಿಪಡಿಸುವ ಹಾಗೂ ತಿದ್ದಿ ಹೇಳುವ ಕಾರ್ಯ ಮಾಡಲು ಹೋದಾಗ ಅದು ಪ್ರತಿಭಟಿಸುವ ಅಥವಾ ಕೇಳದೇ ಇರುವ ಸ್ಥಿತಿ, ಉದ್ಧಟತನ ತೋರಿಸುತ್ತಿರುವುದು, ಮೇಲಿಂದ ಮೇಲೆ ತಪ್ಪುಗಳು ಮರುಕಳಿಸುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ತಿದ್ದಿ ಹೇಳುತ್ತಿರವವರ ಮೇಲೆಯೇ ದ್ವೇಷ, ಹಗೆ ಸಾಧಿಸುತ್ತಿರುವುದು ಸರ್ವೇ ಸಾಮಾನ್ಯವಾಗುತ್ತಿರುವದನ್ನು ನೋಡಿದ ಅನೇಕ ಶಿಕ್ಷಕರು, ಹಿರಿಯರು ತುಂಬಾ ಖೇದವನ್ನು ವ್ಯಕ್ತಪಡಿಸುತ್ತಾ, ತಿದ್ದುವದಾದರೂ ಹೇಗೆ ಎಂಬ ದುಗುಡವನ್ನು ವ್ಯಕ್ತಪಡಿಸುತ್ತಾರೆ.
ಇತ್ತೀಚೆಗೆ ಪಾಲಕರ ಸಭೆಗಳಲ್ಲಿ ಸಹ ಅನೇಕ ಪಾಲಕರು, ಪೋಷಕರು ಹಾಗೂ ಹಿರಿಯರು ಈ ಕುರಿತು ಚರ್ಚಿಸುತ್ತಿದ್ದಾರೆ. ಮನೆಯಲ್ಲಿಯೂ ಸಹ ಮಕ್ಕಳು ಯಾವ ಮಾತನ್ನೂ ಕೇಳುತ್ತಿಲ್ಲ ಹಾಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದೂ ಹಾಗೂ ತಪ್ಪುಗಳನ್ನು ಒಪ್ಪಿಕೊಳ್ಳುವ, ತಿದ್ದಿ ನಡೆಯುವ ಸ್ವಭಾವ ಇಲ್ಲವೇ ಇಲ್ಲ. ಇದಕ್ಕೆ ಪರಿಹಾರ ಎಂತ ಎಂದೂ ಆಳವಾಗಿ ಯೋಚಿಸುತ್ತಿದ್ದಾರೆ. ತಪ್ಪುಗಳು ಶಾಲೆಯ ಚಟುವಟಿಕೆಗೆ ಸಂಬಂಧಿಸಿದಂತೆ ಇರಬಹುದು ಅಥವಾ ಅವರ ವರ್ತನೆಯಲ್ಲಿ ಆಗಿರಬಹುದು ಅವುಗಳನ್ನು ಚಿಕ್ಕವರಿರುವಾಗಲೇ ತಿಳಿಹೇಳುವುದು ಅತಿ ಅವಶ್ಯಕ. ಇಲ್ಲದಿದ್ದರೆ ಸಸಿಯಾಗಿ ಬಗ್ಗದ್ದು, ಗಿಡವಾಗಿ ಬಗ್ಗಿತೇ ಎಂಬಂತೆ ದೊಡ್ಡವರಾದ ಮೇಲೆ ಇದು ಸಮಾಜಕ್ಕೆ ತೊಂದರೆ ಮಾಡಬಹುದು.
ಈ ಹಿನ್ನೆಲೆಯಲ್ಲಿ ಒಂದು ಕಥೆ ನೆನಪಿಗೆ ಬರುತ್ತದೆ. ಅದೇನೆಂದರೆ, ಒಂದು ಊರಲ್ಲಿ ಒಂದು ಶಾಲೆ ಇತ್ತು. ಆ ಶಾಲೆಯಲ್ಲಿ 50 ಜನ ಮಕ್ಕಳಿದ್ದರು. ಅವರಲ್ಲಿ ಒಂದು ಮಗು ಕಳ್ಳತನ ಮಾಡುತಿದ್ದನು. ಇತರ ಮಕ್ಕಳ ವಸ್ತುಗಳನ್ನು ಸದಾ ಕದಿಯುತ್ತಿದ್ದ. ಇದನ್ನು ಗಮನಿಸಿದ ಇತರ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರ ಗಮನಕ್ಕೆ ತಂದರು. ಶಿಕ್ಷಕರು ಇದನ್ನು ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದನು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ ಆಗ ಆ ಎಲ್ಲ ಮಕ್ಕಳ ಪಾಲಕರು ಶಾಲೆಯ ಶಿಕ್ಷಕರ ಬಳಿ ಹೋಗಿ, ನೀವು ಆ ಕಳ್ಳತನ ಮಾಡುತ್ತಿರುವ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಬೇಕು ಇಲ್ಲದಿದ್ದರೆ ನಾವೆಲ್ಲರೂ ನಮ್ಮ ಮಕ್ಕಳನ್ನು ಈ ಶಾಲೆ ಬಿಡಿಸಿ ಬೇರೆ ಶಾಲೆಗೆ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು. ಆಗ ಆ ಶಿಕ್ಷಕ ಮುಖ್ಯೋಪಾಧ್ಯಾರ ಬಳಿ ಹೋಗಿ ಸರ್‌, ನಾವು ಆ ವಿದ್ಯಾರ್ಥಿಯನ್ನು ನಮ್ಮ ಶಾಲೆಯಿಂದ ತೆಗೆದುಹಾಕುವದು ಉತ್ತಮ, ಇಲ್ಲದಿದ್ದರೆ ನಾವು ಎಲ್ಲ 49 ವಿದ್ಯಾರ್ಥಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಅದಕ್ಕೂ ಸಹ ಆ ಮುಖ್ಯೋಪಾಧ್ಯಾಯರು ಸುಮ್ಮನಾದರು. ಅದರಿಂದ ಕುಪಿತವಾದ ಪಾಲಕರು ನೇರವಾಗಿ ಮುಖ್ಯೋಪಾಧ್ಯಾರ ಬಳಿ ಬಂದು, ಏಕೆ ತಾವು ನಾವು ಹೇಳಿದಂತೆ ಆ ಮಗುವನ್ನು ಶಾಲೆಯಿಂದ ಹೊರ ಹಾಕುತ್ತಿಲ್ಲ ಎಂದು ಒಕ್ಕೊರಲಿನಿಂದ ಕೇಳಿದಾಗ, ಮುಖ್ಯೋಪಾಧ್ಯಾಯರು ಅತ್ಯಂತ ಶಾಂತ ಚಿತ್ತದಿಂದ ಹೀಗೆ ಉತ್ತರಿಸಿದರು, “ ನಿಮ್ಮ ಮಕ್ಕಳು ಉತ್ತಮರು ಅವರು ಸಮಾಜದಲ್ಲಿ ಎಲ್ಲಿ ಹೋದರೂ ಬದುಕುವ ಕಲೆ ತಿಳಿದಿದ್ದಾರೆ ಇದರಿಂದ ಸಮಾಜಕ್ಕೆ ಯಾವುದೇ ತೊಂದರೆ ಆಗದು ಅದಕ್ಕೆ ತಮ್ಮ ಮಕ್ಕಳನ್ನು ಹೊರಗಡೆ ತೆಗೆದುಕೊಂಡು ಹೋದರೆ ಅಭ್ಯಂತರವಿಲ್ಲ ಅದರೆ ಈ ಮಗು ಇನ್ನೂ ಸುಧಾರಿಸಬೇಕಿದೆ, ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ಕಳ್ಳತನದ ಸ್ವಭಾವ ಬಿಡಬೇಕಿದೆ ಇದನ್ನು ತಿದ್ದದೇ ಸಮಾಜಕ್ಕೆ ಹೊರ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಆದ್ದರಿಂದ ಈ ಮಗುವನ್ನು ತಿದ್ದುವ ಪ್ರಮುಖ ಜವಾಬ್ದಾರಿ ನಮ್ಮ ಶಾಲೆಯದು ಎಂದು ಹೇಳುತ್ತಾ ಅತ್ಯಂತ ಸಮಾಜಮುಖಿ ಆಲೋಚನೆಯನ್ನು ಎಲ್ಲರ ಮುಂದೆ ಇಟ್ಟರು, ಆಗ ಎಲ್ಲರೂ ಮುಖ್ಯೋಪಾಧ್ಯಾಯರು ಹೆಳುತ್ತಿರುವುದು ಸಮಂಜಸವಾಗಿದೆ ಈ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು. ತಪ್ಪು ಆದಾಗ ಎಲ್ಲರೂ ತಿದ್ದುವ ಕಾರ್ಯ ಮಾಡಬೇಕು ಎಂದು ಒಪ್ಪಿಕೊಂಡು ತಮ್ಮ ಮನೆಗಳಿಗೆ ಸಾಗಿದರು. ಹೀಗೆ ಮಗುವನ್ನು ಸಮಾಜಮುಖಿಯಾಗಿ ಕಾಣಬೇಕಿದೆ. ತಪ್ಪುಗಳನ್ನು ತಿದ್ದಿ, ಉತ್ತಮ ಸಮಾಜ ನಿರ್ಮಿಸಬೇಕಿದೆ.
ಮಕ್ಕಳ ಈ ಸ್ವಭಾವ ಬದಲಾವಣೆ ಆಗದಿದ್ದರೆ ಮುಂದೆ ದೊಡ್ಡವರಾದ ಮೇಲೆ, ಅಹಂ ಅಥವಾ ದರ್ಪವಾಗಿ ಪರಿಣಮಿಸುವುದು. ಇದರಿಂದ ಅವರ ಉತ್ತಮ ವ್ಯಕ್ತಿತ್ವ ರೂಪಗಳ್ಳುವದರಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅಲ್ಲದೇ, ಇದು ಅವರ ಸಂವಹನ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುವುದು. ಸಮಾಜದ ಆಗುಹೋಗುಗಳ ಮೇಲೆ ಪರಿಣಾಮ ಬೀರಿ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಇದಕ್ಕೆಲ್ಲ ಪರಿಹಾರ ಎಂದರೆ ಇಂದು ಮಕ್ಕಳಲ್ಲಿ ಧನಾತ್ಮಕ ಭಾವನೆಯನ್ನು ಬೆಳೆಸುವುದು ಹಾಗೂ ತಾವು ಮಾಡಿದ ತಪ್ಪನ್ನು ತಿದ್ದಿನಡೆಯುವ ಸ್ವಭಾವನ್ನು ರೂಢಿಸಿಕೊಳ್ಳುವ ಕಾರ್ಯ ಮಾಡಬೇಕಿದೆ. ಇದನ್ನು ಕುಟುಂಬದಿಂದಲೇ ಪ್ರಾರಂಭಿಸಬೇಕು. ತದನಂತರ ಶಾಲೆಯಲ್ಲಿ ಶಿಕ್ಷಕರು, ಊರಿನಲ್ಲಿ ಹಿರಿಯರು ಮಾಡಬೇಕಿದೆ. ಇಲ್ಲದಿದ್ದರೆ ಯಾವುದೇ ಮಾತನ್ನು ಕೇಳದೇ ಆಗಲ್ಲ, ಮಾಡಲ್ಲ, ಕೇಳಲ್ಲ. ಹೇಳಲ್ಲ, ಎನ್ನುವ ಮಾತಿನ ಮೂಲಕ ಉದ್ದಟತನದ ಪ್ರತಿಕ್ರಿಯೆಗಳನ್ನು ನೀಡಿ ತಮ್ಮ ವ್ಯಕ್ತಿತ್ವ ಹಾಳಾಗಲು ತಾವೇ ಕಾರಣವಾಗಬಹುದು. ಅಷ್ಟೇ ಅಲ್ಲದೇ ಅಂತವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿಯೂ ವಿಫಲರಾಗಬಹುದು.


ಇದಕ್ಕಾಗಿ ದೊಡ್ಡವರಾದ ನಾವು ಸಹ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ, ಅಥವಾ ನಮಗೆ ನೀಡಿದ ಸಲಹೆಗಳನ್ನು ಪಾಲಿಸುವ ಕಾರ್ಯ ಮಾಡಬೇಕಿದೆ, ಏಕೆಂದರೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಅನುಸರಿಸುತ್ತಾರೆ. ಮಕ್ಕಳು ಉಪದೇಶ ಕೇಳುವದಕ್ಕಿಂತಲೂ ನೋಡಿ ಹೆಚ್ಚಿಗೆ ಕಲಿಯುತ್ತಾರೆ. ಹಾಗಾದರೆ ನಾವೆಲ್ಲರೂ ಈ ಕುರಿತು ಕೊಂಚ ಆಲೋಚಿಸೋಣವೇ? ಭವ್ಯ ಭಾರತಕ್ಕೆ ಉತ್ತಮ ಜನಾಂಗವನ್ನು ನೀಡುವ ಕಾರ್ಯದಲ್ಲಿ ಕೈಜೋಡಿಸೋಣವೇ?


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top