ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಮಕ್ಕಳಿಗೆ ಮಜಾ ಸಿಗಲಿ

 ಮಕ್ಕಳಿಗೆಲ್ಲ ಈಗ ಬೇಸಿಗೆ ರಜೆ. ಅಜ್ಜಿ ಮನೆಗೆ, ಮಾವನ ಮನೆಗೆ , ಇನ್ಯಾರೋ ಬಂಧುಗಳ ಮನೆಗೆ ಮಕ್ಕಳನ್ನು ಕಳಿಸಿ ಹಾಯಾಗಿ ರಜೆಯನ್ನು ಕಳೆಯುವ ಕಾಲ ಇದಲ್ಲ. ನಮಗಿರುವುದು ಒಂದೋ ಎರಡೋ ಮಕ್ಕಳು. ಅವರನ್ನು ನಾವು ಎಲ್ಲೋ ದೂರದ ಊರಿನಲ್ಲಿ ಬಂಧುಗಳ ಜೊತೆಗೆ ಬಿಟ್ಟು ಇರಲು ಕಷ್ಟ. ನಾವು  ಅವರನ್ನು  ನಮ್ಮ ಸಹಾಯ ಇರದೇ ಅವರಷ್ಟಕ್ಕೆ ಅವರೇ ಬದುಕಲು ಕಲಿಸಿಲ್ಲ . ಬೆಳಗ್ಗೆ ಎದ್ದು ಬ್ರಷ್ ಮಾಡಲು ಟೂತ್ ಬ್ರಷ್ ಗೆ ಪೇಸ್ಟ್ ನ್ನು  ಅಮ್ಮ ಹಾಕಿ ಕೊಡಬೇಕು. ತಿಂದ ತಟ್ಟೆಯನ್ನು ತೊಳೆಯಲು ಅಮ್ಮ ಬೇಕು. ಅವನು ಏನು ತಿನ್ನಬೇಕು? ಏನು ತಿನ್ನಬಾರದು? ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಮೊದಲಾದವುಗಳನ್ನು ಡಿಸೈಡ್ ಮಾಡೋದು ಅಮ್ಮ. ಮನೆಗೆ ಏನು ಬೇಕು ಮಗನ ಹವ್ಯಾಸಗಳಿಗೆ ಏನು ಬೇಕು ಮಗಳು ಸಮಯ ಕಳೆಯಲು ಏನೆಲ್ಲ ಬೇಕು ಇವುಗಳನ್ನು ತಂದುಕೊಡಲು ಅಪ್ಪ. ಅಷ್ಟೇ ಅಲ್ಲ , ಡ್ಯಾನ್ಸ್ ಕ್ಲಾಸ್,  ಭರತನಾಟ್ಯ ಕ್ಲಾಸ್,  ಸಮ್ಮರ್ ಕ್ಯಾಂಪು, ಮ್ಯಾಥಮೆಟಿಕ್ಸ್ ಕ್ಲಾಸ್,  ಯಕ್ಷಗಾನ ಕ್ಲಾಸ್,  ಭಜನೆ,  ಸಂಗೀತ ಕ್ಲಾಸ್ , ಸಂಗೀತ ವಾದ್ಯಗಳ ಕಲಿಕೆ, ನೃತ್ಯ , ಆಕ್ಟಿಂಗ್,  ಕರಾಟೆ,  ಯೋಗ ಇನ್ನೂ ಮುಂತಾದ ಹಲವಾರು ತರಗತಿಗಳಿಗೆ ನಮ್ಮ ಮಕ್ಕಳನ್ನು ರಜೆಯಲ್ಲಿ ಸೇರಿಸಿ ಬಿಟ್ಟಿರುವ ಕಾರಣ ರಜೆಯಲ್ಲಿ ಮತ್ತು ಬೇರೆ ದಿನಗಳಲ್ಲಿ ಮಕ್ಕಳಿಗೆ ಮನುಷ್ಯತ್ವದ ಪಾಠ ಕಲಿಯಲು ಅವಕಾಶವೇ ಇಲ್ಲ.

     “ನಾನು ಕಲಿಯಬೇಕು ಕಲಿತು ತುಂಬಾ ಹಣ ಮಾಡಬೇಕು ಅದಕ್ಕಾಗಿ ಒಳ್ಳೆಯ ಕೆಲಸ ಸಿಗಬೇಕು ಹಾಗೆ ಸಿಗಬೇಕಾದರೆ ಉತ್ತಮ ಅಂಕಗಳನ್ನು ಪಡೆಯಬೇಕು” ಇಷ್ಟನ್ನೇ ನಮ್ಮ ಮಕ್ಕಳ ಮನಸ್ಸಿನೊಳಗೆ ಆಳವಾಗಿ ಬೇರೂರಿಸಿ ಬಿಟ್ಟಿದ್ದೇವೆ. ಇಲ್ಲಿ ಬಡವರೊಂದಿಗೆ ಹೇಗೆ ವರ್ತಿಸಬೇಕು,  ನೋವಿರುವ ಮನಸ್ಸಿನವೊರೊಡನೆ ಹೇಗೆ ಮಾತನಾಡಬೇಕು,  ಹಿರಿಯರಿಗೆ ಹೇಗೆ ಗೌರವ ಕೊಡಬೇಕು,  ಪರರಿಗೆ ಸಹಾಯ ಹೇಗೆ ಮಾಡಬೇಕು,  ನಾಲ್ಕು ಜನರೊಂದಿಗೆ ಬೆರೆತು ಬಾಳುವುದು ಹೇಗೆ? ಇದೇ ಮೊದಲಾದ ಮಾನವತೆಯ ಗುಣಗಳನ್ನು ಹೇಳಿಕೊಡಲು ಯಾವ ಶಿಕ್ಷಕರೂ ಸಿಗುವುದಿಲ್ಲ. ಇದೆಲ್ಲ ಹಿರಿಯರಿಂದ ಕಲಿಯಬೇಕಾದಂತಹ ನೀತಿ ಪಾಠಗಳು. ಎಲ್ಲೋ ಕೆಲವು ಮಕ್ಕಳು ಇತರರನ್ನು ನೋಡಿ ಮತ್ತು ಇತರರಿಂದ ಕೇಳಿ ಕಲಿತಿರಬಹುದು ಉಳಿದ ಮಕ್ಕಳಿಗೆಲ್ಲ ನನ್ನ ತಂದೆ,  ತಾಯಿ,  ತಂಗಿ , ತಮ್ಮ,  ನಮ್ಮ ಕಾರು,  ನಮ್ಮ ಮನೆಯ ನಾಯಿ,  ನಮ್ಮ ಮನೆ,  ನಮ್ಮ ಶಾಲೆ,  ಮತ್ತೆ ಈ ಕ್ಲಾಸ್ಗಳು ಇಷ್ಟೇ ಪ್ರಪಂಚ.

        ಮಕ್ಕಳನ್ನು ಈ ಗೂಡಿನಿಂದ ಹೊರಕ್ಕೆ ತಂದು ಹೊರಗೆ ಪ್ರಪಂಚ ವಿಶಾಲವಾಗಿದೆ.  ಅಲ್ಲಿ ಮುದ್ದಾದ ಪ್ರಾಣಿ ಪಕ್ಷಿಗಳಿವೆ. ಅದರೊಂದಿಗೆ ಹಲವಾರು ಜಾತಿಯ ಗಿಡ,  ಮರ, ಬಳ್ಳಿಗಳಿವೆ.  ಅವುಗಳಿಗೆಲ್ಲ ಜೀವವಿದೆ.  ಅವು ಕೂಡ ನಮ್ಮ ಕರೆಗೆ ಸ್ಪಂದಿಸುತ್ತವೆ.  ಅವುಗಳು ಕೂಡ ನಮ್ಮ ಒಡನಾಡಿಗಳಾಗಬಲ್ಲವು ಮೊದಲಾದ ಹಲವಾರು ವಿಷಯಗಳನ್ನು ಕಲಿತಷ್ಟು ಮುಗಿಯದ ಭಾವಗಳನ್ನು ನಮ್ಮ ಮಕ್ಕಳಲ್ಲಿ ನಾವು ಇಂದು ಬಿತ್ತಬೇಕಿದೆ. ತರಗತಿಯಲ್ಲಿ ಮೊದಲ ರ್ಯಾಂಕ್  ಪಡೆದ ಮಗುವಿಗೆ ಬದುಕಿನ ಪಾಠ ಕಲಿಸಿ ಕೊಡಬೇಕಾದ ಅನಿವಾರ್ಯತೆ ಇಂದು ಬಂದಿದೆ. ಇಲ್ಲದೆ ಹೋದರೆ ಯಾವುದೇ ಒಂದು ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್  ಪಡೆದ ತಕ್ಷಣ ಆ ಮಗು ಅಂಕಗಳು ಕಡಿಮೆಯಾದವು , ನಾನು ಹಿಂದೆ ಬಿದ್ದೆ ಎಂದು ನೊಂದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಬಹುದು. ತಮ್ಮ ತಮ್ಮ ಮಕ್ಕಳ ಕಲಿಕೆಗಾಗಿ ಪೋಷಕರೊಡನೆ  ಇರುವ ನೂಕು ನುಗ್ಗಲು,  ತಮ್ಮ ಕುಟುಂಬದ ಪ್ರತಿಷ್ಠೆಗಾಗಿ ಮಕ್ಕಳ ಕಲಿಕೆಯ ಮಟ್ಟವನ್ನು ಎದುರಿಗಿಡುವುದು,  ಇದೇ ಮೊದಲಾದ ಪೋಷಕರ ಸಣ್ಣತನದಿಂದ ಮಕ್ಕಳು ನೊಂದುಕೊಳ್ಳುತ್ತಾರೆ.

        ಇಬ್ಬರೂ ಹೊರಗೆ ದುಡಿಯುವ ತಂದೆ ತಾಯಿಗಳಾಗಿದ್ದರೆ ಅವರಿಗೆ ತಮ್ಮ ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಮಕ್ಕಳೇನು ಮಾಡುತ್ತಾರೆ ಎಂದು ನೋಡಿಕೊಳ್ಳುವುದೂ ಕಷ್ಟ. ಅಂತಹ ಮನೆಗಳಲ್ಲಿ ಮಗುವೊಂದು ತಾನು ಕೂಡ  ಹಿರಿಯನೆನಿಸಿಕೊಳ್ಳುತ್ತದೆ. ಇಂತಹ ಮಕ್ಕಳು ಬೇಗನೆ ಈ ರೀತಿಯ ಕೆಲಸಗಳಿಗೆ ಮುಂದಾಗುತ್ತಾರೆ. ದೇಶ ಸುತ್ತು, ಕೋಶ ಓದು ಎಂಬ ಗಾದೆಯಂತೆ ಎಷ್ಟೇ ಪುಸ್ತಕಗಳನ್ನು ಓದಿದರೂ ಹಳ್ಳಿ ಹಳ್ಳಿಗಳನ್ನು ಸುತ್ತಿದ ಅನುಭವ ಬೇಕಾಗುತ್ತದೆ. ಇಲ್ಲದೆ ಹೋದರೆ ಥಿಯರಿ ಮಾತ್ರ ಗೊತ್ತಿದ್ದು ಪ್ರಾಕ್ಟಿಕಲ್ ಮರೆತೆ ಹೋಗಿರುತ್ತದೆ. ಮಗುವಿನ ಸಂಪೂರ್ಣ ಕಲಿಕೆಗೆ ಪುಸ್ತಕದ ಬದನೆಕಾಯಿ ಸಾಲದು. ನೋಡಿ ಕಲಿ, ಮಾಡಿ ತಿಳಿ ಎನ್ನುವಂತಹ ತಾನು ಮಾಡಿ ಕಲಿತಂತಹ ಪ್ರಾಯೋಗಿಕ ವಿದ್ಯೆ ಬೇಕು. ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿ ಕೂಡಿ ಹಾಕುವುದನ್ನು ಬಿಟ್ಟು ಹೊರಗಿನ ಪರಿಸರ, ನದಿ, ಬೆಟ್ಟ, ಹುಲ್ಲು, ಮರ,  ಹೂವು,  ಹಣ್ಣು,  ತರಕಾರಿ,  ಪಕ್ಷಿಗಳು,  ಪ್ರಾಣಿಗಳು ಇವುಗಳ ನಡುವೆ ಅವುಗಳನ್ನು ಅರಿತು ಬಾಳುವುದನ್ನು ಕಲಿಸಿ ಕೊಡಲು ನಾವು ಹಿಂದೆ ಮುಂದೆ ನೋಡಬಾರದು. ಪ್ರತಿಯೊಂದು ಮಗುವು ಕೂಡ ಅದರದೇ ಆದಂತಹ ವಿಶೇಷವಾದ ಟ್ಯಾಲೆಂಟ್ ಅನ್ನು ಹೊಂದಿರುತ್ತದೆ. ಇದುವರೆಗೂ ಯಾರು ಮಾಡದೇ ಇರುವಂತಹ ವಿಶೇಷವಾದ ಒಂದು ಕಾರ್ಯವನ್ನು ಮಾಡುವ ವಿಶೇಷವಾದ ಮೆದುಳಿನ ಶಕ್ತಿ ಪ್ರತಿಯೊಬ್ಬ ಮಾನವನಿಗೂ ಇದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರ ಜೊತೆಗೆ ಅದಕ್ಕೆ ನೀರೆರೆದು ಪೋಷಿಸಿ ಬೆಳೆಸಿ ಸಹಕಾರ  ನೀಡಬೇಕು. ಆಗ ಮಾತ್ರ ಹೆಮ್ಮರವಾದ ಸಾಧನೆಯು ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ. ಗಿಡ ಮರಗಳ ಹಾಗೆ ಮಕ್ಕಳಿಗೂ ಕೂಡ ನೀರು ಗೊಬ್ಬರ ಹಾಕಿ ಪ್ರತಿನಿತ್ಯ ಕಾಪಾಡಿ ಪಶುಗಳಿಂದ ದೂರವಿರಿಸಿ ಅಂದವಾಗಿ ಸಾಕಿದರೆ ಮಾತ್ರ ಮುಂದೆ ಉತ್ತಮ ಫಸಲು ಅದರಿಂದ ನಮಗೆ ದೊರೆಯುತ್ತದೆ. ಮಕ್ಕಳ ಬಾಳು ಬಂಗಾರವಾಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಗಾದೆ ಮಾತಿನಂತೆ ಯಾವುದೇ ಒಳ್ಳೆಯ ಬೆಳೆಯನ್ನು ಅದು ಚಿಕ್ಕ ಗಿಡ ಇರುವಾಗಲೇ ಬೆಳೆಸಿ  ಚೆನ್ನಾಗಿ ಸಾಕಿದರೆ ಮಾತ್ರ ಮುಂದೆ ಒಳ್ಳೆಯ ಗಿಡವಾಗಿ ನಮಗೆ ಉಪಕಾರಿ ಆಗುವುದು. ಇಲ್ಲದೇ ಹೋದರೆ ಕಳೆ ಗಿಡದ ಹಾಗೆ ಉದ್ದುದ್ದಕ್ಕೆ ಬೆಳೆದು ಸರಿಯಾದ ಆರೈಕೆಗಳೇ ಇಲ್ಲದೆ ಸತ್ತು ಹೋದಿತು ಅಥವಾ ಉಪಯೋಗಕ್ಕೆ ಬಾರದೆ ಇರಬಹುದು.

ಪ್ರತಿ ಮಗುವೂ ಅಮೂಲ್ಯ ರತ್ನ. ಅದನ್ನು ಬೆಳೆಸುವ ಪೋಷಕರ ಪ್ರಯತ್ನದ ಮುಂದೆ ಅವರ ಉತ್ತಮ ಭವಿಷ್ಯ ಕಾದಿದೆ. ಉತ್ತಮ ಪೋಷಕರು ಸಿಕ್ಕಿದರೆ ಕೈಕಾಲುಗಳು  ಇಲ್ಲದ ಮಗು ಕೂಡ ಜೆಸ್ಸಿಕಾ ಕಾಕ್ಸ್ ಅವರ ಹಾಗೆ ಕಾರು,  ವಿಮಾನ ಓಡಿಸಬಲ್ಲದು. ನೃತ್ಯ ಮಾಡಬಲ್ಲದು, ಕಣ್ಣಿಲ್ಲದ ಮಗುವೂ ಕೂಡ ಟಿವಿಯಲ್ಲಿ ವಾರ್ತೆಗಳನ್ನು ಓದಬಹುದು. ವಿಕಲಚೇತನರೂ  ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರುಗಳಿಸುತ್ತಿರುವ ಇಂತಹ ಕಾಲದಲ್ಲಿ ನಮ್ಮ ಮಕ್ಕಳನ್ನು ಪುಸ್ತಕದ ಹುಳುವಾಗಿಸದೆ ಅವರನ್ನು ಕೂಡ ಯಾವುದಾದರೂ ಒಂದು ದಾರಿಯಲ್ಲಿ ಮುನ್ನಡೆಯುವಂತೆ ಮಾಡಿ, ಅವರ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿ, ಅವರದ್ದೇ ಆದಂತಹ ಸ್ಪೆಷಲ್ ಆದ ಕ್ರಿಯಟಿವಿಟಿಗೆ ಪೋಷಕರೆಲ್ಲ ಸಹಕಾರ ನೀಡುತ್ತಾ ಅವರನ್ನು ಉತ್ತಮತೆಯ ಕಡೆಗೆ ದಾರಿ ತೋರಿ, ಅವರಲ್ಲಿ ಮನುಷ್ಯತ್ವದ ಗುಣಗಳನ್ನು ಸಹಕಾರ,  ಸಹಬಾಳ್ವೆ ಇವುಗಳನ್ನೆಲ್ಲ ಕಳಿಸಿ ಬೆಳೆಸೋಣ ನೀವೇನಂತೀರಿ?
————————————————-


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top