ಅಭಿಜ್ಞಾ ಪಿ.ಎಮ್.ಗೌಡ ಓದಿದ”ಭಾವಾಂಕುರ”ಸಂಕಲನದ ಅವಲೋಕನ

ಪುಸ್ತಕ ಸಂಗಾತಿ

“ಭಾವಾಂಕುರ

ವಿಜಯದಲಿ ಶೋಭಿಸುತ
ಗಜಗಲಿಸಿದ ಕೃತಿಕೋಶ
ನಿಜಪದದ ಸಾಲಿನಲಿ ಭಾವಾಂಕುರ
ಅಜಗವನ ಕೃಪೆಯಿಂದ
ತಜವೀಜು ಮಾಡುತಲಿ
ರಜತಾದ್ರಿ ತೇಜಸ್ಸು ಸಿರಿಯಂಬರ.

  ಶ್ರದ್ಧಾ ಭಕ್ತಿಯೊಳು ಮೇಳೈಸಿದ ಸುಂದರ ಗೀತೆಗಳ ಹೂರಣ ಕವಯಿತ್ರಿ ವಿಜಯ ನಿರ್ಮಲರವರ ಈ ಭಾವಾಂಕುರ..

                         ಯಾವುದೇ ಒಂದು ಕಾವ್ಯವು ಸೃಷ್ಟಿಯಾಗಬೇಕಾದರೆ ಅದಕ್ಕೊಂದು ಪ್ರೇರಣೆ ಅನ್ನೋದು ಇದ್ದೇ ಇರುತ್ತದೆ.ಅದು ಸಂತಸದ ವಿಚಾರವೆ ಆಗಿರಬಹುದು ಅಥವಾ ದುಃಖದ ಎಳೆಗಳೆ ಆಗಿರಬಹುದು.ಒಟ್ಟಾರೆ ನಮ್ಮ ಸುತ್ತಲು ಜರುಗುವ ಹಲವಾರು ಘಟನೆಗಳು ಸಂಗತಿಗಳು ಅಥವಾ ವಿಷಯಗಳು ಈ ಕಾವ್ಯ ರಚನೆಯ ವಸ್ತು ವಿಷಯಗಳಾಗುತ್ತವೆ. ಪ್ರೇರಣೆ ಎಂಬುದು ಹೀಗೆಯೇ ಲಭಿಸುತ್ತದೆ ಎಂದು ಹೇಳಲಾಗದು ಬಾಹ್ಯ ಅಥವಾ ಆಂತರಿಕವಾಗಿಯೂ ಆಗಿರಬಹುದು. ಸಮಾಜದೊಳಗೆ ಸಂಭವಿಸೊ ಘಟನೆಗಳು,ಸಂಗತಿಗಳು,ಸಂಭ್ರಮಾಚರಣೆಗಳು, ಅನಾಹುತಗಳೋ ಯಾವುದೇ ಆಗಿರಬಹುದು ಅವುಗಳಿಗೆ ಕವಿಯು ತನ್ನದೆ ರೀತಿಯಲ್ಲಿ ಭಾವ ತುಂಬಿ ಬರೆಹಗಳನ್ನು ಬರೆಯುವ ಸಾಮರ್ಥ್ಯ ಹೊಂದಿರುತ್ತಾನೆ.ಹಾಗೆಯೇ ಇಲ್ಲಿ ಕವಯಿತ್ರಿ ವಿಜಯ ನಿರ್ಮಲರವರ ಕಾವ್ಯ ರಚನೆಯು ಬಹುಮುಖ್ಯವಾಗಿ ಒಂದು ಪ್ರತಿಭೆಯ ಪರಿಶ್ರಮ ಹಾಗು ಅವರ ಚಾಕಚಕ್ಯತೆಯ ಮೇಲೆ ಬಿಂಬಿತವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಕಲೆ ಎಲ್ಲರಿಗೂ ಸಿಗುವುದಿಲ್ಲ.ಇದೊಂದು ವರವೆಂದೆ ಹೇಳಬಹುದು.

              ಕವಯಿತ್ರಿ ವಿಜಯ ನಿರ್ಮಲರವರು ತಮ್ಮ ಚೊಚ್ಚಲ ಕವನಸಂಕಲನ ಭಾವಾಂಕುರವೆಂಬ ಭಾವನೆಗಳ ಗುಚ್ಛದೊಳಗೆ ಸಮಾಜ, ಪ್ರಕೃತಿ, ಜೀವ ಸಂಕುಲದ ಬಗ್ಗೆ ಕಳಕಳಿ, ತಿಳಿವಳಿಕೆ, ಅಂತಃಕರಣ, ವಾಂಛಲ್ಯ, ಸಂಕಟ,ಸಾಂತ್ವನ, ಸಂದೇಶ, ಸಂತೋಷ, ಸುಖದುಃಖ,ಪ್ರೀತಿ ಪ್ರೇಮ,ಹೀಗೆ ಸಮಾಜದ ನಾನಾ ಸ್ತರಗಳು ಸಮಾಜದಲ್ಲಿ ಜರುಗುವ ಹಲವಾರು ಸಂಗತಿ ,ಘಟನೆಗಳ ಮೇಲೆ ತಮ್ಮ ಬರೆಹದ ಬೆಳಕನ್ನು ಚೆಲ್ಲುತ್ತ ಬೆರೆತು ಭಾವನೆಗಳನ್ನು ಹೊಸೆದು ಓದುಗರಿಗೆ ರಸದೌತಣವನ್ನೆ ಉಣಬಡಿಸಿದ್ದಾರೆ.

    ಕಾವ್ಯ ಅನ್ನುವ ಪದವೆ ಅದ್ಭುತ, ಅನುಪಮ, ಅನುನಯವಾದದ್ದು ಇಂತಹ ಒಂದು ಪದಕ್ಕೆ ಭಾರತೀಯ ಕಾವ್ಯ ಮೀಮಾಂಸಕರಾದ ‘ಆನಂದವರ್ಮ’ನವರು ಸುಂದರವಾದ ವ್ಯಾಖ್ಯಾನವನ್ನು ನೀಡಿದ್ದಾರೆ
    “ಸಹೃದಯ ಹೃದಯಹ್ಲಾದಿ ಶಬ್ಧಾರ್ಥ ಮಯತ್ವಮೇವ ಕಾವ್ಯ ಲಕ್ಷಣಂ”ಎಂದಿದ್ದಾರೆ.

ಅಂದರೆ “ಸಹೃದಯರ ಹೃದಯವನ್ನು ಆಹ್ಲಾದಗೊಳಿಸುವ ಶಬ್ಧಾರ್ಥಗಳಿಂದ ಕೂಡಿರುವುದೆ ಕಾವ್ಯ”ಹಾಗಾಗಿ ಕಾವ್ಯವೆನ್ನುವುದು ಸರ್ವರಿಗೂ ಆಹ್ಲಾದಕತೆಯನ್ನು ಉಂಟು ಮಾಡುವಂತಿರಬೇಕು.ಹಾಗೆ ಅಂತ ವೈಭವದ ಪದಗಳನ್ನು ಸೇರಿಸಿ ಅದ್ಧೂರಿಯಾಗಿ ಮೆರೆಸುವುದಲ್ಲ,ಸೇರಿಸಿದರೂ ಕಾವ್ಯದ ಸಾಲುಗಳಿಗೆ ಎಲ್ಲಿಯೂ ಚ್ಯುತಿ ಬರದಂತಿರಬೇಕು. ಕಾವ್ಯದಲ್ಲಿ ಭಾಷೆಯ ರಚನೆ ಹಾಗೂ ಭಾಷೆಯ ಮೇಲಿನ ಹಿಡಿತವಿದ್ದು ಅದರ ನಾದ, ಅರ್ಥ, ಧ್ವನಿ, ಪದಜೋಡಣೆ, ಲಯ ಮುಂತಾದವು ಸುಸ್ಫುಟವಾಗಿದ್ದರೆ ಅದೆ ಸೊಗಸಾದ ಕಾವ್ಯವಾಗುವುದು.ಹೀಗಾಗಿ ಕಾವ್ಯವೆಂದರೆ ಅದು ಸುಮ್ಮನೆ ಪದ ಜೋಡಣೆಯಾಗಲಿ, ಶಬ್ದಾಡಂಬರವಾಗಲಿ ಅಲ್ಲ.ಭಾವಗಳಿಗೆ ತಕ್ಕಂತೆ ಪದಗಳಿರಬೇಕೆ ಹೊರತು ಆಡಂಬರಕ್ಕಾಗಿ ಶಬ್ಧಗಳ ಬಳಕೆ ಅನಾವಶ್ಯಕವಾಗಿರುತ್ತದೆ.
ಕಾವ್ಯವನ್ನು ಓದುಗ ಸುಲಭವಾಗಿ ಅರ್ಥೈಸಿಕೊಳ್ಳುವಂತಿರಬೇಕು ಅಂತಹ ಕಾವ್ಯ ನಿಜಕ್ಕೂ ಸುಂದರ ಹಾಗು ಅದ್ಭುತ ಎನಿಸುವುದಂತು ಸತ್ಯ..ಈ ನಿಟ್ಟಿನಲ್ಲಿ ಕವಯಿತ್ರಿ ತಮ್ಮ ಕೃತಿಯೊಳಗೆ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಪದಗಳ ಬಳಕೆ ,ಪದಪುಂಜಗಳ ರಚನೆಯ ಜೋಡಣೆಗಳನ್ನು ಅರ್ಥೈಸಿರುವ ಪರಿ ತುಂಬಾ ಚೆನ್ನಾಗಿದೆ. ಯಾವುದೇ ಪ್ರಾಸಕ್ಕೆ ತುತ್ತಾಗಿ ತ್ರಾಸಕ್ಕೆ ಒಳಗಾಗದೆ ಸುಂದರವಾದ ಕವನಗಳನ್ನು ರಚಿಸಿಕೊಟ್ಟಿದಾರೆ.

ಕವಯಿತ್ರಿಯ ಅನುಭವ ಅನುಭಾವಗಳ ಮಿಳಿತ ಈ ಕೃತಿಯಲ್ಲಿ ಮೇಳೈಸುತಿವೆ.ಪ್ರೀತಿ, ಪ್ರೇಮದ ಸಾಫಲ್ಯತೆ ,ಸಾಂಗತ್ಯ, ಸಂಪ್ರೀತಿ, ವಿರಸ, ಸರಸ ,ಭಾವಭರಿತ ,ಭಾವಸ್ಫುರಿತ ಕವನಗಳ ಸಾಲುಗಳು ಅದ್ಭುತ ಅಮೋಘವಾಗಿ ಮೂಡಿಬಂದಿವೆ.ಪ್ರಕೃತಿಯ ಸೌಂದರ್ಯ ,
ಬೆಡುಗು ,ಬಿನ್ನಾಣ ,ಚೈತ್ರದ ಆಗಮನ ಅದರ ವರ್ಣನೆ ,ವೈಯ್ಯಾರಗಳು ವಿಜೃಂಭಿಸಿವೆ.ಉತ್ಸಾಹ, ಉಲ್ಲಾಸ ,ಉದ್ಬೋಧ ,ಪ್ರೀತಿಯ ಉದ್ಭವಗಳ ಎಳೆ ಸೊಗಸೊ ಸೊಗಸು.!ಬಾನಾಡಿಗಳ ಹಾಡು, ಆಟ ,ಬಾನಂಚಿನ ಚುಕ್ಕಿತಾರೆಗಳ ಹೊಳಪು, ವೈಯ್ಯಾರ ,ನಕ್ಕು ನಲಿಸೊ ಹುಣ್ಣಿಮೆಯ ತಂಗದಿರನ ಬೆಳದಿಂಗಳ ಮೈಮಾಟ, ಮನಸೆಳೆಯುವ ಬೆಡಗು ಬಲು ಮನೋಹರ. ಮೈಮನಗಳೆಲ್ಲ ಝಲಕು; ಪ್ರೇಮಿಗಳಿಗೆ ಪುಳಕದ ಬೆಳಕು ನೀಡುತಿರುವ ಚಂದಿರನ ವರ್ಣನೆ ಅಪ್ಯಾಯಮಾನವಾಗಿವೆ.ಮುಸ್ಸಂಜೆಯ
ಕೆಂಬಾರನೊಂದಿಗಿನ ಬಾನಾಡಿಗಳ ಪ್ರಭಾತಪೇರಿ ಅತ್ಯಮೋಘ.ಬರೆಯುವವರಿಗೆ ಸ್ಫೂರ್ತಿಯ ಚಿಲುಮೆ; ಓದುಗರಿಗೆ ಪ್ರೇರಣೆಯ ಒಲುಮೆ.ದೇಹಕ್ಕೆ ತಂಪು ,ಆರೋಗ್ಯಕ್ಕೆ ಕಂಪು ನೀಡೊ ಫಲಭರಿತ ಹಣ್ಣುಗಳ ವರ್ಣನೆ ಬಲು ಶೋಭೆ ತಂದಿವೆ.ಒಂದಾ ಎರಡಾ ಎಲ್ಲಾ ಕ್ಷೇತ್ರಗಳು ಸಮಾಜದ ಎಲ್ಲಾ ಸ್ತರಗಳ ಮೇಲು ಕವಯಿತ್ರಿ ತಮ್ಮದೆ ಆದ ಬರೆಹದ ಹೊಸ ಬೆಳಕನ್ನೆ ಚೆಲ್ಲಿದ್ದಾರೆ.

ಹಾಗೆಯೆ ಕವಯಿತ್ರಿ ತಮ್ಮ ಕವನಸಂಕಲನದ ಕಣಜದೊಳಗೆ ಭಾರಿ ಸಂಗತಿಗಳನ್ನೆ ಅಡಗಿಸಿಟ್ಟು ಉತ್ತಮ ಉಪಮಾನ, ಉಪಮೇಯಗಳೊಂದಿಗೆ ಹಲವಾರು ಕವನಗಳನ್ನು ವರ್ಣಿಸಿದ್ದಾರೆ. ಪ್ರಕೃತಿಯನ್ನು ಹಾಗು ಬದುಕಿನ ಬವಣೆಗಳನ್ನು ಪಾರದರ್ಶಕವಾಗಿ ಹಾಗು ವಿಮರ್ಶಾತ್ಮಕವಾಗಿ ವಿವರಿಸಲು ಕವಿಮನವು ಇಲ್ಲಿ ಭಾವಕೋಶದ ಸಹಾಯವನ್ನು ಪಡೆದುಕೊಂಡಿದೆ.ನೋವು, ನಲಿವು, ದುಃಖ, ದುಮ್ಮಾನ, ತಲ್ಲಣ, ತವಕ ,ಆತುರ ,ಕಾತರ, ಕಾಳಜಿ ,ಆತ್ಮೀಯತೆ ,
ದ್ವಂದ್ವ,ಗುರುಭಕ್ತಿ ,ಸಂತಸ,ಶಿಕ್ಷಣ, ಜ್ಞಾನಜ್ಯೋತಿ,ತಾಯ್ನುಡಿ, ಭಕ್ತಿಭಾವಗಳು ಔಚಿತ್ಯಪೂರ್ಣದಿಂದ ಕೂಡಿರುವುವು. ಹೀಗೆ ಭಾವಾಂಕುರವೆಂಬ ಕಡಲಿನೊಳಗೆ ವಿಫುಲವಾದ ಭಿನ್ನ ಭಾವಗಳು ಮೇಳೈಸುತ್ತ, ಕಾವ್ಯದ ಲಕ್ಷಣಗಳು ಕಣ್ತೆರೆಸಿ ಸಫಲತೆಯ ಹಾದಿಯಲಿ ಸಾಗುತಿರುವುದನ್ನು ನಾವೆಲ್ಲರೂ ನೋಡಬಹುದಾಗಿದೆ.

ಭಾವಾಂಕುರವೆಂಬ ಭಾವಶರಧಿಯೊಳಗೆ ಈಜಾಡಿದಾಗ ಪ್ರತಿಯೊಂದು ಕವನಗಳು ಸಹ ಒಂದು ಮತ್ತೊಂದಕ್ಕಿಂತ ಸೊಗಸಾಗಿ ಮೂಡಿಬಂದಿರುವುದನ್ನು ನೋಡಿ ಮನ ತಂಪಾಯಿತು.ಅದರೊಳಗೆ ಅವಲೋಕಿಸಿದ ಕವನಗಳು ಮನಸೆಳದವು

“ಆಹಾ.! ಮಲ್ಲಿಗೆ”……

ಅಚ್ಚ ಬಿಳುಪು ನಿನ್ನಯ ಬಣ್ಣವೆ
ಹೊರಗೆಲ್ಲ ಸುವಾಸನೆ ಘಮವೆ
ಮನೆ ಹೊರಗೆ ನೀನು ನಿಂತಿರುವೆ
ಮನೆ ಮನಕೆ ಉಲ್ಲಾಸ ತರುವೆ..

   ಮಲ್ಲಿಗೆಯು ಹೂವುಗಳ ರಾಣಿ ಎಂದು ಹೆಸರುವಾಸಿಯಾದ ಹೂವು ಇಂತಹ ಮಲ್ಲಿಗೆಯ ಬಗ್ಗೆ ಅತ್ಯಂತ ಸೊಗಸಾದ ಸಾಲುಗಳನ್ನು ಅರ್ಥಪೂರ್ಣವಾಗಿ ಹೆಣೆದಿರುವರು.ಹಾಗೆಯೆ ಮಲ್ಲಿಗೆ ಮನಸ್ಸನ್ನು ಸಂತೃಪ್ತಿಯೊಂದಿಗೆ ಉಲ್ಲಾಸವನ್ನುಂಟು ಮಾಡುವ ಸಮೃದ್ಧ ಪರಿಮಳವನ್ನು ಹೊಂದಿರುವುದರ ಬಗ್ಗೆ ಚನ್ನಾಗಿ ವಿವರಿಸಿದ್ದಾರೆ.ಮಲ್ಲಿಗೆಯು ಪರಿಮಳ ಭರಿತ ಹಾಗು ಆಕರ್ಷಣೆಯಿಂದ ಕೂಡಿದ್ದು ಎಂತವರು ಅದನ್ನು ಮುಡಿಯಬೇಕು ಅನ್ನುವಷ್ಟು ಮಟ್ಟಿಗೆ ತನ್ನೆಡೆ ಸೆಳೆಯುವುದು.ಇದು ಬಿಳಿ ಬಣ್ಣದಲ್ಲಿ ಕಂಗೊಳಿಸುವ ಚೆಲುವಾದ ಒಲವಿನ ಹೂವಾಗಿರುವುದನ್ನು ತಮ್ಮ ಈ ಕವನದಲ್ಲಿ ಕವಯಿತ್ರಿ ಚೆನ್ನಾಗಿ ಹೇಳಿದ್ದಾರೆ. ಇದನ್ನು ಹೆಚ್ಚು ಮಹಿಳೆಯರು ,ಯುವತಿಯರು ಮುಡಿಯುವರು ಹಾಗೆಯೆ ದೇವರಿಗೂ ಪ್ರಿಯವಾದುದ್ದು.ಅದ್ಭುತ ಪರಿಮಳ ಮತ್ತು ಔಷಧೀಯ ಮೌಲ್ಯವನ್ನು ಹೊಂದಿರುವುದರ ಬಗ್ಗೆ ಹಾಗು ಮನುಜನ ಹುಟ್ಟಿನಿಂದ ಸಾಯುವವರೆಗೂ ಇದನ್ನು ಯಾವ ಯಾವ ರೀತಿಯಲ್ಲಿ ಬಳಸಿಕೊಳ್ಳುವರು ಎಂಬುದನ್ನು ತುಂಬಾ ಚನ್ನಾಗಿ ವಿವರಿಸಿದ್ದಾರೆ..

“ಬಹುಪಯೋಗಿ ಬಾಳೆ”…….

ಸಸ್ಯ ಶ್ಯಾಮಲೆಯ ನಡುವೆ
ಕಂಗೊಳಿಸಿಹ ಕಲ್ಪವೃಕ್ಷವೇ
ಬಲುಪಯೋಗಿ ನೀನು
ಸಕಲ ಕಾರ್ಯಕೆಲ್ಲ ನೀವೇ….

ಬಾಳೆಯು ಬಹುರೂಪಿ ಪ್ರಯೋಜನಕಾರಿ ಎಂಬುದನ್ನು ಕವಯಿತ್ರಿ ತಮ್ಮ ಕವನದಲ್ಲಿ ಸುಂದರವಾಗಿ ವಿವರಿಸಿದ್ದಾರೆ.ಅದರ ಎಲೆಗಳನ್ನು ದೇವರ ಪೂಜೆಗೆ, ಊಟದ ತಟ್ಟೆಯಾಗಿ ಬಳಸುವರು.ಬಾಳೆಹಣ್ಣುಗಳಂತು ರುಚಿಯ ಎರಡು ಪಟ್ಟು ಆರೋಗ್ಯಕ್ಕೆ ಒಳ್ಳೆಯದು. ಬಾಳೆಂದಿಂಡು, ಬಾಳೆಕಾಯಿಯಿಂದಲೂ ಸಾಕಷ್ಟು ರೀತಿಯ ತಿನಿಸು ಮಾಡುವರು .ಬಾಳೆಯು ಚೆನ್ನಾಗಿ ನೆರಳು ಕೂಡಾ ಕೊಡುತ್ತದೆ. ಇದು ಸಸ್ಯ ಶ್ಯಾಮಲೆಯ ನಡುವಲ್ಲೆ ಬೆಳೆಯುವುದು.ಈ ರೀತಿ ಬಹಳಷ್ಟು ಪ್ರಯೋಜನ ಹೊಂದಿರುವುದನ್ನು ಕವಯಿತ್ರಿ ತಿಳಿಸಿದ್ದಾರೆ. ಹೀಗೆ ಬಾಳೆ ಮರ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರುತ್ತದೆ. ಬಾಳೆ ದಿಂಡುಗಳನ್ನು ಶುಭ ಕಾರ್ಯಗಳಿಗೆ ಹೆಚ್ಚಾಗಿ ಬಳಸುವರು ಹೀಗೆ ಈ ವೃಕ್ಷವು ಬಹುಪಯೋಗಿದೆ ಎಂಬುದನ್ನು ಸುಂದರವಾಗಿ ಕವಯಿತ್ರಿ ಪ್ರಸ್ತುತ ಪಡಿಸಿದ್ದಾರೆ.

“ಬಾಲ್ಯದ ಸವಿ ನೆನಪು”……

ಮಂಗನಾಗಿ ಮರ ಹತ್ತಿ ಕಾಯಿಗಳನ್ನು
ಕಿತ್ತು ತಿಂದು ಬೈಸಿಕೊಂಡದ್ದು
ಗೆಳೆಯರಿಗೆಲ್ಲ ಹಂಚಿ ತಿನ್ನುತ ಕುಣಿದ
ಸುಂದರ ದಿನಗಳೆಲ್ಲ ಚೆಂದದ್ದು……

ಜೀವನದ ಅತಿ ಸುಂದರ ಕ್ಷಣ ಯಾವುದಪ್ಪ ಅಂದರೆ ಥಟ್ ಅಂತ ನಮ್ಮ ನೆನಪಿನ ಅಂಗಳದ ಪರದೆಯ ಮೇಲೆ ಹೊಳೆಯೊದೇ ಈ ಬಾಲ್ಯ. ಇದು ಪ್ರತಿಯೊಬ್ಬರ ಜೀವನದ ಆ ಸುಂದರ ಕ್ಷಣಗಳನ್ನು ಎಂದಿಗೂ ಮರೆಯೋಕೆ ಆಗಲ್ಲ.ನಾವು ಆಗ ಕಂಡು ಅನುಭವಿಸಿದ ಆಟಗಳು,ಸಾಹಸಗಳು, ಚೇಷ್ಟೆಗಳು ,ಶೋಧನೆಗಳು ಎಲ್ಲದರಲ್ಲೂ ಹೊಸತನದ ಹೊಸಗಾಳಿ ತಂಪಾಗಿ ಬೀಸುತಿದ್ದವು.ಆಗ ನಮಗೆ ಪ್ರಕೃತಿಯಾಗಿರಲಿ ,
ವ್ಯಕ್ತಿಯಾಗಿರಲಿ, ವಸ್ತುಗಳಾಗಿರಲಿ ಎಲ್ಲವೂ ಕೂಡ ವಿಶಿಷ್ಟ, ವಿಶೇಷ, ವಿನೋದವಾಗಿಯೆ ಕಾಣುತ್ತಿದ್ದೆವು.ಅದರೊಟ್ಟಿಗೆ ಕುಣಿದು ಕುಪ್ಪಳಿಸಿದ ಕ್ಷಣಗಳು. ನಕ್ಕು ನಲಿದ ಸವಿ ಸಮಯ.ಅತ್ತಾಗ ಸಂಭಾಳಿಸಿ ಸಂತೈಸೊ ಅಜ್ಜಿ ,ಅಪ್ಪ ,ಅಮ್ಮ .
ಚೇಷ್ಟೆ ಮಾಡಿದಾಗ ಗದರುವ ಅಪ್ಪ .ಏನನ್ನಾದರು ಸಾಧಿಸಿದ್ದಾಗ ಬೆನ್ನು ತಟ್ಟಿ ಶಹಭಾಷ್ ಹೇಳುತ್ತಿದ್ದ ಗುರುಗಳು. ಹೀಗೆ ಕಳೆದ ಕ್ಷಣಗಳು ಹಾಗಾಗೆ ನನ್ನ ಅಂತಃಪಟಲದೊಳಗೆ ಲಗ್ಗೆ ಇಡುತಿರುತ್ತವೆ.ಇಂತಹ ಸವಿ ನೆನಪುಗಳನ್ನು ಮರೆಯಲು ಸಾಧ್ಯವೆ..?ಆಗಿನ ಆಟಗಳು ಅಬ್ಬಬ್ಬಾ.! ಒಂದೇ ಎರಡೆ. ಬೀದಿ, ಬಯಲು ಎನ್ನದೆ ಆಡುತ್ತಿದ್ದ ಆಟಗಳು.ಚಿನ್ನಿ ದಾಂಡು ,ಲಗೋರಿ ,ಹಾವು ಏಣಿ ,ಚೌಕಾಬಾರ,ಚನ್ನೆಮಣೆಯಾಟ ,ಮರಕೋತಿ ಆಟ ಹೀಗೆ ವಿಸ್ಮಯ ,ವಿನೋದವೆನಿಸುತಿದ್ದವು. ಇಂತಹ ಬಾಲ್ಯದಾಟದ ಬಗೆಗಿನ ವರ್ಣನೆಯು ಈ ನಿಜಕ್ಕೂ ಸೊಗಸಾಗಿದೆ..

“ಪ್ರವಾಹ”…..

ಜೀವಭಯದಲಿ ಬದುಕೆಲ್ಲ ನರಕವೆ
ವರುಣದೇವ ದಯೆ ಬಾರದೇನು
ತೋರು ಕೊಂಚ ಕರುಣೆ ಜೀವಗಳಿಗೆ
ಇನ್ನಷ್ಟು ಸಾವು ನೋಡಬೇಕೇನು…

     ಪ್ರವಾಹ ಉಂಟಾದಾಗ ಅನುಭವಿಸಿದ ನೋವು, ಸಂಕಟಗಳು ಅವುಗಳಿಂದಾದ ದುಷ್ಪರಿಣಾಮಗಳ ಬಗ್ಗೆ ಕವಯಿತ್ರಿ ಈ ಕವನದಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.ನದಿಯ ನೀರು ಅದರ ಸುತ್ತಲಿನ ಭೂಮಿಯ ಮೇಲೆ ಉಕ್ಕಿ ಹರಿಯುವಾಗ ಪ್ರವಾಹ ಸಂಭವಿಸುವುದನ್ನು ಚೆಂದವಾಗಿ ಚಿತ್ರಿಸಿದ್ದಾರೆ.ಇದಕ್ಕೆ ಕಾರಣವಾದದ್ದು ಅತಿ ಹೆಚ್ಚು ಮಳೆ.ಏಕೆಂದರೆ ಮಳೆ ನೀರು ಕೊಚ್ಚಿ ಪ್ರವಾಹದಂತೆ ಹರಿಯುವಾಗ ಮಣ್ಣು ಹೆಚ್ಚು ನೀರನ್ನು ಹಿಡಿದಿಟ್ಟು ಕೊಳ್ಳಲು ಸಾಧ್ಯವಾಗದೆ ಜೀವ ಭಯ ಉಂಟಾಗುವ ಸಂದರ್ಭಗಳು ಹೆಚ್ಚಾಗಿವೆ ಎಂಬುದನ್ನು ಸುಂದರವಾಗಿ ವಿವರಿಸಿದ್ದಾರೆ...

“ಭೂಮಿ ತೂಕದವಳು ಹೆಣ್ಣು”….

ಬಾಳಿಗೆ ನವಚೈತನ್ಯ ತುಂಬಿದ ಸ್ಫೂರ್ತಿ ನೀ
ಬಾಳಬಂಡಿಗೆ ಜೊತೆಯಾದ ಸಂಗಾತಿ
ಭಾವನೆಗಳಿಗೆ ಬಾರಿಬೆಲೆಯಿತ್ತ ಭಾವ ಜೀವಿ ನೀ
ಭೂಮಿ ತೂಕದವಳು ಕ್ಷಮಯಾ ಧರಿತ್ರಿ…

ಹೆಣ್ಣು ಸಂಸಾರದ ಕಣ್ಣು.ಹೆಣ್ಣೆಂದರೆ ಮನೆಯ ಬೆಳಕು ಮನೆಗೆ ಸೆಳಕು..ಇವಳು ಚೈತನ್ಯದ ಚಿಲುಮೆ.ಭರವಸೆಗಳ ಒಡತಿ. ಕ್ಷಮಯಾ ಧರಿತ್ರಿಯಾಗಿ ನಡೆಯುತಿಹಳು.ಪ್ರತಿಯೊಂದು ಅಂದರೆ ನೋವು ನಲಿವು,ಸಂಕಟ ,ಹಿಂಸೆ, ಸಮಸ್ಯೆಗಳನ್ನೂ ಸಹಿಸಿಕೊಂಡು ಸಾಗುವಳು ತಾನು ಹಸಿದು ತನ್ನ ಕುಟುಂಬಕ್ಕೆ ಆಸರೆಯಾಗುತ್ತಿರುವ ಮಹಾನ್ ದೇವತೆ ಇವಳು.
ಗಂಡನ ಹೆಗಲಿಗೆ ಹೆಗಲಾಗಿ ಅವನಿಗೆ ಸಾರಥಿಯಾಗಿ ಮುನ್ನಡೆಸುವಳು.ತನ್ನೆಲ್ಲ ಕಷ್ಟಗಳನ್ನು ಬಚ್ಚಿಟ್ಟುಕೊಂಡು ನಗುವಿನ ಮುಖವಾಡ ಧರಿಸಿ ಬದುಕುತ್ತಿರುವ ಈ ಹೆಣ್ಣು. ನಿಜಕ್ಕೂ ಭೂಮಿ ತೂಕದ ಹೆಣ್ಣಿವಳು.ಈ ಕವನವನ್ನು ನಿಜ ಅಮೋಘವಾಗಿ ವರ್ಣಿಸಿದ್ದಾರೆ..

ಹೀಗೆ ಕವಯಿತ್ರಿಯ ಕೃತಿ ಕಣಜದೊಳಗೆ ಸರಿ ಸುಮಾರು ೮೦ ಕವನಗಳು ಇದ್ದು ಅವು ಒಂದಕ್ಕೊಂದು ವಿಭಿನ್ನತೆಯಿಂದ ಕೂಡಿರುವುದು ಕಂಡು ಬಂದಿವೆ.ಸಂಭಾಷಣೆ ,ಸಂಪ್ರೀತಿಯ
ಸಂವೇದನೆ ,ಸಾಂಗತ್ಯದ ಸಿಂಚನ, ನಂಬಿಕೆ ,ಬಂಧ ಅನುಬಂಧಗಳು ಹಾಗೆಯೇ ವಿಶ್ವಾಸಗಳ ಮೆಟ್ಟಿಲತ್ತಿ ಕಾರ್ಯತತ್ಪರತೆಯೊಳಗೆ ಸತ್ಯದ ಪರಾಕಾಷ್ಟೆಯನ್ನು ವಿಜೃಂಭಿಸಿದ ಬಗ್ಗೆ ಸೊಗಸಾಗಿದೆ. ಸಮಯ,ಚೆಲುವು, ಬೆಳಗಿನ ಸೂರ್ಯೋದಯದ ಅದ್ಭುತ ದೃಶ್ಯಾವಳಿಗಳು ಬಹಳ ಸುಂದರವಾಗಿ ಮೂಡಿಬಂದಿವೆ. ಇಲ್ಲಿ ಕವಯತ್ರಿಯ ಚಾಕಚಕ್ಯತೆ ಸಹನೆ, ಪದಪುಂಜಗಳ ಬಳಕೆ ಭಾಷೆಯ ಹಿಡಿತ ಎಲ್ಲವೂ ತುಂಬಾ ಲಾಲಿತ್ಯಪೂರ್ಣಗಿದೆ.
ಕವಯಿತ್ರಿಯ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಗಳಲ್ಲಿ ಮತ್ತಷ್ಟು ವಿಷಯವಸ್ತುವಿರಲಿ.ಹೊಸತನವಿರಲಿ ಹಾಗೆಯೆ ಸೃಜನಶೀಲತೆಯಿಂದ ಕೂಡಿರಲಿ ಎಂಬುದು ನನ್ನ ಆಶಯ..

             ಈ ಒಂದು ಕೃತಿಗೆ ಅಮೋಘವಾಗಿ ಮಧುಕೇಶವ ಭಾಗ್ವತ್  ಸರ್ ತುಂಬಾ ಸುಂದರವಾಗಿ ಮುನ್ನುಡಿಯನ್ನು ಬರೆದಿರುವರು. ಹಾಗೆಯೆ ಈ ಕೃತಿಗೆ ಬೆನ್ನುಡಿಯನ್ನು ಶ್ರೀಮತಿ ಶೋಭ ಹರಿಪ್ರಸಾದ್ ಮೇಡಮ್ ಹಾಗು ಈ ಕೃತಿಗೆ ಶುಭ ನುಡಿಯನ್ನು ಶ್ರೀಕಾಂತ ಪತ್ರೆಮರ ಸರ್ ಹಾಗು ಹೊನ್ನುಡಿ  ಶ್ರೀ ಈಶ್ವರ್ ಸಂಪಗಾವಿ ಸರ್ ರವರು ಬಹಳ ಸೊಗಸಾಗಿ ಬರೆದಿರುವರು.

   ಕವಯತ್ರಿರವರ ಕವನಸಂಕಲನದಲ್ಲಿನ ಕವನಗಳ ಸಾರ ಪ್ರತಿ ಓದುಗನಿಗೂ ಆಸಕ್ತಿ ಕೆರಳಿಸುತ್ತ ಆಶಾವಾದದ ಭರವಸೆಯನ್ನು ಮೂಡಿಸಿರುವುದನ್ನು ಕಾಣಬಹುದಾಗಿದೆ.

ಬೇಸರಿಕೆಯ ಕತ್ತಲನ್ನು ಹೊಡೆದೋಡಿಸಿ ಸಂತಸದ ಜ್ಯೋತಿಯನ್ನು ಹತ್ತಿಸುತ ಶುಭ್ರಭಾವದ ಬೆಳಕನ್ನು ಚೆಲ್ಲುವುದಕ್ಕೆ ಅನುವು ಮಾಡಿಕೊಟ್ಟಿರುವುದನ್ನು ನೋಡಬಹುದಾಗಿದೆ. ಇವರ ಕವನಗಳನ್ನು ಅರ್ಥಮಾಡಿಕೊಂಡು ಓದಿದಾಗ ಮನಸ್ಸಿಗೆ ಉಲ್ಲಾಸ ಮೂಡಿದಂತು ಸತ್ಯ. ಹೀಗೆಯೇ ಇವರ ಸಾಹಿತ್ಯದ ದಿಬ್ಬಣ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿ ಹಾಗೆಯೆ ಇನ್ನಷ್ಟು ಸಾರಯುಕ್ತತೆಯಿಂದ ಸದೃಢವಾಗಿ ಸಾಗುತ್ತ, ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ. ಒಂದು ಚೆಂದದ ಕೃತಿ ಓದುಗರ ಕೈ ಸೇರಲು ಸಿದ್ಧವಾಗಿದೆ.ಎಲ್ಲರೂ ಈ ಕೃತಿಯನ್ನು ಕೊಂಡು ಓದಿರಿ ಎಂದು ಕೇಳಿಕೊಳ್ಳುತ್ತ ನಿಮಗೆ ಈ ಮುಖೇನ ಶುಭ ಹಾರೈಕೆಗಳು…



ಅಭಿಜ್ಞಾ .ಪಿ.ಎಮ್.ಗೌಡ

One thought on “ಅಭಿಜ್ಞಾ ಪಿ.ಎಮ್.ಗೌಡ ಓದಿದ”ಭಾವಾಂಕುರ”ಸಂಕಲನದ ಅವಲೋಕನ

  1. ಅಬ್ಬ ಎಷ್ಟು ವಿವರವಾಗಿ ವಿಸ್ತಾರವಾಗಿ ತಾಳ್ಮೆಯಿಂದ ಒಳಗೊಕ್ಕು ವಿಶ್ಲೇಷಣೆ ಮಾಡಿದ್ದೀರಿ ಮೇಡಂ

Leave a Reply

Back To Top