ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ನಿರಂಜನಮೂರ್ತಿ ಟಿ ಕೃತಿ
‘ಕಾಮನ ಬಿಲ್ಲು’
ಕನಸು ಭಾವನೆಗಳ ವೃತ್ತದಲ್ಲಿ ಪ್ರೀತಿ ಪ್ರೇಮದ್ದೇ ಕಾರುಬಾರು..!
ಕಾಮನ ಬಿಲ್ಲು ನಿರಂಜನಮೂರ್ತಿ ಟಿ. ಇವರ ೨ನೇ ಕವನ ಸಂಕಲನ. ಮೊದಲನೆಯದು ಬೆಳಕು ಮೂಡಿತು ಕಾವ್ಯದ ಬೆಳಕು ಚೆಲ್ಲಿದೆ. ಇವರು ಅರಸೀಕೆರೆ ತಾ. ಗಂಡಸಿ ಹೋಬಳಿ ಮುದುಡಿ ಅಂಚೆ ಬಿಸಲೇಹಳ್ಳಿಯವರು ವೃತ್ತಿಯಲ್ಲಿ ಶಾಲಾ ಶಿಕ್ಷಕರು. ಇವರ ಪರಿಚಯ ನನಗಿರಲಿಲ್ಲ. ಹೀಗೊಂದು ದಿನ ಇವರಿಂದ ಪೋನ್ ಬಂತು. ಸಾರ್ ನನ್ನದೊಂದು ಹೊಸ ಕವನ ಸಂಕಲಕ್ಕೆ ತಾವು ಮುನ್ನುಡಿ ಬರೆದುಕೊಡಬೇಕು. ಹಾಸನಕ್ಕೆ ಬರುತ್ತಿದ್ದೇನೆ. ಎಲ್ಲಿ ಸಿಕ್ತಿರಾ ಎಂದರು. ಹಾರ್ಟ್ ಆಫ್ ದಿ ಹಾಸನ್ ಮಹಾರಾಜ್ ಪಾರ್ಕ್ ಬಳಿ ಭೇಟಿಯಾಗೋಣ ಬನ್ನಿ ಎಂದೆ. ಬಂದರು. ಐವತ್ತು ಕವಿತೆಗಳ ಡಿಟಿಪಿ ಪ್ರತಿ ಕೊಟ್ಟರು. ಜೊತೆಗೆ ಕಾಮನಬಿಲ್ಲು ಕವನ ಸಂಕಲನ ಕೊಟ್ಟರು. ತದನಂತರದಲ್ಲಿ ಸಾರ್, ಮುನ್ನುಡಿ ರೆಡಿ ಆಯ್ತಾ ಎಂದು ಒಂದೆರೆಡು ಕರೆಗಳು ಬಂದವು. ಮೂರನೇ ಕರೆ ಸಾರ್, ನಾಳೆ ಹಾಸನಕ್ಕೆ ಬರುತ್ತಿದ್ದೇನೆ.. ಮಾತಿನ ಮರ್ಮ ಅರ್ಥವಾಯಿತು. ತರಾತುರಿಯಲ್ಲಿ ಕಣ್ಣಾಯಿಸಿ ಮುನ್ನುಡಿ ಬರೆದುಕೊಟ್ಟು ಅವರ ಕಾಮನಬಿಲ್ಲು ಕೈಗೆತ್ತಿಕೊಂಡೆ. ಇಲ್ಲೂ ಐವತ್ತು ಕವಿತೆಗಳಿವೆ. ಕಥೆಗಾರರು ದ್ವಾರನಕುಂಟೆ ಪಾಪಣ್ಣ ಅವರು ಬರೆದಂತೆ ಕಾಮನಬಿಲ್ಲು ಹೆಸರೇ ಒಂದು ಸಾಂಕೇತಿಕ ರೂಪಕ. ಮಳೆ ಬಂದು ನಿಂತ ಕೆಲ ಸಮಯದಲ್ಲಿ ಮೂಡಣದಲಿ ಮೂಡುವ ವರ್ಣರಂಜಿತ ಅರ್ಧಚಕ್ರಾಕಾರದ ಬಿಂಬವೇ ಮಳೆಯ ಅನಾವರಣದ ದ್ಯೋತಕ ಚಿಹ್ನೆ
ಕನಸು ಭಾವನೆಗಳ ವೃತ್ತದಲ್ಲಿ
ಪ್ರೀತಿ ಪ್ರೇಮದ್ದೇ ಕಾರುಬಾರು..
ಎಲ್ಲವೂ ನಂಬಿಕೆ ಎಂಬ ವೃತ್ತದಲ್ಲಿಯೇ
ಸುತ್ತುತ್ತಿರುತ್ತದೆ ಜಗತ್ತಿನ ಒಡಲೊಳಗೆ
ಸಂಕಲನದ ಮೊದಲ ಕವಿತೆ
ಜಗತ್ತಿನ ಒಡಲೊಳಗೆ..ಪ್ರೇಮದ ಸುತ್ತಾ ಗಿರಕಿ ಹೊಡೆದಿದೆ. ಪ್ರೇಮದ ಯಾನ ಜೀವನದ ನಿರಂತರ ಪಯಣ. ಕನಸುಗಳ ಭಾವನಾ ಲೋಕದಲ್ಲಿ ಪ್ರೀತಿಯು ಆಧಾರಸ್ಥಂಭವಾಗಿ ಪರಸ್ಪರ ನಂಬಿಕೆಯು ಪ್ರಧಾನ ಭೂಮಿಕೆಯಾಗಿದೆ ಎಂಬುದನ್ನು ಕವಿತೆ ಬಿಂಬಿಸಿದೆ.
ಗೊತ್ತಿಲ್ಲ ದಾರಿಯಲ್ಲಿ ಮುಳ್ಳುಗಂಟೆಗಳಿವೆಯೆಂದು
ಚುಚ್ಚುತ್ತದೆ ಹಾರಿದರೆ ಜೇನು ಕಚ್ಚುತ್ತದೆ
ಬದುಕಿನ ಪಯಣದಲ್ಲಿ ಮುಳ್ಳುಗಂಟೆಗಳು ಎದುರಾಗುತ್ತವೆ. ವೈಮನಸ್ಸುಗಳೆಂಬ ಜೇನುಗಳು ಕಚ್ಚುತ್ತವೆ. ಈ ಅಡೆತಡೆ ದಾಟಿ ಸುಂದರ ಬದುಕನ್ನು ತನ್ನದಾಗಿಸಿಕೊಳ್ಳುವುದು ಅಷ್ಟು ಸುಲಭವೇ.!
ಏಳು ಸುತ್ತುಗಳ ಬೆಟ್ಟಗಳನ್ನು ಹತ್ತಬೇಕು
ಇಳಿಯಬೇಕು ನಿಧಾನವಾಗಿ ಈ ಆವೃತ್ತಿಯಲ್ಲಿ..
ಕಷ್ಟನಷ್ಟಗಳ ಬೆಟ್ಟ ಏರಬೇಕು. ಬದುಕು ಜೈಸಬೇಕು. ಅನೇಕ ಏಳುಬೀಳುಗಳ ಕೋಟೆ ಕೊತ್ತಲಗಳನ್ನು ದಾಟಿ ಸುತ್ತಲ ಸಂಸ್ಕೃತಿ ಪರಿಸರಕ್ಕೆ ಹೊಂದಿಕೊಂಡು ಬದುಕು ನಡೆಸಬೇಕು. ವೃತ್ತಾಕಾರದ ಭೂಮಿಯಂತೆ ಈ ಬದುಕು. ಆ ಪರಿಧಿಯೊಳಗೆ ಮೇಲೇ ಹೋದವರು ಕೆಳಗೆ ಇಳಿಯಬೇಕು ಹಾಗೆಯೇ ಮೇಲೇ ಹೋಗುವ ಪ್ರಯತ್ನವು ಜೀವ ಜಗತ್ತಿನಲ್ಲಿ ನಿರಂತರ ಪ್ರಕಿಯೇ ಎಂಬುದನ್ನು ಕವಿತೆ ನಿರೂಪಿಸಿದೆ.
ಗಂಟಲು ಒಣಗಿದೆ ಕವಿತೆ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳ ನೆನಪಿಸಿದೆ. ಬಾಲ್ಯದಲ್ಲಿ ನಾವು ಕಾಣುತ್ತಿದ್ದ ಮನೆ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಹೊಲಗದ್ದೆಗಳಲ್ಲಿ ಭತ್ತ ರಾಗಿ ಬಡಿಯುವಾಗ ಹಾರಿ ಬರುತ್ತಿದ್ದ ಗುಬ್ಬಚ್ಚಿಗಳು ಇಂದು ಕಾಣೆಯಾಗುತ್ತಿವೆ.
ನಾನೊಂದು ಗುಬ್ಬಿ ಮರಿಯು
ಮನೆ ಮುಂದೆ ಹಾರಿ ಬಂದೆ
ಹಾರಿ ಬರುವಾಗ ನನ್ನ ಗಂಟಲು ಒಣಗಿದೆ
ಗಂಟಲು ಒಣಗಿದೆ ನೀರು ಇಡಿ ಕುಡಿಯಲು..
ಬೇಸಿಗೆಯ ದಿನಗಳಲ್ಲಿ ನೀರಿಗಾಗಿ ಮನುಜ ಪರಿತಪಿಸುಂತೆ ಪ್ರಾಣಿಪಕ್ಷಿಗಳು ನೀರಿಗಾಗಿ ಅಲೆಡಾಡುತ್ತವೆ. ನಮ್ಮ ಹಾಗೆ ಅವುಗಳಿಗೂ ಗಂಟಲು ಒಣಗಿದೆ. ಕುಡಿಯಲು ನೀರು ಇಡಿ ಎಂದು ಕವಿ ಕಾಳಜಿ ವ್ಯಕ್ತಪಡಿಸಿದ್ದಾರೆ. ಕೆಲವು ಪಕ್ಷಿಪ್ರಿಯರು ಮನೆಯ ಮೇಲ್ಛಾವಣಿಯಲ್ಲಿ ನೀರು ಇಡುವುದು ನೋಡಿದ್ದೇನೆ.
ಇಂದು ಮೊಬೈಲ್ ಕರೆಗಳಲ್ಲಿ ಮುಳುಗಿ ಮನೆ ಮಾತುಕತೆ ದೂರವಾಗಿ ಸಂಬಂಧಗಳು ಹಳಸಿಕೊಳ್ಳುತ್ತಿವುದನ್ನು ಚಿತ್ರಿಸಿದೆ ಸಂಬಂಧಗಳು ಕವಿತೆ.
ಲ್ಯಾಪ್ ಟಾಪ್ ಇಂಟರ್‌ನೆಟ್ ಮೊಬೈಲ್‌ಗಳ ನಡುವೆ
ಕುಳಿತು ಮಾತನಾಡುವ ಸಂಯಮ ಕಾಣದಾಗಿದೆ..
ನಮ್ಮ ಬಾಲ್ಯದ ದಿನಗಳಲ್ಲಿ ಇದ್ಯಾವುದು ಇರಲಿಲ್ಲ. ಎಲ್ಲಾ ನೇರ ಮಾತುಕತೆ. ಮನೆಯಲ್ಲಿ ಸಾವು ಘಟಿಸಿದ್ದರೂ ಊರಿಗೆ ಹೋಗಿ ಬಂಧುಬಳಗಕ್ಕೆ ತಿಳಿಸಿಬರಬೇಕಿತ್ತು. ಇಂಟರ್‌ನೆಟ್ ಜಗತ್ತು ನಮ್ಮನ್ನು ಮುಖಾಮುಖಿ ಎದುರಿಗೆ ತಂದಿದೆ ನಿಜ. ಆದರೆ ಭಾವನೆಗಳಿಂದ ದೂರವಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಅಜ್ಜ ಅಜ್ಜಿ ಇದ್ದ ಆ ಒಂದು ಕಾಲವು
ಹೆದರಿಕೆ ನಡುವೆ ಭಯ ಭಕ್ತಿ
ಕುಟುಂಬದೊಳಗೆ ಮನೆ ಮಾಡಿತ್ತು
ಜೊತೆಯಲ್ಲಿ ಕೂತು ಮಾತಾಡಿ ಉಂಡು
ಏಳುವ ಪರಿಪಾಠ ಸಂಬಂಧಗಳ ಹಳಿ ಬೆಸೆಯುತ್ತಿತ್ತು.
ಯಾವ ಆಧುನಿಕ ಸಂಪರ್ಕ ವ್ಯವಸ್ಥೆ ಇಲ್ಲದ ನಮ್ಮ ಪೂರ್ವದಲ್ಲಿ ಗ್ರಾಮೀಣ ಭಾಗದ ಜನರು ಹೇಗೆ ಒಟ್ಟುಗೂಡಿ ಜೀವನ ಸಾಗಿಸುತ್ತಿದ್ದರು? .ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸ್ಫಂಧಿಸುತ್ತಿದ್ದರು. ಹಳ್ಳಿಗಳಲ್ಲಿ ಬಡತನ ಇತ್ತು ನಿಜ. ಆದರೆ ಪ್ರೀತಿ ಸ್ನೇಹಕ್ಕೆ ಬಡತನವಿರಲಿಲ್ಲ. ಒಟ್ಟಾರೆ ಕವಿ ಒಟ್ಟು ಬದುಕಿನ ಗುಟ್ಟನ್ನು ತೆರೆದಿಟ್ಟಿದ್ದಾರೆ ಪುಟ್ಟ ಕವಿತೆಯಲ್ಲಿ. ಕವಿ ಕುವೆಂಪುರವರ ನೇಗಿಲ ಯೋಗಿ ಕವಿತೆಯನ್ನು ನೆನಪಿಸುವ ಉಳುವ ಯೋಗಿಯ ನೋಡಲ್ಲಿ ಕವಿತೆ ರೈತನ ನಿಷ್ಕಾಮ ಕರ್ಮವನ್ನು ಚಿತ್ರಿಸಿದೆ.
ಹಗಲಿರುಳೆನ್ನದೆ ದುಡಿಯುತಿಹ
ಬೆವರ ಹರಿಸಿ ಅನ್ನ ನೀಡುವ
ಕಾಯಕಯೋಗಿ ಅನ್ನದಾತ..
ಕುವೆಂಪು ಪ್ರಭಾವ ಇರುವ ಈ ಕವಿತೆ ಇನ್ನೂ ಕುಶಲತೆ ಸಾಧಿಸಬೇಕಿದೆ.
ಅಂಕು ಡೊಂಕು ಮೊದಲು ನಮ್ಮಲ್ಲಿ ಹುಡುಕಬೇಕು
ತನ್ನತನವ ಗಟ್ಟಿಗೊಳಿಸುತ್ತಾ
ತಾನು ತನ್ನದಲ್ಲಿ ಗಟ್ಟಿಗೊಳ್ಳಬೇಕೆಂಬ ಕವಿಯ ಅಂತರಂಗ ತುಡಿಯುತ್ತಿದೆ. ಈ ದಿಶೆಯಲ್ಲಿ ಅವರ ಪ್ರಯತ್ನವೂ ಸಾಗಿದೆ. ಈ ಪ್ರಯತ್ನದಲ್ಲಿ ಇನ್ನೂ ಪಕ್ವತೆ ಸಾಧಿಸಬೇಕಿದೆ.
ಜೀವ ಗಟ್ಟಿಯಾಗಿದ್ದಾಗ ಅದೆಷ್ಟು
ಜನಕ್ಕೆ ಊರುಗೋಲಾಗಿದ್ದ ನಮ್ಮಜ್ಜ
ಜೀವ ಗಟ್ಟಿಯಾಗಿದ್ದಾಗ ನಮ್ಮಜ್ಜ ಅದೆಷ್ಟು ಮಂದಿಗೆ ಊರುಗೋಲಾಗಿದ್ದರು. ಈಗ ವಯಸ್ಸಾದ ಅಜ್ಜನಿಗೆ ಬೇಕಿದೆ ಮಕ್ಕಳ ಮೊಮ್ಮಕ್ಕಳು ಪ್ರೀತಿ ಅಕ್ಕರೆಯ ಚಿಕ್ಕ ಊರುಗೋಲು ಎಂದು ಕವಿ ವ್ಯಕ್ತಪಡಿಸುವ ಆಶಯ ಸಾರ್ವತ್ರಿಕ ಭಾವನೆಯಾಗಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ವಯಸ್ಸಾದ ತಂದೆ ತಾಯಿ ಅಜ್ಜ ಅಜ್ಜಿಯರನ್ನು ನೋಡಿಕೊಳ್ಳುವ ಪ್ರೀತಿ ಅಕ್ಕರೆ ಬೆಳಸಿಕೊಳ್ಳಬೇಕಿದೆ. ಸಂಕಲನದಲ್ಲಿ ಯುಗಾದಿ ಕರೋನ ಕುರಿತ್ತಾಗಿಯೂ ಎರಡೆರೆಡು ಕವಿತೆಗಳಿವೆ. ಯುಗಾಗಿ ಹಬ್ಬ ಸಡಗರ ಸಂಭ್ರಮ ತಂದು ಮತ್ತೆ ಮತ್ತೆ ಬರಲಿ ಎಂದು ಆಶಿಸಿದರೆ ಕರೋನ ಕರಾಳ ದಿನಗಳು ಮತ್ತೆಂದಿಗೂ ಬಾರದಿರಲಿ ಎಂಬ ಭಯ ಭೀತಿಯೂ ಅಭಿವ್ಯಕ್ತವಾಗಿದೆ. ಸಂಕಲನದಲ್ಲಿ ಕೆಲ ಉತ್ತಮ ಕವಿತೆಗಳ ನಡುವೆಯೂ ವಾಚಾಳಿತನದಿಂದ ಕೂಡಿದ ಕವಿತೆಗಳು ಸಾಕಷ್ಟಿವೆ. ಕವಿತೆಯನ್ನು ಸದಾ ಕನವರಿಸುವ ನಿರಂಜನಮೂರ್ತಿ ಉತ್ತಮ ಕವಿಯಾಗಿ ಬೆಳೆಯಲಿ, ತಲೆ ಎತ್ತಿ ಅವರ ಕವಿತೆಗಳು ನಿಲ್ಲಲಿ ಎಂದು ಆಶಿಸುತ್ತೇನೆ.
ಸಾಧನೆಯ ಹಾದಿಗೆ ಶ್ರದ್ಧೆಯಿರಲಿ ತಲೆ ತಗ್ಗಿಸಿ ಓಡುತಿರೆ
ಮುಂದೊಂದು ದಿನ ತಲೆ ಎತ್ತುವಂತೆ ಮಾಡುವುದು
ಗೊರೂರು ಅನಂತರಾಜು,