ಲಘು ಬಗೆ
ಪಾರ್ವತಿ ಜಗದೀಶ್
ಜನರಮೆಚ್ಚಿಸಲಾಗದು
[5:29 pm, 16/04/2023] Parvathi Jagadish: ಎಲ್ಲರ ಜೊತೆಗೆ ನಗುತ್ತಾ ಮಾತಾಡಿದ ಮಾತ್ರಕ್ಕೆ ನಮ್ಮೊಳಗೇ ನೋವಿಲ್ಲ ಎಂದರ್ಥವಾ? ಅಲ್ಲ, ನಮ್ಮೊಳಗಿನ ಕದನವನ್ನು ಮರೆಮಾಚಲು ಇರುವ ದಾರಿ ನಗುವೊಂದೇ. ಅದೆಷ್ಟು ಬದಲಾವಣೆ ಅಲ್ವಾ? ಚಿಕ್ಕವರಿದ್ದಾಗ ಅಳುವಿಗೂ, ನಗುವಿಗೂ ಕಾರಣವೇ ಇರುತ್ತಿರಲಿಲ್ಲ ಸುಖಾಸುಮ್ಮನೆ ಅತ್ತದ್ದು, ನಕ್ಕದ್ದು ಇದೆ. ಆದ್ರೇ, ಈಗ ನಗುವುದಕ್ಕೂ, ಅಳುವುದಕ್ಕೂ ಸ್ವಾತಂತ್ರವೇ ಇಲ್ಲ. ನಕ್ಕರೆ ಅವಳಲ್ಲಿ ಯಾವ ನೋವಿಲ್ಲ ಎಂದರೆ, ಅತ್ತರೆ ನಾಟಕ ಅನ್ನುವರು. ಹೇಗಿದ್ದರೂ ಕಷ್ಟ ಈ ಬದುಕು.
ಜನರ ಗಮನ ಸೆಳೆಯಲು ಬದುಕುತ್ತಿಲ್ಲವಾದರೂ, ಸಮಾಜದ ಕಟುನುಡಿಗಳಿಗೆ ಹೂಂಗುಟ್ಟಲೇ ಬೇಕು. ಕಾರಣ?ಸಮಾಜದ ಮದ್ಯದಲ್ಲಿ ನಾವಿರುವುದಕ್ಕೋ? ಇಲ್ಲವೇ ನಮ್ಮ ಸುತ್ತಲೂ ಇರುವ ವಾಸ್ತವಿಕತೆಗೋ ತಿಳಿಯದು.
ಒಂದು ಪರ್ವತಕ್ಕಿಂತಲೂ ಮತ್ತೊಂದು ದೊಡ್ಡದು ಹಾಗೆಯೇ ಒಬ್ಬೊಬ್ಬರ ಅಭಿಪ್ರಾಯಗಳೂ ಅಷ್ಟೇ. ಎಷ್ಟೋ ಬಾರಿ ಅಂದುಕೊಳ್ಳುತ್ತೇನೆ ಇರುವ ಅಲ್ಪ ಆಯುಷ್ಯವನ್ನು ಯಾರಾದ್ದೋ ಕಟುನುಡಿಗಳಿಗೆ ಹೆದರಿ, ನಮ್ಮ ಸುತ್ತ ನಾವೇ ಚೌಕಟ್ಟು ರೂಪಿಸಿಕೊಂಡು ಬದುಕೋದು ಎಷ್ಟು ಸರಿ?ನಮ್ಮ ಬದುಕನ್ನು ಯಾರಾದ್ದೋ ಅಭಿಪ್ರಾಯಕ್ಕೆ ಮೀಸಲಿಡೊದು ಯಾಕೆ?
ನಮ್ಮ ಜೀವನ ಪಯಣದ ಅಂತ್ಯ ಗೊತ್ತಿಲ್ಲ ಶುರುವಂತೂ ಎಂದೋ ಆಗಿದೆ. ಮದ್ಯದಲ್ಲಿ ನಿದ್ದೆಯಲ್ಲಿ ಕಳೆದ ರಾತ್ರಿಗಳೇ ಅರ್ಧಪಾಲು ಇನ್ನುಳಿದ ಬದುಕನ್ನು ನಮ್ಮಿಷ್ಟದಂತೆ ಬದುಕೋದು ಬಿಟ್ಟು ಮತ್ತೊಬ್ಬರ ಅಂತೆ, ಕಂತೆ ನುಡಿಗಳಿಗೆ ಹೆದರಿ ಬದುಕು ನೆಡಿಸೋದು ಎಷ್ಟರ ಮಟ್ಟಿಗೆ ಸರಿ? ಇoತಾದ್ದೊಂದು
ಬದುಕಿನಲ್ಲಿ ಸಾಧಿಸಿದ್ದಾದರೂ ಏನು?
ನಮ್ಮಲ್ಲಿರುವ ಸಮಯವನ್ನು ಸುಖಶಾಂತಿಯಿಂದ ಕಳೆಯದೇ ಜಿಜ್ಞಾಸೆಯಿಂದ ಕೂರುವುದು ತಪ್ಪು ಎನಿಸಿದ್ದು ಇದೆ ಬಹಳಷ್ಟು ಬಾರಿ. ಆದರೆ ಬದಲಾವಣೆಗೆ ಮನಸಿನ ಹಿಂಜರಿಕೆ ಸಾಮಾಜಿಕ ಕಟ್ಟುಪಾಡಿನಂತೆ ಬದುಕುವುದು ಅನಿವಾರ್ಯವಾಗಿದೆ. ಹೆಣ್ಣೆಂದರೆ ಹೀಗಿರಬೇಕು ಎನ್ನುವ ರೂಡಿಯಂತೆ ದಿಕ್ಕರಿಸಲು ಭಯ ಹಾಗೆಯೇ ಅದರಂತೆ ನೆಡೆದರೇ ವಿನಯವಂತರು, ಸೃಜನಶೀಲರು.
ಇಲ್ಲದಿದ್ದಲ್ಲಿ ಸಮಾಜದ ದೃಷ್ಟಿಯಲ್ಲಿ ನಾವು ಯಾವ ದುಷ್ಕರ್ಮಿಗಳಿಗೂ ಕಡಿಮೆ ಅನಿಸುವುದಿಲ್ಲ. ನಮ್ಮನ್ನು ಹಂತಕರ ಉದಾಹರಣೆಗೆ ಬಳಸುತ್ತಾರೆ. ಬೆಳಿತಾ, ಬೆಳಿತಾ ನಮ್ಮ ಆಲೋಚನೆಗಳಲ್ಲಿ ಅದೆಷ್ಟೋ ವ್ಯತ್ಯಾಸಗಳಾಗುತ್ತವೆ.
ನಾವು ಚಿಕ್ಕವರಿದ್ದಾಗ ನಮ್ಮೊಳಗೇ ಉದಯಿಸಿದ ಭಾವನೆಗಳಿಗಾಗಲಿ, ಮತ್ತೊಬ್ಬರ ಭಾವನೆಗಳಿಗೆ ಸ್ಪಂದನೆ ನೀಡುವುದಕ್ಕೆ ಆಗಲಿ ಯಾವುದೇ ಅಂಜಿಕೆ ಇರುತ್ತಿರಲಿಲ್ಲ ಅಲ್ಲಿ ತೋಚಿದಂತೆ ಭಾವನೆ ವ್ಯಕ್ತವಾಗುತ್ತಿತ್ತು. ಆದ್ರೆ ಈಗ ಅಳಬೇಕು ಎನಿಸಿದರೂ, ಎದುರಿನವರಿಗೆ ನಮ್ಮ ಅಳು ಯಾವ ರೀತಿ ಅರ್ಥವಾಗುತ್ತೋ ಎಂಬ ಭಯ. ಅಳುವವರನ್ನು ಸಮಾಧಾನ ಪಡಿಸಲೂ ಹಿಂಜರಿಕೆ ಎದುರಿನ ವ್ಯಕ್ತಿ ಹೇಗೆ ಅರ್ಥಯಿಸಿಕೊಳ್ಳುವರೋ ಎಂಬ ಆತಂಕ ಈ ಬದುಕೇ ಒಂತರ ಕಷ್ಟ.
ಬದುಕು ಕಲಿಸಿದ ಪಾಠ ಬಹಳಷ್ಟು ಅದರಲ್ಲಿ ಅರ್ಥವಾದದ್ದು ಅಲ್ಪವಷ್ಟೇ. ಉಸಿರಿದ್ದಷ್ಟು ದಿನವಷ್ಟೇ ನಮ್ಮ ಬದುಕು. ಬಹಳವಲ್ಲದಿದ್ದರೂ, ಕನಿಷ್ಠ ಕನಸುಗಳನ್ನಾದರೂ ಈಡೇರಿಸಿಕೊಳ್ಳುವತ್ತ ಗಮನ ಹರಿಸಬೇಕು. ಪ್ರಯತ್ನ ಪಡದೇ ಇದ್ರೆ ಏನೂ ಆಗಲ್ಲ ಅಲ್ವಾ? ಮುಂದೊಂದು ದಿನ ನಮ್ಮ ಜೀವನದ ಅದ್ಯಾಯ ಮುಗಿದು ಹೋದರೇ, ಬರೀ ಖಾಲಿ ಪುಟಗಳಷ್ಟೇ ಉಳಿಯುವವು.
ಈ ದೇಹದಲ್ಲಿ ಉಸಿರು ಇರುವಷ್ಟು ದಿನ ಆ ಖಾಲಿ ಪುಟಗಳಲ್ಲಿ ಒಂದಿಷ್ಟು ಸಿಹಿಯಾದ ನೆನಪುಗಳನ್ನು ತುಂಬಿಬಿಡಬೇಕು. ಪ್ರಯತ್ನo ಸರ್ವತ್ರo ಸಾಧನo. ಅವಕಾಶಗಳು ನಮ್ಮನ್ನು ಮತ್ತೆ ಮತ್ತೆ ಹುಡುಕಿ ಬರುವುದಿಲ್ಲ. ಕಾಲವಂತೂ ಸರಿಯುತ್ತದೆ. ಸಮಯವನ್ನು ಹಿಡಿಯುವವರು ಯಾರು? ಮುಗಿದ ಗಳಿಗೆ ಎಂದಿಗೂ ಹಿಂದಿರುಗಿ ಬರುವುದಿಲ್ಲ. ಇದ್ದ ಕ್ಷಣಗಳನ್ನೇ ಸಾರ್ಥಕವಾಗಿಸಬೇಕು. ಅಲ್ಲವೇ?
ನಾವುಗಳು ಕೆಲವೊಮ್ಮೆ ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೆ ಏನೆಲ್ಲಾ ಪ್ರಯತ್ನ ಮಾಡ್ತೀವಿ. ಹಾಗೇ ಬದುಕಿನಲ್ಲಿ ಕೆಲವು ಬದಲಾವಣೆ ಕೂಡ ಮಾಡ್ಕೋತೀವಿ ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಜನರನ್ನು ಮೆಚ್ಚಿಸಲು ಜನಾರ್ಧನನಿಂದಲೂ ಸಾಧ್ಯವಿಲ್ಲ. ಅದು ಗೊತ್ತಿದ್ದರೂ ನಮ್ಮ ಬಗ್ಗೆ ನಮ್ಮ ಆತ್ಮ ಏನಂದುಕೊಳ್ಳುತ್ತೋ ಅನ್ನುವುದಕ್ಕಿಂತ ಹೊರಗಿನ ಸಮಾಜ, ಕಷ್ಟ ಸುಖಕ್ಕೆ ಆಗದ ಬಾಂಧವ್ಯಗಳಿಗೆ ಹೆಚ್ಚು ಬೆಲೆ ಕೊಡ್ತೀವಿ ಅದೆಷ್ಟು ಸಮಂಜಸ ಅನ್ನುವ ಅರಿವು ಕೂಡ ನಮಗಿರುವುದಿಲ್ಲ. ನಮಗಾಗಿ ನಾವು ಬದುಕಬೇಕು ಇನ್ನೊಬ್ಬರ ಹಿತಕ್ಕಾಗಿ ಬದುಕಲ್ಲ ಅನ್ನುವುದನ್ನ ಮರೆತು ನಮ್ಮತನವನ್ನೇ ಬಿಕರಿಗಿಟ್ಟುಬಿಡುತ್ತೇವೆ. ಸುಖವಿದ್ದಾಗ ನಮ್ಮ ಸುತ್ತ ನೆರೆದು ಕಷ್ಟ ಬಂದಾಗ ನಮ್ಮಿಂದ ಜರುಗುವವರು ನಮ್ಮ ಆಪ್ತರೆಂಗಾದಾರು? ಹೀಗಾಗಿ ನಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾವು ಬದುಕಬೇಕು ಹೊರತು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಜನಕ್ಕೇನು ಬಿದ್ದಾಗ ಬಿದ್ದು ಬಿದ್ದು ನಗುವರು ಎದ್ದಾಗ ಮತ್ತೆ ಬೀಳಿಸಲು ನೋಡುವರು. ಮತ್ತೊಬ್ಬರ ಏಳಿಗೆ ಬಯಸುವ ಬಾಂಧವ್ಯಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಆ ಕಾರಣಕ್ಕೆ ಜನರನ್ನು ಮೆಚ್ಚಿಸಲು ಹೊರಟರೆ ನಮಗಾಗಿ ನಾವು ಬದುಕುವ ಕ್ಷಣಗಳು ಕ್ಷೀಣವಾಗುವುದಂತೂ ಸತ್ಯಸ್ಥ ಸತ್ಯ..
ಹೀಗೆ ಒಂದು ಈಸೊಪನ ಕಥೆ ಒಂದು ಸಾರೆ ಒಬ್ಬ ಅಪ್ಪ ಮಗ ಕುದುರೆ ಸವಾರಿ ಮಾಡ್ತಾ ಇದ್ರು ದಾರಿಯಲ್ಲಿ ಇವರನ್ನು ಕಂಡ ಜನ, ಬುದ್ಧಿ ಬೇಡವಾ ಇವರಿಗೆ ಅಷ್ಟು ಸಣ್ಣ ಕುದುರೆ ಮೇಲೆ ಇವರು ಇಬ್ಬರು ಸವಾರಿ ಮಾಡ್ತಿದಾರೆ ಪಾಪ ಕುದುರೆಗೆ ಭಾರ ಆಗಲ್ವಾ? ಅದನ್ನ ಕೇಳಿ ಅಪ್ಪ ತಾನು ಕೆಳಗಿಳಿದು ಮಗನನ್ನು ಮಾತ್ರ ಕೂರಿಸಿ ಸವಾರಿ ಮಾಡ್ತಾ ಇದ್ದ. ತುಸು ದೂರ ಹೋದ ನಂತರ ಮತ್ತೆ ಅದೇ ಜನ. ಮಗನ ಕುರಿತು ಇವನೆಂತ ಮಗ ಹೆತ್ತಪ್ಪನನ್ನ ನೆಡೆಯಲು ಬಿಟ್ಟು ತಾನು ಮಾತ್ರ ಕುದುರೆ ಮೇಲೆ ಹೋಗುತ್ತಿದ್ದಾನೆ ಅಂದರು . ಬೇಸರಿಸಿಕೊಂಡ ಮಗ, ತಾನು ಕುದುರೆಯಿಂದ ಇಳಿದು ತನ್ನಪ್ಪನ್ನನ್ನು ಕೂರಿಸಿ ನೆಡೆದು ಹೋಗ್ತಾ ಇದ್ದ, ಇದನ್ನು ಕಂಡ ಜನ ಬಿಟ್ಟಾರೆಯೇ ಮತ್ತೆಅ ತಗಾದೆ ಅಯ್ಯೋ, ಈ ಅಪ್ಪನಿಗೆ ಕರುಣೆ ಅನ್ನೋದೆ ಇಲ್ವಾ ಮಗನನ್ನು ನೆಡೆಯೋಕೆ ಬಿಟ್ಟು ತಾನು ಅರಾಮ್ ಆಗೀ ಕುದುರೆ ಮೇಲೆ ಕುಳಿತಿದ್ದಾನೆ ಅಂದರು. ಅದನ್ನ ಕೇಳಿ ನೊಂದ ಅಪ್ಪ ಮಗ ಇಬ್ಬರೂ ನೆಡೆದೆ ಹೊರಟರು. ಈಗಂತೂ ಜನ ಇವರನ್ನು ಕಂಡು ಅಪಹಾಸ್ಯ ಮಾಡಿ ನಕ್ಕು ಕೇಳಿದರು ನೀವೆಂತಾ ಮೂರ್ಖರು ಸವಾರಿಗೆಂದೆ ಕುದುರೆ ಇರುವಾಗ ಅದನ್ನ ಹತ್ತದೇ ನೀವು ನೆಡೆದು ಹೋಗುತ್ತಿದ್ದೀರಾ ನಿಮ್ಮಂತ ಮೂರ್ಖರೂ ಯಾರೂ ಇಲ್ಲ. ಆಗ ತಂದೆ ಮಗನಿಗೆ ಜ್ಞಾನೋದಯ ಆಗಿದ್ದು ಇಷ್ಟೇ ನಾವು ಹೆಂಗೆ ನ್ಯಾಯವಾಗಿ, ಸರಳವಾಗಿ, ನಮ್ಮಷ್ಟಕ್ಕೆ ನಾವು ಇರ್ತೀವಿ ಅಂದರೂ ಜನರ ಬಾಯಿಗೆ ಆಹಾರ ಆಗೋದು ಅಂತೂ ತಪ್ಪಿಸೋಕೆ ಆಗಲ್ಲ. ಆದ ಕಾರಣ ಅವರಿವರ ಮಾತಿಗೆ ಬೆಲೆ ಕೊಡದೇ ನಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾವು ನೆಡೆದುಕೊಂಡರೆ ಆಯ್ತು ಅಂತ. ಹೌದಲ್ಲವೇ?ಜನರನ್ನು ಮೆಚ್ಚಿಸೋಕೆ ಜನಾರ್ಧನನಿಂದಲೂ ಸಾಧ್ಯವಿಲ್ಲ.
——————————————————
.
.
ಪಾರ್ವತಿ. ಜಗದೀಶ್.
ನಿಜ ಮೇಡಮ್, ಇಂದಿನ ದಿನಗಳಲ್ಲಿ ಬೇರೊಬ್ಬರನ್ನು ಮೆಚ್ಚಿಸುವುದರಲ್ಲೇ ಕಾಲ ವ್ಯರ್ಥಗೊಂಡ. ಅದರೇ, ತಮ್ಮದೇ ಆದ ಧೀರತ್ವ ಮತ್ತು ಸಮಚಿತ್ತ ಇದ್ದುದರ ಕಡೆಗೆ ಲಕ್ಷ್ಯ ಕೊಟ್ಟರೆ ಉಪಯುಕ್ತ. ಅಭಿನಂದನೆಗಳು.
ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆಗೆ ♥️