ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
ಚಿಮಣಿ ದೀಪ
ನೀಲಿ ಬಾನ ದೀಪವದು
ಸಪ್ತಸಾಗರದಾಚೆಯ ಲೋಕಕೆ
ಬೆಳಕಿನ ಕಿರಣ ಬೀರುವಾಗ
ಇರುಳ ನಾಡಿನ ಲೋಕಕೆ
ಬೆಳಕಾಗಿ ನಿಂತಿತು ಚಿಮಣಿ
ಬಾಲ್ಯದ ದಿನದ ಕತ್ತಲ ರಾತ್ರಿಗಳಿಗೆ
ದಾರಿ ದೀಪವಾಯಿತು ಚಿಮಣಿ….
ಅದೆಷ್ಟೋ ಮಳೆಗಾಲದ ಕತ್ತಲಿಗೆ
ಜೊತೆಯಾಯಿತು…
ದೀಪದ ಬುಡದಲ್ಲಿ ಓದಿದ
ಬಾಲ್ಯದ ನೆನಪಿನ ಹೂವಿಗೆ
ಎಸಳಾಗಿ ಸೇರಿತು..
ಚಿಕ್ಕದಾದರೂ ದೀಪ
ಮನದಂಗಳಕೆ ಬೆಳಕಚೆಲ್ಲಿ
ಹಿರಿದಾಗಿ ಕಂಶಿಖರಕ್ಕೆ
ಸೀಮೆಎಣ್ಣೆಯ ಬುಡ್ಡಿದೀಪ
ಬತ್ತಿ ಸ್ವಲ್ಪ ಮೇಲೆತ್ತಿ ಹೊತ್ತಿಸಿದರೆ
ಅತ್ತ ಸಾಯದೆ
ಇತ್ತ ಬದುಕದೆ..
ಸ್ಥಿರ ಜ್ವಾಲೆಯಾಗಿ ತಾ ಉರಿದು
ಬೆಳಕ ಹರಡುತಲಿತ್ತು
ಧನ್ಯತಾ ಭಾವದಲ್ಲಿ..
ಸಹೋದರರೆಲ್ಲ ಸೇರಿ
ಒಂದೆ ಚಿಮಣಿ ದೀಪದ ಕೆಳಗೆ
ಓದುವಾಗ ಹೊಗೆಗೆ ಮೂಡುತ್ತಿದ್ದ ಮೀಸೆ..
ನಿದ್ದೆಗೆ ಜಾರಿದರೆ ಕೂದಲು ಸುಟ್ಟ
ಸಂಗತಿ…
ನೆನಪಾದರೆ ಅದೊಂದು ತಮಾಷೆ
ಕ್ಷಣಗಳಾಗಿ ಸೇರಿತು ನೆನಪಿನ ಪುಟಗಳನು…
ಮಲೆನಾಡಿನ ಮಳೆಗಾಲದಲ್ಲಿ
ಊರ ಕಡೆ ತಿರುಗಿ ನೋಡದ
ಕರೆಂಟು…
ಇನ್ನೂ ಕಾಣಬಹುದು ಚಿಮಣಿ ಜೊತೆಗೆ ನಮ್ಮ ನಂಟು…
ಬೆಲೆಯೇ ಕಟ್ಟಲಾಗದು
ಆ ಬೆಳಕಿನ ಕಿರಣಕ್ಕೆ..
ಅಮ್ಮನ ಕೈ ತುತ್ತಿಗೆ ಸಾಕ್ಷಿಯಾಗಿತು
ಸಹೋದರತೆಯ ಪ್ರೀತಿಗೆ ನಾಂದಿಯಾಯಿತು…
ತನ್ನೊಡಲ ಕತ್ತಲಾಗಿಸಿ
ನಮಗೆ ಬೆಳಕ ಚೆಲ್ಲಿತು…
ಗರ್ವವಿಲ್ಲ, ತಾರತಮ್ಯ ವಿಲ್ಲ
ಸಾರ್ಥಕತೆಯ ಮೆರೆಯಿತು..
ಹೊಸ ದಿಗಂತದೆಡೆಗೆ ಸಾಗಲು
ದಾರಿ ದೀಪವಾಯಿತು…
ಕತ್ತಲ ಜಗವನು ತಾ ಕರಗಿ
ಬೆಳಗಾಗಿಸಿತು…
ನೆನಪಿನ ಹೂ ತೋಟದಲ್ಲಿ
ಚಿಮಣಿ ನೀ ಚಿಟ್ಟೆಯಾದೆ
ನನ್ನ ಬಣ್ಣದ ಕನಸುಗಳಿಗೆ
ಬೆಳಕಾಗಿ ನಿಂತು..
ಸಾಧನೆಯ ಶಿಖರಕ್ಕೆ ರೆಕ್ಕೆಯಾದೆ…..
ನೆನಪುಗಳಿಗೆ ಬೆಳಕು ಹಾಯಿಸಿದೆ ತಮ್ಮ ಚಿಮಣಿ ದೀಪ. ಸುಂದರ ಕವನ.