ವ್ಯಕ್ತಿಚಿತ್ರ
ಪತ್ರಿಕಾ ಲೋಕದ
ಅಪ್ರತಿಮ ಸಾಧಕರಾದ ಎಲ್. ಎಸ್. ಶಾಸ್ತ್ರಿ
ಎಲ್. ಎಸ್. ಶಾಸ್ತ್ರಿ
ಪತ್ರಿಕಾ ಲೋಕದ ಅಪ್ರತಿಮ ಸಾಧಕರಾದ
(On 80th birthday of great activist, journalist, writer, publisher and organizer L. S. Shastri )
ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ಅವರು ಎಲ್. ಎಸ್. ಶಾಸ್ತ್ರಿ ಎಂಬ ಹೆಸರಿನಿಂದ ಪ್ರಸಿದ್ಧರು. ಅವರು ‘ಬೆಳಗಾವಿಯ ಸಾಂಸ್ಕೃತಿಕ ರಂಗದ ಬೆಳಕು’ ಎಂಬ ಮಾತಿದೆ.
ಪ್ರತ್ರಿಕಾರಂಗದಲ್ಲಿ 60 ವರ್ಷಗಳ ಸೇವೆ ಸಲ್ಲಿಸಿರುವ, ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಗಮಕ, ನಾಟಕ ಇತ್ಯಾದಿ ಹತ್ತುಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಲ್. ಎಸ್. ಶಾಸ್ತ್ರಿಗಳ ಜನ್ಮಸ್ಥಳ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ಅವರು 1944ರ ಮಾರ್ಚ್ 1ರಂದು ಜನಿಸಿದರು. ತಂದೆ ಶಂಭು ಶಾಸ್ತ್ರಿ. ಧಾರ್ಮಿಕ ಮನೋಭಾವದರಾಗಿ ‘ಧರ್ಮಸಿಂಧು’ ಎಂದೇ ಹೆಸರಾಗಿದ್ದವರು. ಇವರ ಪ್ರಭಾವ ಮಗನಲ್ಲಿಯೂ ಸಹಜವಾಗಿ ಮೂಡಿಬಂತು.
ಮುಂದೆ ಬೆಳಗಾವಿಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡ ಎಲ್. ಎಸ್ ಶಾಸ್ತ್ರಿ ಅವರು ಪ್ರಮುಖವಾಗಿ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದವರು. 60 ವರ್ಷಗಳಿಗೂ ಹೆಚ್ಚು ಕಾಲದ ಅನುಭವ ಇವರದು. ಇವರು ಕನ್ನಡದೊಂದಿಗೆ ಮರಾಠಿ, ಕೊಂಕಣಿ, ಸಂಸ್ಕೃತ, ಹಿಂದಿ ಇತ್ಯಾದಿ ಭಾಷೆಗಳನ್ನೂ ಬಲ್ಲವರು. ಯಕ್ಷಗಾನ, ಗಮಕ, ಸಂಗೀತ, ಸಾಂಸ್ಕೃತಿಕ ಸಂಘಟನೆ, ನಾಟಕ, ತರಬೇತಿ ಶಿಬಿರಗಳ ನಿರ್ವಹಣೆ, ಮತ್ತು ಕಾರ್ಯಕ್ರಮಗಳ ನಿರೂಪಣೆಗಳನ್ನು ನಡೆಸುವುದರಲ್ಲಿ ಅನುಭವಿಗಳು. ಇವರು 5000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 110ಕೃತಿಗಳನ್ನು ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ರಚಿಸಿರುವುದಲ್ಲದೆ, 40,000 ಸಾವಿರಕ್ಕೂ ಹೆಚ್ಚು ಬಿಡಿಬರಹಗಳನ್ನು ಬರೆದಿದ್ದಾರೆ. ಇವರ ಅಂಕಣ ಬರಹಗಳು 3000 ದಾಟಿದ್ದರೆ ಅಗ್ರ ಲೇಖನಗಳು 10000 ದಾಟಿವೆ. ಎರಡು ಸಾವಿರಕ್ಕೂ ಹೆಚ್ಚು ಮುನ್ನುಡಿಗಳೇ ಇವೆ. ಇವಲ್ಲದೆ ಉಪನ್ಯಾಸ ಬರಹಗಳು, ಪ್ರಬಂಧಗಳು, ಇತ್ಯಾದಿ ಮೂರು ಸಾವಿರಕ್ಕೂ ಹೆಚ್ಚು ಬರಹಗಳು ಮೂಡಿಬಂದಿವೆ. ನೂರಕ್ಕೂ ಹೆಚ್ಚು ವಿಶೇಷಾಂಕಗಳನ್ನು ಸಂಪಾದಿಸಿದ್ದಾರೆ.
ಪತ್ರಿಕಾ ಲೋಕದಲ್ಲಿ ಇವರ ಪಯಣವು 1962ರಲ್ಲಿ ‘ಶೃಂಗಾರ’ ಎಂಬ ಕಲಾ ಸಾಹಿತ್ಯ ಪತ್ರಿಕೆಯ ಮೂಲಕ ಆರಂಭಗೊಂಡಿತು. ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ವಿಶ್ವವಾಣಿ, ನಾಡೋಜ ಮುಂತಾದ ಹಲವು ಪತ್ರಿಕೆಗಳಲ್ಲಿ ಹಿರಿಯ ಸಂಪಾದಕರಾಗಿ, ಸಂಪಾದಕರಾಗಿ, ಅಂಕಣ ಬರಹಗಾರರಾಗಿ ಹಲವಾರು ವರ್ಷಗಳ ಕಾಲ ದುಡಿದರು. 1999ರಲ್ಲಿ ಬೆಳಗಾವಿಯಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನದ ಸಂಘಟನೆ ಮತ್ತು ನಿರ್ವಹಣೆ ಹಾಗೂ 1987ರಲ್ಲಿ ಏಳು ದಿನಗಳ ಪತ್ರಿಕಾ ತರಬೇತಿ ಶಿಬಿರ ನಡೆಸಿದ ಕೀರ್ತಿ ಇವರದು. ಪತ್ರಿಕಾರಂಗದಲ್ಲಿ ನಿರಂತರ ಮಾರ್ಗದರ್ಶನ, ಸಲಹೆ, ಸಹಕಾರ ನೀಡುವುದರಲ್ಲಿ ಇವರು ಸಿದ್ಧಹಸ್ತರು. ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ವಿಧಾನ ಮಂಡಲದ ವರದಿಗಳನ್ನು ನೀಡುವುದರಲ್ಲಿಯೂ ಇವರು ನಿಪುಣರು.
ಶಾಸ್ತ್ರಿ ಅವರು 1958ರಿಂದ ಕವಿತೆಗಳ ಮೂಲಕ ಸಾಹಿತ್ಯ ಕೃಷಿ ಆರಂಭಿಸಿದರು. ‘ಸ್ಮೃತಿ’ ಕಥನ ಕವನಗಳು, ವಿಶೇಷ ವ್ಯಕ್ತಿಗಳ ಜೀವನಚರಿತ್ರೆ, ‘ವಿಲೋಕನ’ ಎಂಬ ವೈಚಾರಿಕ ಲೇಖನಗಳು, ‘ರಗಳೆ ರಾಧಕ್ಕ’ ಹರಟೆಗಳು, ‘ಕನ್ನಡ ರಸಯಾತ್ರೆ’ ಪ್ರವಾಸ ಕಥನ, ‘ಇಬ್ಬನಿ’ ಹನಿಗವನಗಳು, ಕುಂಬಾರಗುಂಡಯ್ಯ ಮೊದಲಾದವರ ಶರಣಸಾಹಿತ್ಯ, ಗಂಗೂಬಾಯಿ ಹಾನಗಲ್ ಮುಂತಾದವರ ಜೀವನಚರಿತ್ರೆ, ‘ನಿಸರ್ಗೋಪಚಾರ’ ವೈದ್ಯಕೀಯ ಲೇಖನಗಳು, ‘ನನ್ನದೆನ್ನುವ ಕವಿತೆ’ ಕವನ ಸಂಕಲನ, ‘ಪಂಚವಟಿ’ ಅನುವಾದಿತ ಖಂಡಕಾವ್ಯ…ಇತ್ಯಾದಿ ನೂರಾರು ರಚನೆಗಳು ಇವರ ಲೇಖನಿಯಿಂದ ಮೂಡಿವೆ. ಇಷ್ಟೇ ಅಲ್ಲದೆ ಹಲವು ಅಭಿನಂದನ ಗ್ರಂಥಗಳ ಸಂಪಾದನೆ, ನಾಟಕಗಳ ರಚನೆ, ನಿರ್ದೇಶನ, ನಿರ್ವಹಣೆ ಹೀಗೆ ಇವರು ಕೈಯಾಡಿಸದ ಸಾಹಿತ್ಯ ಪ್ರಕಾರಗಳೇ ಇಲ್ಲ.
ಹಿಂದೂಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಒಲವು ಹೊಂದಿರುವ ಶಾಸ್ತ್ರಿ ಅವರು ಪಂಡಿತ ರಾಜೀವ ಪುರಂಧರೆ ಅವರಲ್ಲಿ ಸಂಗೀತ ಕಲಿತವರು. ಸಾಕಷ್ಟು ಸಂಗೀತಗಾರರ ಬಗ್ಗೆ ಬರೆದವರು. ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಿದವರು. ಬೆಳಗಾವಿ ನಗರದಲ್ಲಿ ಇವರೊಂದು ಸಾಂಸ್ಕೃತಿಕ ಚೇತನ. ಸುಗಮ ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತರು. 200 ಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಿದವರು.
ಗೌರೀಶ ಕಾಯ್ಕಿಣಿ, ಅನಕೃ, ಅಡಿಗ, ಬೀಚಿ ಶಿವರಾಮ ಕಾರಂತ ಮುಂತಾದವರ ಸಾಹಿತ್ಯ ಸಾಂಸ್ಕೃತಿಕ ಪರಿಚಯವನ್ನು ಜನರಲ್ಲಿ ಮೂಡಿಸುವಲ್ಲಿ ಇವರ ಶ್ರಮ ಅಪಾರ. ನಾಗರತ್ನಮ್ಮನವರ ನಾಟಕಗಳನ್ನು ಸ್ತ್ರೀ ನಾಟಕ ಮಂಡಳಿಯ ಮೂಲಕ ಪ್ರಚಾರ ಮಾಡಿದರು. ಗಮಕ ವಾಚನದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದ ಇವರು ಬೆಳಗಾವಿಯ ಗಮಕ ಕಲಾ ಪರಿಷತ್ತಿನ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಸಾಹಿತ್ಯದ ರಸಯಾತ್ರೆಯ ಮೂಲಕ ನಾಡಿನ ಹಿರಿಯ ಸಾಹಿತಿಗಳನ್ನು ಸಂಘ ಸಂಸ್ಥೆಗಳಿಗೆ ಕರೆಸಿಕೊಂಡು ರಸದೌತಣ ನೀಡಿದವರಿವರು.
ಮರಾಠಿಯಿಂದ ದೈನಂದಿನ ದಾಸ ಬೋಧ ದಂತಹ ಉತ್ತಮ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಉಪಕಾರ ಮಾಡಿದ್ದಾರೆ. ಹಾಗೆಯೇ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಇವರ ಥೈಲ್ಯಾಂಡ್ ಪ್ರವಾಸ ಕಥನವನ್ನು ಅನುವಾದ ಮಾಡಿದ್ದಾರೆ. 1975 ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕವನವಾಚನ, 2012 ರಲ್ಲಿ ಥೈಲ್ಯಾಂಡ್ ಕನ್ನಡ ಬಳಗದಲ್ಲಿ ಯುಗಾದಿ ಕವಿಗೋಷ್ಠಿ, 2015ರಲ್ಲಿ ಮೌಂಟ್ ಅಬೂದಲ್ಲಿ ಉಪನ್ಯಾಸ. ಬೆಂಗಳೂರಿನಲ್ಲಿ ಭಾರತೀಯ ವಿದ್ಯಾಭವನದಲ್ಲಿ ಉಪನ್ಯಾಸ, ಚಂದನವಾಹಿನಿಯಲ್ಲಿ ಸಂದರ್ಶನ ಮುಂತಾದುವು ಇವರ ಪ್ರಮುಖ ಕಾರ್ಯಕ್ರಮಗಳು.
ಪುಸ್ತಕ ಪ್ರಕಾಶನದಲ್ಲಿಯೂ ಇವರು ಆಸಕ್ತಿ ವಹಿಸಿ ಶೃಂಗಾರ ಪ್ರಕಾಶನ ಹೊನ್ನಾವರ ಮತ್ತು ಆದಿತ್ಯ ಪ್ರಕಾಶನ ಬೆಳಗಾವಿ ಈ ಮೂಲಕ ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ, ಅಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ.
ಎಲ್. ಎಸ್. ಶಾಸ್ತ್ರಿ ಅವರಿಗೆ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಸಾಹಿತ್ಯ ರತ್ನ, ಹವ್ಯಕ, ಸೇವಾರತ್ನ ಪ್ರಶಸ್ತಿ, ಡಾ. ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ದಿನಕರ ದೇಸಾಯಿ ಚುಟುಕು ರತ್ನ ಪ್ರಶಸ್ತಿ, ಕರ್ಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಪ್ರಥಮ ವಿಶ್ವಕನ್ನಡ ಸಮ್ಮೇಳನ, ದ್ವಿತೀಯ ವಿಶ್ವಕನ್ನಡ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್, ನಾಗನೂರಿನ ರುದ್ರಾಕ್ಷಿಮಠ, ವಾರ್ತಾ ಮತ್ತು ಪ್ರಚಾರ ಇಲಾಖೆ ಮುಂತಾದ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇವರ 60 ನೆಯ ವಯಸ್ಸಿನಲ್ಲಿ ‘ಸವ್ಯಸಾಚಿ’ ಮತ್ತು 75 ನೆಯ ವಯಸ್ಸಿನಲ್ಲಿ ‘ಸಿರಿಗಂಧ’ ಎಂಬ ಅಭಿನಂದನ ಗ್ರಂಥಗಳನ್ನು ಅಭಿಮಾನಿಗಳು ಸಮರ್ಪಿಸಿದ್ದಾರೆ.
ಇಂತಹ ಸಕಲ ಕಲಾ ವಲ್ಲಭರನ್ನು ಹಲವು ಗಣ್ಯರು ಕೊಂಡಾಡಿದ್ದಾರೆ. ಬೆಳಗಾವಿಯ ಬೆಳಕು, ಕರ್ತೃತ್ವಶಾಲಿ, ಸರಳ ಸಜ್ಜನ, ಸಾಂಸ್ಕೃತಿಕ ಜಗತ್ತಿನ ಜೀವಕಳೆ ಮುಂತಾದ ಅಭಿಪ್ರಾಯಗಳು ಇವರ ಬಗ್ಗೆ ಗಣ್ಯರಿಂದ ಮೂಡಿವೆ.
ಈ ಹಿರಿಯರು ಈಗ ತಮ್ಮ ಎಂಬತ್ತನೇ ವಯಸ್ಸಿಗೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಶುಭ ಹಾರೈಸೋಣ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬದುಕು ಇತರರಿಗೆ ಮಾದರಿಯಾಗಲಿ. ಪತ್ರಿಕಾರಂಗದ ಅನುಭವ ಇನ್ನಷ್ಟು ಜನರನ್ನು ತಲುಪಲಿ, ಇವರಿಗೆ ಶುಭವಾಗಲಿ.
Thanks to Govind Hegde and Lrphks Kolar for your affectionate support
(ನಮ್ಮ ‘ಕನ್ನಡ ಸಂಪದ’ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ತಿರು ಶ್ರೀಧರ್