ಹೀಗೊಂದು ಗಾಡೀ ಪುರಾಣ..!ಡಾ.ವೈ.ಎಂ.ಯಾಕೊಳ್ಳಿ

ಪ್ರಬಂಧ ಸಂಗಾತಿ

ಹೀಗೊಂದು ಗಾಡೀ ಪುರಾಣ..!

ಡಾ.ವೈ.ಎಂ.ಯಾಕೊಳ್ಳಿ

ಹೀಗೊಂದು ಗಾಡೀ ಪುರಾಣ..!

        ನನ್ನದೊಂದು ಹಳೆ ಲಡಖಾಸು ಸ್ಕೂಟರ್ ಇದೆ. ಅದನ್ನು ನೋಡಿದ ಯಾರೂ ಇದು ಹತ್ತೋ ಸ್ಕೂಟರ್ ಅಲ್ಲ ಅಂತ ಸಾವಿರ ಸಲ ಹೇಳಿಯಾರು! ಆದರೆ ಅದನ್ನ ನಾನು ಹತ್ತಿಕೊಂಡೆ ಇಪ್ಪತ್ತು ವರ್ಷ ಕಳೆದಿದ್ದೇನೆ. ಆದರೆ ಅದೇನೂ ಇಗ ಇರುವ ಸ್ಥಿತಿಯಲ್ಲಿಯೆ ತಗೆದುಕೊಂಡ ಸ್ಕೂಟರ ಅಂತ ಯಾರೂ ಭಾವಿಸಬಾರದು. ಅದಕ್ಕೂ ಒಂದು ಕಾಲದಲ್ಲಿ ಭಾರೀ ಭರ್ಜರಿ ಯೌವನವಿತ್ತು. ಅದೇ ತಾನೇ ಶೋರೂಮ್ನಿಂದ ತಂದಾಗ ನವ ಯೌವನದ ಯುವತಿಯಂತೆ ನಾಚಿ ನಿಲ್ಲುತ್ತಿತ್ತು.

     ನನಗೆ ಇನ್ನುಳಿದಿರೋದೇ ಎರಡು ವರ್ಷದ ನೌಕರಿಯಾದ್ದರಿಂದ ಈ ಹಳೆ ಗೆಳತಿಯನ್ನು ಬಿಟ್ಟು ಇನ್ಯಾವುದೋ ಹೊಸ ಗೆಳತಿಯರನರಸಿ ಹೋಗೋ ಆಸೆಯಿಲ್ಲ .ನನ್ನ ಮಾತಿಗೆ  “ಈಗ ನಿಮ್ಮನ್ನ ಅರಸಿ ಯಾರು ಹೊಸ ಗೆಳತಿಯಾರು ಸಿಕ್ಕಾರು ಬಿಡು” ಅಂತ ನನಗಾಗದವರು ಅಂದುಕೊಳ್ಳಲೂಬಹುದು. ಇದನ್ನು ನಾನು ಹತ್ತುತ್ತಿರುವದಕ್ಕೆ ಎರಡು ಕಾರಣಗಳಿವೆ. ಒಂದು ನನ್ನ ಬೇವಾಜಬ್ದಾರಿ ಗುಣ ದಿಂದಾಗಿ ನಾನು ಅದನ್ನು ಎಲ್ಲೋ ಬಿಟ್ಟು ಇಳಿದು ಬಿಟ್ಟಿರುತ್ತೇನೆ. ಒಮ್ಮೊಮ್ಮೆ ಮುಂಜಾನೆ ಕಾಲೇಜಿಗೆ ಹೋಗುವಾ ಎಲ್ಲಿನಿಲ್ಲಿಸಿದ್ದೇನೆ ಎನ್ನುವುದು ನೆನಪಾಗದೆ ‘ನಿಮಗೆ ಯಾವುದಾರ ಲಕ್ಷ್ಯ ಇದ್ದರ ಹೌದಲ್ಲೋ’ ಎಂದು ಮನೆಯಲ್ಲಿ ತಿವಿಸಿಕೊಳ್ಳುತ್ತೇನೆ.  ಒಂದೆರಡು ಸಲ ಅದು ನನ್ನ ದಾರಿಯ ಕಾಯುತ್ತ ಬಸ್ ಸ್ಟ್ಯಾಂಡಿನಲ್ಲೋ ಯಾವುದೋ ಕ್ರಾಸ್ನಲ್ಲೋ, ರಾತ್ರಿಯನ್ನೆಲ್ಲ ನನ್ನನ್ನು ನೆನೆಸುತ್ತಲೇ ಕಳೆದಿದ್ದಿದೆ. ನಾನೂ ಅದನ್ನು ಬಿಟ್ಟು ಮನೆಗೆ ಬಂದು ‘ಹೆಂಡತಿಯನ್ನು ತವರಿನಲ್ಲಿ ಬಿಟ್ಟು ಬಂದ ಹೊಸ ಗಂಡನಂತೆ ರಾತ್ರಿಯೆಲ್ಲ ವಿರಹ ವೇದನೆಯಲ್ಲಿ’ ನೊಂದದ್ದಿದೆ. ಇದರೊಂದಿಗೆ ಈ ಸ್ಕೂಟರ್ನ್ನು ನಾನು ಎಲ್ಲೆಂದರಲ್ಲಿ ಬಿಟ್ಟು ಬಂದರೂ ನಿಶ್ಚಿಂತೆಯಿಂದ ಇರುವದರಲ್ಲಿ ಒಂದು ಲಾಭವಿದೆ. ಏನೆಂದರೆ ಅದನ್ನು ನಾನು ಎಲ್ಲಿಯೆ ಬಿಟ್ಟು ಬಂದರೂ ಯಾರೂ ಒಯ್ಯದೇ ‘ಯಾಕೋ ಸರ್ ಅವರ ಗಾಡಿಯನ್ನು ಇಲ್ಲೇ ಬಿಟ್ಟಿದ್ದಾರೆ’ ಎಂದು ಮತ್ತೆ ನನಗೆ ಪೋನಾಯಿಸಿದ್ದೂ ಇದೆ.

    ಇದರ ಮೇಲೆ ನನಗೆ ಇಷ್ಟೇಕೆ ಪ್ರೀತಿ ಎಂದು ನನ್ನನ್ನು  ನೀವು ಕೇಳಬಹುದು. ಅದಕ್ಕೆ ನನ್ನ ಉತ್ತರ ‘ಮೊದಲ ಪ್ರೀತಿಯನ್ನೂ ಮೊದಲು ತಗೆದುಕೊಂಡ ಗಾಡಿಯನ್ನೂ ಯಾರಾದರೂ ತುಂಬ ಪ್ರೀತಿಸುತ್ತಾರೆ’ ಎಂದು ಉತ್ತರ ಹೇಳಬೇಕಾಗುತ್ತದೆ. ಹಾಸ್ಯಕವಿ ಡುಂಡಿರಾಜರು ತಮ್ಮ ಹಳೆ ಸ್ಕೂಟರ್ ಬಗ್ಗೆ

 ಎಷ್ಟು ಹಳೆಯದಾದರೇನು

       ಬಿಡೆನು ಈ ಹಳೆಯ ಗಾಡಿಯ

        ಹಾಗೆಯೇ ನನ್ನ 

  ಹಿಂದೆ ಕುಳಿತ ನಿನ್ನನು

ಎಂದು ಹನಿಗವಿತೆ ಬರೆದಂತೆ ನನಗೆ ನೆನಪಿದೆ.  ಇದು ನನ್ನ ಮೊದಲ ಪ್ರೀತಿಯೆಂದೆ! ಅದು ನಿಜವೇ. ನಾನು ನೌಕರಿಗೆ ಸೇರಿ ಹತ್ತು ವರ್ಷವಾಗುವರೆಗೂ ಯಾವುದೇ ವೆಹಿಕಲ್ನ್ನು ಖರಿದಿಸಿರಲೇ ಇರಲಿಲ್ಲ. ಇನ್ನೂ ನೌಕರಿ ಬರುವ ಮೊದಲೇ ಒಂದು ಟೂವೀಲರ್ , ಇನ್ನೊಂದು ತ್ರೀವೀಲರ್ ಎನ್ನುವ ಈ ಕಾಲದಲ್ಲಿ ನನ್ನಂತವರು ಅಪವಾದವಾಗಿ ನಿಮಗೆ ಕಾಣಿಸಬಹುದು. ಆದರೆ ಇಂದಿಗೆ ಇಪ್ಪತ್ತು ವರ್ಷದ ಹಿಂದೆ ಹಾಗೆ ಸ್ಕೂಟರ್ ಖರೀದಿ ಮಾಡುವದು ನಮ್ಮಂಥವರಿಗೆ ಭಾರಿ ವಜನ್ ಕೆಲಸವೇ ಅಗಿತ್ತು. ನಾವು  ಬಿಡಿ, ಆಗ ನೌಕರಿಗೇ ಸೇರಿದವರು. ನಮಗೆ ಪದವಿ ತರಗತಿ ಕಲಿಸಿದ ಪ್ರಾಧ್ಯಾಪಕರು ಸೈಕಲ್ ಮೇಲೆ ಬರುತ್ತಿದ್ದರು. ಅವರನ್ನು ದೂರದಿಂದ ನೋಡಿದ ಪ್ಯೂನ್ ಓಡಿ ಹೋಗಿ ಅವರ ಸೈಕಲ್ ತರುವದು, ಹಿಂದೆ ಅವರು ನಡೆದು ಬರುವದು, ಇದು ಅಗೆಲ್ಲ ತುಂಬ ಸಹಜವಾದ ನಡೆಯಾಗಿತ್ತು.

    ನಾನು ಇಡೀ ಮನೆಯಲ್ಲಿ ಮೊದಲ ಬಾರಿಗೆ ನೌಕರಿ ಸೇರಿದ ವ್ಯಕ್ತಿ , ತಮ್ಮ, ತಂಗಿ, ಅಪ್ಪ, ಅವ್ವ,  ಅಕ್ಕ ಹೀಗೆ ಅನೇಕರ ಜವಾಬ್ದಾರಿ ಜೊತೆಗೆ ಹೊಸ ಮದುವೆಯಾಗಿ ಸಂಸಾರ ಹೂಡಿದೊಡನೆ ನಾಲ್ಕು ವರ್ಷ ತುಂಬುವದರೊಳಗೆ ಎರಡು ಮಕ್ಕಳು, ಮನೆ ಬಾಡಿಗೆ, ಅವರನ್ನು ಎಲ್. ಕೆ. ಈ; ಯು.ಕೆ.ಜಿ ಎಂದು ಕೇಜಿಗಟ್ಟಲೇ ಶಾಲೆಗೆ ಸೇರಿಸುವದು, ಕೊಡಬೇಕಾದ ಭಾರೀ ಫೀಜು, ನಮ್ಮ ಊರು ಹಳ್ಳಿಯಲ್ಲಿ ಮತ್ತೆ ಮತ್ತೆ ಬೀಳುವ ಬರಗಾಲ, ಕೆಟ್ಟು ಹೋಗುವ ನೀರಾವರಿ ಬರ್ವೆಲ್ ಹೀಗೆ ಸಾವಿರ ಸಾವಿರ ತಂಟೆಗಳ ನಡುವೆ ನಲವತ್ತು ಸಾವಿರ ರೂಪಾಯಿ ( ಹೌದು ಹದಿನೈದು ವರ್ಷದ ಹಿಂದೆ ನಾ ತಗೆದುಕೊಂಡ ವೆಹಿಕಲ್ ಗೆ ಅಷ್ಟು ಮೊತ್ತ ಇತ್ತು) ಕೊಟ್ಟು  ಒಂದೇ ಕಂತಿನಲ್ಲಿ ಖರೀದಿ ಮಾಡುವದು ತುಂಬ ಕಷ್ಟದ ಸಂಗತಿಯಾಗಿತ್ತು.

      ಆಗ ನಮಗೆ ಸಹಾಯಕ್ಕೆ ಬಂದುದು ಎಮ್.ಎಸ್ ಐ.ಎಲ್ ಎಂಬ ಕರ್ನಾಟಕ ಸರ್ಕಾರದ ಹಣಕಾಸಿನ ಸಂಸ್ಥೆ. ಅವರು ನಮ್ಮ ಕಾಲೇಜಿಗೇ ಬಂದು ಎಲ್ಲ ರೆಕರ್ಡಗಳನ್ನು ತಯಾರಿಸಿ ಹಣವನ್ನು ಮಂಜೂರು ಮಾಡಿದರೆಂದೇ ಮನೆಯ ಮುಂದೆ ಈ ಹೊಸ ಮದುವಣಗಿತ್ತಿ ಬಂದು ನಿಲ್ಲುವಂತಾಯಿತು. ನಾನೋ ಪಕ್ಕಾ ಡ್ರೈವಿಂಗ ಕಲಿತವನಲ್ಲ. ಎಲ್ಲವನ್ನೂ ಹೊಸದಾಗಿ ಖರೀದಿಸಿಯೇ ಆ ಮೇಲೆ ಕಲಿತರಾಯಿತು ಎನ್ನುವ ಹುಂಬ.  ಯಾರಾದರೂ ಕೇಳಿದರೆ ‘ಏನು ಮದುವೆಯಾಗುವವರೇನು ಟ್ರೇನಿಂಗ್ ಸ್ಕೂಲಿಗೆ ಹೋಗರ್ತಾರೇನು? ಎಂದು ಕೇಳುವ ಭಾರೀ ವಿಚಿತ್ರ ಆಸಾಮಿ. ಮತ್ತು ಒಂದು ರೀತಿಯಲ್ಲಿ ಭಂಡ ಧೈರ್ಯದ ಮನುಷ್ಯ .ಹೀಗಾಗಿ ನನಗೆ ಸರಿಯಾಗಿ ಡ್ರೆöÊವಿಂಗ ಬರದೇ ಹಿರೋ ಹೊಂಡ ಪ್ಲೆಸರ್ ಅಂತೂ ಬಂದು ಮನೆಯ ಮುಂದೆ ನಿಂತಿತು.

     ಇದು  ಬರುವ ಮೊದಲಿನ ನನ್ನ ಪ್ರಯಾಣ ಸಾಹಸದ ಕಥೆಯನ್ನು ಸ್ವಲ್ಪ ನಿಮಗೆ ಹೇಳಬೇಕು. ಏಕೆಂದರ  ನಡುವೆ ಐಶ್ರ್ಯ ಬಂದವನು ತನ್ನ ಮೊದಲಿನ ಕಾಲದ ಬಡತನವನ್ನು  ಮರೆಯಬಾರದಲ್ವಾ ಹಾಗೆ..

      ನಾನು ಇರೋದು ನಡುವೆ ಗುಡ್ಡ ಸುತ್ತ ಹಬ್ಬಿರುವ ಸವದತ್ತಿ ಎಂಬ ಊರಲ್ಲಿ . ಅದರ ಮಧ್ಯದಲ್ಲಿ ಗುಡ್ಡದ ಮೇಲೆ ಸವದತ್ತಿ ರಟ್ಟರ ಕಾಲದ ಕೋಟೆ ಇದೆ. ಸುಂದರವಾದ ಕಾಡಸಿದ್ದೇಶ್ವರ ದೇವಾಲಯವಿದೆ. ಇಂದಿಗೂ ಅಚ್ಚರಿ ಬರುವಂತೆ ಸುಂದರವಾಗಿ ಕಾಣಿಸುವ ಶಿರಸಂಗಿ ದೇಸಾಯಿಯವರಾದ  ಜಾಯಪ್ಪ ದೇಸಾಯಿ ಕಟ್ಟಿಸಿದ ಅಪರೂಪದ ಕೋಟೆ ಇದೆ. ಜೊತೆಗೆ ಇದು ರಟ್ಟರು ಆಳಿದ ರಾಜಧಾನಿ . ಕುಹುಂಡಿ ಮುನ್ನೂರು , ಸುಗಂಧವರ್ತಿ ಇವೆಲ್ಲ ಊರಿಗ ಇದ್ದ ಹೆಸರುಗಳು. ಇಂಥ ಇತಿಹಾಸ ಪ್ರಸಿದ್ಧ ಊರೂ ಗುಡ್ಡದ ಸುತ್ತಲೂ ಹಬ್ಬಿದೆ. ನಾವು ಇರುವದು ಊರ ಕಡೆಯ ಭಾಗದಲ್ಲಿ . ಬಸ್ ನಿಲ್ದಾಣಕ್ಕೆ ಬರಬೇಕೆಂದರೆ ಗುಡ್ಡ ಇಳಿದೇ ಬರಬೇಕು. ಇಂದಿಗೆ ಇಪ್ಪತ್ತಾರು ಇಪ್ಪತ್ತೇಳು ವರ್ಷದ ಹಿಂದೆ (ಅಂದ ಹಾಗೆ ಈ ನಮ್ಮ ಮೊದಲ ಮಗನಿಗೆ ಇಪ್ಪತ್ತೇಳು ವರ್ಷ) ಈಗಿನಂತೆ ರಿಕ್ಷಾ ಇರಲಿಲ್ಲ. ಇದ್ದರೂ ದಿನಾಲೂ ಹಣ ಕೊಟ್ಟು ರಿಕ್ಷಾ ಹತ್ತೋ ಹಣವಂತನೂ ನಾನೂ ಆಗಿರಲಿಲ್ಲ. ಹೀಗಾಗಿ ಚಿಕ್ಕವರಿಬ್ಬರೂ ಮಕ್ಕಳಲ್ಲಿ ಒಬ್ಬನನ್ನು ಹೆಗಲ ಮೇಲೆ ಹೊತ್ತು ಇನ್ನೊಬ್ಬನ ಕೈಹಿಡಿದು , ನನ್ನ ಕಾಲೇಜ್ ಬ್ಯಾಗ್ ಬಗಲಿಗೇರಿಸಿ ಸವದತ್ತಿ ಪಟ್ಟಣದಲ್ಲಿ ತಿರುಗುತ್ತಿದ್ದ ಹಳ್ಳಿಗಾಡಿನ ಯುವಕನನ್ನು ನೀವು ಕಾಣಬಹುದಿತ್ತು. ಮಕ್ಕಳಲ್ಲಿಯೂ ಹೆಗಲ ಮೇಲೆ ಹತ್ತಲು ಜಗಳ ಇದ್ದೇ ಇರುತ್ತಿತ್ತು. ಮುಂದೆ ಅವರ ಪ್ರಾಥಮಿಕ ಶಾಲೆಯವರು ಒಂದು ಸ್ಕೂಲ್ ರಿಕ್ಷಾ ಮಾಡಿದ ಮೇಲೆ ಈ ಬವಣೆ ತಪ್ಪಿತು. ಇದೆಲ್ಲ ಬೇಡವನ್ನುತ್ತಲೆ ಮನೆಯಾಕೆ ಮತ್ತು ನಾನೂ ಸೇರಿ ಪ್ಲಾನ್ ಮಾಡಿ ಈ ಸುಂದರಿಯನ್ನು ಮನೆಗೆ ತಂದೆವು.

           ಸರಿಯಾಗಿ  ವೆಹಿಕಲ್ ನಡೆಸಲು ಬಾರದ ನನ್ನ ಹಿಂದೆ ಕುಳಿತು ಒಂದೆರಡು ಸಲ ಆಕೆ ಬಿದ್ದುದು ಉಂಟು ಪುಣ್ಯಕ್ಕೆ ಅಂತ ದೊಡ್ಡ ಅಪಘಾತ ಮಾಡಲಿಲ್ಲವೆನ್ನಿ. ಈಗ ಆಕೆ ಸ್ಕೂಟಿ ಕಲಿತ ಮೇಲೆ ನನ್ನ ಹಿಂದೆ ಕೂಡ್ರುವದಿಲ್ಲವೆನ್ನಿ. ಅವಳು ಸ್ಕೂಟಿ ಕಲಿತದ್ದು ಒಂದು ಬೇರೆ ಕಥೆಯೇ ಅದು ಇನ್ನೊಂದು ಪ್ರಬಂಧಕ್ಕೆ ವಸ್ತುವಾಗುತ್ತದೆ.

       ನಾನು ಈಗೀಗ ಈ ಸ್ಕೂಟರ ಹತ್ತುವದನ್ನು ನೋಡಿ ಬಹ: ಮಂದಿ ನನ್ನನ್ನು ಬೈಯುತ್ತಾರೆ. ‘ಹೇ ರ್ರ ನೀವು ಭಾರಿ ಗಳಸವಾರ ಬಿಡರಿ,  ಅಕ್ಕಾರ ಪಗಾರ, ಮಗ ಡಾಕ್ಟರ್, ನೀವು ಪ್ರಿನ್ಸಿಪಾಲರು! ಅ ರೊಕ್ಕ ಏನ್ ಮಾಡ್ತಿರಿ’ ಎಂದು ಚುಡಾಯಿಸುವವರೂ ಉಂಟು. ಅವರ ಮಾತಿಗೆ ರೋಸಿ ಹೋಗಿ ನಾನು ಒಮ್ಮೆ ಇದನ್ನು ಮಾರಲು ಹೋದೆ . ಒಬ್ಬ ಗ್ಯಾರೇಜಿನ ಪುಣ್ಯಾತ್ಮ ಅಳೆದೂ ಸುರಿದೂ ‘ಐದು ಸಾವಿರ ರೂಪಾಯಿಗೆ ಹೋಗತ್ತೆ ಸರ್’ ಎಂದ . ‘ಅಲ್ಲಾರಿ ನಲವತ್ತು ಸಾವಿರ ರೂಪಾಯಿ ಕೊಟ್ಟು ತಂದ ಗಾಡಿ.! ಹದಿನೈದು ವರ್ಷ ನನ್ನ ಮೆರೆಸಿದೆ. ಬರೀ ನಾನಲ್ಲ. ದೂರ ನೂರು ಕಿ.ಮೀ ನನ್ನ ಊರಿನಿಂದ ಮುಂದೆ ಅರ್ಧ ಕ್ವಿಂಟಲ್ ಜೋಳ ಹಿಂದೆ ಅದನ್ನೂ ಮೀರಿದ ಇವಳು ! ಇವರಿಬ್ಬರ ಮಧ್ಯೇ ಸಿಕ್ಕ ನಾನು ! ನಮ್ಮ ಸಂಸಾವನ್ನು ತುಂಬ ಪ್ರೀತಿಯಿಂದ ಹೊತ್ತ ಇದಕ್ಕೆ ಐದು ಸಾವಿರವೆ! ಇದೆಲ್ಲ ಕೇಳಿದ ಮೇಲೆ ಆತ ಕೊನೆಗೆ ಹತ್ತು ಸಾವಿರ ಕೊಡಿಸುವೆ ಸರ್’ ಅಂದ . ಬಹಳ ಬೇಜಾರಿನ ಮನಸ್ಸಿನಿಂದ ಮಗಳನ್ನು ಗಂಡನ ಮನೆಗೆ ಬಿಟ್ಟು ಬರುವ ಅಪ್ಪನಂತೆ ನಾನೂ ಮನೆಗೆ ಬಂದೆ. ಗಂಡನ ಮನೆಗೆ ಮಗಳನ್ನು ಕಳಿಸುವ ಅಪ್ಪನ ಸ್ಥಿತಿ ನನ್ನದಾಗಿತ್ತು. ಆ ದು:ಖ ಹೇಳತೀರದ್ದು .ಹೆಣ್ಣುಮಕ್ಕಳೇನೋ ಅತ್ತು ಹಗುರಾಗುತ್ತಾರೆ. ಗಂಡಸರ ಸ್ಥಿತಿ ಅಯೋಮಯ. ಅದನ್ನೆ ನಮ್ಮ ಜನಪದರು

 ಹೆಣ್ಣು ಮಗಳ ಕಳುಹಿ ಕಣ್ಣೀಗಿ ನೀರ ತಂದು

 ಸಣ್ಣಶೆಲ್ಲೆದಲಿ ಕಣ್ಣೊರಸಿ /ಸಣ್ಣಶೆಲೆದಲಿ ಕಣ್ಣೊರಸಿ

 ಬೇಡತಾನೋ/ ಹೆಣ್ಣ ಕೊಡಬ್ಯಾಡೋ ಜಲುಮಕ 

ಎಂದು ದು:ಖಿಸುವದನ್ನು ಹಾಡಿದ್ದಾರೆ. ನಾನೂ ಹಾಗೆ ದು:ಖ ಅನುಭವಿಸಿದೆ. ಮುಂಜಾನೆ ಯಾರೋ ಒಬ್ಬ ಮೆಡಿಕಲ್ ಪ್ರಾಕ್ಟೀಶನರ್ಗೆ ಗ್ಯಾರೇಜಿನವ ಗಾಡಿ ಮಾರಿದ್ದ . ಎಂಟು ದಿನ ಹೋಯಿತು. ನಾನೂ ಲಕ್ಷ ರೂಪಾಯಿ ಕೊಟ್ಟು ಹೊಸ ಹೊಂಡಾ ಯ್ಯಾಕ್ಟಿವಾ ತಗೆದುಕೊಂಡಿದ್ದೆ . ಈಗ ಹದಿನೈದು ವರ್ಷದ ಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿದ್ದು ಮೇಲೆಯೇ ಹೇಳಿದ್ದೇನೆ. ಆದರೆ ಎಂಟನೆಯ ದಿನಕ್ಕೆ ಗ್ಯಾರೇಜಿನವ ಪೋನ್ ಮಾಡಿದ “ಸರ್ ಗಾಡಿ ಕಾಗದ ಪತ್ರ ತುಗೊಂಡ ರ್ರಿ “ ಅಂದ. ಎಲ್ಲಿ ಕಾಗದ ಪತ್ರ ? ನಾನೋ ಲೈಸೆನ್ಸ , ಆರ್. ಸಿ ಬುಕ್ಕು, ಇದೇನನ್ನೂ ಪಡೆಯದ ಆಸಾಮಿ. ಅವನ್ನು ಪಡೆಯೊಕೆ ಹೋಗಿ ಆರ್.ಟಿ.ಒ ಅವರು ಫೇಲ್ ಮಾಡಿದ್ದರು. ಮತ್ತೆ ಅವರ ಗೊಡವೆಗೇ ಹೋಗಿರಲಿಲ್ಲ. ಮತ್ತೆ ಮೂಲ ಪತ್ರ ಎಮ್. ಎಸ್. ಐ. ಎಲ್ ದವರ ಕಡೆ ಇದ್ದವು. ಈಗ ಆ ಆಪೀಸು ಎಲ್ಲೋ? ಕಾಗದ ಪತ್ರ ಎಲ್ಲೋ ? ಲೋನ್ ಮುಟ್ಟಿದ ಮೇಲೆ ಅವನ್ನು ಮರಳಿ ತರಬೆಕು ಎನ್ನುವ ವ್ಯವಹಾರ ಜ್ಞಾನವೂ ಇಲ್ಲದ ಮುಟ್ಠಾಳ! ‘ಸರ್ ಕಾಗದ ಪತ್ರ ಇಲ್ಲ’ ಎಂದೆ . ಹಂಗಾರ ನಿಮ್ಮ ಗಾಡಿ ಮಾರಾಟಕ ಬರೂದಿಲ್ಲ ಸರ ನಿಮ್ಮ ಮನೆ ಮುಂದೆ ತಂದು ನಿಂರ್ಸತೇವಿ’ ಅಂದರು .ಆಯಿತು. ಈ ಬಾರಿ ತುಂಬು ಬಸುರಿ ಮಗಳನ್ನು ಮನೆಗೆ ಕರೆತರುವಂತೆ ಕರೆದುಕೊಂಡು ಬಂದೆ. ಖರೇ ಹೇಳಬೇಕೆಂದರೆ ಈ ಎಂಟು ದಿನದಲ್ಲಿ ಅಂದು ತೃಪ್ತಿಯಿಂದ ಊಟಾ ಮಾಡಿದ್ದೆ. ಹೊರಗೆ ಹೋಗಿ ಹೋಗಿ ಮತ್ತೆ ಅದನ್ನು ಮುಟ್ಟಿ ನೋಡಿದ್ದೆ.

     ಮರುದಿನ ಮನೆಯಲ್ಲಿ ಮಂತ್ರಿಮಂಡಳ ಸಭೆ ಸೇರಿತು ಮೂರು ಜನ ಸದಸ್ಯರು ನಾ ಒಬ್ಬ .ಎಲ್ಲರೂ ಸೇರಿಕೊಂಡು ‘ಇನ್ನೆರಡು ವರ್ಷ ನೌಕರಿ ಮುಗಿಯೊವವರೆಗೆ ಈ ಹಳೆಯ ಗಾಡಿಯನ್ನೆ ಪಪ್ಪಾ ಒಯ್ಯಲಿ, ಅದನ್ನು ಎಲ್ಲಿ ಬಿಟ್ಟರೂ ಯಾರೂ ಒಯ್ಯಲ್ಲ. ಅದನ್ನು ಹೆಂಗ ಬೇಕ ಹಂಗ ಒಂದು ಬ್ರೆಕ್ ಇಲ್ಲ, ಲೈನರ್ ಇಲ್ಲ. ದಡ್ ದಡ್ ಅಂತದ. ಹೊಡೆದು ಹಾಳು ಮಾಡಿದ್ದಾರೆ. ಇವರ ಕೈಯಾಗ ಏನ್ ಕೊಟ್ಟರೂ ಅಷ್ಟ..ಇವರಿಗೆ ಲಕ್ಷ ರೂಪಾಯಿಯ ಹೊಸ ಗಾಡಿ ಕೊಟ್ಟರೂ ಅಷ್ಟೆ ಮಾಡ್ತಾರೆ!’ ಎಂದು ಸಭೆಯ ತೀರ್ಮಾಣವಾಯಿತು. ನಾನೂ ಒಳಗೊಳ್ಗೆ ಖುಷಿ ಪಡುತ್ತಲೆ , ಆದರೆ ಹೊರಗ ದು:ಖ ನಟಿಸುತ್ತ ಅವರ ತೀರ್ಮಾನ ಸ್ವೀಕರಿಸಿದೆ.

       ಈಗ ನಾನು ಮತ್ತೆ ಅದರ ಮೇಲೆ ಆನೆ ಅಂಬಾರಿಯ ಮೇಲೆ ಕೂಡುವ ರಾಜನಂತ ಹತ್ತಿ ಹೊರಟರೆ ನನ್ನನ್ನು ಯಾರೂ ತಡೆಯುವದಿಲ್ಲ. ನನ್ನಿಂದ ಅದಕ್ಕೂ ಒಂದು ಗೌರವ. ಅದರಿಂದ ನನಗೂ ಒಂದು ಗೌರವ . ವರಕವಿ ಬೇಂದ್ರೆ ಹಾಡಿದಂತೆ  ‘ನನಗೂ  ನಿನಗೂ ಅಂಟಿದ ಕೊನೆ ಬಲ್ಲವರಾರು ಕಾಮಾಕ್ಷಿಯೆ’ ಎಂದು ಹಾಡುತ್ತ ಅದನ್ನೇರುತ್ತೇನೆ. ನನ್ನನ್ನು ಏರಿಸಿಕೊಂಡ ಅದೂ ರಾಜ ಮರ್ಯಾದೆಯಲ್ಲಿ ಓಡುತ್ತದೆ. ಈಗ ಹಿಂದೆ ಕೂಡ್ರಬೇಕಾದ ಯಜಮಾನಿಗೂ ಮಕ್ಕಳು ಹೊಸ ಸ್ಕೂಟಿ ಕೊಡಿಸಿದ್ದಾರೆ. ಅಕೆ ನನ್ನ ಹಳೆಯ ಗಾಡಿಯ ಮೇಲೆ ಹತ್ತಲು ನಿರಾಕರಿಸುತ್ತಾಳೆ. ಮಕ್ಕಳು ಮನೆಗೆ ಬಂದರೆ ತಮ್ಮ ಪಲ್ಸರ್ ಆಯಕ್ಟಿವಾ ಹೊರಗೆ ತಗೆಯುತ್ತಾರೆ. ಹಿಂದೆ ಯಾರೂ ಇಲ್ಲದಾಗ ನಮ್ಮ ಇಡೀ ಸಂಸಾರವನ್ನೇ ಹೊತ್ತು ಮೆರದ ಅದರ ಉಪಕಾರವನ್ನು ಮರೆತಿದ್ದಾರೆ. ನಾವು ಮಾತ್ರ ಚಿಂತಿಸದೆ “ಯಾರೇ ಕೂಗಾಡಲಿ ಯಾರೇ ಹಾರಾಡಲಿ” ಎಂದು ಅಣ್ಣಾವರ ಹಾಡು ಹೇಳುತ್ತ ಅವರ ದಡ್ಡತನಕೆ ಮುಸುಮುಸಿ ನಗುತ್ತೇವೆ

.

 ನೀನನಗೆ ನಾ ನಿನಗೆ ಜೇನಾಗುವಾ

 ರಸಜೀವ ಗಂಗೆಯಲಿ ಮೀನಾಗುವಾ

ಎಂದು ಹಾಡುತ್ತೇವೆ. ‘ನಾನಿರುವವರೆಗೂ ನೀನು . ನೀನಿರುವರೆಗೂ ನಾನು’ ಎಂದು ಒಬ್ಬರಿಗೊಬ್ಬರು ಜೊತೆಯಾಗಿದ್ದೇವೆ. ಪ್ರತಿ ಮನೆಯಲ್ಲೂ ಇಂಥದೊಂದು ಪ್ರೀತಿ ಇದ್ದೇ ಇರುತ್ತದೆನ್ನಿ!


ಡಾ.ವೈ.ಎಂ.ಯಾಕೊಳ್ಳಿ

2 thoughts on “ಹೀಗೊಂದು ಗಾಡೀ ಪುರಾಣ..!ಡಾ.ವೈ.ಎಂ.ಯಾಕೊಳ್ಳಿ

  1. ಅತಿ ಸರಳ, ಸುಂದರ, ಅದ್ಬುತವಾದ ಪುರಾಣ ಸರ್….!!!

    1. ಗಾಡಿಗೂ ನಿಮಗೂ ಅಂಟಿದ ಕೊನೆ ಬಲ್ಲವರ್ಯಾರು ಸರ್…..
      ಸೂಪರ್ ಬರಹ.

Leave a Reply

Back To Top