ಕಾವ್ಯ ಸಂಗಾತಿ
ಮಧುರಾ ಮೂರ್ತಿ
ಗಜಲ್
ರಂಗುರಂಗಿನ ಕನಸು ಕಾಣುವ ಮನದಲಿ ಕಾರ್ಮೋಡ ಕವಿದಿದೆ
ಸತ್ತು ಹೋದ ಭಾವಗಳಿಗೆ ನೀರೆರವ ವಿಧಾನ ಮುಗಿದಿದೆ
ಮೂಟೆ ಕಟ್ಟಿ ಹೂತು ಬಿಟ್ಟಿರುವೆ ಇನ್ನೆಂದೂ ಮೇಲೇಳದಂತೆ
ಸುತ್ತ ಕೋಟೆ ಕಟ್ಟಿ ಬಾಗಿಲು ಮುಚ್ಚಲು ಹೃದಯದ ಭಾರ ಇಳಿದಿದೆ
ನೆನಪುಗಳಿಗೆ ತರ್ಪಣ ಬಿಡುವ ಕಾರ್ಯ ಮಾಡಬೇಕಿದೆ ಶಾಂತಿಗಾಗಿ
ನೋವಿನ ಜ್ವಾಲೆಯಲಿ ಬೆಂದುಹೋದ ಚಿತ್ತವು ಮೌನವ ತಳೆದಿದೆ
ಕಡಲೆಷ್ಟು ಸುಂದರವಾಗಿ ಕಂಡರೂ ಅಲೆಗಳ ಘರ್ಜನೆ ನಿರಂತರ
ಅಬ್ಬರಿಸುವ ಅಲೆಗಳಿಂದ ದೂರ ಬರಲು ನಿಶ್ಯಬ್ಧತೆ ಉಳಿದಿದೆ
ಆದಿಯೆಂಬುದು ಇದ್ದಮೇಲೆ ಅಂತ್ಯವ ತಲುಪಲೇಬೇಕು
ಮಧುರ ಯಾನವ ಸಂಭ್ರಮಿಸಲು ಮನವು ನಿರ್ಲಿಪ್ತ ಭಾವ ತಳೆದಿದೆ
ಬಹಳ ಚೆನ್ನಾಗಿ ಬರೆದಿದ್ದೀರಿ ಮೇಡಂ