ನಿದಿರೆ ಇರದ ಇರುಳು (ಗಜಲ್ ಗಳು)

ಪುಸ್ತಕ ಸಂಗಾತಿ

ಮಂಡಲಗಿರಿ ಪ್ರಸನ್ನರವರ ಗಜಲ್ ಸಂಕಲನ

ನಿದಿರೆ ಇರದ ಇರುಳು

ಕೃತಿಯ ಹೆಸರು…………ನಿದಿರೆ ಇರದ ಇರುಳು (ಗಜಲ್ ಗಳು)
ಲೇಖಕರು………………. ಮಂಡಲಗಿರಿ ಪ್ರಸನ್ನ
ಪ್ರಕಟಿತ ವರ್ಷ ……….೨೦೨೨
ಬೆಲೆ ………‌.೧೧೦₹
ಪ್ರಕಾಶನ………..ಸ್ಪಂದನ ಪ್ರಕಾಶನ ರಾಯಚೂರು ಮೊ.೯೪೪೯೧ ೪೦೫೮೦

ಮಂಡಲಗಿ ಪ್ರಸನ್ನ ಅವರು ರಾಯಚೂರಿನವರಾಗಿದ್ದು ಓದಿದ್ದು ಇಂಜಿನಿಯರಿಂಗ್ ಬಹು ರಾಷ್ಟ್ರೀಯ ಕಂಪನಿಯಲ್ಲಿ ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿ ಈಗ ನಿವೃತ್ತಿ ಹೊಂದಿ ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ .ಈಗಾಗಲೇ ಇವರು ಕವಿತೆ ,ಮಕ್ಕಳ ಕವಿತೆ ,ಲಲಿತ ಪ್ರಬಂಧ ,ಮಕ್ಕಳ ನಾಟಕಗಳು ,ಸಂಪಾದಕೀಯಗಳು ,ಹೀಗೆ ಹಲವಾರು ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ರಚಿಸಿ ಚಿರಪಚಿತರಾಗಿದ್ದು . ಈಗ ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ “ನಿದಿರೆ ಇರದ ಇರುಳು” (ಗಜಲ್ ಗಳು )ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಓದುಗರ ನಿದ್ರೆ ಕೆಡಿಸಿದ್ದಾರೆ . ಅನೇಕ ಸಾಹಿತ್ಯ ಪುರಸ್ಕಾರಗಳು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

          ಗಜಲ್ ಕೃತಿ ಕಂಡ ಕ್ಷಣ ಉತ್ಸಾಹದಿಂದ ಓದಿ ಅದರ ಬಗ್ಗೆ ನನಗೆ ತಿಳಿದಷ್ಟು 4 ಸಾಲು ಬರಿಯುವ ಹುಚ್ಚು ಅಂಟಿಕೊಂಡಿದೆ.  ಗಜಲ್ ಓದುವುದು ಒಂದು ಖುಷಿಯ ವಿಷಯವಾಗಿದೆ ,ಅದರಲ್ಲೂ ಮಾಗಿದ ಮನಸ್ಸುಗಳ ಗಜಲ್ ಗಳು ಇನ್ನೂ ಹೆಚ್ಚಿನ ಖುಷಿ ಕೊಡುತ್ತವೆ .ಅವು ಅನುಭವದ ಮೂಟೆಯೇ ಆಗಿರುತ್ತವೆ. ಅವುಗಳನ್ನು ಓದಿ  ಅನುಭವಿಸಿದಷ್ಟು ಮನಸ್ಸು ಉಲ್ಲಾಸವಾಗುತ್ತದೆ  .

        ಈಗ ಕನ್ನಡ ಗಜಲ್ ಗಳ ರಚನೆ ಕರ್ನಾಟಕದಲ್ಲಿ ಭರದಿಂದ ಸಾಗಿದೆ ,ಆದರೆ ಗಜಲ್ ರಾಣಿ ಎಲ್ಲರಿಗೂ ಒಲಿಯುವುದಿಲ್ಲ ,ಯಾರು ಭಕ್ತಿಯಿಂದ ಆರಾಧಿಸುತ್ತಾರೆ ಸದಾ ಅವಳ ಧ್ಯಾನದಲ್ಲಿ ಇರುತ್ತಾರೆ ಅಂತವರಿಗೆ ಒಲಿಯುತ್ತಾಳೆ .ಅಂತವರಲ್ಲಿ ಮಂಡಲಗಿರಿ ಪ್ರಸನ್ನ ಅವರು ಒಬ್ಬರಾಗಿದ್ದಾರೆ ,ಚಿಕ್ಕಂದಿನಿಂದಲೂ ಗಜಲ್ ಗಳನ್ನು ಕೇಳುವುದು,ಗಜಲ್ ಗಳನ್ನು  ಓದುವ ಹವ್ಯಾಸ ಹೊಂದಿದ ಇವರು ಧ್ಯಾನಿಸುತ್ತಾ ತಮ್ಮ ಮನದಾಳದಲ್ಲಿ ಮೂಡಿದ ಭಾವನೆಗಳನ್ನು ಗಜಲ್ ಗಳಲ್ಲಿ ಬಿಂಬಿಸಿದ್ದಾರೆ . "ನಿದಿರೆ ಇರದ ಇರುಳು "ಎಂಬ ಉತ್ತಮವಾದ ಗಜಲ್ ಸಂಕಲವನ್ನು ಓದುಗರಿಗ ಕೈಗೆ  ನೀಡಿದ್ದಾರೆ, ಅದಕ್ಕೆ ನಾವು ಧನ್ಯವಾದಗಳು ಹೇಳಬೇಕು .

           ಗಜಲ್ ಸಾಹಿತ್ಯವು  ನವಿರಾದ ಮಧುರವಾದ ಶಬ್ದಗಳಲ್ಲಿ ಹೆಣೆಸಿಕೊಳ್ಳುವ ಕಾವ್ಯವಾಗಿದೆ .ಪ್ರೇಮ ,ವಿರಹ, ಅಧ್ಯಾತ್ಮಿಕ ,ತನ್ನನ್ನು ತಾ ಅರಿತು ಸಮರ್ಪಿಸಿಕೊಳ್ಳುವ ಸ್ಥಾಯಿ ಭಾವಗಳು ಇರುತ್ತವೆ. ಲೌಕಿಕ ದಿಂದ ಅಲೌಕಿಕ ಕಡೆ  ಓದುಗರನು ಕೊಂಡೊಯ್ಯುತ್ತದೆ. ಗಜಲ್ ದಲ್ಲಿ ನೋವು ಸಹ ಮಧುರವಾದ ಯಾತನೆಯಾಗಿರುತ್ತದೆ , ಮನಸ್ಸಿಗೆ ನಾಟುವ ಬಾಣದಂತೆ ಹೃದಯಕ್ಕೆ ತಾಕುವಂತಹದ್ದು ,ಹಿತವಾದ ನೋವು ಅಡಗಿರುತ್ತದೆ .ಕಾಯುವಿಕೆ ,ಕನವರಿಕೆ,ಕನಸು ,ಹಂಬಲಗಳು ಗಜಲ್ ದ ಚೆಲುವು ಹೆಚ್ಚಿಸುತ್ತವೆ. ಗಜಲ್ ಗೇಯತೆ ಯಿಂದ ಕೂಡಿದ್ದು ಇದು ಒಂದು ಹಾಡು ಗಬ್ಬವಾಗಿದೆ . ಗಜಲ್ ರಚನೆಯು ತನ್ನದೇ ಆದ ಛಂದಸ್ಸನ್ನು ಹೊಂದಿರುತ್ತದೆ. ಮಂಡಲಗಿರಿ ಪ್ರಸನ್ನ ಅವರ ಗಜಲ್ ಗಳಲ್ಲಿ  ಇರಬೇಕಾಗುವ ಲಕ್ಷಣಗಳನ್ನು ಓದುಗರು ಗ್ರಹಿಸುತ್ತಾರೆ. ಓದುಗರಿಗೆ ಗಜಲ್ ಗಳು ಸಂತಸವನ್ನು ನೀಡುತ್ತವೆ .

         ಮಂಡಲಗಿರಿ ಪ್ರಸನ್ನ  ಇವರ " ನಿದಿರೆ ಇರದ ಇರುಳು " ಗಜಲ್ ಗಳ ಸಂಕಲನದಲ್ಲಿ ಒಟ್ಟು 61 ಗಜಲ್ ಗಳು ಇದ್ದು ಅವು ಛಂದಸ್ಸಿನಿಂದ ಹಾಗೂ ಮೃದು ಮಧುರ ಭಾಷೆಯಿಂದ ಕೂಡಿವೆ, ಗಜಲ್ ಗಳ ಸ್ಥಾಯಿ ಗುಣವಾದ ಪ್ರೀತಿ, ಪ್ರೇಮ, ವಿರಹ ,ಕಾಯುವಿಕೆ ,ಕನವರಿಕೆ, ಕನಸುಗಳಿಂದ ಶ್ರೀಮಂತವಾಗಿವೆ ಮತ್ತು ಸಾಮಾಜಿಕ ಕಳಕಳಿಯ ಗಜಲ್ ಗಳು ಇವೆ . 
         " ನಿದಿರೆ ಇರದ ಇರುಳು" ಗಜಲ್ ಸಂಕಲನಕ್ಕೆ ರಮೇಶ ಅರೋಲಿ ನವ ದೆಹಲಿ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ.ಡಾ.ಬಸು ಬೇವಿನಗಿಡದ  ಅವರು ಸುಂದರವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಮುದ್ರಣ ಕ್ಕಿಂತ ಮೊದಲು ಗಜಲ್ ಗಳನ್ನು ಓದಿ ಅನುಬಂಧದ ಮಾತುಗಳನ್ನು ಶರಣಬಸಪ್ಪ ಕುಂಬಾರ್ ಕವಿ ಸಾಹಿತಿ ಇವರು ಮಹಾರಾಷ್ಟ್ರದ ಪೂನಾದಲ್ಲಿ ಇದ್ದರು ಓದಿ ಸಂತಸವನ್ನು ಹಂಚಿಕೊಂಡಿದ್ದಾರೆ.ಸಂಕಲನದ ಮುಖಪುಟ ಚಿತ್ರವನ್ನು ಶ್ರೀ ರವಿ ದಾಚಂಪಲ್ಲಿ  ಶಹಬಾದ್ ಅವರು ಸುಂದರವಾಗಿ ಆಕರ್ಷಕವಾಗಿ ವಿನ್ಯಾಸಿಸಿದ್ದಾರೆ . ಶ್ರೀ ಎಂ ಸಂಜೀವ್ ಕಲ್ಬುರ್ಗಿ ಅವರು ರಚಿಸಿದ ಒಳ ಚಿತ್ರಗಳು ಅಂದವಾದ ರೇಖಾಚಿತ್ರಗಳಾಗಿದ್ದು ಗಜಲ್ ದ ಸೌಂದರ್ಯ ಹೆಚ್ಚಿಸಿವೆ.
     "ಸುಂದರ ಮುಂಜಾವಿಗೆ ಬರೆಯಲಿಹುದು ಮುನ್ನುಡಿ"
     "ಚೆಂಬೆಳಗಿನ ಹೊಂಗಿರಣ ಭರವಸೆಯ ಹೊನ್ನುಡಿ"  ( ಗಜಲ್ ೧) 

     ಸಂಜೆ ಮರೆಯಾದ ನೇಸರ ಸುಂದರವಾದ ಮುಂಜಾವಿಗೆ ಪ್ರಕೃತಿಯ ದಿನಾಚರಣೆಗೆ ಮುನ್ನಡೆ ಬರೆಯಲು ಸಡಗರದಿಂದ ಬರುತ್ತಾನೆ .ಅವರ ಬರುವಿನಿಂದ ಸಕಲ ಜೀವರಾಶಿಯಲ್ಲಿ ಚೈತನ್ಯ ತುಂಬುತ್ತಾ ಅಲ್ಲಾದಕರವಾದ ಹಗಲು ಹುಟ್ಟುತ್ತದೆ .ಅವನು ಹರಡಿದ ಹೊಂಗಿರಣಗಳು ಬಾಳಿಗೆ ಭರವಸೆಯನ್ನು ಕೊಡುತ್ತವೆ ಎಂಬ ಗಜಲ್ ದ ಮತ್ಲಾ ಸಕಲ  ಜೀವ ರಾಶಿಗಳ ಬಾಳಿಗೆ ಅರ್ಥಪೂರ್ಣವಾದ ಸಾಲ ಆಗಿದೆ.

“ನನ್ನೆದೆಗೆ ಅವಳು ರಂಗೋಲಿ ಬರೆದು ಬಣ್ಣ ತುಂಬಿದಳು”
“ನಕ್ಷತ್ರಗಳ ಹೆಕ್ಕಿ ತಂದು ಚೆಂದದಿ ಚಿತ್ತಾರ ಸಿಂಗರಿಸಿದಳು”. (ಗಜಲ್ ೬)

ಪ್ರೀತಿಸಿದ ಕನ್ಯೆ ಮನದನ್ನೆಯು ಅವನೆದೆಗೆ ಸಂತಸದ ರಂಗೋಲಿ ಹಾಕಿ ಒಲವಿನ ಬಣ್ಣ ತುಂಬಿದ್ದಾಳೆ ಬಾನಿನ ತಾರೆಗಳನ್ನು ಹೆಕ್ಕಿ ತಂದು ಆ ಬಣ್ಣದ ರಂಗೋಲಿಗೆ ಇನ್ನು ಹೆಚ್ಚಿನ ಸಿಂಗಾರ ಮಾಡಿ ಸಂತೋಷಪಟ್ಟಿದ್ದಾಳೆ . ಜೊತೆಗೆ ಅವನಿಗೂ ಖುಷಿ ಕೊಟ್ಟಿದ್ದಾಳೆ. ಎರಡು ಜೀವಿಗಳು ಒಲವಿಂದ ಬೆಸಗೊಂಡು ಸಂತಸದಲ್ಲಿ ಇವೆ ಎಂಬ ಕಲ್ಪನೆಯ ಸುಂದರವಾದ ಗಜಲನ್ನು ಉತ್ತಮವಾದ ರೂಪಗಳಿಂದ ರಚಿಸಿದ್ದಾರೆ.

ಸತ್ತ ದೇಹದ ಮುಂದೆ ಕೂತು ಅಳುವಲ್ಲಿ ಅರ್ಥವೇನಿದೆ”
“ಇರುವಾಗ ಪ್ರೀತಿ ತೋರದೆ ಕಣ್ಣೀರಿಡುವಲ್ಲಿ ಅರ್ಥವೇನಿದೆ” ( ಗಜಲ್೧೩)

ಇದು ಒಂದು ಸಾಮಾಜಿಕ ವ್ಯವಸ್ಥೆಯ ಗಜಲಾಗಿದ್ದು, ಸಮಾಜದಲ್ಲಿ ಎಷ್ಟೋ ಮನೆಗಳಲ್ಲಿ ಇರುವಾಗ ವ್ಯಕ್ತಿಗಳಿಗೆ ಕೊಡಬೇಕಾದ ಆದರ ,ಪ್ರೀತಿ ,ಮಮಕಾರ, ಗೌರವಗಳನ್ನು ಕೊಡದೆ ಕಡೆಗಣಿಸುತ್ತಾರೆ .ಆದರೆ ಆ ವ್ಯಕ್ತಿ ಸತ್ತಾಗ ಆ ಶವಕ್ಕೆ ಸಿಂಗಾರ ಮಾಡುತ್ತಾರೆ, ಬಿಟ್ಟು ಹೋದೆಯಲ್ಲ ಎಂದು ಅಳುತ್ತಾರೆ .ಈ ವ್ಯವಸ್ಥೆಗೆ ಬೇಸರಿಸಿ ಮನನೊಂದು ಸಮಾಜಕ್ಕೆ ಈ ರೀತಿ ಮಾಡುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸುತ್ತಾರೆ ಕವಿ . ಇದು ಒಂದು ಶೀತಲವಾದ ಬಂಡಾಯದ ಸಾಮಾಜಿಕ ಕಳಕಳಿಯ ಗಜಲ್ ಎಂದು ಹೇಳಬಹುದು .

ಬದುಕಲಿ ಎಲ್ಲವನು ಕಳೆದುಕೊಂಡರೂ ಪ್ರೀತಿಯೊಂದಿರಲಿ”
“ನೆಮ್ಮದಿಗೆ ಏನೂ ಬೇಡ ಅಂದುಕೊಂಡರೂ ಪ್ರೀತಿಯೊಂದಿರಲಿ” ( ಗಜಲ್ ೧೭)

ಪ್ರೀತಿಯ ಬಗ್ಗೆ ಅನೇಕ ಕವಿಗಳು ತಮ್ಮದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಜೆ ಎಸ್ ಎಸ್ ಅವರು “ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ “ಎಂದು ಹೇಳಿದ್ದಾರೆ . ಕೆ ಎಸ್ ನ ಅವರು ಪ್ರೇಮ ಕವಿ ಎಂದು ಅನಿಸಿಕೊಂಡವರು “ನಿನ್ನ ಪ್ರೇಮದ ಪರಿ ನಾ ಅರಿಯೆ ಕನಕಾಂಗಿ ” ಎಂದರೆ ,ಬೇಂದ್ರೆಯವರು “ನಾನು ಬಡವಿ ಆತ ಬಡವ ಒಲವೇ ನಮ್ಮ ಆಸ್ತಿ” ಎಂದಿದ್ದಾರೆ. ಅದರಂತೆ ಮಂಡಲಗಿರಿ ಪ್ರಸನ್ನ ಅವರು ಜೀವನದಲ್ಲಿ ಆಸ್ತಿ, ಅಂತಸ್ತು ,ಅಧಿಕಾರ ,ಸಿರಿತನ ,ಎಲ್ಲಾ ಕಳೆದುಕೊಂಡರು ಪ್ರೀತಿ ಒಂದು ಇರಲಿ ಬಾಳಿನಲ್ಲಿ ಎಂದು ಸುಂದರವಾದ ರೂಪಕಗಳೊಂದಿಗೆ ಈ ಗಜಲನ್ನು ಹೆಣೆದಿದ್ದಾರೆ.

ಕತ್ತಲಾಗುತಿದೆ ಮೇಲೊಂದು ಮನೆಯಿದೆ ಹೋಗಬೇಕು”
“ಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು” ( ಗಜಲ್ ೪೦)

ಇದು ಒಂದು ಅಧ್ಯಾತ್ಮಿಕ ಗಜಲ್ ಆಗಿದೆ.ಶಿಶುನಾಳ ಶರೀಫ್ ಅವರ ತತ್ವ ಪದಗಳನ್ನು ನೆನೆಪಿಸುತ್ತದೆ. ಬದುಕು, ಸಂಸಾರದ ಜಂಜಾಟ ಮುಗಿಸಿ ಇಹಲೋಕ ಬಿಟ್ಟು ಪರಲೋಕಕ್ಕೆ ಹೋಗಬೇಕು ಇಲ್ಲಿಯೇ ಕಾಯುತ್ತಾ ಸುಮ್ಮನೆ ಕೂಡುವುದು ಸರಿಯಲ್ಲ ಎಂದು ಹೇಳುತ್ತಾರೆ .ಮೋಹದ ಸುಳಿಯಲಿ ಸುತ್ತದೆ ಬೆಳಕಿನ ಮೇಲಿನ ಮನೆಗೆ ಎಲ್ಲರೂ ಹೋಗ ಬೇಕಂಬ ಭಾವ ಈ ಗಜಲ್ ದಲ್ಲಿದೆ.

ಮನಸು ಮೋಡವಿರದ ಬಾನಾಗಿತ್ತು ನೀನು ಬಳಿ ಇದ್ದಾಗ”
“ನೂರು ಹುಣ್ಣಿಮೆ ಚಂದ್ರರ ಬೆಳಕಿತ್ತು ನೀನು ಬಳಿ ಇದ್ದಾಗ” (ಗಜಲ್ ೫೭)

ನೀ ಬಳಿ ಇರಲು ಬಿಸಿಲೇ ನೆರಳು ಎಂಬಂತೆ ಒಲಿದ ಜೀವಿಗಳು ಜೊತೆಯಾಗಿ ಇದ್ದಾಗ ಜಗದ ಎಲ್ಲಾ ವಸ್ತುಗಳು ಸುಂದರವಾಗಿ ಕಾಣುತ್ತವೆ .ಮನಸ್ಸು ಹಗುರವಾಗಿ ಸಂತಸದಲಿ ತೇಲಾಡುತ್ತದೆ, ಸದಾ ಬೆಳದಿಂಗಳ ತಂಪು ಇರುತ್ತದೆ. ಒಲಿದ ಜೀವ ದೂರವಾದಾಗ ಬದುಕು ಭಾರವಾಗುತ್ತದೆ, ವಿರಹದಲ್ಲಿ ಕಳೆದ ದಿನಗಳನ್ನು ಮನಸ್ಸು ಮೆಲಕು ಹಾಕುತ್ತದೆ, ನೀನು ಜೊತೆ ಇದ್ದಾಗ ಬಾಳು ಸುಂದರವಾಗಿತ್ತು, ಸೃಷ್ಟಿಯೇ ಅಹಲ್ದಾಕರವಾಗಿತ್ತು ಎಂದು ನೆನಪಿಸಿಕೊಳ್ಳುತ್ತದೆ. ಎಂಬುದನ್ನು ಉತ್ತಮವಾದ ರೂಪಕಗಳೊಂದಿಗೆ ಗಜಲನ್ನು ರಚಿಸಿದ್ದಾರೆ.

     ಪ್ರಸನ್ನ ಅವರ "ನಿದಿರೆ ಇರದ ಇರುಳು" ಗಜಲ್ ಸಂಕಲನದಲ್ಲಿ ಚಿಂತೆಗೆ ಹಚ್ಚುವ ಕೆಲವು ಗಜಲುಗಳಿದ್ದರೆ ಮತ್ತೆ ಕೆಲವು ನಿದ್ದೆ ಕೆಡಿಸುವ ಗಜಲ್ ಗಳು ಇವೆ. ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ, ಓದಗರಿಗೆ ನಿರಾಶೆಯನ್ನು ಮಾಡುವುದಿಲ್ಲ. ಇವರಿಂದ ಇನ್ನೂ ಒಳ್ಳೆಯ ಅನೇಕ ಗಜಲ್ ಸಂಕಲನಗಳು ಬರಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
--------------------------------

ಪ್ರಭಾವತಿ ಎಸ್ ದೇಸಾಯಿ

Leave a Reply

Back To Top