ತಿಂಗಳ ಕವಿ-ಭಾರತಿ ಅಶೋಕ್

ನಮ್ಮ ಕವಿ

ಪ್ರಚಾರ ಬಯಸದ ಕವಿ

ಭಾರತಿ ಅಶೋಕ್

ಕವಿ ಪರಿಚಯ

ಅವಿಭಜಿತ ಬಳ್ಳಾರಿ( ಈಗ ವಿಜಯನಗರ) ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ (ಜುಲೈ1ರಂದು )ಜನಿಸಿದ ಇವರು, ಬಾಲ್ಯವು ಸಾಹಿತ್ಯ, ಸಂಗೀತದ ವಾತವಾರಣದಲ್ಲಿ ಕಳೆದರೂ ಸಂಗೀತ ಒಲಿಯಲಿಲ್ಲ ಸರಸ್ವತಿ ಮಾತ್ರ ದೂರ ತಳ್ಳಲಿಲ್ಲ,ಮನೆಯ ಪರಿಸರಕ್ಕಿಂತ ಹೆಚ್ಚು ಪ್ರಭಾವಿಸಿದ್ದು ಶಾಲೆ ಕಾಲೇಜಿನ ಪರಿಸರ, ಸದಾ ಓದು, ಸ್ನೇಹಿತರು ಅಂತ ಹೊರಗೆ ಇರುತ್ತಿದ್ದುದು ಇದಕ್ಕೆ ಪೂರಕ. ಚಿಕ್ಕಂದಿನಿಂದಲೇ ಆಟಪಾಠಗಳಲ್ಲಿ ಯಾವಾಗಲೂ ಮುಂದು, ಕೋ ಕೋ ಇವರಿಷ್ಟದ ಆಟ ಜಿಲ್ಲಾ ಮಟ್ಟದವರೆಗೂ ಆಡಿರುವುದು ಹೆಗ್ಗಳಿಕೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಸ್ವಂತ ಗ್ರಾಮವಾದ ಸೋಗಿಯಲ್ಲೇ ನಡೆಯಿತು. ಪದವಿ ಪೂರ್ವ ಮತ್ತು ಪದವಿ ಶಿಕ್ಷಣವು ಹೂವಿನ ಹಡಗಲಿಯ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾ ವಿದ್ಯಾಲಯದಲ್ಲಿ( ಗುಲ್ವರ್ಗಾ ವಿ ವಿ) ಆದರೆ , ಬಿ ಇಡಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯ ಬೆಳಗಾವಿಯಲ್ಲಿ(ಕರ್ನಾಡಕ ವಿ ವಿ) ಪೂರೈಸಿ, ಹೈಸ್ಕೂಲ್ ದಿನದಿಂದಲೇ ಅನುರಕ್ತಳಾದ ಸ್ಪುರದ್ರೂಪಿ ಹುಡುಗನೊಂದಿಗೆ ವಿವಾಹವಾಗುತ್ತದೆ. ಅಲ್ಲಿಂದ ನವ ದೆಹಲಿಯಲ್ಲಿ ಮೂರು ವರ್ಷದ ವಾಸದ ನಂತರ ಮತ್ತೆ ಕರ್ನಾಟಕಕ್ಕೆ ಮರಳಿದರು, ಪ್ರಸ್ತುತ ಹೊಸಪೇಟೆಯಲ್ಲಿ ವಾಗಿರುವ ಇವರು ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು , ಅಲ್ಲಿಯೇ “ಕನ್ನಡ ಹಾಸ್ಯ ಸಾಹಿತ್ಯದಲ್ಲಿ ವಿಡಂಬನೆಯ ತಾತ್ವಿಕ ನೆಲೆಗಳು” ಎನ್ನುವ ವಿಷಯದ ಮೇಲೆ ಸಂಶೋಧನೆಯನ್ನು ಕೈಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸ್ಥಳೀಯ ಖಾಸಗೀ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು, ಪದವಿಪೂರ್ವ ನಂತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನಿಷ್ಟದ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಾವ್ಯದ ವಸ್ತುವೆಂದರೆ ಹೆಣ್ಣಿನ ಬದುಕನ್ನು ತಲ್ಲಣಗೊಳಿಸುವ, ಸಮಾಜಕ್ಕೆ ಮಾರಕ ಎನ್ನುವ ಸೂಕ್ಷ್ಮ ವಿಷಯಗಳು, ಹೆಣ್ತನಕ್ಕಾಗಿ ಕೃತಜ್ಞತೆ ಹೊಂದಿರುವ ಈಕೆ ಅದನ್ನು ಅದ್ಬುತವಾಗಿ ಅನುಭವಿಸುವ ಸಂವೇದನಾಶೀಲೆ.

೧. ಈಗಾಗಲೇ ಅಡಿಗರ ಸಾಕ್ಷಿ ತ್ರೈ ಮಾಸಿಕ ಪತ್ರಿಕೆಯ 37ನೇ ಹೇಮಂತ ಸಂಚಿಕೆಯನ್ನು ಕುರಿತ ” ಈಚಿನ ಕನ್ನಡ ಕವಿತೆಗಳ ಕುರಿತ ಸಾಕ್ಷಿಯ ಮರು ಓದು” ಎನ್ನುವ ಲೇಖನ ಅಡಿಗರು ಎಂಬ ಸಾಕ್ಷಿ ಪ್ರಜ್ಞೆ” ಎನ್ನುವ ಕೃತಿಯಲ್ಲಿ ಪ್ರಕಟವಾಗಿದೆ, ಇದೊಂದು ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಕೃತಿಯಾಗಿದ್ದು, ಸಂಶೋಧನಾ ಲೇಖನಗಳ ಸಂಗ್ರಹವಾಗಿದೆ, ಸಂಶೋಧಕರಿಗೆ ಅಮೂಲ್ಯ ಆಕರ ಗ್ರಂಥವೂ ಆಗಿದೆ, ಇದು ಸಾರ್ವಜನಿಕ ಗ್ರಂಥಾಲಯದಲ್ಲಿ ಲಭ್ಯವಿದೆ ಸಂಪಾದಕರು ಸ್ನೇಹಿತ ಡಾ. ರವಿಶಂಕರ್ ಎ.ಕೆ
ಪ್ರಕಾಶಕರು, ಎಸ್ ಎಲ್ ಎನ್ ಪಬ್ಲಿಕೇಷನ್ ಬೆಂಗಳೂರು.

೨. “ಕುವೆಂಪುರವರ ಕಥೆಗಳಲ್ಲಿ ಆಧುನಿಕರಣದ “ಪ್ರಕ್ರಿಯೆ” ಎನ್ನುವ ಸಂಶೋಧನಾ ಲೇಖನ ” ಬೇರು ತೇರು( ಬೇಂದ್ರೆ ಕುವೆಂಪು ಗದ್ಯ ಸಾಹಿತ್ಯ ಕುರಿತ ಸಂಶೋಧನಾ ಲೇಖನಗಳು) ಎನ್ನುವ ಕೃತಿಯಲ್ಲಿ ಪ್ರಕಟವಾಗಿದ್ದು ಸಂಪಾದಕರು ಡಾ. ರವಿಶಂಕರ ಎ.ಕೆ. ಮತ್ತು ಅನಿತ ಕೆ ವಿ,
ಪ್ರಕಾಶಕರು ಸಾದನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ( ರಿ) ಬೆಂಗಳೂರು
ಇದು ಸಹ ಮೌಲ್ಯಿಕವಾಗಿದ್ದು ಸಂಶೋಧಕರಿಗೆ ಆಕರ ಗ್ರಂಥವಾಗಿದೆ

೩.”ಹಾಸ್ಯ ಸಾಹಿತ್ಯದಲ್ಲಿ ಮಹಿಳೆಯ ಚಿತ್ರಣ” ಎನ್ನುವ ಲೇಖನ “ಜಗದಗಲ ಮಂಟಪ” ಎನ್ನುವ ಸಂಶೋಧನಾ ಲೇಖನಗಳ ಸಂಪಾದಿತ ಕೃತಿಯಲ್ಲಿ ಪ್ರಕಟವಾಗಿದ್ದು, ಸಂಪಾದಕರು ಡಾ. ಶೀಲಾದೇವಿ ಎಸ್ ಮಳಿಮಠ. ಪ್ರಕಾಶಕರು ಸುಭಾಷ್ ಸ್ಟೋರ್ಸ್ ಅವೆನ್ಯೂ ರೋಡ್ ಬೆಂಗಳೂರು‌

೪. “ಬೀಚಿಯವ ಕಾದಂಬರಿಗಳಲ್ಲಿ ಸಾಮಾಜಿಕ ಚಿಂತನೆ” ಈ ಲೇಖನ ಡಾ. ನಾಗರಾಜ ಡಿ. ಮುರಗೋಡು ಅವರು ಸಂಪಾದಿಸಿದ “ಅಂತರ್ಗತ” ಎನ್ನುವ ಕೃತಿಯಲ್ಲಿ ಪ್ರಕಟವಾಗಿದ್ದು, ಅನಂತ ಪ್ರಕಾಶನದವರು ಹೊರ ತಂದಿದ್ದಾರೆ ಇದು ಸಹ ಸಂಶೊಧಕರಿಗೆ ಉತ್ತಮ ಆಧಾರವನ್ನು ಒದಗಿಸುತ್ತದೆ.

ಇನ್ನು ಇದರ ಹೊರತಾಗಿ ಲಘು ಲೇಖನಗಳು ಮನಸ್ಸಿಗೆ ಲಗ್ಗೆ ಇಟ್ಟು ಮನಸ್ಸಿನ ತುಮುಲವನ್ನು, ತುಡಿತವನ್ನು ಎಕ್ಕಿ ತೆಗೆವ , ಸಾಂತ್ವಾನ ನೀಡುವ ಚಿಕ್ಕ ಚಿಕ್ಕ ಬರೆಹಗಳು, ಬಿಡಿ ಲೇಖನಗಳು ಮತ್ತು ಕವಿತೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಅಗುತ್ತಿವೆ.

“ಮೌನ ಮಾತಾದಾಗ” ಕವನ ಸಂಕಲನ. ಹೈಸ್ಕೂಲ್ ಮತ್ತು ಕಾಲೇಜು ದಿನಗಳಲ್ಲಿ ಬೆರದ ಕವಿತೆಗಳ ಸಂಗ್ರಹ. ಇದನ್ನು ೨೦೧೭ ರಲ್ಲಿ ಬಿ ಇಡಿ ಸ್ನೇಹಿತರು ಸೇರಿ ಇವರು ತರಬೇತಿ ಪಡೆದ ಕಾಲೇಜಿನಲ್ಲಿ ಏರ್ಪಡಿಸಿದ ಸ್ನೇಹ ಸಮ್ಮೇಳನದಲ್ಲಿ ಕೋಮಲ್ ಪ್ರಕಾಶನದಿಂದ ಹೊರತಂದಿದ್ದಾರೆ,

ಇನ್ನು ಚುಟುಕು, ಚಾಲ್ತಿಯಲ್ಲಿರುವ ಹಾಯ್ಕು, ತನಗ ಗಳಂತಹ ಹೊಸ ಪ್ರಯೋಗವನ್ನು ಮಾಡಿ ಎಲ್ಲಾ ಪ್ರಕಾರದ ಸಾಹಿತ್ಯಕ್ಕು ಒಗ್ಗುವ ಮನಸ್ಥಿತಿಯವರು ಭಾರತಿ ಅಶೋಕ್

********

ಭಾರತಿ ಅಶೋಕ್ ಕವಿತೆಗಳು

ಜೀವ ಬಿಟ್ಟೇವು – ಭೂಮ್ತಾಯಿ ಅಲ್ಲ.

ಹೊಟ್ಟಿ ಯೊಳಗಿನ ಕೆಂಡ
ಹತ್ತಿ ಉರಿವಾಗ
ಮ್ಯಾಗಿಂದ ತಣ್ಣೀರು ಸುರಿದ್ರ
ಒಳಗಿನ ಕಿಚ್ಚು ಆರಬಲ್ಲದ ಧಣಿ.

ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ
ಭೂಮ್ತಾಯಿ ಕಿತ್ಕಂಡ್ರಿ
ನೀವ ಕೊಟ್ಟ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತಾದ ಧಣಿ.

ನೆಲದಾಗ ಕಾಲೂರಿದ್ವಿ
ನಮ್ಮವ್ವ ನಮ್ಮನ್ನ ಗಟ್ಯಾಗಿ ಅಪ್ಕೊಂಡಿದ್ಳು
ಹಸಿದ ಹೊಟ್ಟೆಗೆ ರೊಟ್ಟಿ ಅರಳ್ಸಿ
ಕಣ್ಣಾಗ ಚಂದ್ರಾಮನ್ ಇಟ್ಟಿದ್ಳು.

ನೀವು ಬಂದ್ರಿ ಕಾಲು ತೆಗಿಸಿದ್ರಿ
ಅಷ್ಟ ಯಾಕ ತಾಯಿ ಸುತ್ತ ಬೇಲಿ ಬಡದು
ನಿಮ್ಮವ್ವ ನಮಗೂ ಅವ್ವ ಅಂದ್ರಿ.
ಮೂಗಿಗೆ ತುಪ್ಪ ಸವರಿ
ನಾಲಿಗೆನಾ ಕತ್ತರಿಸಿದ್ರಿ
ಚಂದ್ರಾಮ ಮೋಡಕ್ಕ ಬಲಿ.
ರೊಟ್ಟಿ ಕನಸಾತು.

ಸವರಿದ ತುಪ್ಪ ಒಣಗೈತಿ
ನಮ್ ನಾಲಿಗೆ ಮ್ಯಾಲೆ ಆಡೋ ಮಾತು ನೀವ ಆಡಿದ್ರಿ
ಹಸಿವು ಬಿತ್ತಿದ್ರಿ
ಕರುಳ ರಸ ಹಿಂಗಿ ದೇಹನ ಯಲುಬಿನ ಹಂದ್ರ ಮಾಡಿದ್ರಿ.

ಅನ್ನ ಇಕ್ಕುವ
ಭೂಮ್ತಾಯಿ ಕರುಳ
ಭದ್ರ ಬೇಲಿಯೊಳಗ ಬಂಧಿಸಿ
ತಾಯಿ ಮಕ್ಕಳ ಒಡಲ ಬರಡಾಗಿಸಿದ್ರಿ

ಆದರೂ ತಿಳ್ಕಳ್ಳಿ
ಧರ್ಮ ಮರೆತ ನೀವು
ನೇಗಿಲ ಕುಳದಾಗೀನ ನಮ್ಮ ಧರ್ಮ ಅರ್ಥಾತ್ ಆಗಿಲ್ಲ ನಿಮಗ.
ನಿಮ್ಮಂಗ ಅರಮನ್ಯಾಗಿಲ್ಲ ನಮ್ಮ ಕರ್ಮ
ಜೀವ ಬಿಟ್ಟೇವು ನಾವು
ನಮ್ಮ ಭೂಮ್ತಾಯಿಯನ್ನಲ್ಲ

***************

ರೊಟ್ಟಿಯಾಗರಳಿ

ಕುದಿವೆಸರಲಿ
ಮಿಜ್ಜಿ ಮಿಜ್ಜಿ ನಾದಿ
ಹದಗೊಂಡ ಹಿಟ್ಟವಳು.

ಬಿಗಿ ಪಟ್ಟಿನ ತಾಳಕೆ
ಹಿಗ್ಗಿ ಹಿಗ್ಗಿ ಗುಂಡಗೆ
ರೊಟ್ಟಿಯಾದವಳು.

ಕಾದ್ಹೆಂಚಲಿ ಮಗ್ಗಲಾಗಿ
ಮೈಸುಟ್ಟುಕೊಂಡವಳು.

ಮಕ್ಕಳ ಹಿಡಿಗೆ ಮುಟಿಗಿಯಾಗಿ
ಕರುಳ ಹಸಿವ ನೀಗಿದವಳು

ತರಹೆವಾರಿ ಪದಾರ್ಥಗಳೊಡಗೂಡಿ
ಒಡಲ್ಹಸಿವಿಗೆ ಆಹಾರವಾದವಳು

ಕಣ್ಣಿನೊಲೆಯಲ್ಲಿ ನಿಗಿ ಕೆಂಡ ತುಂಬಿ
ಬೆವರ ಮುತ್ತುಗಳ ಹೊಳೆಸಿ
ತಾನೇ ರೊಟ್ಟಿಯಾಗರಳಿದವಳು.

*********

ಅವಳು ಮತ್ತು……….

ಅವನು ದುಡುಕಿ ಧ್ವನಿ ಏರಿಸಿದಾಗಲೂ ಅವನಲ್ಲಿ
ಅವಳು ತನ್ನ ಬಗೆಗಿನ ಪ್ರೀತಿ ಹುಡುಕುತ್ತಾಳೆ.
ಅವಳು ದುಡುಕುವುದಿಲ್ಲ ಸಹಜವಾಗಿದ್ದರೂ ದೋಷ ಹುಡುಕುತ್ತಾನೆ
ಹೆಂಗಸರೊಂದಿಗೆ ಹಲ್ಕಿರಿಯುತ ಹುಬ್ಬೇರಿಸುವ ಅವನು ಗಂಡಸಿನ ಧ್ವನಿ ಎಲ್ಲಿ ಅವಳ ಕಿವಿ ತಾಕುವುದೋ ಎಂದು ಹಪಹಪಿಸುತ್ತಾನೆ…..
ಗಂಡಸು ಅಣ್ಣನಾಗಲಿ, ಅಪ್ಪನಾಗಲಿ ಯಾರದ್ದೂ…
ಅವಳು ಸದಾ ಅವನನ್ನು, ಅವನ ಆಗು ಹೋಗುಗಳನ್ನು ಗಮನಿಸುತ್ತಿರಬೇಕು ಹೊರಗಿನ, ಒಳಗಿನ ಕೆಲಸದ ಜೊತೆಗೂ…
ತಾನು ತನ್ನನ್ನು ಗಮನಿಸಿಕೊಳ್ಳದಂತೆ.

ಅವನು ಕತ್ತೆತ್ತಿ ನೋಡುವುದಂತು ದೂರವೆ‌!
ಸದಾ ಮೊಬೈಲಲ್ಲೇ
ಮಿಂದೇಳುತ್ತಿರುವ ಅವನಿಗೆ ಮುಂದಿರಿಸಿದ
ಟೀ/ತಿಂಡಿ ತಣ್ಣಗಾಗುವ ಅರಿವಿರದು
ಎಚ್ಚರಾದಾಗ ಬಿಸಿ ಬಿಸಿ ರಾದ್ದಾಂತ!
ಅವಳಿಗೂ ಹಾಗೆಯೇ…….
ಅವನು, ಅವನ ಮಕ್ಕಳ ನೋಡಿಕೊಳ್ಳುವ ಭರಾಟೆಯಲಿ ತಣ್ಣಗಾದುದರ ಅರಿವಿಲ್ಲ! ಅರಿವಾದಾಗಲೇ ಹಸಿವಿಂದ ಕಂಗೆಟ್ಟ ಹೊಟ್ಟೆಗೆ ಸುರಿದು ಬಿಡುವಳು -ಒಂದೇ ಗುಕ್ಕಿಗೆ
ಎಷ್ಟಾದರೂ ಅವಳು ಹೆಣ್ಣಲ್ಲವೆ?

ಈಗೀಗ ತಲೆ ಬಾಚುವಂತಿಲ್ಲ
ಕನ್ನಡಿಯ ಮುಂದೆ ನಿಲ್ಲುವಂತಿಲ್ಲ
ಕದ್ದೊಮ್ಮೆ ಕನ್ನಡಿ ಮುಂದೆ ನಿಂತಳೆಂದರೆ
“ಕೆಲಸಕ್ಕೆ ರಜೆ ಇದ್ದರೂ ಇದೆಲ್ಲಾ ಬೇಕಾ?”ಎನ್ನುವ ಧ್ವನಿಗೆ ಗಬಕ್ಕನೆ ಹೃದಯ ಬಾಯಿಗೆ ಬಂದು ಅಗೆದು ನುಂಗಿ ಬಿಡುವಳು
ಏನೆಂದರೂ ಅವಳು ಹೆಣ್ಣು!

ಗೆಳತಿ ಹೇಳುತ್ತಾಳೆ: ‘
ಮಾತಾಡದೇ ಸುಮ್ಮನಿದ್ದುಬಿಡು ಎಲ್ಲವೂ ಸರಿ ಹೋಗುತ್ತೆ’ ಎಂದು.
ಆಕೆಯ ಮಾತನೊಮ್ಮೆ ಧ್ಯಾನಿಸಲು ಕೂತರೆ “ಎಲ್ಲಿದ್ದೀಯಾ” ಎನ್ನುವ ಅಗೋಚರ ಕರೆಗಂಟೆಗೆ ಬೆಚ್ಚಿ ಕಣ್ತೆರೆದಾಗ ಅನ್ನಿಸುವುದು…. ಅವಳದೇನಿದ್ದರೂ ಧ್ಯಾನಿಸುವುದಲ್ಲ. ಬರೀ ಬೇಯಿಸುವದೆಂದು.
ಎಷ್ಟಾದರೂ ಅವಳದು ಹೆಣ್ಣು ಜೀವವಲ್ಲವೆ?

ಈಗೀಗ ಅಡುಗೆ ಕೋಣೆಗೆ ಅವಳು ಸ್ವಂತ. ಕೊರೋನಾ ನೀಡಿದ ಉಡುಗೊರೆ
ಇದಿಷ್ಟೇ ಅಲ್ಲ..
ಇದ್ದದು ಇಲ್ಲದ್ದನ್ನು ಜೋಡಿಸಿಕೊಂಡು ಮೂರು ಹೊತ್ತು ಅವರಾಯ್ಕೆಯ ಅಡುಗೆ ಒಮ್ಮೆ ಸ್ನ್ಯಾಕ್ಸ್ ಮಾಡುವಾಗ ಮುಡಿಯಿಂದ ಅಡಿಯವರೆಗೂ ಬೆಚ್ಚನೆಯ ಬೆವರಿನಲ್ಲಿ ಮಿಂದೇಳುವಾಗ ಜೊತೆಗಿದ್ದು ದೇಹ ಮನಸ್ಸಿಗೆ ತಂಪೆರೆದದ್ದು ಅದು ಅಡುಗೆ ಕೋಣೆ. ಅವಳಿಗರಿವಿಲ್ಲದೇ ಅವಳಾಡಿಕೊಳ್ಳುವ ಪ್ರತಿ ಮಾತಿಗೂ ಕಿವಿಯಾದದ್ದು ಅದೇ

ಅವಳ ಮಾತು ಸುಳ್ಳೆಂದರೆ ಒಮ್ಮೆ ಗೋಡೆಗಳನ್ನು ಮಾತನಾಡಿಸಿ
ಹೇಳುತ್ತವೆ ಅವಳು ಹೇಳದ್ದನ್ನೂ…..!!
ಅವಳ ಮಾತು ನಂಬುವುದಿಲ್ಲ ಎಷ್ಟಾದರೂ ಅವಳು ಹೆಣ್ಣು

**************

ಯಾರದೋ ಮೆಚ್ಚುಗೆಗಲ್ಲ ಕವಿತೆ ….

ಮನದ ಭಾವ ಬಾಂದಳದ ನೋವ ದುಗುಡ ದುಮ್ಮಾನಗಳ
ಆಶೆ ಕನವರಿಕೆಗಳ ಭಿತ್ತಿಯ
ಬುತ್ತಿಯ ಬಿಚ್ಚಲು ಕವಿತೆಯೊಂದು
ಮಹಾಯಾನ, ಸಾಧನ, ವರದಾನ

ಕಾವ್ಯ ಯಾರನ್ನೋ ಮೆಚ್ಚಿಸಲಲ್ಲ.
ನೊಂದು ಬೆಂದವರ ನಗುವ
ಕೊಂದವರ, ತುಳಿದು ಮೆರೆವವರ
ಜೀವ ಜಾಲಾಡುವ ವಿಧಾನ.

ಕವಿತೆ ಯಾರನ್ನೋ ನೆಚ್ಚಿಸಲಲ್ಲ.
ಉತ್ತಿ ಬಿತ್ತಿದವರ ನೆತ್ತಿ ಸುಟ್ಟರೂ
ಅನ್ನ ಇಕ್ಕಿದ, ಈ ನೆಲದ ಕಂದಮ್ಮಗಳ ಬಸಿರ ಬಿಸಿಯುಸಿರಿಗೆ ದನಿಯು, ಅಕ್ಷರದ ತೆನೆಯು

ಕವಿತೆ ಯಾರನ್ನೋ ರಂಜಿಸಲಲ್ಲ.
ಯಾರದೋ ಕುತಂತ್ರಕೆ
ಮಾನ, ಪ್ರಾಣ ತೆತ್ತು ಅರಳುವ
ಮುನ್ನವೇ ಬಾಡುವ ಕುಸುಮಗಳ ತಿರಸ್ಕಾರಕೆ,
ಕ್ರೋಧಕೆ ಮಾರ್ಧನಿಸುವ
ಕೂಗು,ಸಾಂತ್ವನ ನನ್ನ ಕವಿತೆ!

****************

ಫೋಟೊ ಆಲ್ಬಂ

One thought on “ತಿಂಗಳ ಕವಿ-ಭಾರತಿ ಅಶೋಕ್

Leave a Reply

Back To Top