ಕಾವ್ಯ ಸಂಗಾತಿ
ಶಾಲಿನಿ ರುದ್ರಮುನಿ ಹುಬ್ಬಳ್ಳಿ
ʼಚಪ್ಪಲಿಯ ಮೌನ ದನಿʼ

ಹೊಸತನದಾಗ
ಸಂಭ್ರಮ, ನಿನ್ನಲ್ಲಿ!
ಮೆಟ್ಟಿ ನಡೆವಾ
ನಲಿವಿತ್ತು ಹೆಜ್ಜೆಗಳಲಿ
ಅಂದದಲಿ ಬೆಲೆ
ಚೆಂದದಲಿ ನೆಲೆ
ಪಡಸಾಲಿನಲಿ ಮತ್ತು
ಬೀದಿಯಲಿ,
ಕಳೆದಂತೆ ಕಾಲ
ಬಣ್ಣ ಮಾಸಿತು,
ಬದಲಾಯಿತು ಆಕಾರ
ಹೊಲಿಗೆ ಬಿಟ್ಟು
ಅಂಟು ಸಡಿಲಾಗಿ
ಅಂದ ಅಡಗಿತು ನನ್ನಲಿ,
ನಿತ್ಯದ ನಿನ್ನ ನಡಿಗೆಯಲಿ
ನನ್ನ ಬದುಕು ಸವೆಯಿತು,
ಬಿಸಿಲಲಿ ಬೆಂದ
ಬೆನ್ನು’ ಕರಗಿತು,
ಮಳೆಯಲಿ ನಡುಗಿದ
ನರ’ ಹರಿಯಿತು,
ದೇಗುಲದ ಹೊರಗೆ ಕಾದೆ,
ಮನೆಯ ಬಾಗಿಲಲಿ ನಿಂತೆ,
ಒಳಗೆ ಅಪ್ಪಣೆಯಿಲ್ಲವಂತೆ
ದಣಿದು ಸೇವೆಗೈದರು?
ಇಂದು, ಬೆಲೆಯಿಲ್ಲದ ವಸ್ತುವಾಗಿ,ಒದೆಯಲ್ಪಟ್ಟೆ, ಬಿಸಾಡಲ್ಪಟ್ಟೆಅನಾಥವಾಗಿ
ನನ್ನ ಮೌನ !
ನಿನ್ನ ತಿರಸ್ಕಾರಕ್ಕೆ ಉತ್ತರ,
ಹೊಸತು ಬಂದಾಗ
ಹಳೆಯದಕ್ಕೆಲ್ಲಿ ಬೆಲೆ?
ಇಟ್ಟ ಪ್ರತಿ ಹೆಜ್ಜೆ
ಗುರುತಿನ
ಕಥೆಗಾರ ನಾನು,
ನಿನ್ನ ಪಯಣದ ಸಾಥಿ,
ನಾನು ಬರಿ
ಚಪ್ಪಲಿ ಮಾತ್ರವಲ್ಲ!
ನನ್ನ ಅಸ್ತಿತ್ವವೇ
ಒಂದು ಪಾಠ,
ಒಂದು ಕಹಾನಿ,
ಹೆಜ್ಜೆಗಳ ಅಡಿಯಲಿ
ಮೌನದ ದನಿ
ನದಿಯಂತೆ ಹರಿದಿದೆ,
ಚಪ್ಪಲಿ ಮೌನ
ಕವನವಾಗಿ ಮೂಡಿದೆ….
ಶಾಲಿನಿ ರುದ್ರಮುನಿ ಹುಬ್ಬಳ್ಳಿ

ವಾವ್ ತುಂಬಾ ಚನ್ನಾಗಿದೆ ಶಾಲಿನಿ ಆ ಒಂದು ಲೈನ್ ಅಂತೂ ಮನಸ್ಸನ್ನು ಚಿಂತೆಗೆ ಹಚ್ಚಿತು ” ಒಳಗೆ ಅಪ್ಪಣೆ ಇಲ್ಲವಂತೆ ದಣಿದು ಸೇವೆಗೈದರು “