ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
೨೫-೦೬-೧೯೭೫-ಇಂದ್ರಪ್ರಸ್ಥ

ಇಂದ್ರಪ್ರಸ್ಥದ ನಂದನದ ಮಾಲಿ ಚೆಂದಿರೆ
ಅಧಿಕಾರದ ಚಬಕು ಹಿಡಿದ ಚತುರೆ
ಅಕ್ಕಪಕ್ಕದ ಪುಂಡುಪೋಕರಿಗಳ
ಸದೆಬಡಿದ ಶೂರೆ
ಜನಪ್ರೀತಿಯ ತುತ್ತತುದಿಗೇರಿದ ನೀರೆ
ಆಳುತ್ತಿದ್ದಳು ನಂದನವ ಯೋಜಿಸಿ
ಸಂಬಾಳಿಸಿ ಬಾಳಿಸಿ ಬಾಗಿಸಿ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..
ನಂದನದಲೇನಿತ್ತು ಏನಿಲ್ಲ ಅನ್ನುಂತಿಲ್ಲ
ಶತಮಾನಗಳ ಸಾರ ಸನಾತನದ ಸೊಗಡು
ಫಲಪುಷ್ಪ ವನರಾಜಿ ಹಕ್ಕಿಪಿಕ್ಕಿ ಪ್ರಾಣಿ ಕಾಣಿ
ಭೂಮಿ ಬಯಲು ನೀರು ಆಕಾಶ ಅವಕಾಶ
ಹಿಂದಕ್ಕೆ ಕಾಲಿಟ್ಟು ಮುಂದಕ್ಕೆ ಕಣ್ಣಿಟ್ಟು
ಇಂದು ನಡೆದಿತ್ತು ಬದುಕು
ನೋವು ನಲಿವುಗಳು ಬೆರೆತು
ಉಘೇ.. ಉಘೇ.. ಅನ್ನುವರು
ಮಾಲಿಯ ಕೈಯಾಳುಗಳು ಸುತ್ತಲೂ ಕಲಿತು
ಓಹೋ.. ಎಷ್ಟು ಚಂದವಿದೆ ದರ್ಬಾರು
ನಂದನವೇ ಮಾಲಿಯು ಮಾಲಿಯೇ ನಂದನವು
ಚಿರಂತನವಿರುವುದು ಅವಳ ಆಡಳಿತ
ನಂದದ ಕುಂದದ ಅವಳಿಗೆ ಹತ್ತು ಕೈಯಿ
ತೆರೆದ ನಾಲಿಗೆ ಉದ್ದನೆಯ ಭರ್ಜಿ
ಉಘೇ… ಉಘೇ……
ಅನ್ನಿಸಿತು ಅನ್ನಿಸಿತು ಅವಳಿಗನ್ನಿಸಿತು
ನಾನೆಂತು ಮಾಲಿಯೂ ನಾನೇ ಮಾಲಿಕಳು
ನಂದನವೆ ನಂದಾಯ್ತು
ನನಕಂದರ ಬದುಕು ಚಂದಾಯ್ತು
ಬನ್ನಿರೆಲ್ಲರೂ ಬನ್ನಿ
ತೊಡಿಸಿ ನಂದನದ ಹೂ ಮಾಲೆ
ನೈವೇದ್ಯಕ್ಕಿಡಿ ಹಣ್ಣುಹಂಪಲು ಹಾಲು ಜೇನು
ನನಗಾಗಿ ಇರುವರ ಅಟ್ಟದಲಿಡಿ
ಎದುರು ಬಿದ್ದವರ ದಬ್ಬಿ ಡಬ್ಬಿಗೆ
ಮಾಲಿಯ ಮುಖದ ಮಂದಹಾಸವಡಗಿ
ಮೆರೆಯಿತು ಮೇರೆಯರಿದ ಅಟ್ಟಹಾಸ..
ಬಡಿದೇ ಬಡಿದಳು ಬಡಿವಾರ
ನೀನಲ್ಲ ಮಾಲೀಕಳು ; ನೀ ಬರಿಯ ಮಾಲಿ
ಭುವಿ ಬಾನು ವನರಾಜಿಗಲ್ಲ ಅಧಿಕಾರಿ
ಅಂದವರ ಉಸಿರಿಗೆ ತಂದು ಸಂಚಕಾರ
ಮರದ ಬುಡಕಡಿದು ಸಿಂಹಾಸನವ ಮಾಡಿ
ಹೂವು ತೋರಣವ ಮನೆಗೆ ಸಿಗಿಸಿ
ತೂತೂರಿ ತೂರಿ ನಡೆದಳು ಮಾಲಿಯು
ಅಣಕಿಸಿ ವನಮಾಲಿ
ಅಳುಕಿದವಳ ಮನವ ದೂಡಿ ಕತ್ತಲಲಿ
ಮರಗಳ ಕಡಿದರು ನೀರಿಲ್ಲದೆ ಹೂ ಒಣಗಿತು
ಕಾಲು ಜಾರಿತು ಕೈ ಕುಣಿಯಿತು
ಪಶು ಪಕ್ಷಿಗಳು ಸರಿದುಹೋದವು.
ಆಗೋ… ಆಗೋ…. ಎದ್ದರು
ನಿಜ ಮಾಲೀಕರು ಇಂದ್ರಪ್ರಸ್ಥದ ಜನರು
ಜಯ..ಜಯ..ಪ್ರಕಾಶ ಕತ್ತಲಲೊಂದೇ ಪ್ರಕಾಶ
ಅನ್ನುತ್ತಲೆತ್ತಿ ಆಕಾಶ ಬುಡ್ಡಿ
ಬಡಿದೇ ಬಡಿದರು ಮಾಲಿಯ ಬಡಿವಾರ
ತಂದವಳ ಅಧಿಕಾರಕೆ ಸಂಚಕಾರ.
ಮಾಲಿಕರೇ ಮರೆಯದಿರಿ
ಮಾಡದಿರಿ ಮಾಲಿಗಳ ಮಾಲೀಕರ
ಕಣ್ಣು ನೋಡುತಿರಲಿ ಕಿವಿ ಕೇಳುತಿರಲಿ
ಮಾತು ಆಡುತಲಿರಲಿ
ಕಣ್ಮಚ್ಚಿ ಉಘೇ… ಉಘೇ… ಅನ್ನದಿರಿ
ಸತತ ಎಚ್ಚರವೇ ನಿಜದ ಸಂಪತ್ತು
ಬೆಂಶ್ರೀ ರವೀಂದ್ರ

ಎಂತಹ ಅದ್ಭುತ ಕಲ್ಪನೆ. ತಿಳಿದವರಿಗೆ ಸುಲಿದ ಬಾಳೆಹಣ್ಣು. ತಿಳಿಯದಿರುವವರಿಗೆ ಕಲ್ಲು ಸಕ್ಕರೆ.
ಅಧ್ಬುತ ಕವಿತೆ
ಅಂದಿನ ಇಂದಿರೆಯ ರಾಜ್ಯಾಢಳಿತದ ಕರಾಮತ್ತು
ಕವನದ ಸಾಲುಗಳಲ್ಲಿ. ,
ಮಾಲತಿಶ್ರೀನಿವಾಸನ್
ಸತತ ಎಚ್ಚರವೇ ನಿಜದ ಸಂಪತ್ತು…. ಅದ್ಭುತ
ಇಂದಿರಾ ವಿಶ್ವನಾಥ್.
ಅದ್ಭುತ…
ತುರ್ತು ಪರಿಸ್ಥಿತಿ ಯ ಐವತ್ತು ವರುಷದ ನೆನಪು ಯಕಶ್ಚಿತ ಆಡಳಿದ ದೌರ್ಜನ್ಯಗಳ, ಮತ್ತು ಅಧಿಕಾರದ ದುರುಪಯೋಗ ಜಯಪ್ರಕಾಶರ ಆಂದೋಲನ ಎಲ್ಲವುಗಳ ಸಮನ್ವಯ. ಸುಂದರ ಶಬ್ದಗಳ ಸಂಯೋಜನೆ ಕವಿತೆ .ಓದಿ ಖುಷಿ ಆಯಿತು.ಜೊತೆಗೆ ಆ ಕುಟುಂಬ ಎಂದರೆ, ತಿರಸ್ಕಾರ ಭಾವ ಮೂಡಿತು.
ಅಭಿನಂದನೆಗಳು ಸರ್ ಪರಿಣಾಮ ಬೀರುವ ಕವಿತೆಗಾಗಿ.