ಕಾವ್ಯ ಸಂಗಾತಿ
ದೀಪಿಕಾ ಚಾಟೆ
ಗಜಲ್
ಗೋಕುಲದ ಒಡೆಯನೇ ಒಲವ ಬಯಸಿ ರಾಧೆಯ ಕರೆಸಿದೆಯಲ್ಲ ನೀನು
ಓಕುಳಿಯ ರಂಗುರಂಗಿನ ನೀರು ಮನದನ್ನೆಗೆ ಸುರಿಸಿದೆಯಲ್ಲ ನೀನು
ಕೊಳಲ ಗಾನದ ಮುರುಳಿಯ ಲೋಲನ ಧನಿಗೆ ಬೆರಗಾದವರಾರಿಲ್ಲ ಹೇಳು
ಮಳಲ ತಡಿಯ ಉಸುಕಲೂ ಮೂಡಿದ ಹೆಜ್ಜೆಯ ಒರೆಸಿದೆಯಲ್ಲ ನೀನು
ಎದೆಯ ಹಾಡಿಗೆ ರಾಗವಾಗುತ ಮನಸೆಳೆವ ಕುಸುರಿಗೆ ತನು ಕುಣಿಯುತಿದೆಯಲ್ಲ
ಕದವ ತೆರೆಯುತ ಕರುಳ ಬಳ್ಳಿಗೆ ಹಾಲೆರೆಯುತ ಹೆಸರು ಬರೆಸಿದೆಯಲ್ಲ ನೀನು
ಹೃದಯದ ಪಿಸುಮಾತು ಕೇಳಿ ನಗುಬರುತಿದೆಯೇ ಕೇಶವಾ ನಿನಗೆ
ಉದಯ ರವಿಯ ಕಾಣುವ ಸೊಗಸಿಗೆ ಬೆಳ್ಮುಗಿಲ ಮೋಡವ ಸರಿಸಿದೆಯಲ್ಲ ನೀನು
ತಾರುಣ್ಯದ ಕುಡಿನೋಟಕೆ ಮೈಮರೆತಂತಾಗಿದೆಯಲ್ಲ ಮಾಧವ
ಕಾರುಣ್ಯದಕಣ್ಬೆಳಕ ದೀಪದಲಿ ಚೆಲುವ ಮೆರೆಸಿದೆಯಲ್ಲ ನೀನು