ಕಾವ್ಯ ಸಂಗಾತಿ
ಜಯಂತಿ ಕೆ ವೈ
ಬತ್ತಿಹೋದ ಭಾವ

ನಾನು ನಾನೇ… ಅಲ್ಲವೇನೊ ಅನ್ನುವ ಮಟ್ಟಿಗೆ
ನನಗೆ ನಾನೇ ಅಪರಿಚಿತಳು
ಅದೆಲ್ಲಿ ಹೋಯಿತು ಆ
ಲವಲವಿಕೆ?
ಎಲ್ಲಿ ಮಾಯವಾಯಿತು
ಹುಮ್ಮಸ್ಸು?
ಎಲ್ಲಿ ಕಾಣೆಯಾಯಿತು
ಎಲ್ಲದರೆಡೆಗಿನ ಕುತೂಹಲ?
ನಗುವಂತೂ ಮರೆತೇಹೋಗಿದೆ
ಕನಸುಗಳು ಕಾಣೆಯಾಗಿವೆ!
ಭಾವಬಂಧಗಳ ಒರತೆ ಒಣಗಿದೆ
ಮನದಾಳದ ಬೇಗುದಿ ಕೊನೆಯಾಗಿದೆ
ಸಂಭ್ರಮಕೆ ಸೂತಕವಂಟಿದೆ
ಚೈತ್ರದ ಕುಹೂರವ, ಅರಳಿ ನಿಂತ ಸುಮನೋಹರ ಕುಸುಮಗಳು
ಯಾವುದೂ ಯಾವ್ಯಾವುದೂ….
ಬತ್ತಿಹೋದ ಭಾವಕ್ಕೆ ನೀರೆರೆಯುತ್ತಿಲ್ಲ!
ಅಳುವಿಗೂ ಬೇಡವಾದ ದುಃಖ!!
ದುಃಖಕ್ಕೆ ಬೇಡವಾದ ಬೇಸರ!
ಬರಿದಾದ ಮನದಲ್ಲಿ
ಇಣುಕಬಾರದೆ
ಒಂದಿಷ್ಟು ಸಂತಸ?
ಅದೇಕೆ? ಅದಕೂ ಮುನಿಸೆ?!
ಅಥವಾ ಒಣಗಿದ ಮರ ಚಿಗುರಲಾರದೆಂದು ಅದಕೂ ತಿಳಿಯಿತೆ?
ಜಯಂತಿ ಕೆ ವೈ
