ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಕಲಿಕಾ ಹಬ್ಬ

ಶಿಕ್ಷಣ ಎಂದರೆ ಮಕ್ಕಳ ತಲೆಗೆ ವಿಷಯಗಳನ್ನು ತುಂಬುವುದಲ್ಲ, ಅವರಲ್ಲಿನ ಕುತೂಹಲವನ್ನು ಜಾಗೃತಗೊಳಿಸುವುದು” ಎಂಬ  ಐನಸ್ಟೀನ್ ಅವರ ಹೇಳಿಕೆ ಅಕ್ಷರಶಃ ಸತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೋವಿಡ್‌ – 19 ರ ನಂತರದ ಶಾಲಾ ಶಿಕ್ಷಣವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿ ಕಲಿಕಾ ಚೇತರಿಕೆಯನ್ನು ಜಾರಿಗೆ ತಂದಿದೆ. ಈ ಉಪಕ್ರಮದ ಭಾಗವಾಗಿ ಕಲಿಕಾ ಹಬ್ಬದ ಆಚರಣೆ.  ಕಲಿಕಾ ಹಬ್ಬದಲ್ಲಿ ಮಕ್ಕಳು ಸ್ವತಃ ಮಾಡಿ, ನೋಡಿ, ಯೋಚಿಸಿ, ಖುಷಿಪಡುವ ಹೊಸದನ್ನು ಹುಡುಕಿ ಕಲಿಯಲು ಪ್ರೇರೆಪಿಸುವ ಚಟುವಟಿಕೆಯನ್ನು ರೂಪಿಸುವುದೇ ಇದರ ವಿಶೇಷ. ಕಲಿಕಾ ಹಬ್ಬ ಪ್ರಶ್ನೆಯಿಂದ‌ ಪ್ರಜ್ಞೆಯೆಡೆಗೆ ಎಂಬ ಯುಕ್ತಿಯೊಂದಿಗೆ ಸಾಗುತ್ತದೆ.  ಇದೊಂದು ವೈಚಾರಿಕತೆ, ವೈಜ್ಞಾನಿಕತೆ ಹಾಗೂ ತಾರ್ಕಿಕ ಆಲೋಚನೆಯ ಪರ್ವಕಾಲವೇ‌ ಆಗಿದೆ.

ಕಲಿಕಾ ಹಬ್ಬವು ದೇಶದ ಶೈಕ್ಷಣಿಕ ರಂಗದಲ್ಲಿ ನಡೆಯುವ ಅಭೂತಪೂರ್ವ ಶೈಕ್ಷಣಿಕ ಪ್ರದರ್ಶನ. ಈ ಹಬ್ಬದಲ್ಲಿ ಮಕ್ಕಳು ಕಲಿಯುವ ಸಂಬ್ರಮವನ್ನು ಸಮುದಾಯವು ಕಣ್ತುಂಬಿಕೊಳ್ಳುತ್ತದೆ. ಕೋವಿಡ್‌ ನಂತರ ಶಾಲೆಗಳು ಆರಂಭವಾದಾಗ ಅನುಭವ ಕೇಂದ್ರಿತ ಮತ್ತು ಸ್ವಕಲಿಕೆಯ ಮಾದರಿಯ ಕಲಿಕಾ ವಿಧಾನಗಳು ಕಲಿಕಾ ಚೇತರಿಕೆ ಎಂಬ ಹೆಸರಿನಲ್ಲಿ ಆರಂಭವಾದವು. ಕಲಿಕೆಯನ್ನು ಅನುಭವ ಕೇಂದ್ರಿತವಾಗಿಸುವ ಮತ್ತು ತರಗತಿಯಾಚೆಗೆ ವಿಸ್ತರಿಸುವ ಈ ಪ್ರಯತ್ನಕ್ಕೆ ಶಿಕ್ಷಣದ ಎಲ್ಲ ಭಾಗೀದಾರರ ಬೆಂಬಲವನ್ನು ಪಡೆಯುವದು ಈ ಪ್ರಯತ್ನದ ಒಂದು ಗುರಿಯೂ ಹೌದು. ಅದಕ್ಕಿಂತ ಹೆಚ್ಚಾಗಿ ಸಂಪ್ರದಾಯಿಕ ಬಾಯಿಪಾಠದ ವಿಧಾನಗಳೇ ಕಲಿಕೆಯ ಪ್ರಕ್ರಿಯೆ ಎಂಬ ಜನಪ್ರಿಯ ಗ್ರಹಿಕೆಯನ್ನು ಮುರಿದು ರಚನಾತ್ಮಕ ತರಗತಿಗಳನ್ನು ರೂಪಿಸಲು ಜನಾಭಿಪ್ರಾಯವನ್ನು ರೂಪಿಸುವುದೂ ಅವಶ್ಯಕವಾಗಿದೆ. ಆ ಕಾರಣಗಳಿಂದಾಗಿಯೇ ಕಲಿಕಾ ಹಬ್ಬವು ಕಲಿಕೆಯ ಸಂಬ್ರಮವನ್ನು ಸಮುದಾಯದ ಕಣ್ಣೆದುರು ಹಿಡಿಯುವ ಮಹತ್ವದ ಪ್ರಯತ್ನ.

ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಅಪರಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟುಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಮಗು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಸಡಗರ ಅನಿವಾರ್ಯ ಕೂಡಾ. ಮುರಿದು ಕಟ್ಟುವ ಕಲೆಗಾರಿಕೆಗೆ ಪ್ರಶ್ನೆ, ವೀಕ್ಷಣೆ, ಪ್ರಯೋಗಗಳೇ ಚೈತನ್ಯವನ್ನು ಒದಗಿಸುತ್ತದೆ. ನಿರಂತರ ಚಿಂತನೆಯಲ್ಲಿ ನಿರ್ಧಾರಗಳನ್ನು ತಳೆಯುವ ಮತ್ತು ಅವುಗಳನ್ನು ಸದಾ ಪ್ರಶ್ನಿಸುವ ಎದೆಗಾರಿಕೆಯು ಕೂತೂಹಲ, ದೂರದೃಷ್ಟಿ, ಪ್ರಯೋಗಶೀಲತೆ ಮತ್ತು ಒಳಗೊಳ್ಳುವಿಕೆ ಪರಿಣಾಮವಾಗಿದೆ. ನಾವು ಏಕಾಂಗಿಯಾಗಿ ಬದುಕಲಾರೆವು, ಕಲಿಯಲಾರೆವು ಕೂಡಾ. ಅನುಭವಾತ್ಮಕ ಕಲಿಕೆಯೆನ್ನುವುದು ಒಟನಾಟದ ಕಲಿಕೆಯೂ ಹೌದು. ಸಹಬಾಳ್ವೆ, ಸಹೋದರತೆ ಮತ್ತು ಪ್ರಜಾಪ್ರಭುತ್ವದ ವಿಧಾನಗಳನ್ನು ಕಲಿಕೆಯ ಪರಿಸರ ಮತ್ತು ವಿಧಾನಗಳು ಒಳಗೊಂಡಿರಬೇಕು. ವಿಮರ್ಶಾತ್ಮಕ ಚಿಂತನೆಗಳು, ವಸ್ತುನಿಷ್ಠತೆ ಮತ್ತು ಪೂರ್ವಾಗ್ರಹಗಳಿಂದ ಮುಕ್ತವಾದ ಕಲಿಕೆಯ ಅನುಭವಗಳನ್ನು ಒದಗಿಸಬೇಕು. ಇದು ಶಿಕ್ಷಣದ ಗುರಿಯೂ ಹೌದು.

ಮಗುವು ಜ್ಞಾನದ ಸಂರಚನೆಗಳನ್ನು ಭಾಷೆ ಮತ್ತು ನೇರ ಅನುಭವಗಳ ಮೂಲಕ ರೂಪಿಸಿಕೊಳ್ಳುತ್ತದೆ. ತನ್ನ ಅನುಭವಗಳನ್ನು ಸೋಸಿ ಅವುಗಳ ಬೆಳಕಿನಲ್ಲಿ ತರ್ಕಬದ್ಧವಾಗಿ ತನ್ನ ಅರಿವನ್ನು ಭಾಷೆಯ ಮೂಲಕ ಪೋಣಿಸುವ ಕೌಶಲವೂ ಮಗುವಿನ ವೈಚಾರಿಕ ವಿಕಾಸಕ್ಕೆ ಅಗತ್ಯ. ತರಗತಿ ಕೋಣೆಯು ತನ್ನ ಸ್ಮರಣೆ ಆಧರಿತ ಕಲಿಕೆಯ ವಿಧಾನಗಳಿಂದ ಹೊರಬರಲು ಕಲಿಕೆಯ ಕುರಿತಾದ ಸಮಾಜದ ದೃಷ್ಟಿಕೋನದಲ್ಲೇ ಬದಲಾವಣೆ ಆಗಬೇಕಿದೆ. ಮಗುವಿನ ಕುತೂಹಲ, ಕುತೂಹಲದ ಉನ್ನತವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬಲ್ಲ ಕಲಿಕಾ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ – ಚರ್ಚೆಗಳು ತರಗತಿಯ ಭಾಗವಾಗಿ ರೂಪಗೊಳ್ಳಬೇಕಿದೆ. ಈ ಕಾರಣಕ್ಕಾಗಿಯೂ ಕಲಿಕಾ ಹಬ್ಬವು ಕಲಿಕೆಯ ವಿಧಾನ ಮತ್ತು ಕಲಿಕೆಯ ಫಲಗಳ ಕುರಿತು ಸಾರ್ವಜನಿಕ ಚರ್ಚೆಯನ್ನು ಉಂಟುಮಾಡಬಲ್ಲ ಸಾಮಾಜಿಕ ವೇದಿಕೆಯೂ ಆಗಬೇಕು.

ನಾಟಕ, ಚರ್ಚೆ, ಸಂವಾದ, ಯೋಜನೆ, ಪ್ರಯೋಗ ಮುಂತಾದ ಒಡನಾಟದ ಚಟುವಟಿಕೆಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಜ್ಞಾನವು ಸ್ವತಃ ರಚಿಸಿಕೊಳ್ಳಬಹುದಾದದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇವೇ ವಿಧಾನಗಳಿಂದ ಮಾತ್ರ ಕಲಿಕೆ ಸಂಭವಿಸಲು ಸಾಧ್ಯ ಅಲ್ಲದೆ, ವಿದ್ಯಾರ್ಥಿಗಳ ಪಾಲ್ಗೂಳ್ಳುವಿಕೆಯು ತರಗತಿ ವ್ಯವಹಾರಗಳನ್ನು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸರಿಹೊಂದುವಂತೆ ಮಾಡುತ್ತದೆ. ಪ್ರಶ್ನೆಗಳನ್ನು ಕೇಳುವ ಮಕ್ಕಳು ಯೋಚಿಸಬಲ್ಲರು ಕೂಡಾ. ಮಗು ತನ್ನ ಇಂದ್ರಿಯಗಳ ಮೂಲಕ ಪಡೆದ ಅನುಭವಗಳನ್ನು ವಿಶ್ಲೇಷಣೆಯ ನಿರಂತರ ಚಿಂತನೆಗೆ ಒಡ್ಡಿ ತೀರ್ಮಾನ ತೆಗೆದುಕೊಳ್ಳುವಂತಹ ಕಲಿಕೆಯ ಪರಿಸರವನ್ನು ರೂಪಿಸುವ ಜವಾಬ್ದಾರಿ ನಮ್ಮದು. ಶಾಲೆಯು ಮಕ್ಕಳ ಕೂತೂಹಲವನ್ನು ತಣಿಸುವ ಸ್ಥಳವಾದಾಗಷ್ಟೇ ಕಲಿಕೆಯ ಸ್ಥಳವಾಗಬಲ್ಲದು. ಇವೆಲ್ಲವೂ ಸಾಧ್ಯವಾಗಬೇಕಾದರೆ ಮಗುವಿನ ಸ್ವತಂತ್ರ ಚಿಂತನಾ ಸಾಮರ್ಥ್ಯ, ವಿಮರ್ಶಾತ್ಮಕ ದೃಷ್ಟಿಕೋನ, ಪ್ರಯೋಗಶೀಲತೆ ಮತ್ತಿತರ ಮೇಲ್ಮಟ್ಟದ ಕೌಶಲಗಳು ಮೌಲ್ಯ ಮಾಪನದಿಂದ ಗುರುತಿಸಲ್ಪಡಬೇಕು. ಪೂರಕ ತರಗತಿ ಕೌಶಲಗಳು ತಂತಾನೆ ರೂಪಗೊಳ್ಳಲು ಸಾಧ್ಯವಿಲ್ಲ.

ಮಕ್ಕಳು ಭಾಗವಹಿಸುವಿಕೆಯನ್ನು ಕಡಿಮೆ ಮಾಡುವ ಯಾವ ವಿಧಾನವೂ ಪ್ರಜಾಸತ್ತಾತ್ಮಕ ತರಗತಿ ಪರಿಸರವನ್ನು ರೂಪಿಸದು. ಪ್ರಜಾಸತ್ತಾತ್ಮಕವಲ್ಲದ ತರಗತಿ ಕೋಣೆಯಲ್ಲಿ ವೈಜ್ಞಾನಿಕ ಮನೋಧರ್ಮವಾಗಲಿ ಅದರ ಪ್ರಕಟರೂಪಗಳಾದ ತಾರ್ಕಿಕ ಚಿಂತನೆ, ಸಹನೆ, ಭಿನ್ನಾಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಸ್ವಭಾವ, ಪೂರ್ವಾಗ್ರಹಗಳಿಂದ ಮುಕ್ತವಾದ ಚಿಂತನಾಕ್ರಮ, ಒಳಗೊಳ್ಳುವಿಕೆ, ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ತೋರುವ ಆಸಕ್ತಿಗಳ ಬೆಳವಣೆಗೆ ಸಾಧ್ಯವಿಲ್ಲ.

ಪ್ರಶಿಸುವ ಮತ್ತು ಆಲೋಚಿಸುವ ಮನಸ್ಸು ನಿಸರ್ಗದ ಅದ್ಭುತಗಳನ್ನು ಬೆರಗುಗಣ್ಣಿನಿಂದ ನೋಡುವುದಷ್ಟಕ್ಕೇ ತೃಪ್ತಿಗೊಳ್ಳದೆ ಅದಕ್ಕೆ ಸ್ಪಂದಿಸುತ್ತದೆ. ನಿಸರ್ಗದ ಜೊತೆ ಅಂತರಕ್ರಿಯೆಯಲ್ಲಿ ತೊಡಗಿ ಅರ್ಥಪೂರ್ಣ ಸಂಬಂಧಗಳನ್ನು ಹುಡುಕುತ್ತದೆ. ಪರಿಕಲ್ಪನಾತ್ಮಕ ಮತ್ತು ಗಣಿತೀಯ ಮಾದರಿಗಳನ್ನು ಭಾಷೆಯ ಸಹಾಯದಲ್ಲಿ ರಚಿಸಿಕೊಳ್ಳುತ್ತಾ ಈ ಅದ್ಭುತ ಜಗತ್ತನ್ನು ಅರಿಯಲು ಪ್ರಯತ್ನಿಸುತ್ತದೆ. ಇದೇ ಕಲಿಕೆ. ಎಲ್ಲ ಕಲಿಕಾ ಶಿಸ್ತುಗಳಿಗೆ ಸಂಬಂಧಿಸಿದಂತೆಯೂ ಈ ಮಾತು ಸತ್ಯವೇ ಆಗಿದೆ.

ಕಲಿಕಾ ಹಬ್ಬವು ಪ್ರತಿ ಕ್ಲಸ್ಟರಿನಲ್ಲಿ ಸಾಧ್ಯವಾದಷ್ಟು ಸಾಕಷ್ಟು ಕೊಠಡಿಗಳು, ವಿಶಾಲ ಆಟದ ಮೈದಾನ, ಸ್ವಚ್ಛ ವಾತಾವರಣ, ಕುಡಿಯುವ ನೀರಿನ ವ್ಯವಸ್ಥೆ ಮತ್ತು  ಶೌಚಾಲಯ ಇರುವ ಸ್ಥಳವನ್ನೇ ಹಬ್ಬಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.  ಕಲಿಕಾ ಹಬ್ಬವು ಒಟ್ಟು ಎರಡು ದಿನಗಳ ಕಾಲ ನಡೆಯುತ್ತದೆ. ಮೊದಲನೇಯ ದಿನ ಪ್ರಭಾತಫೇರಿಯ ಮೂಲಕ ಸಾಗುತ್ತದೆ ಮೆರವಣೆಗೆಯಲ್ಲಿ ಗ್ರಾಮೀಣ ಕಲೆಗಳಾದ ಕೋಲಾಟ, ಯಕ್ಷಗಾನ, ಡೊಳ್ಳು ಕುಣಿತ, ಹೆಜ್ಜೆ ಮಜಲು ಮುಂತಾದವುಗಳ ಮೂಲಕ ಹಬ್ಬದ ವಾತವರಣದಲ್ಲಿ ನಡೆಯುತ್ತವೆ. 

 ಈ ಹಬ್ಬದಲ್ಲಿ ಕ್ಲಸ್ಟರಿನ ಎಲ್ಲ ಶಾಲೆಯ 4 ರಿಂದ 9 ನೇಯ ತರಗತಿಯ ಮಕ್ಕಳು ಭಾಗವಹಿಸುತ್ತಾರೆ. ಕ್ಲಸ್ಟರಿನಲ್ಲಿ ಒಟ್ಟು 120 ಮಕ್ಕಳಿಗೆ ಭಾಗವಹಿಸಲು ಅವಕಾಶ ಇರುತ್ತದೆ. ಕಲಿಕಾ ಹಬ್ಬದಲ್ಲಿ  ಪ್ರಮುಖವಾಗಿ 4 ಕೋಣೆಗಳಿರುತ್ತವೆ. ಪ್ರತಿ ಕೋಣೆಯಲ್ಲಿಯೂ 30 ಮಕ್ಕಳು ಹಾಗೂ ಸಂಪನ್ಮೂಲಭರಿತ  ಸುಗಮಗಾರರು ಇರುತ್ತಾರೆ. ಇಲ್ಲಿ ಇರುವ 4 ಪ್ರಮುಖ ಕೋಣೆಗಳು ಹಾಗೂ ಚಟುವಟಿಕೆಗಳೆಂದರೆ,

1. ಹಾಡು-ಆಡು

          ಅಭಿವ್ಯಕ್ತಿಯ ಎಲ್ಲ ಸಾಧ್ಯತೆಗಳನ್ನು ಆಟ, ಹಾಡು,ಅಭಿನಯ,ಸಂವಾದಗಳ ಮೂಲಕ ಹೊರಹಾಕಲು ಇಲ್ಲಿ ಚೆಂದದ ಚಟುವಟಿಕೆಗಳನ್ನು ಪೋಣಿಸಲಾಗಿದೆ. ಕಲಿಕಾ ಹಬ್ಬಕ್ಕಾಗಿಯೇ ಆಯ್ದ ಹತ್ತಾರು ಹಾಡುಗಳನ್ನು ನೀಡಲಾಗಿದೆ. ಮಕ್ಕಳು ಪದಗಳ ಮೂಲಕವಷ್ಟೇ ಅಲ್ಲ ತಮ್ಮ ದೇಹ ಭಾಷೆಯ ಮೂಲಕವೂ ಜಗತ್ತಿಗೆ ತೆರೆದುಕೊಳ್ಳಲು ಇಲ್ಲಿನ ಚಟುವಟಿಕೆಗಳು ಸಹಾಯಕವಾಗಿವೆ. ಇಲ್ಲಿನ ಪ್ರಮುಖ ಚಟುವಟಿಕೆಗಳೆಂದರೆ, ಪದ ಪದ್ಯ, ಅಂತ್ಯಾಕ್ಷರಿ ಪದವೃಕ್ಷ, ಪದ ಏಣಿ, ಮಾತಿಗೆ ಮಾತು, ದೄಯ ಕಟ್ಟೋಣ, ಜೀವ ಭಾವ ಕಥೆ ಕಟ್ಟೋಣ, ಆಡೊ ಆಡೋ ಆಟ, ಟಾಮ್‌ ಆಂಡ್‌  ಜೆರಿ, ರಾಣಿಯ ಬಯಕೆ,ಪೇರ್‌ ಕೇರ್‌ ಇಟ್ಟಿಗೆ ಪಾದರಕ್ಷೆ ಆಟ, ಕಡಬು ಗಣೇಶ, ಮೀನಿನ ಬಲೆ ಆಟ ಮತ್ತು ಸಲೀಸಾಗಿ ದಾಟು ಇತ್ಯಾದಿ

2. ಕಾಗದ ಕತ್ತರಿ

          ಮಕ್ಕಳಿಗೆ ಬಣ್ಣಗಳೆಂದರೆ ಇಷ್ಟ. ಮಕ್ಕಳ ಅನೇಕ ಸೃಜನಶೀಲ ಚಟುವಟಿಕೆಗಳಿಗೆ ಕಾಗದವೇ ಮಾಧ್ಯಮ. ಕಾಗದ, ಕತ್ತರಿ, ಬಣ್ಣಗಳನ್ನು ಬಳಸಿ ವಿಭಿನ್ನ ಆಕಾರಗಳು, ಗೊಂಬೆಗಳು, ಚಿತ್ರಗಳನ್ನು ಮಕ್ಕಳು ರೂಪಿಸಲು ಈ ವಿಭಾಗದಲ್ಲಿ ಹಲವು ಚಟುವಟಿಕೆಗಳಿವೆ. ಒರಿಗಾಮಿ, ಪೇಪರ್‌ ಕ್ರಾಫ್ಟಗಳ ಮೂಲಕ ಮಕ್ಕಳು ಸೂಕ್ಷ್ಮನೋಟ, ಅಚ್ಚುಕಟ್ಟುತನ, ಏಕಾಗ್ರತೆಗಳನ್ನು ಕಲಿಯಬಲ್ಲರು,ಖುಷಿಯಾಗೂ ಇರಬಲ್ಲರು. ಇದರಲ್ಲಿರುವ ಪ್ರಮುಖ ಚಟುವಟಿಕೆಗಳೆಂದರೆ, ರೆಕ್ಕೆ ಬಡಿಯುವ ಕೊಕ್ಕರೆ, ಮುಳ್ಳು ಹಂದಿ, ಕಪ್ಪೆ ಕುಪ್ಪಳಿಸುವ ಕಪ್ಪೆ, ವಾಚಾಳಿ ಬೆಕ್ಕು, ಥ್ರೆಡ್‌ ಪೇಟಿಂಗ್‌, ಫೋಲ್ಡ ಪೇಟಿಂಗ್‌, ಸ್ಪ್ರೇ ಪೇಟಿಂಗ್‌, ಬೆರಳು ಬೊಂಬೆ, ಮುಖವಾಡದ ಬೊಂಬೆ, ಟ್ಯಾನ್‌ ಗ್ರಾಮ್‌, ರಾಜಾ ಕಿರೀಟ ಕುಲು ಟೋಪ್ಪಿಗೆ ಮತ್ತು ಕಾಗದದ ಅಸ್ಥಿಪಂಜರ ಕೊಲಾಜ್‌ ಇತ್ಯಾದಿ

3.ಊರು ತಿಳಿಯೋಣ

          ಕಲಿಕೆಯು ತರಗತಿಯಾಚೆಗೆ ವಿಸ್ತರಿಸಬೇಕು. ಸುತ್ತಲಿನ ಜಗತ್ತಿನೊಡನೆ ಮಕ್ಕಳು ಒಡನಾಡಲು ಮತ್ತು ಈ ಜಗತ್ತಿನ ಸೌಂದರ್ಯವನ್ನು ಗಣಿಯ ವಿಜ್ಞಾನ ಮತ್ತು ಭಾಷೆಯ ಸಂರಚನೆಗಳ ಮೂಲಕ ಅಭಿವ್ಯಕ್ತಿಗೊಳಿಸಲು ಈ ವಿಬಾಗದ ಚಟುವಟಿಕೆಗಳು ಅನುವು ಮಾಡಿಕೊಡುತ್ತವೆ. ಇಲ್ಲಿ ಪ್ರಮುಖವಾಗಿ ಮರದ ಎತ್ತರ ಅಳೆಯೋಣ, ಒಂದು ಮರದ ಅಧ್ಯಯನ, ಪರಿಸರ ಪಯಣ ಸಂದರ್ಶನ ಮತ್ತು ನಮ್ಮೂರ ನಕ್ಷೆ ರಚಿಸೋಣ ಎಂಬ ಚಟುವಟಿಕೆಗಳು ಪ್ರಮುಖವಾಗಿವೆ.

4. ಮಾಡು-ಆಡು

ಈ ವಿಭಾಗವು ವಿಜ್ಞಾನ ಆಟಿಕೆಗಳನ್ನು ತಯಾರಿಸುವ ಅನೇಕ ಚಟುವಟಿಕೆಗಳನ್ನು ಹೊಂದಿದೆ.ಇಲ್ಲಿ ಸೂಚಿಸಿರುವ ಚಟುವಟಿಕೆಗಳನ್ನು ಮಕ್ಕಳು ಖುಷಿಯಿಂದ ಮಾಡುತ್ತಾರೆ. ಸಿದ್ಧವಾದ ಆಟಕಿಗಳ ಜೊತೆ ಆಟವಾಡುತ್ತಾರೆ.  ಆಡುತ್ತಾ ಆಡುತ್ತಾ ತಮ್ಮ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಪರಿಹಾರ ಹುಡುಕುತ್ತಾರೆ. ಒಡಲಾಳದ ಪ್ರಶ್ನೆಗಳನ್ನು ಅಡಗಿಸಿಟ್ಟುಕೊಂಡಿರುವ ಇಲ್ಲಿನ ಎಲ್ಲ ಚಟುವಟಿಕೆಗಳೂ ಒಂದಲ್ಲ ಒಂದು ವಿಜ್ಞಾನದ ಪರಿಕಲ್ಪನೆಯನ್ನು ವಿವರಿಸುತ್ತಾ ಹೋಗುತ್ತದೆ. ಇದರಲ್ಲಿ ಬರುವ ಪ್ರಕುಂ ಚಟುವಟಿಕೆಗಳೆಂದರೆ, ರಾಸಾಯನಿಕ ಊಸರವಳ್ಳಿ, ಟೆಸ್ಟ್‌ ಟ್ಯೂಬ್‌ ರಾಕೆಟ್‌, ಪೆನ್ಸಿಲ್‌ ಫ್ಯಾನ್‌, ಕುಣಿಯುವ ನಾಣ್ಯ,ಜೀರ್ಣಾಂಗವ್ಯೂಹದ ಮಾದರಿ ಕಣ್ಣು ಮಿಟಿಕಿಸವ ಗೊಂಬೆ, ನ್ಯಾನೊ ಸೌರವ್ಯೂಹ ಸೀ ಡೈವರ್‌,ಭೂಮಿ ಚಂದ್ರ ಮಾದರಿ,ಏರುವ ಹಲ್ಲಿ, ಸುರಳಿಹಾವು, ನೀರು ಚಿಮ್ಮುವ ಕಾರಂಜಿ ಮರಕುಟಕ, ದೃಷ್ಟಿ ಭ್ರಮೆಯ ಗೊಂಬೆಗಳು, ಓಡುವ ಕುದುರೆ, ಪ್ರಡಿ ಕನ್ನಡಕ,, ಕಾನ್ಫರೆನ್ಸ ಕಾಲ್‌, ನ್ಯೂಟನ್ನ ಮತ್ತು ಬೆನ್ ಹ್ಯಾಮ್‌ ಗಿರಗಿಟ್ಲೆ, ಸೂಚಿರಂದ್ರ ಬಿಂಬಗ್ರಾಹಿ,ಸೋಪಿನ ಗುಳ್ಳೆಗಳ ಆಕೃತಿಗಳ ರಚನೆ, ಬಾಲ್‌ ಮೌಂಟ್‌ ಸನ್‌ ಪ್ರೋಜೆಕ್ಟರ್‌, ಸೂರ್ಯ ಸಂದೇಶ, ಟೆಲಿಸ್ಕೋಪ್‌ ಮತ್ತು ಮಾನವನ ಮೆದುಳಿನ ಮಾದರಿ ತಯಾರಿಕೆ ಇತ್ಯಾದಿಗಳು.

ಒಟ್ಟಾರೆ ಕಲಿಕಾ ಹಬ್ಬವು ಮಗುವಿನ ಕಲಿಕೆಗೆ ಸಂಬ್ರಮದ ಆಚರಣೆಯಾಗಿದೆ. ಕಲಿಕಾ ಹಬ್ಬ ಕಲಿಕೆಯ ನಿರಂತರ  ಹಬ್ಬವಾಗಿ ಪರಿಣಮಿಸಲಿ ಎಂಬುದೇ ಇಲ್ಲಿನ ಪ್ರಮುಖ ಆಶಯ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top