ಕಾವ್ಯ ಸಂಗಾತಿ
ಬಂಧವೊಂದು ಹೊರಟು ನಿಂತಾಗ
ಶಿಲ್ಪ ಸಂತೋಷ್
ಬಂಧವೊಂದು ಬೆಸೆಯುವ ಘಳಿಗೆ
ಇದ್ದ ಕಾರಣಗಳು ನಿನಗೆ ಖುಷಿಕೊಡುವಂತೆ…
ಬಂಧವೊಂದು ಕಳಚಿಕೊಂಡು ಹೊರಟು ನಿಂತಾಗ
ಆಗುವ ನೋವನ್ನು ಸಹಿಸಿಕೋ ಮನಸ್ಸೇ…
ನೋವುಗಳೇ ಖಾತ್ರಿಯೆನಿಸಿದಾಗ
ಯಾರಿಗೂ ಕಾಡಿ ಬೇಡುವುದು ತರವಲ್ಲ.
ಕಳಿತ ಹಣ್ಣು ಕಳಚಿ ತಾನಾಗಿ ಮರದಿಂದ ಬೇರೆಯಾಗುವುದ,
ಹಣ್ಣಾದ ಎಲೆಯ ತೊಟ್ಟು
ತಾನಾಗಿ ಉದುರಿ ಹೋಗುವುದ
ತಪ್ಪಿಸಲಾದೀತೆ ಮನಸ್ಸೇ…
ಸೃಷ್ಟಿಯ ನಿಯಮವಿದು ಬದಲಿಸಲು
ಇಲ್ಯಾರಿಗೂ ಸಾಧ್ಯವಿಲ್ಲ.
ಅಂತ್ಯಗಳನ್ನಿಟ್ಟುಕೊಂಡೇ ಹುಟ್ಟಿಕೊಳ್ಳುವ ತಾತ್ಕಾಲಿಕ ಬಂಧಗಳಿಂದ
ಶಾಶ್ವತ ನೆಮ್ಮದಿಯ
ಬಯಸಲಾದೀತೆ ಮನಸ್ಸೇ…
ಕೂಡಿ ಕಲೆತಾಗ ಪಡೆದ ಖುಷಿಯ
ನೆನಪ ಕೂಡಿಟ್ಟು
ಹೊರಟು ನಿಂತಾಗ ಬರುವ
ನೋವ ಬಿಕ್ಕಳಿಕೆಯ ಸಂತೈಸಿಕೊಳ್ಳದೆ ಬೇರೆ ವಿಧಿಯಿಲ್ಲ.
ಜೀವನವೆನ್ನುವುದು ಯಾರಿಗಾಗಿಯೂ
ನಿಲ್ಲದ ಸಂಚಾರಿ…
ಈ ಮನಸ್ಸೆಂಬುದು ನೋವು ನಲಿವುಗಳ ಭಾವ ತಂಬೂರಿ…
ಆ ತಂತಿಗಳ ವೀಣೆಯ ಸಮಾನಾಂತರವಾಗಿ
ಮೀಟುತ್ತ,
ಕಾಲದ ಜೊತೆಯಲ್ಲಿ ಮೌನವಾಗಿ
ಸಾಗು ನೀ ಮನಸ್ಸೇ…
ಯಾರಿಗಾಗಿಯೂ ಕಾಲ ಇಲ್ಲೇ ನಿಲ್ಲುವುದಿಲ್ಲ.