ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ನನ್ನ ಕನಸಿನ ಭಾರತ

ಹೆತ್ತ ತಾಯಿ ಮೊದಲ ಗುರು ಆದರೆ ಹೊತ್ತ ಭೂಮಿ ಹೆತ್ತ ಮಾತೆಯಂತೆಯೆ ಶ್ರೇಷ್ಟವಾದ ನೆಲ. “ಭರತ ಭೂಮಿ ನಮ್ಮ ತಾಯಿ, ನಮ್ಮ ಪೊರೆವ ತೊಟ್ಟಿಲು… ಜೀವನವನೇ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು….” ಎಂಬ ಕುವೆಂಪುರವರ ಸಾಲಿನಂತೆ ನಮ್ಮ ದೇಶ ನಮ್ಮ ಹೆಮ್ಮೆ. ನಮ್ಮ ವೈಯಕ್ತಿಕ ಬದುಕಿನಲ್ಲಿ ನಮಗೆ ಅದೆಷ್ಟು ಮುಂದಿನ ಕನಸುಗಳಿವೆಯೋ ಅಷ್ಟೇ ಕನಸುಗಳು ನಮ್ಮ ರಾಜ್ಯ, ದೇಶ ಊರಿನ ಬಗೆಗೂ ಇವೆ. ನನ್ನ ದೇಶದ ಬಗೆಗೂ ನನ್ನ ಕನಸುಗಳು ಹಲವಾರು ಇವೆ. ನಾನಿಂದು ನಿಮ್ಮ ಮುಂದೆ “ನನ್ನ ಕನಸಿನ ಭಾರತ “ದ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಬಿತ್ತಲಿದ್ದೇನೆ.

ಭಾರತ ವಿಶ್ವದಲ್ಲಿ ನಂಬರ್ ಒನ್ ಆಗಿ ಮೆರೆಯಬೇಕು ಎಂಬುದು ಎಲ್ಲ ಭಾರತೀಯರಂತೆ ನನ್ನದೂ ಕನಸು. ಅದಾಗ ಬೇಕಿದ್ದರೆ ಪ್ರಪಂಚದ ಮಾರ್ಗಗಳಲ್ಲಿ ಭಾರತೀಯ ನಿರ್ಮಿತ ಕಾರುಗಳು ಓಡಾಡಬೇಕು, ಪ್ರತಿಯೊಬ್ಬರ ಕೈಯಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್ ಫೋನ್ ಗಳು ಇರಬೇಕು, ಪ್ರತಿಯೊಬ್ಬ ಸಮಯ ನೋಡಲು ಮೇಡ್ ಇನ್ ಇಂಡಿಯಾ ವಾಚ್ ಬಳಸಬೇಕು. ಪ್ರತಿ ಮನೆಯಲ್ಲೂ ಭಾರತದಲ್ಲೇ ತಯಾರಾದ ಭಾರತೀಯ ಟಿವಿ ಚಾನೆಲ್ ಗಳು ಇರುವ ಟಿವಿ ಇರಬೇಕು. ಕರ್ನಾಟಕದಲ್ಲೇ ತಯಾರಾದ ರೇಡಿಯೋ, ಬಾವುಟ, ಚಿನ್ನದ ಆಭರಣಗಳು ಹೊರ ದೇಶ, ರಾಜ್ಯಗಳಲ್ಲೂ ಸಿಗುವಾಗ ನಮಗೆ ಆಗುವ ಹೆಮ್ಮೆ ಅಷ್ಟಿಷ್ಟಲ್ಲ. ಹಾಗೆಯೇ ನಮ್ಮಲ್ಲಿ ತಯಾರಾದ ಸೆಣಬಿನ ನಾರಿನ ವಸ್ತುಗಳು, ಚಾಪೆಯ ಜೊತೆಗೆ ತಂತ್ರಜ್ಞಾನದಲ್ಲಿ ಮುಂದುವರೆದು ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್, ಅದರ ಭಾಗಗಳು, ಮನೆಗೆ ಬೇಕಾದ ಗೃಹ ಬಳಕೆಯ ಸಾಮಾನುಗಳು, ಎಲ್ಲದರ ಮೇಲೆಯೂ made in India ಮಾರ್ಕ್ ಇರಬೇಕು. ಅದೂ ಕೂಡಾ ಭಾರತೀಯರೇ ಆರಂಭಿಸಿದ ಕಂಪನಿ ಆಗಿರಬೇಕು. ಬೇರೆ ಯಾವುದೋ ದೇಶದ ಜನ ಬಂದು ಅವರ ಒಂದು ಶಾಖೆಯನ್ನು ಇಲ್ಲಿ ತೆರೆದು ಮೇಡ್ ಇನ್ ಇಂಡಿಯಾ ಎಂಬ ಬೋರ್ಡ್ ತಗುಳಿಸಿದ ಉತ್ಪನ್ನ ಆಗಬಾರದು.

ಸ್ಟ್ರಾ ಬೆರ್ರಿ, ಚೆರ್ರಿ, ಡ್ರಾಗನ್ ಫ್ರೂಟ್, ಕಿವಿ ಹಣ್ಣು ಮೊದಲಾದ ಹಣ್ಣುಗಳು ಹೇಗೆ ಭಾರತೀಯ ಮಾರುಕಟ್ಟೆಯಲ್ಲಿ ಎಡೆಬಿಡದೆ ಮಾರಲ್ಪಡುತ್ತವೆಯೋ ಅದೇ ರೀತಿ ನಮ್ಮ ಕಾಡಲ್ಲಿ ಬೆಳೆಯುವ ಜಿರ್ಕನ ಹಣ್ಣು, ತಂಪಿನ ಹಣ್ಣು, ಮುಳ್ಳು ಹಣ್ಣು, ಕೆಂಪು ಹಣ್ಣು, ಹಳದಿ ಹಣ್ಣು, ಸಕ್ಕರೆ ಹಣ್ಣುಗಳು, ರೌಂಡ್ ಹಾಗಲ, ಕನ್ನಡ ಹೀರೆಕಾಯಿ, ಹಿತ್ತಲ ಅವರೆಕಾಯಿ, ಚಪ್ಪರದವರೆ, ತೊಂಡೆ ಕಾಯಿ ಮೊದಲಾದ ದೇಶೀಯ ಹಣ್ಣು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾವಿರಗಟ್ಟಲೆ ಹಣ ಕೊಟ್ಟು ಬಿಳಿಯರ ಖರೀದಿಸುವ ಹಾಗೆ ಹೊರ ದೇಶಗಳ ಮಾಲ್ ಗಳಲ್ಲಿ ಸಿಗುವ ಹಾಗೆ ಆಗಬೇಕು.

ಭಾರತದಲ್ಲಿ ಮಾಡಿದ ನಾರಿನ ಚಾಪೆ, ಯೋಗ ಮ್ಯಾಟ್, ಸೆಣಬಿನ ಬ್ಯಾಗ್, ಹುಲ್ಲಿನ ಬ್ಯಾಗ್, ಮ್ಯಾಟ್, ಚಾಪೆ ಇವುಗಳನ್ನು ಕೊಳ್ಳಲು ಪರದೇಶದ ಜನ ಮುಗಿ ಬೀಳಬೇಕು. ಆಯುರ್ವೇದಿಕ್, ಮ್ಯಾನ್ ಮೇಡ್, ಇಂಡಿಯನ್ ಹೋಂ ಪ್ರೋಡಕ್ಟ್ ಇವೆಲ್ಲ ಹೊರ ದೇಶಿಗರ ಶಾಪಿಂಗ್ ನಲ್ಲಿ ಪ್ರತಿ ತಿಂಗಳ ಲಿಸ್ಟ್ ನಲ್ಲಿ ಬರುವ ಹಾಗೆ ಆಗಬೇಕು. ನಾವು ಆಲಿವ್ ಎಣ್ಣೆ ಉಪಯೋಗಿಸಿದ ಹಾಗೆ ಅವರು ಅಧಿಕ ಹಣ ಕೊಟ್ಟು ಇಲ್ಲಿನ ಕೊಬ್ಬರಿ, ಶೇಂಗಾ, ನೆಲ ಕಡಲೆ ಎಣ್ಣೆಯನ್ನು ಬಳಸುವ ಹಾಗೆ ಆಗಬೇಕು. ಇಲ್ಲಿನ ರೈತರು ಬೆಳೆದ ಎಲ್ಲಾ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಬೇಕು.

ಇನ್ನು ಭಾರತೀಯ ಸಿನೆಮಾ, ನೃತ್ಯ, ಹಾಡುಗಾರರು, ಭಾರತೀಯ ಬಟ್ಟೆಗಳು, ಉಡುಗೆ ತೊಡುಗೆಗಳು, ಬಳೆ, ಕುಂಕುಮ, ಸರ, ಕಾಲ ಗೆಜ್ಜೆ, ಓಲೆ, ಬ್ಯಾಗು ಇದೆಲ್ಲಾ ವಿದೇಶೀಯರ ಕಣ್ಣಿಗೆ ಅಂದ ಕಂಡು ಎಲ್ಲವನ್ನೂ ಅವರು ಕೊಳ್ಳುವವರಾಗಬೇಕು.

ಹಾಗೆ ಭಾರತ ವಿಶ್ವ ಗುರು ಆಗಬೇಕು. ತುಂಬಾ ಸೀರಿಯಸ್ ಕೇಸ್ ಎನ್ನುವ ದೈಹಿಕ ಅನಾರೋಗ್ಯದ ವ್ಯಕ್ತಿ ಭಾರತದಲ್ಲಿ ನಾನು ಸರಿ ಹೋಗುವೆ ಎಂಬ ನಂಬಿಕೆ ಇಟ್ಟು ಇಲ್ಲಿಗೆ ಬಂದು ತನ್ನ ಆರೋಗ್ಯಕ್ಕೆ ಇಲ್ಲಿನ ವೈದ್ಯರನ್ನು ಕಂಡು ಗುಣ ಹೊಂದಿ ಮತ್ತೆ ಹಿಂದಿನ ಹಾಗೆ ಆಗಿ ಹೋಗಿ ಆ ದೇಶದಲ್ಲೆಲ್ಲಾ ಭಾರತದ ವೈದ್ಯ ಪದ್ಧತಿಯ ಗುಣಗಾನ ಮಾಡಬೇಕು.

ಇಲ್ಲಿನ ಜನ ಶಿಸ್ತು, ಸಮಯಪಾಲನೆ, ಕಲಿಕೆಗೆ ಹೆಚ್ಚು ಗಮನ ಕೊಡಬೇಕು. ಮಕ್ಕಳನ್ನು ಶಾಲೆಗೆ ರಜೆ ಮಾಡಿಸಿ ಪೋಷಕರು ಆಗಾಗ ಅನೇಕ ದೇವಸ್ಥಾನಗಳನ್ನು ಸುತ್ತಿ ಬರುವುದು, ಪರೀಕ್ಷೆ ಸಮಯದಲ್ಲೂ ಕೌಟುಂಬಿಕ ಪೂಜೆಗಳನ್ನು ಇರಿಸಿಕೊಳ್ಳುವುದು, ಬಂಧುಗಳ ಕಾರ್ಯಕ್ರಮದಲ್ಲಿ ಭಾಗಿ, ನಾಲ್ಕೈದು ದಿನ ಅಲ್ಲೇ ಮಕ್ಕಳು, ಮರಿಮಕ್ಕಳ ಸಮೇತ ಟೆಂಟ್ ಹಾಕಿ ಬಿಡುವುದು ಇವೆಲ್ಲಾ ಸರ್ವೇ ಸಾಮಾನ್ಯ. ಹೀಗೆ ಮಾಡದೆ ತಮ್ಮ ಮಕ್ಕಳ ಜವಾಬ್ದಾರಿ ಸರಕಾರಕ್ಕೆ ಕೊಡದೆ ತಾವೇ ಸಾಕುವ ಕೈ0ಕರ್ಯ ತೊಟ್ಟಲ್ಲಿ ಭಾರತ ಏರುತ್ತದೆ. ತನ್ನ ಮಗುವಿಗೆ ವಿದ್ಯೆ, ಬುದ್ಧಿ, ಬಟ್ಟೆ, ಪುಸ್ತಕ, ಸೈಕಲ್, ಬ್ಯಾಗು, ಕೊಡೆ ಎಲ್ಲವನ್ನೂ ಸರಕಾರವೇ ಕೊಟ್ಟು,  ಬೇಕಾದರೆ ಓದಿಸಲಿ ಎಂಬ ಭಾವ ನನ್ನ ಮಗುವಿನ ಮೇಲೆಯೇ! ನನಗೆ ಬಂದರೆ ನಾನು ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೆ ಎನ್ನುವವರು ಕೆಲಸ ಮಾಡಿ ಅರಿತು ದೇಶ ಸೇವೆ ಮಾಡಲು ಸಾಧ್ಯ. ಆ ದೇಶ ಸೇವೆಯೇ ನಮ್ಮ ದೇಶವನ್ನು ಬೆಳಗಿಸ ಬಲ್ಲುದು. ನಮ್ಮ ಕನಸಿನ ಭಾರತ ರೂಪುಗೊಳ್ಳಲು ಸಾಧ್ಯ. ನೀವೇನಂತೀರಿ?


ಹನಿಬಿಂದು

ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top