ಕಾವ್ಯಸಂಗಾತಿ
ಗಜಲ್
ಅನಸೂಯ ಜಹಗೀರದಾರ
ಈ ಮಾಯೆಯಲಿ ನನ್ನನೇ ಮರೆತಿರುವಾಗೊಮ್ಮ ಮತ್ತೇ ಕರೆಸಿಕೋ ನನ್ನ
ನಿನ್ನಿರುವ ಗ್ಯಾನದಲಿ ಕಳೆದು ಹೋದಾಗೊಮ್ಮೆ ತಿರುಗಿ ಹುಡುಕಿಕೋ ನನ್ನ
ನಿನ್ನದೇ ಮಾತುಗಳಿಗೆ ಪ್ರತಿ ದನಿಯಾದಾಗೊಮ್ಮೆ ಶ್ರವಣಿಸಿಕೋ ನನ್ನ
ನನ್ನ ಕವಿತೆಯ ಪದಗಳಲಿ ನೀ ಅವಿತಾಗೊಮ್ಮೆ ಬಿಡದೆ ಗ್ರಹಿಸಿಕೋ ನನ್ನ
ನಿನ್ನ ಆಂತರ್ಯದಲಿ ಜಿನುಗಿ ತೊರೆಯಾದಾಗೊಮ್ಮೆ ಪ್ರೋಕ್ಷಿಸಿಕೋ ನನ್ನ
ನನ್ನ ಭಾವ ನದಿಯಲಿ ಮೀನಾಗಿ ಈಜುವಾಗೊಮ್ಮೆ ಜೊತೆಗೂಡಿಕೋ ನನ್ನ
ನಿನ್ನೊಲವ ಗಂಧ ಧೂಪದಲಿ ತೇಲುವಾಗೊಮ್ಮೆಆಲಂಗಿಸಿಕೋ ನನ್ನ
ಜೀವನದ ಬೆಂಗಾಡಿನಲಿ ನಿತ್ಯ ನಡೆವಾಗೊಮ್ಮೆ ಬಿಡದೆ ರಕ್ಷಿಸಿಕೋ ನನ್ನ
ಅನು ದಿನದ ಅಂಬಾರಿ ಸವಾರಿಯಲೊಮ್ಮೆ ಗಮನಿಸಿಕೋ ನನ್ನ
ಶೂನ್ಯ ಗುಣಿಸಿ ಸಂದ ಫಲವ ಗೊಣಗುವಾಗೊಮ್ಮೆ ಸೈರಿಸಿಕೋ ನನ್ನ