ಅಂಕಣ ಸಂಗಾತಿ

ಹನಿಬಿಂದು ಅವರ ಲೇಖನಿಯಿಂದ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -3

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -3

ಹಾಯ್ ಎಲ್ಲರಿಗೂ. ಹೇಗಿದ್ದೀರಿ? ಚಳಿಗಾಲ ಬಂದಿದೆ. ಭಾರತ ನಡುಗುತ್ತಿದೆ. ಮೊನ್ನೆ ಮೊನ್ನೆಯವರೆಗೆ ಮಳೆ ಬಂದರೂ ಕೂಡಾ ವಿಪರೀತ ಚಳಿ. ಈಗ ಎಣ್ಣೆ ಕಾಳುಗಳ ಬಳಕೆ ಎಳ್ಳು ತೆಂಗು ಹೀಗೆ ಆಹಾರದಲ್ಲಿ ಇದ್ದರೆ ಉತ್ತಮ. ಹಾಗೆಯೇ ಸ್ನಾನಕ್ಕೆ ಮೊದಲು ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಒಣಗಿ ಹೋಗುವುದಿಲ್ಲ. 76% ಕ್ಕಿಂತ ಹೆಚ್ಚು TFM ಇರುವ ಸಾಬೂನು ಬಳಸಬೇಕು. ಆಗ ಚರ್ಮಕ್ಕೆ ತೊಂದರೆ ಆಗದು. ಹೆಚ್ಚು ಬಿಸಿ ನೀರು ಕುಡಿಯುವುದು ಉತ್ತಮ. ಜಾತ್ರೆ, ನೇಮ, ಕೋಲ, ವಾರ್ಷಿಕೋತ್ಸವ, ಲಕ್ಷದೀಪೋತ್ಸವ, ಪೂಜೆ, ಆಯನಗಳು ಈಗ ಹೆಚ್ಚು. ಅಲ್ಲೆಲ್ಲಾ ಹೋಗಿ ಸಾರ್ವಜನಿಕ ಊಟ ಮಾಡುವಾಗ ಸ್ವಚ್ಛತೆ ಹೇಗಿದೆ ನೋಡಿಕೊಂಡು, ಸಿಕ್ಕಿ ಸಿಕ್ಕಿದಲ್ಲಿ ನೀರು ಕುಡಿಯದೆ ತಮ್ಮ ಆರೋಗ್ಯ ಕಾಪಾಡುವುದು ಒಳ್ಳೆಯ ಗುಣ.

ಇಂದಿನ ತಾಂತ್ರಿಕ ಯುಗದಲ್ಲಿ ಶೈಕ್ಷಣಿಕ ಅಂಕಗಳು ಉತ್ತಮ ಉದ್ಯೋಗ ಪಡೆಯಲು ಸಹಕಾರಿ ಆಗಿದೆಯೇ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಇದು ಆಗಾಗ ನಮ್ಮ ಪ್ರಶ್ನೆಯೂ ಹೌದು. ಆದರೆ ಇದಕ್ಕೆ ಉತ್ತರ ಕೊಡುವ ಸರದಿ ನನ್ನದಾದಾಗ ನಾನೆನ್ನುವುದು “ಹೌದು, ಶೈಕ್ಷಣಿಕ ಅಂಕಗಳು ಒಂದು ಹಂತದಲ್ಲಿ ಕೆಲವೊಂದು ಉದ್ಯೋಗ ಪಡೆಯಲು ಖಂಡಿತಾ ಸಹಕಾರಿ. ಹೆಚ್ಚು ಅಂಕ ಪಡೆದವರಿಗೆ ಮಾತ್ರ ಅಲ್ಲವೇ ವಿದ್ಯಾರ್ಥಿವೇತನ, ಫ್ರೀ ಸೀಟು, ಸನ್ಮಾನ, ಅಭಿಮಾನ ಎಲ್ಲಾ! ಇನ್ನು ಕೆಲವು ಕೆಲಸಗಳೂ ಕೂಡ!

ಆದರೆ ಬದುಕಿನಲ್ಲಿ ಹಲವಾರು ಕ್ಷೇತ್ರಗಳಿವೆ. ಕೆಲವೊಂದು ಕ್ಷೇತ್ರಗಳಲ್ಲಿ ಇದು ಅನಿವಾರ್ಯ ಆಗಿರದೇ ಇರಬಹುದು. ಅಂಕಗಳ ಮೇಲೆಯೇ ಇಂದಿಗೂ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರಿ ಸಿಗುವುದು. ಬ್ಯಾಂಕಿಂಗ್, ಪೋಸ್ಟ್ ಆಫೀಸ್, ಇಂಜಿನಿಯರ್ , ವೈದ್ಯ, ⁶⁵ಉಪನ್ಯಾಸಕ, ಬೋಧಕ – ಶಿಕ್ಷಕ ವರ್ಗ ತಮ್ಮ ಅಂಕಗಳ ಮೇಲೆಯೇ ಬಂದಿರುವರು. ಕೆಲಸ ಗಳಿಸಿರುವರು. ಬುದ್ಧಿವಂತರಾದಾಗ ಮಾತ್ರ ಅಂಕ ಗಳಿಕೆ ಸಾಧ್ಯ. ವಾಮ ಮಾರ್ಗ ಎಂದಿಗೂ ಆಗದು. ಹಾಗೆ ಮಾಡಿದರೆ ಒಂದಲ್ಲ ಒಂದು ಹಂತದಲ್ಲಿ ನಿಜ ಬಣ್ಣ ಬಯಲಾಗಿಬಿಡುವ ಸಾಧ್ಯತೆಗಳು ಅನೇಕ. ಒಂದು ಸುಳ್ಳನ್ನು ಸಾಧಿಸಲು ಹಲವಾರು ಸುಳ್ಳುಗಳನ್ನು ಪೋಣಿಸಬೇಕಾಗುತ್ತದೆ. ಆಗ ಸ್ವಲ್ಪ ಎಡವಿದರೂ ಪಿಎಸ್ಐ ಪರೀಕ್ಷೆಯಲ್ಲಿ ನಡೆದ ರದ್ದಾಂತದ ರೀತಿ ಆಗುತ್ತದೆ.

ಯಾವುದೇ ಉದ್ಯೋಗ ಪಡೆಯಲು ಪ್ರತಿ ಒಬ್ಬರಿಗೂ ಒಂದು ಮಾನದಂಡಗಳು ಬೇಕು. ಆ ಮೂಲಕ ಹೆಚ್ಚು ಅಂಕ ಗಳಿಸಿದವರು ಮೊದಲ ಸಾಲಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಮತ್ತೆ ಹೆಚ್ಚು ಅಂಕಗಳನ್ನು ಗಳಿಸಬೇಕಾದರೆ ಜ್ಞಾನಶಕ್ತಿ, ಬುದ್ಧಿಮತ್ತೆ ಹೆಚ್ಚಿದ್ದರೆ ಮಾತ್ರ ಸಾಧ್ಯ ತಾನೇ? ಹಾಗಾಗಿ ಐ ಎ ಎಸ್ , ಕೆ ಎ ಎಸ್, ನೀಟ್, ನೆಟ್ ಪರೀಕ್ಷೆಗಳು ಮೊದಲಾದವು ದೊಡ್ಡ ಕೆಲಸಗಳು ಸಿಗಬೇಕಾದರೆ ಇರುವ ಅಂಕಗಳ ಮೇಲೆ ಅವಲಂಬಿತವಾಗಿ ಇರುವ ಪರೀಕ್ಷೆಗಳೇ ಅಲ್ಲವೇ?

ಇನ್ನು ಒಂದು ಕಾರ್ಯ ಕ್ಷೇತ್ರ ಇದೆ. ವ್ಯಾಪಾರ. ಇಲ್ಲಿ ಅಂಕಗಳು ನಮ್ಮ ನೆರವಿಗೆ ಬರಲಾರವು. ಪ್ರಪಂಚದ ಸಿರಿವಂತರ ಪಟ್ಟಿಯಲ್ಲಿ ಇರುವವರೆಲ್ಲ ಬ್ಯುಸಿನೆಸ್ ಮ್ಯಾಗ್ನೆಟ್ ಗಳು. ಅವರಿಗೆ ಕೆಲಸ, ಜ್ಞಾನ, ಹೆಚ್ಚು ಆಲೋಚನೆಗಳು, ಹೊಸ ಹೊಸ ನಿಪುಣತೆ ಮುಖ್ಯ. ಗ್ರಾಹಕರನ್ನು ತನ್ನೆಡೆ ಆಕರ್ಷಿಸುವುದು ಅಗತ್ಯ. ಒಳ್ಳೆಯ ವಸ್ತುಗಳು ಇದ್ದರೆ ಜನರೇ ಹೋಗುತ್ತಾರೆ. ಕೆ ಎಪ್ ಸಿ ಚಿಕನ್ ನ ಓನರ್ ಅದನ್ನು ಪ್ರಾರಂಭಿಸುವಾಗ ಅವನ ವಯಸ್ಸು 70. ಆಗ ಅವನ ಅಂಕಗಳು ಯಾರಿಗೆ ಬೇಕು ಅಲ್ಲವೇ? ಬುದ್ಧಿವಂತಿಕೆ ಮುಖ್ಯ.

ಕ್ರೀಡಾ ಸ್ಪರ್ಧಿಗಳಿಗೆ, ಗುಂಪಿನ ಆಟಗಳಾದ ಕ್ರಿಕೆಟ್, ಕಬಡ್ಡಿ, ಫುಟ್ ಬಾಲ್ ಆಟಗಾರರಿಗೆ, ಹಾಡುಗಾರರು, ಕಲಾ ಆರಾಧಕರಿಗೆ, ನೃತ್ಯಪಟು, ನಟರು, ರಂಗಭೂಮಿ ಕಲಾವಿದರು, ಯಕ್ಷಗಾನ ಕಲಾವಿದರು ಇವರಿಗೆಲ್ಲ ಅಂಕಾಗಳಿಗಿಂತಲೂ ಅವರವರ ಕ್ಷೇತ್ರದಲ್ಲೂ ಸಾಮಾನ್ಯ ಜ್ಞಾನದಲ್ಲೂ ತಿಳುವಳಿಕೆ ಮುಖ್ಯ. ಸತತ ಅಭ್ಯಾಸ, ಪರಿಪಕ್ವತೆ ಇದ್ದರೆ ಆಯಿತು. ಅವರು ಆಯಾ ಕ್ಷೇತ್ರದಲ್ಲಿ ಅಂಕಗಳನ್ನು ಲೆಕ್ಕ ಹಾಕಬೇಕಾಗಿ ಇಲ್ಲ ಎಂದು ನನ್ನ ಅನಿಸಿಕೆ.

ಸಮಾಜದಲ್ಲಿ ಒಂದೇ. ಯಾವುದೇ ಕೆಲಸ ಮಾಡುತ್ತಿರಲಿ, ಅಂಕಗಳಿಗಿಂತಲೂ ಜ್ಞಾನ ಮುಖ್ಯ. ಕೆಲವು ಉದ್ಯೋಗಕ್ಕೆ ಅಂಕಾಗಳೆ ಮುಖ್ಯ ಆದರೂ, ಆ ಉದ್ಯೋಗ ದೊರೆತ ಬಳಿಕ ಅದನ್ನು ನಿಭಾಯಿಸಲು ಅವನ ಓದು, ಜ್ಞಾನ, ಕಲಿಕೆಯೇ ಹೆಚ್ಚು ಅವನಿಗೆ ಸಹಕಾರಿ. ಅಂಕಗಳನ್ನು ನೋಡಿ ಬರೆದು ಕೂಡಾ ಪಡೆಯಬಹುದು. ಆದರೆ ಕೆಲಸ ನಿಭಾಯಿಸಲು ಆ ವಿಷಯ ಕೊನೆಯವರೆಗೂ ತಿಳಿದಿರಬೇಕು.

ಡ್ರೈವರ್ ಆದ ಹಾಗೆ. ಡ್ರೈವಿಂಗ್ ಕಲಿತು, ವಾಹನದ ಬಿಡಿ ಭಾಗಗಳ ಬಗ್ಗೆ ಅರಿವಿದ್ದು, ವಾಹನ ಚಲಾಯಿಸಲು ಬಂದರೆ ಸಾಕು. ಪರೀಕ್ಷೆ ಮಾಡಿ ಡ್ರೈವಿಂಗ್ ಲೈಸೆನ್ಸ್ ಕೊಡುತ್ತಾರೆ. ಈ ರೀತಿಯ ಪ್ರಾಯೋಗಿಕ ಅನುಭವ ಎಲ್ಲಾ ಕೆಲಸಗಳಲ್ಲಿ ನಮಗೆ ಸಹಾಯಕ , ಕೆಲವು ಕೆಲಸಗಳನ್ನು ಪಡೆದುಕೊಳ್ಳಲು ಮಾತ್ರ ಅಂಕಗಳು ಸಹಾಯಕ ಎಂದು ನನ್ನ ಭಾವನೆ. ನೀವೇನಂತೀರಿ?



ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top