ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ವಾಣಿ ಭಂಡಾರಿ

“ಹಾಲುಗುಡ್ಡೆ ಹಾಲಂತೆ ಇರಲಿ

“ಅದೇನೆ ಕಮಲ ಗರ ಬಡಿದವರ ತರ ಬೆಳಂಬೆಳಗ್ಗೆ ಬಾವಿಕಟ್ಟೆ ಹತ್ರ ಕೂತ್ತಿದೆಯಲ್ಲ ಏನಾಗಿದೆ ನಿಂಗೆ ಆವಾಗಿನಿಂದ ಒಂದೇ ಸಮನೆ ನಾನೆ‌ ಲೊಚಗುಡ್ತಾ ಇದ್ದೀನಿ ಹಾ ಇಲ್ಲ ಹೂ ಇಲ್ಲ ನಿಂದು‌ ಒಳ್ಳೆ ಕತೆಯಾಯ್ತಲ್ಲ ಮರಾಯ್ತಿ”

ಆಗಲು ಒಂದೇ ಒಂದು ಮಾತು ಕಮಲಾಳ‌ ಬಾಯಿಂದ ಹೊರ ಬರಲಿಲ್ಲ.

ಏನಂತ ಹೇಳಿಯಾಳು? ಕಮಲ ಆದ್ರೂ ಹೇಳಲು ಇನ್ನೇನು ಉಳಿದಿತ್ತು ಅವಳ ಬಳಿ.

ಬಾವಿಗೆ ನೀರು ಸೇಯಲು ಬಂದ ಸೀತಾ ಒಂದೇ ಸಮನೆ ಬಾವಿಕಟ್ಟೆಯ ಗೋಡೆಗೆ ಒರಗಿ ಕೂತು ಕಣ್ಣೀರಿಡುತ್ತಿದ್ದ ಕಮಲಳನ್ನು ಅಲುಗಾಡಿಸುತ್ತಾ ಕರೆಯುತ್ತಿದ್ದಳು.

        ಕಮಲಾ ಮತ್ತು ಸೀತಾ ಒಂದೇ ಊರಿನ ಹೆಣ್ಣುಮಕ್ಕಳು.ಅಣ್ಣ ತಮ್ಮಂದಿರ ಮಕ್ಕಳು. ಕಮಲಳಿಗಿಂತ ಸೀತಾ ಒಂದು ತಿಂಗಳಿಗೆ ದೊಡ್ಡವಳಷ್ಟೆ. ಇಬ್ಬರೂ ಜೊತೆಯಾಗಿ ಶಾಲೆಗೆ ಹೋಗಿ ಬಂದವರು ಒಟ್ಟಿಗೆ ಕೂಡಿ ಆಡಿ ಬೆಳೆದವರು ಅಕ್ಕ ಪಕ್ಕದ ಮನೆ ಅಲ್ಲದಿದ್ದರೂ ಒಂದು ಪರ್ಲಾಂಗ್ ಕ್ಕಿಂತ ತುಸು ಕಡಿಮೆಯೇ ಎನ್ನಬಹುದು ಸೀತಾಳ ಮನೆಗೂ ಮತ್ತು ಕಮಲಾಳ ಮನೆಗೂ ಮಧ್ಯ ನಾಲ್ಕು ಮನೆಗಳು ಅಡ್ಡ ಅಷ್ಟೇ.ಹೇಳಿಕೇಳಿ ಮಲೆನಾಡಿನ ಮನೆಗಳು ಅತ್ತ ದೂರವೂ ಅಲ್ಲದೆ ಇತ್ತ ಹತ್ತಿರವೂ ಅಲ್ಲದೆ ಇರುವ ಮನೆಗಳು.ಹಾಗಾಗಿ ಜೋರಾಗಿ ಕೂಗಿ ಕರೆಯಬೇಕಷ್ಟೆ. ಇತ್ತ ದೊಡ್ಡದಾದ ಪಟ್ಟಣವೂ ಅಲ್ಲದೆ ಚಿಕ್ಕದಾದ ಕುಗ್ರಾಮವೂ ಅಲ್ಲದೆ ಇರುವ ಒಂದು ಸಾಮಾನ್ಯ ಚಿಕ್ಕ ಊರೇ ಹಾಲುಗುಡ್ಡೆ.ತೀರ್ಥಹಳ್ಳಿ ಸಾಗರದ ಮಧ್ಯದಲ್ಲಿ‌ರುವುದೇ ಈ ಹಾಲುಗುಡ್ಡೆ. ಬಸ್ ನ‌ ವ್ಯವಸ್ಥೆಗೇನು ಕೊರತೆ ಇರಲಿಲ್ಲ. ಅರ್ಧಗಂಟೆಗೊಂದು ಬಂದು‌ ಹೋಗುತ್ತಿದ್ದವು. ಜೊತೆಗೆ ಅಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಹ ಇದೆ.ಹಾಲುಗಡ್ಡೆ ಎಂಬ ಹೆಸರು ಏಕೆ ಬಂತು ಎಂಬ ಕಲ್ಪನೆಯೂ ಇಲ್ಲದೆ ಬೆಳೆದ ಸೀತಾ ಮತ್ತು ಕಮಲರಿಗೆ ಅದ್ಯಾವುದರ ಕಡೆ ಗಮನ ಇರದೆ ತಮ್ಮ ತೋಟ ಗದ್ದೆಗಳ ಹಚ್ಚ ಹಸಿರಿನ ನಡುವೆ ಮೈದಳೆದು ನಿಂತ ನೂರಾರು ವರ್ಷದ ಹೆಮ್ಮರಗಳು ಚಿಲಿಪಿಲಿ ಹಕ್ಕಿಗಳ ನಾದ ಸಾರಾಗವಾಗಿ ಹರಿವ ಜಲಧಾರೆಯ ನಡುವೆ ಹಸಿರು ಸಿರಿಯಲ್ಲಿ ಹಾಯುವ  ಆ ತಂಗಾಳಿಯಲ್ಲಿ ಸಂಪದ್ಭರಿತವಾಗಿ ಬೆಳೆದು ಬಂದವರು ಇಬ್ಬರು.ಶಾಲೆಗೆ ಹೋಗುವಾಗ ಅಷ್ಟಾಗಿ ಹಚ್ಚಿಕೊಂಡು ಇರುವಂತಹ ಗೆಳೆತನ ಇಲ್ಲದಿದ್ದರೂ ಒಂದೇ  ಊರು ಕೇರಿಯಲ್ಲಿ ಬೆಳೆದು ಬಂದವರು. ಹಾಲುಗುಡ್ಡೆಯಲ್ಲಿ  ಒಂದು ಅಚ್ಚುಕಟ್ಟಾಗಿರುವ ಹಾಲಿನ ಡೈರಿ ಇರುವುದು ಸಹ ಸುತ್ತಮುತ್ತಲಿನ ಜನರಿಗೆ ತಮ್ಮ ಹೈನುಗಾರಿಕೆಯನ್ನು ನಡೆಸಲು ಪ್ರಶಸ್ತ ಸ್ಥಳವಾಗಿತ್ತು ಈ ಹಾಲುಗುಡ್ಡೆ ಊರಿನ ಮಧ್ಯದಲ್ಲಿ ಗವಿಸಿದ್ದೇಶ್ವರ ದೇವಸ್ಥಾನವು ಅದಕ್ಕೆ ಹೊಂದಿಕೊಂಡಿರುವ ಕಲ್ಯಾಣಿಯು ಶಾಲಾ ಮಕ್ಕಳನ್ನು ಸದಾ ಬರಸೆಳೆದು ಕೊಳ್ಳುವ ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಕೂತು ತಮ್ಮದೇ ಲೆಕ್ಕಚಾರದಲ್ಲಿ ಮಕ್ಕಳು ತನ್ಮಯರಾಗಿ ಬಿಡುತ್ತಿದ್ದರು. ಶಾಲಾ ಮೈದಾನದಲ್ಲಿ ಆಡಿದ್ದು ಸಾಕಾಗದೆ ಶನಿವಾರ ಭಾನುವಾರ ಬಂತೆಂದರೆ ದೇವಸ್ಥಾನದ ಪ್ರಾಂಗಣದ ಎದುರಿಗೆ ಇದ್ದ ಸ್ವಚ್ಛಂದವಾಗಿ ಇರುವ ಹಸಿರು ಹಬ್ಬಿದ ಮೈದಾನದಲ್ಲಿ ಮಕ್ಕಳು ತರತರವಾದ ಆಟವಾಡಿ ದೇವಸ್ಥಾನದಲ್ಲಿ‌ ನೀಡುವ ಪ್ರಸಾದದಲ್ಲಿ ತಮ್ಮ ಹಸಿವನ್ನು ಇಂಗಿಸಿಕೊಳ್ಳುತ್ತಾ ಮನೆಗೆ ಹೋಗುವುದನ್ನೇ ಮರೆತು ಬಿಡುತ್ತಿದ್ದರು.

   ವರ್ಷಕ್ಕೊಮ್ಮೆ ನಡೆಯುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅರೆ ಮಲೆನಾಡಿನಂತಿದ್ದ ಕೊಗಲೂರಿನ ರಾಮನಾಥ ಸೀತಾಳನ್ನು ಮೆಚ್ಚಿ ಮದುವೆಯಾಗಿದ್ದ.ಜಾತಿ ನೀತಿ ಎಲ್ಲಾ ಒಂದೇ ಆಗಿದ್ದರಿಂದ ಮನೆಯವರು ಸಹ ಮದುವೆ ಮಾಡಿಕೊಟ್ಟಿದ್ದರು ದೇವಸ್ಥಾನದಲ್ಲಿಯೇ.

ಮದುವೆಯ ಸಮಯದಲ್ಲಿ ಆಚೀಚೆ ಓಡಾಡಿಕೊಂಡಿದ್ದ ತೆಳ್ಳಗೆ ಬೆಳ್ಳಗೆ ವೈಯಾರದಿಂದ ಇದ್ದ  ಕಮಲಿ ಸೀತಾಳ ಗಂಡನ ಚಿಕ್ಕಪ್ಪನ ಮಗನಾದ ಕಾಶಿಯ ಕಣ್ಣಿಗೆ ಬಿದ್ದಿದ್ದಳು.ಸೀತಾಳ ಮದುವೆಯಾಗಿ ಆರು ತಿಂಗಳೊಳಗೆ ಕಮಲಳ ಮದುವೆಯು ಸಹ ಅದೇ ಊರಿನ ಕಾಶಿಯೊಂದಿಗೆ ನಡೆದಿತ್ತು.

       ಮದುವೆಯಾಗಿ ಈಗಾಗಲೇ ೧೭ ವರ್ಷ ಸಂದು ಹೋಗಿದ್ದು ಅವರಿಬ್ಬರ ಗಮನಕ್ಕೆ ಬಾರದೆ ಹೋಗಿತ್ತು ಮದುವೆಯ ನಂತರ ಅವರಿಬ್ಬರು ಆತ್ಮೀಯ ಗೆಳತಿಯರಾಗಿ ಬಿಟ್ಟಿದ್ದರು. ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳ ಜೊತೆಗೆ ವೈವಾಹಿಕ ದಾಂಪತ್ಯಕೆ ಕಾಲಿರಿಸಿದ ಕಮಲಾ ಮತ್ತು ಸೀತಾರಿಗೆ ಒಂದು ರೀತಿಯ ಅಗಾಧವಾದ ಅಟ್ಯಾಚ್ಮೆಂಟ್ ಅವರಿಬ್ಬರ ನಡುವೆ ಏರ್ಪಟ್ಟಿತ್ತು. ಅದೆಂತಹ ಕಷ್ಟ ಸುಖವಾದರೂ ಮುಕ್ತಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು.

ಆದರೆ ಇಂದೇಕೋ ಕಮಲ ಮೌನಿಯಾಗಿ ರೋದಿಸುತ್ತಿದ್ದಳು.

  “ಈಗ ಏನಾಯ್ತು ಅಂತ ಹೀಗೆ ರೋದಿಸ್ತ ಕುಂತಿದಿಯಾ‌ ನೀನು” ಎಂದಳು ಸೀತಾ.

ಮೌನ ಮುರಿದ ಕಮಲ,,

      “ನೀನೇ ಹೇಳು‌ ಸೀತಾ ಅವರು ಹಾಗೆ ಮಾಡ್ಬಹುದಾ? ನಾನು ಎಷ್ಟು ಅಂತ ಸುಧಾರಿಸ್ಲಿ, ನಂಗೂ ಸಾಕಾಗಿ ಹೋಗಿದೆ,ಈ ಜೀವನನೇ ಬೇಡ ಅನಿಸಿ ಬಿಟ್ಟಿದೆ.ಆ ಎರಡು ಮಕ್ಳ ಮುಖ ನೋಡ್ಕೊಂಡು ಇನ್ನೂ ಬದುಕಿದಿನಿ‌ ಕಣೆ” ಎಂದು ಇನ್ನೂ ಜೋರಾಗಿ ಅವಳ ಮಡಿಲಲ್ಲಿ ತಲೆ ಇಟ್ಟು ಅಳೋಕೆ ಶುರು ಮಾಡಿದ್ಲು.

 “ಈಗೇನಾಯ್ತು ಅಂತ ಸ್ವಲ್ಪ ಬಿಡಿಸಿ ಹೇಳಬಾರದ ಕಮಲ ಹೀಗೆ ಅಳ್ತಾ ಕೂತ್ಕೊಂಡ್ರೆ ನನಗಾದ್ರೂ ಏನು ಗೊತ್ತಾಗುತ್ತೆ ನೀನೇ ಹೇಳು”

ಕಾಶಿ ಇತ್ತೀಚಿಗೆ ಕುಡಿತ ಇಸ್ಪೀಟ್ ಹೆಚ್ಚು ಮಾಡಿದ್ದು ಗೊತ್ತಿತ್ತು ಸೀತಾಳಿಗೆ. ಅವನು ಯಾರ ಮಾತಿಗೂ ಬಗ್ತ ಇರ್ಲಿಲ್ಲ. ತಾನು ನಡೆದಿದ್ದೆ ದಾರಿ ಸರಿ ಅಂತ ಯಾರ ಮಾತಿಗೂ ಕಿವಿ ಕೊಡ್ತಾ ಇರ್ಲಿಲ್ಲ ಸೀತಾಳ ಗಂಡನಿಗೂ ಹೇಳಿ ಹೇಳಿ ಸಾಕಾಗಿತ್ತು.

 “ನೋಡು ಸೀತಾ!, ಏನಂತ ಹೇಳಲಿ? 6 ತಿಂಗಳ ಹಿಂದೆ ಒಂದು ಹುಡುಗಿನ ಕರ್ಕೊಂಡು ಬಂದಿದ್ರು.ಆಗೆಲ್ಲ ಜಗಳ ದೊಂಬಿ ಮಾಡಿ ನಾನು ಹೈರಾಣಾಗಿ ಹೋಗಿದ್ದೆ ಅವಳನ್ನು ಹೇಗೊ ಕಳಿಸಿ ಬಿಟ್ರು. ಯಾರು ಎಲ್ಲಿಯವ್ಳು ಏನು ಅಂತ ನನಗಂತೂ ಗೊತ್ತಿಲ್ಲ ಕಣೆ,ಅತ್ತೆ ಮಾವ ಇದ್ದಾಗ ಇವೆಲ್ಲ ಇರಲಿಲ್ಲ ಆಗ ಕುಡಿತ ಒಂದೇ ಇತ್ತು ಅಷ್ಟೇ.ಅವರಿಬ್ರು ಹೋದ್ಮೇಲೆ ಈಗ ತಿಂಗಳಿಗೆ ಒಬ್ಬೊಬ್ಬಳನ್ನ ಮನೆಗೆ ಕರ್ಕೊಂಡು ಬರ್ತಾ ಇದ್ದಾರೆ.  ಮೊನ್ನೆ ಯಾರೊ ಮತ್ತೊಬ್ಬಳ್ನ ಕರ್ಕೊಂಡು ಬಂದಿದ್ದಾರೆ.ನನ್ನ ಜೊತೆ ಸಿಕ್ಕಾಪಟ್ಟೆ ಜಗಳ ಹೊಡೆದಾಟ ಎಲ್ಲ ನಡೀತು ಕಣೆ ಮಾಂಗಲ್ಯ ಸರ ಸಹ ಹರ್ಕೊಂಡ್ರು ಹೊರಗೆ ದಬ್ಬಿದಾರೆ ನೋಡೆ‌ ಅಂತ ಬರಿದಾದ ಕತ್ತನ್ನು ತೋರಿಸಿದಳು.

ನಾ ಡೈವರ್ಸ್ ಕೊಡ್ಬೇಕಂತೆ ಅವರಿಗೆ ಸರಿಯಾಗಿ ಸುಖ ಕೊಡಲ್ವಂತೆ ನಾನು, ಇನ್ನೂ ಯಾವ ತರ ಸುಖ ಕೊಡ್ಲಿ ನೀನೆ ಹೇಳು? ಮದುವೆ ಆಗಿ ೧೭ ವರ್ಷ ಆಯ್ತು. ಈಗಾಗಲೇ ೩ ಸರಿ ಅಭಾಷನ್ ಆಗಿದೆ ನಾ ಎರಡು ಮಕ್ಳ ತಾಯಿ ಸಹ ಆಗಿದಿನಿ,ಎರಡು ಆಪರೇಷನ್ ಸಹ ಆಗಿದೆ.ಆದ್ರೂ ಅವರು ಕೇಳ್ ಕೇಳ್ದಾಗೆಲ್ಲ ಸಹಕರಿಸ್ತಾನೆ ಇರ್ತಿನಿ ಆದ್ರೂ ನಾನಿವತ್ತು ಅವರಿಗೆ ಬೇಡವಾಗಿದಿನಿ ಕಣೆ” ಅಂತ ಕಣ್ಣೀರು ಹಾಕುತ್ತಾ,ಒಡಲೊಳಗೆ ಹಿಡಿದಿಟ್ಟ ನೋವಿನ ಜ್ವಾಲೆಯನ್ನು ಒಂದೇ ಸಮನೇ ಭೋರ್ಗರೆಯಲು ಬಿಟ್ಟಳು ಕಮಲ.

‘ಏನೊಂದು ಹೇಳಲು ತೋಚದೆ ಹತಾಶಳಾಗಿ ನಿಂತಳು ಸೀತಾ’

“ಹೌದು! ನಿನ್ನ ಅಣ್ಣಂದಿರು ನಿನ್ನೆ ಬಂದಿದ್ರಲ್ಲ,ಅವರು ಏನಂದ್ರು”?.

“ಅವರು ಬಂದು ನಿನ್ನೆ ತುಂಬಾ ಬುದ್ಧಿವಾದ ಹೇಳಿದ್ರೂ ಕೇಳ್ಲಿಲ್ಲ.ಬೈದು ಜಗಳ ಮಾಡಿದರು‌ ಹೀಗೆ ಮಾಡ್ತ ಇದ್ರೆ ಪೊಲೀಸ್ ಕಂಪ್ಲೆಂಟ್ ಕೊಡ್ತೀನಿ ಅಂತ ಕೂಡ ಹೇಳಿದ್ರು.ಆದ್ರೂ ಯಾರ ಮಾತಿಗೂ ಜಗ್ತ ಇಲ್ಲ. ನಂಗೆ ಅಣ್ಣಂದಿರು ಹಾಲುಗುಡ್ಡೆಗೆ ಹೋಗೋಣ ಬಾ ಅಂತ ಕರೆದ್ರು ಆದರೆ ನಾನು ಬರಲ್ಲ ಅಂದೆ.ತವರಿಗೆ ಹೋಗಿ ಕೂತ್ರೆ ಏನ್ ಚೆನ್ನಾಗಿರುತ್ತೆ ನೀನೆ ಹೇಳು? ನಾಲ್ಕು ದಿನ ಚೆನ್ನಾಗಿ ಅಷ್ಟೇ. ಅಣ್ಣ ನಮ್ಮೊನಾದ್ರೂ ಅತ್ತಿಗೆ ನಮ್ಮವಳು ಆಗಿರಲ್ಲ ಅಲ್ವೇನೆ?. ನನ್ನ ತವರು ಸದಾ ಚೆನ್ನಾಗಿ ಇರ್ಬೇಕು ಕಣೆ, ನಾ ಅಲ್ಲಿಗೆ ಹೋಗಿ ಸಮಸ್ಯೆ ತರ ಬಾರದು.ನಾನು‌ ಹಾಲುಂಡ ತವರು ಹಾಲಂತೆ ಇರ್ಬೇಕು.ನಾನು ಅಲ್ಲಿಗೆ ಹೋಗಿ ಹುಳಿಯಾಗೋದು ಬ್ಯಾಡ‌ ನನ್ನ ಸಮಸ್ಯೆ ನಾನೇ ಬಗೆಹರಿಸ್ಕೋತಿನಿ. ಹೇಗೂ  ಅನುಪ್ ದು ಇವತ್ತು ಎಸ್.ಎಸ್. ಎಲ್. ಸಿ. ರಿಸಲ್ಟ್ ಕಣೆ  ನನ್ನ ಇಬ್ರು ಮಕ್ಳನ್ನ ಕರ್ಕೊಂಡು ದಾವಣಗೆರೆಗೆ ಹೋಗಿಬಿಡ್ತಿನಿ. ನನ್ ಫ್ರೆಂಡ್ ರೂಪ ದಾವಣಗೆರೆಲಿ ಇದ್ದಾಳೆ ಅವಳು ಬರ್ಲಿಕ್ಕೆ ಹೇಳಿದ್ದಾಳೆ. ಒಂದು ಐದಾರು ವರ್ಷ ಎಜುಕೇಶನ್ ಮುಗ್ಸಿ ಕೆಲಸ ತಗೊಂಡ್ರೆ ಸಾಕು ಅನುಪ್.ಅಲ್ಲಿ ತನಕ  ನಾನು ಸಹ ಅಲ್ಲೆ  ಅದು ಇದು ಅಂತ ಕೆಲಸ ಮಾಡ್ಕೊಂತ ಇರ್ತೀನಿ ನಾನು ಹೇಗೊ ಡಿಗ್ರಿ ಓದಿದ್ದೇನೆ ಅಲ್ವಾ?  ಮುಳ್ಳನ್ನ ಮುಳ್ಳಿಂದಾನೆ ತೆಗಿತೀನಿ ಕಣೆ ನಾನು ಯಾವುದೇ ಕಾರಣಕ್ಕೂ ಡೈವರ್ಸ್ ಕೊಡಲ್ಲ. ಅವರು ಚಟ ತಿರೋತನಕ ಮಾತ್ರ ಅವರಿವ್ರನ್ನ ಕರ್ಕೊಂಡು ಬರ್ತಾ ಇರ್ತಾರೆ. ಚಟ ತೀರಿದ ಮೇಲೆ ಬಂದವ್ರೆಲ್ಲ ಹೋಗಲೇ ಬೇಕಾಗುತ್ತದೆ. ತಿಂಗಳಿಗೊಂದು ಸಾರಿ ಮನೆ ಕಡೆ ಬಂದು ಹೋಗ್ತಾ ಇರ್ತೀನಿ ನೀನು ಆಗಿಂದಾಗ್ಗೆ ನನಗೆ ಫೋನ್ ಮಾಡ್ತಾ ಇರು ಆಯ್ತಾ, ಆದರೆ ತುಂಬಾ ನೋವಾಗಿದ್ದು ಅಂದ್ರೆ ನನ್ನ ತಾಳಿ ನಾ ಕಿತ್ತುಕೊಂಡು ಹೊರದಬ್ಬಿದ್ದು ಮಾತ್ರ ತಡ್ಕೊಳ್ಲಿಕೆ ಆಗ್ತಿಲ್ಲ‌ ಸೀತಾ”

“ಅಳ್ಬೇಡ ಸುಮ್ನಿರು ಧೈರ್ಯವಾಗಿ ಇರು  ಕಮಲ ಅದೇನಾಗುತ್ತೋ ನೋಡೆ ಬಿಡೋಣ”.

“ನಾವು ಹೆಣ್ಮಕ್ಲು ಭೋಗದ ವಸ್ತುನ ಸೀತಾ ಅವರು ಕೇಳ್ ಕೇಳ್ದಾಗೆಲ್ಲ ಕೊಡೋಕೆ? ನಮಗೂ ಒಂದು ಮನಸ್ಸು ದೇಹ ಅಂತ ಇರುತ್ತೆ ಅಲ್ವಾ? ನಮಗೆ ಜೀವ ಇದೆ ಭಾವನೆ ಇದೆ. ಇದ್ಯಾವುದು ಇವರಿಗೆ ಲೆಕ್ಕಕ್ಕೆ ಇಲ್ವಾ? ಪ್ರಕೃತಿ ಎಷ್ಟು ಅಂತ ತಡಿತಾಳೆ ನೀನೇ ಹೇಳು? ಸಾಧ್ಯವಿಲ್ಲ ಅಂತ ಅಸಹಾಯಕತೆ ತೋರಿಸ್ದ ತಕ್ಷಣ ನಾನು ನಿಂತ್ರು ಕುಂತ್ರು ಮಾತಾಡಿದ್ರು ಎಲ್ಲ ಕಷ್ಟನೆ ಅವರಿಗೆ ಛೇ!,,ಹೆಣ್ಣು ಜನ್ಮವೇ”

“ಅಮ್ಮ ನಾನು ೯೦% ತಗೊಂಡಿದಿನಿ” ಅಂತ ಎಲ್ಲ ಕಡೆ ಅಮ್ಮನನ್ನು ಹುಡುಕಿ ಕೂಗುತ್ತಾ ಬಾವಿ ಕಟ್ಟೆಯ ಹತ್ತಿರ ಬಂದ “ಅನುಪ್” ನ ದನಿ ಕೇಳಿ ಕಮಲಳ ಕಣ್ಣೀರ ಹನಿ ನಕ್ಷತ್ರದಂತೆ ಒಮ್ಮೆಲೆ ಚಿಮ್ಮಿ ಆನಂದದಿಂದ ಕುಣಿಯಿತು.


Leave a Reply

Back To Top