ಕಥಾ ಸಂಗಾತಿ
“ಎಮ್ಮಾರ್ಕೆ “
“ರತ್ನೇಗೌಡ ಮತ್ತು ನಾಯಿ“

ಗೌರಿಪುರ ಒಂದು ಹಳ್ಳಿಗಿಂತ ದೊಡ್ದ ಮತ್ತು ಪಟ್ಟಣಕ್ಕಿಂತ ಚಿಕ್ಕ ಊರು.ಆ ಊರಿನಲ್ಲಿ ಒಬ್ಬ ಗೌಡ ನಿದ್ದನು,ಅವನ ಹೆಸರು ರತ್ನೇಗೌಡ,ಹೆಸರಿಗೆ ತಕ್ಕಂತೆ ದೊಡ್ಡ ಮನೆ,ಮನೆ ತುಂಬ ಆಲು-ಕಾಳು,ನೂರಾರು ಎಕರೆಯಷ್ಟು ಗದ್ದೆ,ಜೊತೆಗೆ ಊರ ಗೌಡಕಿಯು ಇವನ ಹಿಡಿತದಲ್ಲೇ ಇತ್ತು.ರತ್ನೇಗೌಡ ಒಂದು ನಾಯಿಯನ್ನು ಸಾಕಿದ್ದನು,ಅದು ಯಾವಾಗಲೂ ಇವನ ಜೊತೆಯಲ್ಲೇ ಇರುತ್ತಿತ್ತು.ಆ ನಾಯಿಯು ಹಗಲಿರುಳೆನ್ನದೇ ಗೌಡರ ಮನೆ ಕಾಯ್ತಾ ಇತ್ತು.ಹೀಗೆ ಕೆಲವು ವರ್ಷ ಕಳೆದಂತೆ ಆ ನಾಯಿಗೆ ವಯಸ್ಸಾಯ್ತು,ಮೊದಲಿನಂತೇ ಚುರುಕುತನ,ಶಕ್ತಿ ಕುಂದಿತ್ತು.ಆಗಿನ ನಾಯಿ ಈಗ ಮುದಿನಾಯಿಯಾಗಿತ್ತು.ಇದು ರತ್ನೇಗೌಡನ ಗಮನಕ್ಕೆ ಬಂದು,ಈ ನಾಯಿಗೆ ಮೊದಲಿನಂತೆ ಆಸ್ತಿಪಾಸ್ತಿಯನ್ನು ಕಾಯಲು ಆಗುವುದಿಲ್ಲ ಅಂತ ಆ ನಾಯಿಗೆ ಮೂರು ಹೊತ್ತು ಊಟ ಹಾಕಿ ಏಕೆ ಸಾಕುವುದು ಎಂಬ ಸಂಕುಚಿತ ನಿರ್ಲಕ್ಷ್ಯ ಭಾವ ಗೌಡನಲ್ಲಿ ಹುಟ್ಟಿತು.ಆಗ ನಾಯಿಯನ್ನು ಊರಿನಿಂದ ದೂರ ದೂರದ ಪ್ರದೇಶಕ್ಕೆ ಬಿಟ್ಟು ಬರಲು ಆಳುಗಳಿಗೆ ತಿಳಿಸಿದ.ಮತ್ತೊಂದು ನಾಯಿಯ ತಂದರಾಯಿತು ಎಂದು ಕಾಲಕಳೆಯುತ್ತಲಿದ್ದನು.ರತ್ನೇಗೌಡನಿಗೂ ಕೂಡ ವಯಸ್ಸಾಗುತ್ತ ಬಂತು,ಮೊದಲಿನಂತೆ ಮಾತು ಮತ್ತು ಕೃತಿಗಳು ಸಾಧ್ಯವಾಗುತ್ತಿರಲಿಲ್ಲ,ರತ್ನೇಗೌಡನಿಗೆಮೂರು ಜನ ಗಂಡು ಮಕ್ಕಳು,ಇಬ್ಬರು ಜನ ಹೆಣ್ಣು ಮಕ್ಕಳು.ಹೆಣ್ಣು ಮಕ್ಕಳನ್ನು ಸಂಬಂಧ ನೋಡಿ ಮದುವೆ ಮಾಡಿ ಕೊಟ್ಟಿದ್ದರು.
‘ಹುಟ್ಟು ಹುಟ್ಟುತ್ತ ಅಣ್ಣತಮ್ಮಂದಿರು,ಬೆಳೆಬೆಳೆಯುತ್ತ ದಾಯಾದಿಗಳು’ ಎಂಬಂತೆ ಮೂರು ಜನ ಮಕ್ಕಳಲ್ಲಿ ಮೇಲಿಂದ ಮೇಲೆ ಹೊಂದಾಣಿಕೆಯ ಸಮತೋಲನ ತಪ್ಪುತ್ತಲಿತ್ತು.ತಿದ್ದಿ ಬುದ್ಧಿ ಹೇಳುವ ವಯಸ್ಸನ್ನು ಮೀರಿದ್ದರು,ಹೇಳಲು ಗೌಡನಿಗೂ ವಯಸ್ಸಾಗಿತ್ತು,ಮೊದಲಿನಷ್ಟು ಗತ್ತು,ಗಾಂಭಿರ್ಯ ಕೊಂಚ ಬತ್ತಿತ್ತು.ಕೊನೆಗೆ ಒಂದು ದಿನ ಇದ್ದ ಮೂರು ಮುಕ್ಕಳಲ್ಲಿ ಒಬ್ಬರೂ ಕೂಡ ಅವರ ತಂದೆ ರತ್ನೇಗೌಡನನ್ನು ಮನೆಯಲ್ಲಿಟ್ಟುಕೊಂಡು ಜೋಪಾನ ಮಾಡುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕತೊಡಗಿದರು.ತಂದೆ ಎಂದರೆ ಮಕ್ಕಳಿಗೆ,ಮಾವ ಎಂದರೆ ಸೊಸೆಯಂದಿರಿಗೆ ನಿರ್ಲಕ್ಷ್ಯದ ಜೊತೆ ನಿರ್ಭೀತಿ ಉಂಟಾಗಿತ್ತು.ಯಾಕೆಂದರೆ ಗೌಡನಿಗೂ ಕೂಡ ಈಗ ವಯಸ್ಸಾಗಿತ್ತು,ಆಗಿನ ಗೌಡ ಈಗ ಮುದಿಗೌಡನಾಗಿದ್ದ.ಮನೆಯಲ್ಲಿ ಏನು ಮಾಡದೇ ಸುಮ್ಮನೆ ಕುಳಿತು ಕಾಲ ಹರಣ ಮಾಡುತ್ತಾನೆ,ಅವನಿಂದ ಮನೆಗೆ ಕವಡೆಕಾಸು ಲಾಭವಿಲ್ಲ,ಮೊದಲಿನಂತೆ ಯಾವುದೇ ಊರ ಹಿರಿತನವನ್ನು ಮಾಡುತ್ತಿಲ್ಲ,ಮೊದಲಿನಂತೆ ಚಟುವಟಿಕೆಯಿಂದಲೂ ಇಲ್ಲ,ಎಂಬ ಸಬೂಬುಗಳ ಜೊತೆ ಸಕಾರಣಗಳನ್ನು ಮುಂದೆ ಮಡಿಕೊಂಡು,ಮೂವರು ಮಕ್ಕಳು ರತ್ನೇಗೌಡನನ್ನು ಸಾಕಲಾಗದೆ,ನೀನು ಮನೆಗಿಂತ ವೃದ್ಧಾಶ್ರಮದಲ್ಲಿರುವುದು ಸೂಕ್ತವೆಂದು,ಗೌಡನಿಗೆ ಇಷ್ಟವಿಲ್ಲದಿದ್ದರೂ,ಒಂದು ಮಾತು ಕೂಡ ಕೇಳದೇ,ಯಾವುದೋ ಒಂದು ವೃದ್ಧಾಶ್ರಮಕ್ಕೆ ಬಿಟ್ಟು ಬರುತ್ತಾರೆ,ಬರುವಾಗ ಮಕ್ಕಳು,ಸೊಸೆಯಂದಿರಿಗೆ ಕಿಂಚಿತ್ತೂ ಕೊರಗಿರಲಿಲ್ಲ,ಮೊಮ್ಮಕ್ಕಳಿಗೆ ಮಾತ್ರ ಒಂದೆರಡು ಹನಿ ಕಂಬನಿ ಕಣ್ಣಂಚಿನಿಂದ ಇಳಿದಿದ್ದವು,ಯಾಕೆಂದರೆ ತಾತನೊಂದಿಗೆ ಆಟ,ಊಟ ಅಂತ ಹೆಚ್ಚು ಕಾಲ ಕಳೆಯುತ್ತಿದ್ದರಲ್ಲವೇ,ತಾತನಿಗೂ ಮೊಮ್ಮಕ್ಕಳನ್ನು ಬಿಟ್ಟಿರುವುದು ಕಷ್ಟ,ಆದರೂ ಇರುವುದು ಅನಿವಾರ್ಯವಾಗಿತ್ತು.
ಕೆಲ ದಿನಗಳು ವೃದ್ಧಾಶ್ರಮದಲ್ಲಿ ಕಳೆದ ನಂತರ,ಇದ್ದಕ್ಕಿದ್ದಂತೆಯೇ ಒಂದು ದಿನ ನಾಯಿಯೊಂದು ಓಡಿ ಬಂದು ಗೌಡನನ್ನೇ ಸುತ್ತುತ್ತ,ಮೂಸುತ್ತ ಚೆಲ್ಲಾಟವಾಡುತ್ತ ಓಡಾಡತೊಡಗಿತು.ಬಹಳ ಹೊತ್ತಿನ ನಂತರ ಗೌಡನಿಗೆ ಆ ನಾಯಿಯ ಗುರುತು ಸಿಕ್ಕಿತು.ಅಂದು ವಯಸ್ಸಾಗಿದೆ ಎಂದು ದೂರ ಬಿಟ್ಟು ಬರಲು ಹೇಳಿದ ಆ ನಾಯಿಯೇ ಈ ನಾಯಿಯಾಗಿತ್ತು,ಅದೇ ಮತ್ತೇ ಜೊತೆಯಾಗಿತ್ತು.ಗೌಡನ ಕಣ್ಣಂಚಿನಿಂದ ಕಂಬನಿ ಹನಿಗಳು ಹಾಗೇ ಜಾರಿ ಬಂದವು.ಆ ನಾಯಿಯನ್ನು ಗಟ್ಟಿಯಾಗಿ ಗೌಡ ತಬ್ಬಿಕೊಂಡನು.ಮುಂದಿನ ದಿನಗಳನ್ನು ವೃದ್ಧಾಶ್ರಮದಲ್ಲಿ ಆ ನಾಯಿಯೊಡನೆ ಕಳೆಯತೊಡಗಿದನು.ಅಂದು ನಾಯಿ,ಇಂದು ನಾನು,ನಾಳೆ ಮತ್ತಾರೋ?…ಇದೇ ಜೀವನ ಚಕ್ರ ಎಂಬ ಸತ್ಯ ರತ್ನೇಗೌಡನಿಗೆ ಅಂದು ಅರಿವಾಗಿತ್ತು.ಅದಕ್ಕೆ ” ಮಾಡಿದ್ದುಣ್ಣೋ ಮಹಾರಾಯ” ಎಂಬ ನುಡಿಗಟ್ಟಿಗೆ ಕನ್ನಡಿ ಹಿಡಿದಂತೆ ಇಲ್ಲಿನ ಕಥಾಪ್ರಸಂಗವಿದೆ.ಇದೇ ಈ ಕಥೆಯ ತಾತ್ಪರ್ಯವಾಗಿದೆ.
ಎಮ್ಮಾರ್ಕೆ
