ಅನುವಾದ ಸಂಗಾತಿ

ಕವಿತೆ- ರೇಪ್

ಆಂಗ್ಲ ಮೂಲ : ಮಾರ್ಗ್ ಪಿಯರ್ಸಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

.

ಹೌದೂ…
ರೇಪ್ ಆದ ಮೇಲೆ ಹೇಗಿರುತ್ತದೋ ನಿಮಗೆ ಹೇಳಬೇಕು
ರೇಪ್ ಆಗುವುದಕ್ಕೂ…
ಸಿಮೆಂಟ್ ಮೆಟ್ಟಿಲುಗಳ ಮೇಲಿಂದ ಬಿದ್ದುಹೋಗುವುದಕ್ಕೆ ದೊಡ್ಡ ವ್ಯತ್ಯಾಸವೇನೂ ಇಲ್ಲ
ಆದರೆ…
ದೇಹದೊಳಗೆ ಹೊರಕ್ಕೆ ಕಾಣದ ಗಾಯಗಳು
ರಕ್ತವನ್ನು ಸ್ರವಿಸುತ್ತಿರುತ್ತವೆ
ರೇಪ್ ಆಗುವುದಕ್ಕೂ…
ನಿನ್ನ ಮೇಲಿಂದ ಒಂದು ಭಾರವಾದ
ಲಾರಿ ಹಾದುಹೋಗುವುದಕ್ಕೂ ವ್ಯತ್ಯಾಸವಿಲ್ಲ
ಆದರೆ ರೇಪ್ ಆದ ಮೇಲೆ…
ಆ ರೇಪಿಸ್ಟ್ ಕೇಳ್ತಾನೆ ನೋಡಿ-
“ನನ್ನೊಂದಿಗೆ ನೀನೂ ಆನಂದಿಸಿದೆಯಾ?” ಅಂತ
ಅದು ರೇಪಿಗಿಂತ ಘೋರವಲ್ಲವೆ?
ರೇಪ್ ಆಗುವುದಕ್ಕೂ…
ಹಾವು ಕಚ್ಚುವುದಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ
ಆದರೆ ರೇಪ್ ಆದ ಮೇಲೆ ಅವರಂತಾರೆ ನೋಡಿ-
“ನಿನ್ನ ಸ್ಕರ್ಟ್ ಅಷ್ಟು ಚಿಕ್ಕದಾಗಿದ್ದರಿಂದಲೇ ಅವನು ಕೆರಳಿ ಕಾಮುಕನಾದದ್ದು!” ಅಂತ
“ಇಷ್ಟಕ್ಕೂ ಇಷ್ಟು ಅರ್ಧರಾತ್ರಿ ಒಂಟಿಯಾಗಿ
ರಸ್ತೆಯ ಮೇಲೇನು ಮಾಡುತ್ತಿದ್ದೆ” ಅಂತ
ಆ ಮಾತುಗಳನು ಹೇಗೆ ಭರಿಸಬೇಕು?
ರೇಪ್ ಆಗುವುದಕ್ಕೂ…
ಕಾರಿನ ಕನ್ನಡಿಯೊಡೆದು
ನಿನ್ನ ತಲೆಗೆ ಗಾಯವಾಗುವುದಕ್ಕೂ ವ್ಯತ್ಯಾಸವೇನಿದೆ?
ಆದರೂ ನಿನಗೆ ಬರೀ ಯಂತ್ರಗಳಾದ ಆ ಕಾರುಗಳೆಂದರೆ ಭಯವಾಗದು
ಆದರೆ…
ಈ ಭೂಗೋಳದ ಮೇಲೆ
ಅರ್ಧಕ್ಕೆ ಅರ್ಧ ಭಾಗವಿರುವ ಮಾನವಕುಲವನು ನೋಡಿದರೆ ಮಾತ್ರ ಮೈಯಲ್ಲಾ ಕಂಪಿಸುವಷ್ಟು ಭಯ!
ಇದೆಷ್ಟು ವಿಚಿತ್ರವೋ ನೋಡಿದೆಯಾ…
ಈ ರೇಪಿಸ್ಟ್ ಇದ್ದಾನೆ ನೋಡಿದಿರಾ…
ನಿನ್ನ ಬಾಯ್ ಫ್ರೆಂಡಿನ
ತಮ್ಮನೋ.. ಅಣ್ಣನೋ ಆಗಿರುತ್ತಾನೆ
ಯಾವುದೋ ಸಿನಿಮಾ ಮಂದಿರದಲ್ಲಿ
ನಿನ್ನ ಪಕ್ಕದಲ್ಲೇ ಕೂತು ಹಾಯಾಗಿ ಪಾಪ್ಕಾರ್ನ್ ತಿನ್ನುತ್ತಿರುತ್ತಾನೆ
ಇತನನ್ನು ನಾವು ಒಬ್ಬ ಮಾಮೂಲಿ ಗಂಡಸೇ
ಏನೂ ಮಾಡುವುದಿಲ್ಲ ಅಂತಂದುಕೊಳ್ತಿವಲ್ಲಾ…
ನಿರುಮ್ಮಳವಾಗಿ ಇರುತ್ತಿವಲ್ಲಾ…
ಆದರೆ ನಿನ್ನ ಪಕ್ಕದಲ್ಲೇ ಇರುವಾತನ ಊಹೆಯಲ್ಲಿ ಮಾತ್ರ
ಕಸದ ಕುಪ್ಪೆಯಲ್ಲಿ ಮಿಲಮಿಲ ಅಂತ
ಹರಿದಾಡುತ ಉಬ್ಬಿಹೋಗುವ
ಲಾರ್ವಾ ಹುಳುಗಳಂತೆ ರಹಸ್ಯವಾಗಿ
ರೇಪ್ ಒಂದರ ಯೋಜನೆ ಸಿದ್ಧವಾಗುವುದು
ರೇಪಿನ ಭಯ ಸದಾ ಮಂಜಿನಂತೆ ತಣ್ಣಗೆ
ಸ್ತ್ರೀಯರ ಬೆನ್ನನ್ನು ತರತರ ನಡುಗಿಸುತ್ತಿರುತ್ತದೆ
ಆ ಭಯ…
ಹಸಿದ ಬಾಯಿಯ ಆ ಪುರುಷನು
ನನ್ನತ್ತ ನುಸುಳಿಕೊಂಡು ಬರುತ್ತಿದ್ದರೆ…
ದಟ್ಟವಾದ ಪೈನ್ ಗಿಡಗಳಗುಂಟ
ಮರಳಿನ ದಾರಿಯಲಿ ಒಂಟಿಯಾಗಿ
ವಿಹಾರಕ್ಕೆ ಹೋಗಲುಬಿಡದು
ನುಣ್ಣನೆಯ ಕಾಲುದಾರಿಯಲಿ
ಹಾಯಾಗಿ ನಡೆಯಲು ಬಿಡದು
ನೋಡು…
ನಿನಗೊಂದು ಮಾತು ಹೇಳುವೆ ಜಾಗ್ರತೆಯಿಂದ ಕೇಳು!
ನೀನು ಮಾತ್ರ ಕೈಯಲಿ
ಕೊರಳು ಕೊಯ್ಯುವ ಚೂಪಾದ ಬ್ಲೇಡಿಲ್ಲದೆ
ಬಾಗಿಲು ಬಡಿದ ಸದ್ದು ಕೇಳಿ
ಎಂದೂ ಕೂಡಲೇ ಬಾಗಿಲು ತೆರೆಯದಿರು
ಮತ್ತೆ ನಮ್ಮ ಸ್ತ್ರೀಯರಿಗೆ ಎಷ್ಟು ಭಯಗಳೆಂದುಕೊಂಡೆ?
ನಿಗೂಢವಾದ… ರಹಸ್ಯವಾದ ಕತ್ತಲೆ ಸ್ಥಳಗಳನು ನೋಡಿದರೆ ಸಾಕು ಭಯ
ಕಾರಿನಲ್ಲಿ ಹಿಂದಿನ ಸೀಟು…
ಪಾಳುಬಿದ್ದ ಖಾಲಿ ಮನೆಗಳನು ಕಂಡರೂ ಭಯವೇ
ಹಾವು ಬುಸುಗುಡುವಂತೆ ಬೆದರಿಸುವ ಬೀಗದ ಕೈಗಳ ಗೊಂಚಲಿನ ಸಪ್ಪಳವೆಂದರೂ ಭಯ
ತನ್ನ ಪ್ಯಾಂಟಿನಲ್ಲೊಂದು ಕತ್ತಿಯಂತಹ ಜೇಬು ಇಟ್ಟುಕೊಂಡು
ಹೊರಕ್ಕೆ ನಗುತಿರುವ ಗಂಡಸನ್ನು ನೋಡಿದರೆ ಭಯ
ಕೋಪದೊಂದಿಗೆ ವಿರಾಗಿಯಂತಿರುವ…
ಬಿಗಿದ ಮುಷ್ಠಿಯ ತುಂಬಾ ಸ್ತ್ರೀ ಪರ ದ್ವೇಷವನು ತುಂಬಿಕೊಂಡ ಪುರುಷನನು ನೋಡಿದರೆ ಭಯ
ಓಹೋ…
ಇಷ್ಟು ಭಯಗಳಾ… ದಾರುಣವಲ್ಲವೆ?
ಆಶ್ಚರ್ಯ… ನಮ್ಮ ಭಯಗಳನ್ನೆಲ್ಲಾ ನೋಡುತ್ತಲೂ…
ಈ ರೇಪಿಸ್ಟಿಗೆ ತನ್ನ ದೇಹ ಗಾಯಗೊಳಿಸುವ ಒಂದು ಸುತ್ತಿಗೆಯಂತೆ
ದಹಿಸುವ ಬೆಂಕಿಯನು ಹುಟ್ಟಿಸುವ ಬರ್ನರ್ನಂತೆ
ಅಪಾಯಕಾರಿ ಮೆಷಿನ್ ಗನ್ನಿನಂತೆ
ಅಸಲಿಗೆ ಅನಿಸುವುದಿಲ್ಲವಾ ಅಸಲು?
ಮತ್ತೆ ನಮ್ಮ ಮಹಿಳೆಯರಿಗೆ ಹಾಗೆಯೇ ಅನಿಸುತ್ತದಲ್ಲಾ?!
ಆತ ಹಾಗೆ ಎಂದೂ ಅಂದುಕೊಳ್ಳುವುದಿಲ್ಲವಾ?
ಇದೆಲ್ಲಾ ಆತ ತನ್ನ ಸ್ವಂತ ದೇಹವನ್ನೂ…
ತನ್ನನ್ನೂ ಅಸಹ್ಯಿಸಿಕೊಳಲು
ತನ್ನ ದೇಹದಿಂದ ನೇತಾಡುವ ಮೆತ್ತನೆಯ
ಸಡಿಲವಾದ ಮಾಂಸಖಂಡವನ್ನು ಅಸಹ್ಯಿಸಿಕೊಳ್ಳಲು ಕೆಲಸಕ್ಕೆ ಬಾರವೆ?
ಹಾಗೆ ಯಾಕೆ ಎಂದುಕೊಳ್ಳುವುದಿಲ್ಲವಾತ?
ಕಾಮದಿಂದ ಸ್ತ್ರೀಯನ್ನು ಗಾಯಗೊಳಿಸುವ
ತನ್ನ ದೇಹವನ್ನು ಅಸಲು ಹೇಗೆ ಪ್ರೀತಿಸಬಲ್ಲನವನು?
ಇದೆಲ್ಲಾ ಸರಿ…
ಈ ಪ್ರಶ್ನೆಗಳು… ಭಯಗಳು ಎಲ್ಲಾ
ನೀನು ಅಸಹ್ಯಿಸಿಕೊಳ್ಳುವುದನ್ನು ನಿನ್ನಿಂದ ತೆಗೆದುಹಾಕಲೇ ಅಲ್ಲವಾ!
ನಿನ್ನ ದೇಹಕ್ಕೆ ಬೇರೆಯಾದವನ ದೇಹದ ಮಾಂಸದ ಮುದ್ದೆ ಅಂದರೆ ಇರುವ ಭಯವನ್ನು…
ನಿನ್ನೊಳಗಿನಿಂದ ಆವೇಶದೊಂದಿಗೆ
ಆಚೆಗೆ ಅಗೆದು ಅಟ್ಟಬೇಕೆನಿಸುವುದಲ್ಲವಾ?
ಸಹಜ ಸ್ಪಂದನೆಗಳೆಲ್ಲಾ ನಶಿಸಿಹೋಗಿ…
ಬರೀ ಜೀವಚ್ಛವದ ಚಲನೆಗಳನ್ನುಳ್ಳ ಈ ಕವಚದಂತಹ ನಿನ್ನ ದೇಹದೊಂದಿಗೇ…
ಯಾರೋ ಆವಾಹಿಸಿದಷ್ಟು ಕೋಪದಿಂದ…
ಆ ರೇಪಿಸ್ಟನ್ನು ಶಿಕ್ಷಿಸಬೇಕೆಂದಿದೆಯಲ್ಲವಾ?


ಮೂರ್ಖನೇ,
ಅಸಲು ಸ್ತ್ರೀ ಸದಾ
ನಿನ್ನನ್ನು ಪ್ರೀತಿಸಲು…
ನಿನ್ನಿಂದ ಪ್ರೀತಿಸಲ್ಪಡಲು…
ನಿನ್ನ ಒಡಗೂಡಿ ಜೀವನಾನಂದವನು ಅನುಭವಿಸಲು…
ನಿನಗೆ ಹಂಚಲು ನಿರ್ಮಲವಾದ ಮನಸ್ಸಿನೊಂದಿಗೆ ಕೆಲವು ಇಷ್ಟಗಳು…
ಆಸೆಗಳಿಂದ ಸಜೀವವಾಗಿರುವ ಆಕೆಯನ್ನು ಹತ್ಯೆ ಮಾಡುವುದೇ ಅಲ್ಲವಾ…
ನೀನು ಆಕೆಯನ್ನು ರೇಪ್ ಮಾಡುವುದೆಂದರೆ?
ಅದಕ್ಕೇ… ತನ್ನ ಪ್ಯಾಂಟಿನೊಳಗೆ
ಕತ್ತಿಯಂತಹ ಜೇಬನಿಟ್ಟುಕೊಂಟು ಕಣ್ಣೆದುರು
ಮಾಮೂಲಿಯಾಗಿ ಏನೂ ಅರಿಯದಂತೆ ನಗುತಿರುವ ಗಂಡಸನ್ನು ನೋಡಿದರೆ…
ಅದಕ್ಕೆ ಅಷ್ಟು ಭಯ ಮತ್ತೆ!
ಕೇಳು ಇಷ್ಟಕ್ಕೂ… ಅಸಲು ಸ್ತ್ರೀಯರು…
ರೇಪ್ ಆಗುವುದಕ್ಕೆ…

****

ಆಂಗ್ಲ ಮೂಲ : ಮಾರ್ಗ್ ಪಿಯರ್ಸಿ
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

ಮಾರ್ಗ್ ಪಿಯರ್ಸಿ
ಇವರು ಅಮೇರಿಕಾದ ಪ್ರಗತಿಶೀಲ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಪ್ರಖ್ಯಾತ ಸ್ತ್ರೀವಾದಿ ಲೇಖಕಿ.
ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ಖಿನ್ನತೆಯಿಂದ ತೀವ್ರವಾಗಿ ಹಾನಿಗೊಳಗಾದ ಕಾರ್ಮಿಕ ವರ್ಗದ ಕುಟುಂಬದಲ್ಲಿ 31-03-1936ರಲ್ಲಿ ಜನಸಿದರು.
ಪಿಯರ್ಸಿ ತನ್ನ ಕುಟುಂಬದ ಮೊದಲ ಸದಸ್ಯೆಯಾಗಿ ಕಾಲೇಜಿಗೆ ಹಾಜರಾದರು. ಮಿಚಿಗನ್ ವಿಶ್ವವಿದ್ಯಾಲಯದಿಂದ ಬಿ.ಎ ಹಾಗೂ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಗಳನ್ನು ಪಡೆದಿದ್ದಾರೆ. 1960ರ ದಶಕದಲ್ಲಿ ಸ್ಟೂಡೆಂಟ್ಸ್ ಫಾರ್ ಎ ಡೆಮಾಕ್ರಟಿಕ್ ಸೊಸೈಟಿ (SDS) ಮತ್ತು ವಿಯೆಟ್ನಾಂನಲ್ಲಿ ಯುದ್ಧದ ವಿರುದ್ಧ ನಡೆದ ಪ್ರತಿಭಟನಾತ್ಮಕ ರಾಜಕೀಯ ಚಳುವಳಿಗಳಲ್ಲಿ ಪಿಯರ್ಸಿ ಸಂಘಟಕರಾಗಿದ್ದರು. ಹಿ, ಶೀ, ಅಂಡ್ ಇಟ್ , ವುಮನ್ ಆನ್ ದಿ ಎಡ್ಜ್ ಆಫ್ ಟೈಮ್ , ದಿ ಕ್ರೂಕ್ಡ್ ಇನ್ಹೆರಿಟೆನ್ಸ್ , ದಿ ಹಂಗರ್ ಮೂನ್: ನ್ಯೂ ಅಂಡ್ ಸೆಲೆಕ್ಟೆಡ್ ಪೊಯಮ್ಸ್, ಮೇಡ್ ಇನ್ ಡೆಟ್ರಾಯಿಟ್ – ಇವು ಇವರ ಕೆಲವು ಪ್ರಮುಖ ಕೃತಿಗಳು. ಆರ್ಥರ್ ಸಿ. ಕ್ಲಾರ್ಕ್ ಪ್ರಶಸ್ತಿ, ಬ್ರಾಡ್ಲಿ ಪ್ರಶಸ್ತಿ, ಗೋಲ್ಡನ್‌ ಕಾವ್ಯ ಪುರಸ್ಕಾರ ಇನ್ನೂ ಇತ್ಯಾದಿ ಪ್ರಶಸ್ತಿಗಳ ಇವರಿಗೆ ಸಂದಿವೆ
.

5 thoughts on “

    1. ಅತ್ಯಾಚಾರಕ್ಕೊಳಗಾದ ಜಗತ್ತಿನ ಎಲ್ಲ ಶೋಷಿತ ಮಹಿಳೆಯರ ಹತಾಷೆ ನೋವು ಸಂಕಟ ವೇದನೆಯನ್ನು ಸಮರ್ಥವಾಗಿ
      ಪ್ರತಿನಿಧಿಸಿದೆ ಈ ಕವಿತೆ.ಅಂತೆ ನಮ್ಮನ್ನು ಪ್ರಶ್ನಿಸಿದೆ.ಇದಕ್ಕೆ ಉತ್ತರಿಸುವ ಮಾರ್ಗೋಪಾಯ ಸೂಚಿಸುವ ಸಾಮರ್ಥ್ಯವನ್ನು ಕಳಕೊಂಡ ನಾವು ನಿರುತ್ತರಾಗಿರುವುದರ ಜೊತೆಗೆ ನಪುಂಸಕರಾಗಿದ್ದೇವೆನೋ ಅನಿಸುತ್ತಿದೆ.
      ಸ್ತ್ರೀ ಮೇಲೆ ನಡೆವ ಇಂತ ದೌರ್ಜನ್ಯವನ್ನು ಅವಳ ಒಳತೋಟಿಗಳಿಂದ ಹಂಚಿಕೊಂಡು ನಮ್ಮ ಕಣ್ದೆರೆಯಲೆತ್ನಿಸಿದ ಮೂಲ ಕವಿಗೆ ಅನುವಾದಿಸಿದ ಕವಿಗಳಿಗೆ

Leave a Reply

Back To Top