ಕಥಾ ಸಂಗಾತಿ
ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ.
ಡಾ.ಸಿದ್ಧರಾಮ ಹೊನ್ಕಲ್
ಮತ್ತೆ ಮಳೆ ಹೊಯ್ಯುತ್ತಿದೆ;
ಭೂಮಿ ಕರೆಯುತ್ತಿದೆ

ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)
ನೂರಂದಯ್ಯ ಮನೆಯ ಜಗುಲಿಗೆ ತಲೆಕೊಟ್ಟು ಯೋಚನಾಕ್ರಾಂತನಾಗಿದ್ದ. ತಾನು ಮಠ ಪೀಠ ಬಿಟ್ಟುಕೊಟ್ಟು ಬಂದು ಗೃಹಸ್ಥನಾಗಿದ್ದು, ಅದಕ್ಕೆ ನಾನಾ ಜನ ತಮಗೆ ತೋಚಿದಂತೆ ತಲೆಗೊಂದು ಮಾತನಾಡಿಕೊಂಡದ್ದು ಎಲ್ಲಾ ನೆನಪಾಗುತ್ತಿತ್ತು. ತಾನಾದರೂ ಏನು ಮಾಡಲು ಸಾಧ್ಯವಿತ್ತು. ಆ ನಿರ್ಧಾರ ತೆಗೆದುಕೊಳ್ಳುವುದೇ ಸರಿ ಎಂದು ಆತ್ಮಸಾಕ್ಷಿ ಒತ್ತಾಯಿಸುತ್ತಿದ್ದಾಗ ಆ ರೀತಿ ನಡೆದುಕೊಂಡಿದ್ದೆ ಸರಿಯಾಯಿತು.
ಸಂತೆಯೊಳಗೊಂದು
ಮನೆಯ ಮಾಡಿ
ಶಬ್ದಕ್ಕೆ ನಾಚಿಕೊಂಡರೆಂತಯ್ಯ
ಎಂದು ಹೇಳಿದ ಅಕ್ಕ ಮೇಲಿಂದ ಮೇಲೆ ಕಾಡುತ್ತಿದ್ದಳು, ಹೌದು ತಾನು ಮುನ್ನುಗ್ಗಲೇ ಬೇಕು. ಇದರಲ್ಲಿ ಈಸಬೇಕು, ಈಸಿ ಜೈಸಬೇಕೆಂದೇ ಊರ ಮುಂದಿನ ಹತ್ತು ಎಕ್ರೆ ಹಿರಿಯರ ಜಮೀನು ಸಾಗುವಳಿ ಮಾಡಲು ಸ್ವಂತ ತಯ್ಯಾರಾಗಿ ನಿಂತಿದ್ದರು.
“ಒಕ್ಕಲುತನ ಈಗ ಲಾಭದಾಯಕ ದಂಧೆಯಾಗಿ ಉಳಿದಿಲ್ಲರಿಯಪ್ಪಾ, ತಾವು ಬೇರೆ ಏನರ ಮಾಡಿ” ಎಂದು ಆಳು ಮಗ ಕೆಂಚ ತಾನು ಒಕ್ಕಲುತನ ಮಾಡಲು ತಯ್ಯಾರಾಗಿ ಬಂದಾಗ ನಾಲ್ಕಾರು ಸಲ ಹೇಳಿದ್ದ.
“ಎ, ಕೆಂಚ, ಯಾರೋ ಪಟ್ಟಣದವರು ಮಾತಾಡಿದಂಗ್ ನೀನು ಮಾತಾಡ್ತಿಯೇನೋ. ಭೂಮಿ ತಾಯಿಗೆ ದುಡಿದ್ರ ತಪ್ಪಾಗುದಿಲ್ಲೋ. ಆ ನಮ್ಮವ್ವ ಯಾರ ದುಡಿಮೆನೂ ವ್ಯರ್ಥ ಮಾಡಲ್ಲಪ್ಪ. ಎಲ್ಲರೂ ಹಿಂಗ ಅನ್ನಕಂತ ಹ್ವಾದರ ಭೂಮಿಗೆ ಬೀಜ ಹಾಕೋರು ಯಾರು? ಬೆಳಿ ತೆಗಿಯೋರು ಯಾರು?”
“ಈ ಭೂಮಿಯಿಂದ ಬೆಳಿ ಬರಲಿಲ್ಲ ಅಂದ್ರೆ ಹೊಟ್ಟೆಗೆನು ಮಣ್ಣು ತಿಂತಾರೇನೋ ತಮ್ಮಾ. ಒಕ್ಕಲುತನಾ ಮಾಡವಾ ಭಾಳ ಕಷ್ಟಪಡಬೇಕಾಗ್ತದ; ಅದು ಖರೇ ಆದ. ಎಲ್ಲರೂ ಇದು ಕಷ್ಟ ಆದಂತ ಬಿಟ್ಟುಗೋತ ಹೋದ್ರ ಇದನ್ನು ಮಾಡುವವರು ಯಾರು?”
“ಯಪ್ಪಾ ಬುದ್ಧಿ, ಆಂಧ್ರದವರು ಬಂದು ಅಲ್ಲಲ್ಲಿ ಕ್ಯಾಂಪ್ ಹಾಕ್ಯಾರಿ, ಅವರಿಗೆ ಊರನ ಮಂದಿಯಲ್ಲ ತಮ್ಮ ತಮ್ಮ ಜಮೀನು ಎಕ್ರೆಕ ಇಷ್ಟಿಷ್ಟು ಹಣ ಅಂತ ಮಾತಾಡಿ ೪-೫ ವರ್ಷಕ ಲೀಜ ಕೊಟ್ಟು ಕುಂತಾರ. ನೀವು ಬೇಕಾದ್ರ ಅವರಂಗ ಹೊಲ ಲೀಜಮ್ಯಾಗ ಕೊಟ್ಟು ರೊಕ್ಕಾ ತೂಗಂಡು ಆರಾಮ ಇರ್ರೀ” ಎಂದ ಕೆಂಚ.
ಅಲ್ಲೋ ಕೆಂಚ ಆಂಧ್ರದವರು ಬಂದು ನಮ್ಮ ಭೂಮ್ಯಾಗ ದುಡದು ನಮಗೆ ರೂಕ್ಕಾಕೊಟ್ಟು ತಾವು ಲಾಭ ಮಾಡಿಕೆಂತಾರ ಅಂದಮ್ಯಾಲ ನಾವು ಮಾಡಿದರೆ ನಮಗೆ ಲಾಭ ಯಾಕೆ ಆಗೂದಿಲ್ಲ ಅಂತಿಯ” ಎಂದರು ನೂರುಂದಯ್ಯನವರು.
“ಯಪ್ಪಾ ಬುದ್ಧಿ, ಅವರಂಗ ಹಗಲು ರಾತ್ರಿ ಭೂಮ್ಯಾಗ ಬಿದ್ದು ದುಡ್ಯಾದ ನಮ್ಮ ಮಂದಿಕೈಲಿ ಆಗೂದಿಲ್ಲರಿ. ಅದಕ್ಕೆ ಊರವರೆಲ್ಲ ನಾ ಮುಂದು, ನೀ ಮುಂದು ಅಂತ ಅವರ ಮ್ಯಾಲ ಬಿದ್ದು ಹೋಗಿ ಜಮೀನು ಕೊಡಲಾಕ ಹತ್ಯಾರ್ರಿ. ನಮ್ಹು ಯಾಡ ಯಕ್ರೆ ಇತ್ತಲ್ಲರಿ, ನಾನು ಅವರಿಗೆ ಕೊಟ್ಟಿನ್ರೀ ಯಪ್ಪಾ” ಎಂದನು ಕೆಂಚ.
ನೂರಂದಯ್ಯನವರು ಚಿಂತಾಕ್ರಾಂತನಾದುದಕ್ಕೆ ಇದೇ ಕಾರಣವಾಗಿತ್ತು. ಅಲ್ಲಾ ನಮ್ಮ ಹಳ್ಳಿ ಮಂದಿಗೆ ಇದೆಲ್ಲಾ ಯಾಕೆ ಅರ್ಥವಾಗುತ್ತಿಲ್ಲ. ಒಕ್ಕಲುತನ ಲಾಭ ಇಲ್ಲವೆಂದು ಇದ್ದ ಬಿದ್ದ ಜಮೀನೆಲ್ಲಾ ಹೊರಗಿನವರಿಗೆ ಲೀಜಿಗೆ ಕೊಟ್ಟು ತಮ್ಮ ಹೊಲದಾಗ ಈಗ ತಾವೇ ಹೊರಗಿನವರ ಕೈಯಲ್ಲಿ ಕೂಲಿ ಆಳುಗಳಾಗಿ ದುಡಿತಾ ಇದ್ದಾರಲ್ಲಾ ಇವರಿಗೆ ಏನು ಅನಿಸೋದಿಲ್ಲವಾ ಅನ್ನುವದು ಅವರ ಚಿಂತೆಯ ಹುಳುವಿಗೆ ಕಾರಣವಾಗಿತ್ತು.
ಒಕ್ಕಲುತನ ಬಿಟ್ಟರ ನಮ್ಮ ಹಳ್ಳಿ ಮಂದಿಗೆ ಬ್ಯಾರೆ ಏನು ಬರ್ತಾದ, ಏನೂ ಇಲ್ಲ, ಹಾದ್ರ ಕೂಲಿ ಮಾಡಲಾಕ್ ಬೆಂಗಳೂರು, ಪೂನಾ, ಬಾಂಬೆಗೆ ಹೋಗಬೇಕು. ಅಲ್ಲಿ ಹೋಗಿ ಸಿಮೆಂಟು ಕಟ್ಟಡಗಳಿಗೆ ಕೂಲಿಗಳಾಗಿ ಕೆಲಸ ಮಾಡುವದು. ನಾಕು ದುಡ್ಡು ಜಮಾ ಆದಮ್ಯಾಲ ಆ ಪಟ್ಟಣದ ರೋಗ-ರುಜಿನ ಹಚ್ಚಿಕೊಂಡು ಹಳ್ಳಿಗೆ ಹಿಂದಿರುಗಿ ಅದನ್ನು ಇಲ್ಲಿ ಎಲ್ಲರಿಗೂ ಹಚ್ಚಿ ತಾವು ಹಾಳಾಗುವುದಲ್ಲದೆ ಇತರರನ್ನು ಹಾಳು ಮಾಡುವದು ಬಿಟ್ಟು ನಮ್ಮ ಜನಗಳಿಗೆ ಬೇರೆ ಏನು ಗೊತ್ತಿದೆ.. ಎಂದು ಚಿಂತಿಸುತ್ತಿದ್ದರು. ಇದಕ್ಕೆ ಏನಾದರೂ ಮಾಡಬೇಕು. ಊರಿನ ಎಲ್ಲಾ ಜನರನ್ನು ಕರೆಯಿಸಿ, ಈ ಬಗ್ಗೆ ತಿಳಿಸಿ ಹೇಳಬೇಕು. ತಮ್ಮ ತಮ್ಮ ಹೊಲಗಳಲ್ಲಿ ತಾವು ಕಷ್ಟಪಟ್ಟು ದುಡಿದು ಬೆಳೆ ತೆಗೆಯಬೇಕೆಂದು ಯೋಚನೆಗೆ ತೊಡಗಿದ್ದರು.
ಈ ಬಗ್ಗೆ ಪೂರ್ವಭಾವಿಯಾಗಿ ನಾಲ್ಕಾರು ಜನರ ಮುಂದೆ ಮಾತಾಡಿ ನೋಡಿದರಾಯ್ತೆಂದು ಒಬ್ಬಿಬ್ಬರ ಮುಂದೆ ಮಾತಾಡಿದಾಗ ಅವರಿಂದ ಬಂದ ಪ್ರತಿಕ್ರಿಯೆ ಕೇಳಿ ದಂಗಾಗಿದ್ದರು.
“ಯಪ್ಪಾ ಬುದ್ಧಿ, ನೀವು ಹೇಳೋದೇನೋ ಕರೆಯಾದ್ರಿ, ಆದ್ರೆ ಈ ನಮ್ಮ ಹಳ್ಳಿ ಮಂದಿಗೆ ಈಗ ದುಡಿಯೋದ್ ಒಂದು ಬಿಟ್ಟು ಎಲ್ಲಾ ಗೊತ್ತಾದರಿ. ಅವರಿಗೆ ನಿಮಗೆ ಗೊತ್ತಿದ್ದ ಸತ್ಯ ಗೊತ್ತಿಲ್ಲ ಅಂತ ತಿಳಿದಿರೇನರಿ ಯಪ್ಪಾ.ಅವರು ಈಗ ಮೈ ಕೈ ಹೊಲಸು ಮಾಡಿಕೊಳ್ಳೋಕೆ ತಯಾರಿಲ್ರಿ. ನಾಲ್ಕು ಅಕ್ಷರ ಕಲಿತವರು ನಾಲ್ಕಾರ ಮಂದಿ ಬಾಯಾಗ್ ಮಣ್ ಹಾಕಿ ಹೆಂಗ ತಮ್ಮ ಬ್ಯಾಳಿ ಬೆಯಿಸ್ಕಾಬೇಕು ಅಂತ ಯೋಚ್ನೆ ಮಾಡ್ತಾರಿ. ಇನ್ನು ಪುಢಾರಿ ಮಂದಿಯಂತು ಎಂ.ಎಲ್.ಎ., ಎಂ.ಪಿ. ಗೋಳ ಮುಂದ ತಿರುಗಾಡಿ ಆಟೀಟು ಗುತ್ತೆದಾರಿಕೆ ಕೆಲಸ ಪಡಕೊಂಡು ಹೊಟ್ಟೆ ತುಂಬ್ಸಿಗೆಂತಾರಿ. ಇನ್ನು ಹೊಲದಾಗ ದುಡಿಯ ಮಂದಿ ಎಲ್ಲಾ ನನಗೆ ಮನಿ ಮಾಡ್ರಿ, ಅವಗ ಮನಿ ಮಾಡ್ರೀ ಅಂತ ಸರ್ಕಾರದ ಆ ಸಬ್ಸಿಡಿ ಕೊಡಸ್ರೀ ಅಂತ ಮುಂಜಾನೆ ಎದ್ದು ತಾಲೂಕಾ ಪಂಚಾಯತಿ, ತಹಸೀಲ ಕಚೇರಿ ಮುಂದ ಪೈರಿವಿ ಮಾಡಿಕೆಂತ ತಿರುಗಾಡಲಾಕ ಬಿದ್ದಾರಿಯಪ್ಪಾ, ಈಗ ಪುಗಸಟ್ಟೆ ರೊಕ್ಕ ಹೆಂಗ ಬರತಾದಂತ ಜನ ಯೋಚ್ನೆ ಮಾಡ್ತಾರ ಹೊರ್ತು ಮೈಯ ಮುರ್ದು ದುಡ್ಡು ಗಳಿಸಬೇಕಂತ ಯಾರು ಯೋಚ್ನೆ ಮಾಡಲ್ಲರಿ” ಎಂದು ವಿವರವಾಗಿ ತಿಳಿಸಿದಾಗ ನೂರಂದಯ್ಯನವರು ಗಾಬರಿಯಾಗಿದ್ದರು.
ಈ ಹೊಸ ಪ್ರಪಂಚದ ವ್ಯವಹಾರ ಅವರಿಗೆ ಪೂರ್ತಿ ತಿಳಿದಿಲ್ಲ ಅಂತ ಅಲ್ಲ. ಅದರಿಂದ ಬಿಡಿಸಿಕೊಂಡು ಬಂದು ಮತ್ತೆ ಜನರಿಗೆ ತಮ್ಮ ಹೊಲ ಮನೆಗಳ ಕಡೆ ಕರೆತರುವದು ಅಸಾಧ್ಯವಾದ ಮಾತೇ ಅನಿಸುವಂತಾಗುತ್ತಿತ್ತು.
ನೌಕರಿ ಸಿಗದೇ ಮುಂದೆ ಓದಲು ಹೋಗಲಾಗದ ನಿರುದ್ಯೋಗಿ ಯುವಕರೆಲ್ಲಾ ಲುಂಗಿ ಹಚ್ಚಿಕೊಂಡು ತಿರುಗಾಡುತ್ತಾ ಯಾವುದಾದರು ಕಾಡು ಹರಟೆಯಲ್ಲಿ ತೊಡಗಿ ಗುಟಕಾ ತಿನ್ನುತ್ತಾ, ಅಂದರ ಬಾಹರ ಆಡುತ್ತಾ ಸಮಯ ಕೊಲ್ಲುವದರ ಬದಲಿಗೆ ತಮ್ಮಲ್ಲಿಯ ನಿರುದ್ಯೋಗಕ್ಕೆ ಕಾರಣ ಏನು? ಅಂತ ಕಂಡುಕೊಂಡು ಯಾವುದಾದರು ಚಿಕ್ಕಪುಟ್ಟ ವ್ಯಾಪಾರ,ಉದ್ಯೋಗ ಮಾಡಲು ಯಾಕೆ? ತೊಡಗಬಾರದು ಎಂದು ಇಡೀ ಹಳ್ಳಿಯ ದುರಂತದ ಸಾಕ್ಷಿಪ್ರಜ್ಞೆಯಂತೆ ನೂರಂದಯ್ಯನವರು ತಮ್ಮಲ್ಲಿ ತಾವೇ ಚಿಂತಿಸುತ್ತಿದ್ದರು.
ಇದಕ್ಕೆ ಏನಾದರೂ ಮಾಡಲೇಬೇಕು ಎಂಬುದು ಅವರ ಅಂತರವಾಹಿನಿಯ ಒತ್ತಾಯವಾಗಿತ್ತು. ಊರೆಲ್ಲಾ ಹಾಳಾಗುತ್ತಿದೆ. ಜನ ಗುಳೇ ಹೋಗುತ್ತಿದ್ದಾರೆ. ಅಳಿದುಳಿದವರು ದಿನಪತ್ರಿಕೆ ಹಿಡಿದುಕೊಂಡು ರಾಜಕಾರಣದ ಮಾತಾಡಿಕೊಂಡು ಸಮಯ ಕೊಲ್ಲುತ್ತಿದ್ದಾರೆ. ಇವನಾರವ ಇವನಾರವ ಎನ್ನದಿರಯ್ಯ ಎಂದು ಸಾರಿಹೋದ ಬಸವಣ್ಣನ ವಿಚಾರ ಮರೆತು ಬಸವಣ್ಣನೊಬ್ಬ ಹಾರವ ಎಂದು ಗುರ್ತಿಸುವಷ್ಟು ಜಾತೀಯತೆ ಬೆಳೆದಿರುವಾಗ ಗಾಂಧಿ ಕನಸಿನ ಗ್ರಾಮ ಭಾರತ ಇಂದು ಏನಾಗಿ ಹೋಯಿತಲ್ಲಾ ಎಂದು ತಮ್ಮಲ್ಲಿಯೇ ಒಳಗಣ್ಣಿನೆದುರು ಕಣ್ಣೀರು ಮಿಡಿಯುತ್ತಿದ್ದರು.
ಇದಕ್ಕೆಲ್ಲಾ ಪರಿಹಾರವಿಲ್ಲವೆ? ಎಂಬುದು ಅವರ ಅನುದಿನದ ಚಿಂತೆಯಾಗಿತ್ತು.
ಡಂಗುರ ಸಾರುವ ತಳವಾರ ಯಲ್ಲಪ್ಪ “ಹೇಳಿಲ್ಲ ಅಂದಿರಿ, ಕೇಳಿಲ್ಲ ಅಂದಿರಿ, ಚೆಂಜಿ ಮುಂದ ಊರ ಹಣಮಂದೇವರ ಗುಡಿ ಬಯಲಾಗ ನೂರಂದಪ್ಪನವರು ಊರ ಎಲ್ಲಾ ರೈತರ, ವ್ಯಾಪಾರಸ್ಥರ, ಮುಖಂಡರ, ಕೂಲಿಕಾರರ ಹಾಗೂ ಎಲ್ಲಾ ತರುಣರ ಸಭೆ ಕರದಾರ…” ಬರಬೇಕಂತ್ರೆಪ್ಪೋ ಎಂದು ಊರ ತುಂಬಾ ಸಾರಿ ಸಾರಿ ಹೇಳಿ ಬಂದಿದ್ದ.
ಹಳ್ಳಿ ಮಂದೆಲ್ಲಾ ಯಾಕಿದ್ದಿತು ಅಂತ ಯೋಚ್ನೆ ಮಾಡಿಕೆಂತ ಚೆಂಜಿಲೇ ಎಲ್ಲಾ ಕೆಲ್ಸ ಮುಗಿಸಿ ಉಂಡುಂಡು ಗುಡಿ ಬಯಲಾಗ ಜಮಾ ಆಗಲಾಕ ಹತ್ತಿದ್ರು.
ನೂರಂದಪ್ಪನವರು ಮಠಾ ಪೀಠಾ ಬಿಟ್ಟು ಗೃಹಸ್ಥರಾಗಿ ನಮ್ಮಂಗ ಚೆಂದಾಗಿ ಸಂಸಾರ ಮಾಡಲಾಕ ಹತ್ಯಾರ. ಈಗ ಮತ್ತೆ ಸಂಸಾರ ಬಿಟ್ಟು ಸನ್ಯಾಸಿ ಆಗಿ ಮಠ ಗಿಠ ಕಟಬೇಕಂತ ಮಾಡ್ಯಾರೋ ಏನೋ ನೋಡೋಣ ಅಂತ ಜನರೆಲ್ಲಾ ಅತ್ಯಂತ ಕುತೂಹಲದಿಂದ ಸೇರಲಾಕ ಹತ್ತಿದರು.
ಊರನ ಗೌಡ, ಕುಲಕರ್ಣಿ, ಸಾಹುಕಾರ, ಸರಪಂಚ ಮುಂತಾದವರೆಲ್ಲ ಕಟ್ಟಿಮ್ಯಾಗ ಬಂದು ಜಾಗ ಹಿಡಕಂಡು ಕುಂತಿದ್ದರು. ಊರನ ಕಪ್ಪಮಂದಿ, ಬಿಳಿ ಮಂದಿ, ಕೂಲಿಕಾರು, ಹೆಣ್ಮಕ್ಳು, ಹುಡುಗ್ರು, ಯುವಕರು, ವ್ಯಾಪಾರಸ್ಥರು ಎಲ್ಲರೂ ನೂರಂದಪ್ಪನವರ ದಾರಿ ಕಾಯುತ್ತಿದ್ದರು.
ಜನ ಎಲ್ಲಾ ಸೇರಿದ ಮ್ಯಾಗ ನೂರಂದಪ್ಪನವರು ಸಹ ಬಂದು ಕಟ್ಟಿಮ್ಯಾಗಿನ ಎಲ್ಲರಿಗೂ, ನೆರೆದ ಸಭಾಕ್ಕೂ ಕೈ ಮುಗಿದು ಕುಂತರು. ತಮ್ಮ ತಮ್ಮಲ್ಲಿ ಮಾತಾಡಿಕೆಂತ ಇದ್ದ ಜನರೆಲ್ಲಾ ಗಪ್ಪ ಚುಪ್ಪಾಗಿ ಸುಮ್ಮನೆ ಕುಂತರು.
ಆಗ ನೂರಂದಪ್ಪನವರೇ ಎದ್ದು ನಿಂತು ಎಲ್ಲರಿಗೂ ಕೈ ಮುಗಿದು “ನಾನು ಈ ದಿನ ಊರಿನ ಎಲ್ಲಾ ಮಂದಿನ್ನೂ ಡಂಗುರ ಹೊಡಿಸಿ ಯಾಕ? ಕರಿಸಿದ್ದಾರು ಅಂತ ನೀವೆಲ್ಲಾ ಯೋಚ್ನೆ ಮಾಡ್ತಾ ಇರಬಹುದು. ನಾನು ಭಾಷಣ ಮಾಡೋದಿಲ್ಲ.
“ನಮ್ಮ ಹಳ್ಳಿಗಳು ಹಿಂದಕ ಹೆಂಗ ಇದ್ದವು. ಈಗ ಹೆಂಗ ಆಗ್ಯಾವು ಅಂತ ಯೋಚ್ನೆ ಮಾಡಿ ಇದಕ್ಕೆ ಏನರ ಪರಿಹಾರ ಅದೇನು ಅಂತ ತಿಳಲಾಕ ನಿಮ್ಮನ್ನೆಲ್ಲಾ ಕರದೀನಿ, ಯಾರು ತಪ್ಪು ತಿಳಿಬಾರ್ದು.”
“ಈಗ ನಮ್ಮ ಬದುಕು ಏನಾಗಿದೆ? ಹಿಂದಕ ನಮ್ಮ ಒಂದೊಂದು ಹಳ್ಳಿನೂ ಒಂದೊಂದು ದೊಡ್ಡ ಕುಟುಂಬದಂಗ ಇದ್ದವು. ಅಣ್ಣ, ಅಕ್ಕ, ತಂಗಿ, ಅತ್ತಿ, ಮಾವ, ಕಾಕ, ದೊಡ್ಡಪ್ಪ, ಮುತ್ಯಾ, ಆಯಿ ಅನಕೂಂತ ಎಲ್ಲರೂ ಒಂದೇ ಮನೆವರು ಇದ್ದಂಗ ಇದ್ದೀವಿ. ಈಗ ಏನಾಗ್ಯಾದ. ಮುಂಜಾನೆದ್ರ ಒಬ್ಬರ ಮಾರಿ ಒಬ್ರ ನೋಡಲಾರದಂಗ ಯಾಕ ಆಗೀವಿ. ಇನ್ನೂ ಪೂರ್ಣ ಹಾಳಾಗಿಲ್ಲ ಅನ್ನೊದೊಂದೆ ಸಮಾಧಾನ. ಆದ್ರೆ ಹಿಂದಕಿನಂಗ ಈಗ ನಾವೆಲ್ಲಾ ಇದ್ದೀವೇನೂ ಅಂತ ಯೋಚ್ನೆ ಮಾಡ್ರಿ. ನಿಮ್ಮೊಳಗೆ ನೀವು ವಿಚಾರ ಮಾಡಿ ಪರಿಹಾರ ಕಂಡುಕೊಳ್ಳಿ.
ಹಿಂದಕ ನಾವು ಸಣ್ಣೋರಿದ್ದಾಗ ನಸುಕಿನ್ಯಾಗ ನಮ್ಮ ನಮ್ಮ ಹಿರೇರೆಲ್ಲಾ ದನಕರ ಎತ್ತು ಹೊಡಕೊಂಡು ಹೊಲಗಳಿಗೆ ಹೋಗಿ ದುಡಿತಿದ್ರು. ಹೆಣ್ಮಕ್ಕಳು ಹಿಂದಾಗಡೆ ಬುತ್ತಿ ತಗೊಂಡು ಹೊಲಕ್ಕ ಬರತಿದ್ರು. ಅಲ್ಲಿ ಉಂಡು ಚಂಜಿತಾನ ಎಲ್ಲರೂ ದುಡಿದು ಸಂಜಿ ಮುಂದ ಮನಿಗಿ ಬರತಿದ್ರು. ಜನಾ ಆವಾಗ ಎಷ್ಟು ಆರಾಮ ಇದ್ರು. ಆ ದಿನಗಳೆಲ್ಲಾ ಈಗ ಎಲ್ಲಿ ಹಾದ್ವು, ನಮ್ಮ ಬದುಕ್ಕಾಕ ಈಗ ಇಷ್ಟು ನರಕ ಆಗ್ಯಾದ. ಆಗ ಊರಾಗ ಜಗಳ ಜೂಟಿ ಇದ್ದಿಲ್ಲ.”
ಈಗ ಮುಂಜಾನಿಂದ ಚಂಜಿತನಕ ಊರಾಗ ಜಗಳ ಜೂಟಿ ನಡೆದಾವ. ದುಡೆದು ಮರತು ಬಿಟ್ಟಿವಿ. ಎಲ್ಲರೂ ಹೊತ್ತಹೊಂಟ್ರ ತಾಲೂಕಾಫೀಸಿನ ಮುಂದ ಏನಾರ ಪುಗಸಟ್ಟೆ ರೊಕ್ಕ ಸಿಗ್ತಾವೇನೋ ಅಂತ ನಿಲ್ಲಂಗ ಆಗಿವಿ ಯಾಕೆ ? ಇದೆಲ್ಲಾ ಯಾರರ ಯೋಚ್ನೆ ಮಾಡಿರೇನು ?
“ಇದಕ್ಕೆಲ್ಲಾ ಕಾರಣ ಏನು ಅಂದ್ರ ಚುನಾವಣೆ ಬಂದಾಗ ಎಲ್ಲರಿಗೂ ಕುಡಿಲಾಕ ಕಲಿಸಿದ್ರು, ಪುಗಸಟ್ಟೇ ಹಣ ಹಂಚಿದ್ರು. ಗುತ್ತೇದಾರಿಕೆ, ಪೈರಿವಿ ರುಚಿ ಹಚ್ಚಿದ್ರು, ಬಿತ್ತಾ ಬೀಜ ಡೂಪ್ಲಿಕೇಟು ಬಂದವು. ಡೂಪ್ಲಿಕೇಟು ಬೀಜ ಬಿತ್ತಿದ ಮ್ಯಾಗ ಬೆಳಿ ಎಲ್ಲಿ ಬರತಾದ. ಹೊಡ್ಡ ಗೊಬ್ಬರ, ಯಣ್ಣೆಸೈತ ಡೂಪ್ಲಿಕೇಟ ಬಂದವು. ಹೀಗಾಗಿ ರೈತ್ರು ಮಾಡಿದ ಸಾಲ ತೀರಸಲಾರ್ದೆ ಯಣ್ಣೆ ಕುಡದು ಸಾಯಲಾಕ ಹತ್ಯಾರ. ಹೊಲ ಮನಿ ಮಾಡದೇ ಬ್ಯಾಡ ಅಂತ ಹೊಲ ಪಾಲಿಗಿ ಹಾಕಿ ಕೂಲಿ ಮಾಡಿಕೆಂತ ಗುಳೇ ಎದ್ದು ಜನ ಹ್ವಾದ್ರು. ಆಟೀಟು ಅನುಕೂಲ ಇದ್ದವರು ರಾಜಕೀಯಕ್ಕೆ ಇಳದು ಪೈರಿವಿ ಮಾಡದು, ಗುತ್ತೇದಾರಿಕೆ ಮಾಡಿಕೆಂತ ಹೊಟ್ಟಿ ಉಪಜೀವನ ಮಾಡಲಾಕ ಹತ್ಯಾರ. ಹಿಂಗಾಗಿ ಬಹಳ ಮಂದಿ ದುಡೆದು ಬಿಟ್ರು, ಪುಗಸಟ್ಟೆ ಹಣ ಎಲ್ಲಿಂದ ಬರ್ತಾದಂತ ಹುಡಿಕೆಂತ ಕುಂತಾರ. ಓದಿದ ಹುಡುಗರಿಗೆ ನೌಕರಿ ಇಲ್ಲ. ಬ್ಯಾರೇ ಏನರ ಮಾಡಬೇಕು ಅನ್ನೋರಿಗೆ ಮಾರ್ಗದರ್ಶನ ಇಲ್ಲ. ಸಹಾಯ ಇಲ್ಲ. ಹಿಂಗಾಗಿ ಹಳ್ಳೆಲ್ಲಾ ಹಾಳಾಗಿ ಹೋಗ್ಯಾವ.”
ನಿಮಗೆಲ್ಲ ಗೊತ್ತಾದ, ಹಿಂದಕ ನಾನು ಮಠ ಒಂದಕ್ಕೆ ಗುರು ಸ್ವಾಮಿ ಆಗಿ ಕುಂತಿದ್ದೆ. ಅದು ಬ್ಯಾಡ ಅನ್ನಿಸ್ತು. ನಿಮ್ಮಂಗ ಗ್ರಹಸ್ಥ ಆಗಿ ನಿಮ್ಮೊಂದಿಗೆ ಇದ್ದೇನೆ. ಹೊಲಮನಿ ಬೇಸಾಯ ಮಾಡೋಣ ಅಂದ್ರ ಎಲ್ಲೋರು ಲುಕ್ಸಾನ ಆದ್ರಿ ಬ್ಯಾಡ ಅಂತಾರ. ಅದು ಖರೇನು ಆದ. ಯಾಕದ್ರ ಒಕ್ಕಲುತನದಿಂದ ಲಾಭ ಬರ್ತಾ ಇಲ್ಲ. ಅದಕ್ಕೆ ಯಾಪಾರ ಮಾಡೋರೆಲ್ಲಾ ಲಾಭದ ಆಸೆಗೆ ಡೂಪ್ಲಿಕೇಟು ಬೀಜ, ಗೊಬ್ಬರ, ಔಷಧಿ ಮಾರ್ತಾರ. ತಂದ ರೈತ ಹೆಂಗ ಮುಂದಕ ಬರ್ಬೇಕು, ಹೆಂಗ ಬದುಕಬೇಕು. ಅದಕ್ಕೆ ನಾವೆಲ್ಲಾ ವಿಚಾರ ಮಾಡಬೇಕಾಗಿದೆ. ನಾವು ಬಿತ್ತಲಿಲ್ಲ. ಬೆಳಿಲಿಲ್ಲ ಅಂದ್ರ ಮುಂದ ಏನು ತಿಂದು ಬದುಕ್ತಿವಿ ಅಂತ ಎಲ್ಲರೂ ಯೋಚಿಸಬೇಕಾಗಿದೆ.
ವ್ಯಾಪಾರಸ್ಥರೆಲ್ಲಾ ಒಳ್ಳೆ ಬೀಜ ಗೊಬ್ಬರ ಔಷಧಿ ತಂದ ಮಾರರಿ. ಒಳ್ಳೆ ಬೆಳಿಬಂದ್ರ ನಾವು ನೀವು ಕೂಡೇ ಬದುಕ್ತಿವಿ. ಇಲ್ಲಾಂದ್ರ ಕೂಲಿನಾಲಿ ಮಾಡಿ ಜನ ಬದುಕ್ಲಾಕ ಪಟ್ಟಣಕ್ಕೆ ಹೋಗ್ತಾರೆ. ಹಳ್ಳಿಗಳೆಲ್ಲಾ ಹಾಳಾಗ್ತಾ ಇವೆ.
“ಆಂಧ್ರದವರು ಬಂದು ದುಡಿಯೊದ ನೋಡ್ರಿ, ನಮ್ಮ ಹೊಲದಾಗೇ ಅವ್ರು ಎಂತಹ ಚೆಂದಾನ ಬೆಳಿ ತೆಗಿಲಾಕ ಹತ್ತ್ಯಾರ, ಅದು ನಮಗ್ಯಾಕ ಆಗವಲ್ಲದು. ನಾವ್ಯಾಕ ದುಡಿಲಾಕ ಮುಂದಾಗಬಾರದು ಎಂದು ಸಭಿಕರತ್ತ ದಿಟ್ಟಿಸಿ ನಿಲ್ಲಿಸಿದರು.”

ಸೇರಿದ್ದ ಎಲ್ಲರಿಗೂ ಅವರ ಎಲ್ಲಾ ಮಾತುಗಳು ಖರೇ ಅನಿಸಿದವು. ಆದರೆ ಏನು ಹೇಳಬೇಕೆಂದು ಯಾರಿಗೂ ತೋಚಲಿಲ್ಲ. ಎಲ್ಲರೂ ನೂರಂದಪ್ಪನವರನ್ನೆ ದಿಟ್ಟಿಸುತ್ತಿದ್ದರು. ಸಭಿಕರೊಬ್ಬರಿಂದ “ಯಾಕ್ರಿ, ಸ್ವಾಮಿಗೋಳ, ಸದ್ಯದಾಗ ಬರೋ ತಾಲೂಕಾ ಪಂಚಾಯತಿ ಇಲೆಕ್ಷನ್ನಿಗೆ ನಿಲ್ಲಬೇಕಂತ ಮಾಡಿರೇನರಿ” ಎಂಬ ಧ್ವನಿ ತೇಲಿ ಬಂತು.
“ಇಲ್ಲರಿ, ಅಂತಾ ಯಾವ ಆಸೆನು ನನಗಿಲ್ಲ. ಒಟ್ಟಾರೆ ನಮ್ಮ ಬದುಕು ಯಾಕೆ ಹಿಂಗಾಗಿದೆ ಅಂತ ಎಲ್ಲರೂ ಯೋಚ್ನೆ ಮಾಡಿ ಏನಾರ ಪರಿಹಾರ ಕಂಡುಕೊಳ್ಳಲಿ ಅಂತ ಈ ಸಭಾ ಕರದೀನಿ. ನನಗನಿಸಿದ್ದ ವಿಚಾರ ನಿಮ್ಮ ಮುಂದೆ ಇಟ್ಟಿನಿ. ನಾಳಿಯಿಂದ ನಾನು ಸ್ವಂತ ನನ್ನ ಹೊಲದಾಗ ಒಕ್ಕಲುತನ ಮಾಡ್ತೀನಿ. ಭೂಮಿ ತಾಯಿಯ ಸೇವೆ ಮಾಡಿ ನಾಲ್ಕಾರು ಕಾಳು ಬೆಳ್ದು ನಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕೆಲ್ಸ ಮಾಡ್ತೀನಿ. ನೀವು ಮಾಡಿ. ಕನಿಷ್ಠ ಯೋಚ್ನೆ ಆದರೂ ಮಾಡ್ರಿ..” ಎಂದು ಹೇಳಿದವರೇ ನೆರೆದ ದೈವಕ್ಕೆಲ್ಲಾ ಕೈ ಮುಗಿದು ನಿಧಾನವಾಗಿ ಮನೆಯಕಡೆಗೆ ನಡೆದು ಹೋದರು.
“ನಿಮ್ಮ ಸಂಗಡ ನಾನು ಬರ್ತಿನ್ರೀ ಯಪ್ಪಾ, ನಾಳೆಯಿಂದ ನನ್ನ ಹೊಲದಾಗ ನಾನು ದುಡಿತೀನ್ರೀ ಯಪ್ಪಾ” ಅಂತ ಕೆಂಚ ಕೂಗಿ ಹೇಳಿದ್ದು ನೂರಂದಪ್ಪನವರ ಕಿವಿಗೆ ಹಿತವಾಗಿ ಕೇಳಿಸಿತು.ಸೇರಿದ ಜನರ ಮನಸಿನಲ್ಲಿ ನಾಳೆಯಿಂದ ಹೊಸ ಸೂರ್ಯ ಹುಟ್ಟುವ ಆಶಾಕಿರಣ ಮೂಡುವ ಸಂಭ್ರಮ..
(ಇದರ ಇಂಗ್ಲಿಷ್ ಅನುವಾದ ಡಾ.ಬಸವ ಪಾಟೀಲ್ ಜಾವಳಿ ಅವರದು.ಅದು ಓದಿದ್ದೇನೆ.)
ಡಾ.ಸಿದ್ಧರಾಮ ಹೊನ್ಕಲ್
ಕಾವ್ಯಾಲಯ, ಲಕ್ಷ್ಮೀನಗರ, ಲಕ್ಷ್ಮೀ ಗುಡಿ ಹತ್ತಿರ, ಅಂಚೆ-ಶಹಾಪುರ – 585223, ಯಾದಗಿರಿ ಜಿಲ್ಲೆ
[1:12 pm, 15/03/2025] sshonkal: ಪ್ರಕಟಿಸಲು ಕೋ

ನಿಜ ಸಂಗತಿ. ಎಲ್ಲರೂ ಯೋಚನೆ ಮಾಡಬೇಕಾದದ್ದೆ.
ಇದೇ ವಿಷಯ ನನ್ನ ಊರಿಗೆ ಸಂಬಂಧಿಸಿದಂತೆ ಸಾಕಷ್ಟು ಲೇಖನಗಳನ್ನು ನಮ್ಮ ಊರಿನ ಜನರಿಗಾಗಿ ಬರೆದಿದ್ದೆ. ಈಗ ನಾನು ಕೂಡ ಕಥೆ ಬರೆಯುತಿದ್ದೇನೆ.. ಆದರೆ ನಮ್ಮ ಅರೆಗನ್ನಡದಲ್ಲಿ. (ನಡುಗನ್ನಡ) ಇಂಥ ಕಥೆಗಳು ಹೆಚ್ಚು ಹೆಚ್ಚು ಬರಬೇಕು. ಸ್ವಲ್ಪನಾದರೂ ಜನರ ಮನಸ್ಸಿಗೆ ನಾಟುತ್ತದೆ. ಬಿಟ್ಟಿ ಭಾಗ್ಯಗಳ ನಿಲ್ಲಬೇಕು. ಒಂದು ಕಾಲದಲ್ಲಿ ನಮ್ಮ ಊರಿನಲ್ಲಿ ಭತ್ತದ ಗದ್ದೆ ನೋಡಲು ಎಷ್ಟು ಸಂತೋಷವಾಗುತಿತ್ತು. ತೆನೆ ಬಾಗಿದಾಗಲಂತು ಆ ಬಯಲಿನಲ್ಲಿ ನಡೆಯುವುದು ಒಂಥರಾ ಅವರ್ಣನೀಯ ಅನುಭವ. ಅನುಭವಿಸಿದವರಿಗೇ ಗೊತ್ತು. ಈಗ ಎಲ್ಲವೂ ಕಾಫಿ ತೋಟ, ಅಡಿಕೆ ತೋಟ ಆಗಿದ್ದಾವೆ. ಕೆಲಸಕ್ಕೂ ಜನ ಸಿಗದೆ ಅಸ್ಸಾಮಿ ಕೂಲಿಕಾರರಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ಇದರಿಂದಾಗಿ ಕಳ್ಳತನ, ಕೊಲೆಯಂಥ ಪ್ರಸಂಗಗಳೂ ತಲೆಯೆತ್ತಿವೆ. ಕುತ್ತಿಗೆ ಯಿಂದ ಚೈನ್ ಕಿತ್ತುಕೊಂಡು ಹೋಗುವ ಕ್ರಿಯೆಗಳೂ ವರದಿಯಾಗುತಿವೆ. ಸ್ವರ್ಗದಂತಿದ್ದ ನನ್ನ ಊರು ಈಗ ಶಾಪಗ್ರಸ್ತವಾದಂತಿದೆ.