ಅಂಕಣ ಸಂಗಾತಿ
ಗಜಲ್ ಲೋಕ
. ನೀಲೂರೆ ಅವರ ಗಜಲ್ ನಿಲ್ದಾಣದಲ್ಲಿ…
ದೋಸ್ತೊ ನಮಸ್ಕಾರ್…
ಹೇಗಿದ್ದೀರಿ…ಗಜಲ್ ಗಂಗೆಯಲ್ಲಿ ಮೀಯುತ್ತಿದ್ದೀರಾ; ಗಜಲ್ ಕನವರಿಕೆಯ ತಮ್ಮ ಕೂಗು ನನ್ನ ಹೃದಯವನ್ನು ತಟ್ಟುತ್ತಿದೆ. ಅದರ ಪ್ರತಿಧ್ವನಿವಾಗಿಯೊ ಏನೊ ಗುರುವಾರ ಬರುತಿದ್ದಂತೆ ಗಜಲ್ ಗುಲ್ಜಾರ್ ನ ಪರಿಮಳ ನನ್ನನ್ನು ಆವರಿಸಿಬಿಡುತ್ತದೆ. ಆ ಕಾರಣಕ್ಕಾಗಿಯೇ ಇಂದು ಮತ್ತೊಮ್ಮೆ ಗಜಲ್ ಲೋಕದ ಚಾಂದ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ಚಂದಮಾಮನನ್ನು ಪ್ರೀತಿಸುವ, ಪೂಜಿಸುವ ಸಹೃದಯಿಗಳ ಮುಂದೆ ಪ್ರಸ್ತುತ ಪಡಿಸಲು..!!
“ನೀನು ಜೊತೆಯಲೂ ಇದ್ದೀಯಾ ದೂರನೂ ಇದ್ದೀಯಾ ಏನು ಹೇಳಲಿ ನಿನಗೆ
ನೀನು ಪ್ರೇಯಸಿಯೂ ಹೌದು ದೇವತೆಯೂ ಹೌದು ಏನು ಹೇಳಲಿ ನಿನಗೆ”
–ಅನಾಮಿಕ
ಮನುಷ್ಯ ಸದಾ ಸುಖ-ಸಂತೋಷಕ್ಕಾಗಿ ಹಂಬಲಿಸುತ್ತಿರುತ್ತಾನೆ, ಅದೆಷ್ಟರಮಟ್ಟಿಗೆ ಎಂದರೆ ವಾಸ್ತವ-ಕನಸಿನಲ್ಲೂ ಅದನ್ನೇ ಕನವರಿಸುತ್ತಿರುತ್ತಾನೆ!! ಆದರೆ ಬರಿ ‘ಸುಖ’ ಒಂದೇ ಇದ್ದರೆ ಅದನ್ನು ಅನುಭವಿಸೋಕೆ, ಅದರ ಮಹತ್ವವನ್ನು ಅರಿಯೋಕೆ ಸಾಧ್ಯವಾಗುತಿತ್ತು ಅಂತೀರಾ, ಖಂಡಿತ ಇಲ್ಲ. ಸುಖದ ಸುಪ್ಪತ್ತಿಗೆಯ ಮೆದುತನ ಅರಳಿರೋದೆ ಉಪ್ಪು ನೀರಿನ ಕಡಲಲ್ಲಿ, ಏನಂತೀರಾ, ಫ್ಲ್ಯಾಶ್ ಬ್ಯಾಕ್ ಗೆ ಹೋದರಾ; ಟ್ರ್ಯಾಕ್ ಗೆ ಬನ್ನಿ…!! ಈ ಜೀವನವೇ ಹೀಗೆ, ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಿಕೊಳ್ಳಲು ನಾವೆಲ್ಲರೂ ಸಿದ್ದರಾಗಿರುತ್ತೇವೆ, ಸಿದ್ಧರಾಗಿರ್ತೀವಿ ಅನ್ನೋದಕ್ಕಿಂತ ಅದನ್ನೇ ಅಭ್ಯಾಸ ಮಾಡಿಕೊಂಡು ಬದುಕುತಿದ್ದೇವೆ ಎಂದೆನಿಸುವುದಿಲ್ಲವೆ. ಈ ಕಾರಣಕ್ಕಾಗಿಯೋ ಏನೋ ಸಾಹಿತ್ಯದ ಝರಿಯಲ್ಲಿ ಹರಿದ, ಹರಿಯುತ್ತಿರುವ; ಹರಿಯುವ ನೋವಿಗೆ ಸಹೃದಯಿಗಳ ಹೃದಯ ಸ್ಪಂದಿಸಿದಷ್ಟು ಸಂತೋಷಕ್ಕೆ ಸ್ಪಂದಿಸಿರಲಾರದು. ಸಾರಸ್ವತ ಲೋಕದಲ್ಲಿ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಿದ್ದರೂ ಭಾವನೆಗಳ ರಥಸಪ್ತಮಿ ಎಂದರೆ ಅದು ಕಾವ್ಯ ಮಾತ್ರ. ಈ ನೆಲೆಯಲ್ಲಿ ವಿಲಿಯಂ ಸಾಮರ್ಸೆಟ್ ಮೌಘಮ್ ಅವರು ಹೇಳಿದ “ಸಾಹಿತ್ಯದ ಕಿರೀಟವು ಕಾವ್ಯವಾಗಿದೆ” ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಕಾವ್ಯ ಅನುಸಂಧಾನಕ್ಕೆ ಇಳಿಯುವುದೆ ಹೃದಯದ ಕದವನ್ನು ತಟ್ಟುವುದರ ಮೂಲಕ. ಇಂದು ಕಾವ್ಯವು ಅನೇಕ ಆಯಾಮಗಳಲ್ಲಿ ಓದುಗರ ಮನವನ್ನು ತಣಿಸುತ್ತಿದೆ, ಸಂತೈಸುತ್ತಿದೆ. ನೋವನ್ನು ನೋವಿನ ಮೂಲಕವೇ ಸಂತೈಸುವ ಏಕೈಕ ಕಾವ್ಯ ಪ್ರಕಾರವೆಂದರೆ ಅದೂ ಗಜಲ್ ಮಾತ್ರ. ಕಂಬನಿಯ ಅಂಬಾರಿ ಹೊತ್ತು ಸಾಗುತ್ತಿರುವ ಗಜಲ್ ಚಾಂದನಿಯನ್ನು ಅಸಂಖ್ಯಾತ ಕನ್ನಡಿಗರು ಪ್ರೀತಿಸುತಿದ್ದಾರೆ, ಪೂಜಿಸುತ್ತಿದ್ದಾರೆ. ಅವರಲ್ಲಿ ಗಜಲ್ ಗೋ ಪ್ರಭುಲಿಂಗ ನೀಲೂರೆ ಅವರೂ ಒಬ್ಬರು.
ಶ್ರೀ ಪ್ರಭುಲಿಂಗ ನೀಲೂರೆ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿ ೧೯೭೪ ರ ಜುಲೈ ೨೨ರಂದು ಗಂಗಾರಾಮ ನೀಲೂರೆ ಹಾಾಗೂ ನೀಲಮ್ಮ ನೀಲೂರೆ ದಂಪತಿಗಳ ಸುಪುತ್ರರಾಗಿ ಜನಿಸಿದರು. ಬಿ.ಎಸ್.ಸಿ. ಪದವೀಧರರಾದ ಇವರು ‘ಕ್ರಾಂತಿ’ ಕನ್ನಡ ದಿನಪತ್ರಿಕೆಯ ಪತ್ರಕರ್ತರಾಗುವುದರೊಂದಿಗೆ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ‘ಉಷಾ ಕಿರಣ’ ಕನ್ನಡ ದಿನ ಪತ್ರಿಕೆಯಲ್ಲಿ ವರದಿಗಾರ, ಉಪ ಸಂಪಾದಕರಾಗಿ, ‘ಬಿಸಿಲುನಾಡು’ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ‘ವಿಜಯವಾಣಿ’ ಕನ್ನಡ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿ ಇದೀಗ ಕಳೆದ ಐದು ವರ್ಷಗಳಿಂದ ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾಕದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದ ಒಡನಾಟದೊಂದಿಗೆ ಸಾಹಿತ್ಯದ ಆಸಕ್ತಿಯನ್ನು ಹಚ್ಚಿಕೊಂಡಿರುವ ಶ್ರೀಯುತರು ಮಕ್ಕಳ ಕಾವ್ಯ, ಕಥೆ, ನಾಟಕ, ಅಂಕಣ ಬರಹ, ಜೀವನ ಚರಿತ್ರೆ, ಅನುವಾದ, ಸಂಪಾದನೆ, ಗಜಲ್…ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ‘ನೆಲದ ನಿಲವು’, ‘ಹೋರಾಟದ ಹೆಜ್ಜೆಗಳು’ ಹಾಗೂ ‘ಹೊನ್ನಸಿರಿ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ’ ಎಂಬ ಮಕ್ಕಳ ಕಥಾಸಂಕಲನ, ತತ್ವಪದಕಾರ ಚನ್ನೂರ ಜಲಾಲ್‌ಸಾಹೇಬರ ಜೀವನಾಧಾರಿತ ‘ಹುಕುಂಪತ್ರ’ ಎಂಬ ಐತಿಹಾಸಿಕ ನಾಟಕ, ‘ವಿರುಪಾಕ್ಷಪ್ಪ ಗೌಡ’ ಎಂಬ ಜೀವನ ಚಿತ್ರಣ, ಜ್ಞಾನ ದಾಸೋಹಿ ದೊಡ್ಡಪ್ಪ ಅಪ್ಪಾಜಿ, ‘ಹಿಂಗ್ಯಾಕಂತಾರೆ’ ಎಂಬ ಅಂಕಣಗಳ ಬರಹಗಳ ಸಂಕಲನ, ‘ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್’, ‘ಸುಬೇದಾರ ರಾಮಜಿ ಸಕ್ಪಾಲ್’ ಎಂಬ ಜೀವನ ಚಿತ್ರಣ, ‘ವಚನಬ್ರಹ್ಮ ದಾಸಿಮಯ್ಯ’ ಎಂಬ ಜೀವನಚರಿತ್ರೆ, ವಚನಗಳ ವಿಶ್ಲೇಷಣೆ ಹಾಗೂ ‘ಮನಸೇ ಬದುಕು ನಿನಗಾಗಿ’ ಎಂಬ ಗಜಲ್ ಸಂಕಲನವೂ ಸೇರಿದಂತೆ ಹದಿಮೂರು ಮೌಲ್ಯಿಕ ಗ್ರಂಥಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಪ್ರಭುಲಿಂಗ ನೀಲೂರೆ ಅವರದು ಸದಾ ಕ್ರಿಯಾಶೀಲ ವ್ಯಕ್ತಿತ್ವ. ಸಾಮಾಜಿಕ ಸೇವೆ, ಸಾಹಿತ್ಯ, ಪತ್ರಿಕೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೧೯೯೦ ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಇದರೊಂದಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಒಂದು ಅವಧಿಗೆ ಸೇವೆ, ಉದಯೋನ್ಮುಖ ಬರಹಗಾರರ ಬಳಗದ ಸದಸ್ಯರಾಗಿಯೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಿನಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿಯನ್ನು ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ತಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ‘ಬಿಸಿಲನಾಡು’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹತ್ತಾರು ಕೃತಿಗಳನ್ನು ಪ್ರಕಟಿಸುತ್ತಾ ಯುವ ಬರಹಗಾರರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಇವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಮ್ಮ ಕವನ ವಚನ ಮಾಡಿ ಸಹೃದಯಿಗಳ ಹೃದಯವನ್ನು ಗೆದ್ದಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಾಲವಿಕಾಸ ಅಕಾಡೆಮಿಯ ಪುಸ್ತಕ ಬಹುಮಾನಗಳಿಗೆ ತೀರ್ಪುಗಾರರಿಗೆ ಕಾರ್ಯನಿರ್ವಹಿಸಿರುವುದು ಇವರ ವ್ಯಕ್ತಿತ್ವದ ಕೈಗನ್ನಡಿಯಾಗಿದೆ. ಈ ಎಲ್ಲ ಅಂಶಗಳನ್ನು ಗುರುತಿಸಿ ಹಲವಾರು ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ರಾಜ್ಯ ಯುವ ಪ್ರಶಸ್ತಿ, ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ‘ಒಳಿತು ಮಾಡು ಮನುಜ’ ಕಥೆಗೆ ಚಿನ್ನದ ಪದಕ, ಕಸಾಪ ದತ್ತಿ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ, ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ, ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ಕೊಪ್ಪಳದ ಪಂಡಿತ ಜಂಬಲದಿನ್ನಿ ಸ್ಮಾರಕ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿ ಪ್ರಸಾರಾಂಗ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ…ಮುಂತಾದವುಗಳನ್ನು ಇಲ್ಲಿ ದಾಖಲಿಸಬಹುದು. ಇದರೊಂದಿಗೆ ಆಳಂದ ತಾಲೂಕು ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಶ್ರೀಯುತರಿಗೆ ಲಭಿಸಿದೆ.
ಸಿಹಿಯಾಗಿರುವ ಗುರಿಯನ್ನು ತಲುಪಲು, ಅದರ ಸ್ವಾದವನ್ನು ಸವಿಯಲು ಕಹಿಯಾದ ದಾರಿಯ ಪರಿಚಯವಿರಬೇಕು. ಕಾರಣ, ಕಣ್ಣೀರು ಯಾವತ್ತೂ ಸುರಿಸುವವರ ದೌರ್ಬಲ್ಯದ ಸಂಕೇತವಲ್ಲ. ಅದು ಅವರ ಶುದ್ಧ ಹೃದಯದ ಸಂಕೇತ ಎಂಬುದನ್ನು ಗಜಲ್ ತಿಳಿಸಿಕೊಡುತ್ತದೆ. ಈ ನೆಲೆಯಲ್ಲಿ ಅಶಅರ್ ಉಸಿರಾಡುವ ಸಂಗೀತ ಹೃದಯವಂತರನ್ನು ಆಲಂಗಿಸಿದಾಗ ಅಲ್ಲಿ ನೋವಿನ ಛಾಯೆಯೇ ಇರುವುದಿಲ್ಲ. ರಿಲ್ಯಾಕ್ಸ್ ಫೀಲ್ ಆವರಿಸಿ ಪ್ರೀತಿಯ ಪರಿಮಳ ಪಸರಿಸುತ್ತದೆ. ಈ ಪ್ರೀತಿ ಎಂಬುದು ಮನುಷ್ಯನನ್ನು ಎಲ್ಲಾ ಭಾರ ಮತ್ತು ನೋವಿನಿಂದ ಮುಕ್ತಗೊಳಿಸುತ್ತದೆ. ಪ್ರೀತಿ ಮತ್ತು ನೋವಿನ ಹದವಾದ ಮಿಶ್ರಣವಾಗಿರುವ ಗಜಲ್ ಮನುಕುಲದ ತುಂಬೆಲ್ಲ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಗಜಲ್ ಗೋ ಶ್ರೀ ಪ್ರಭುಲಿಂಗ ನೀಲೂರೆ ಅವರ ಗಜಲ್ ಗಳಲ್ಲಿ ಪ್ರೀತಿಯ ನಿವೇದನೆ, ಪ್ರೇಮದ ಉತ್ಕಟತೆ, ವಿರಹ ವೇದನೆ, ಮನದ ತಳಮಳ, ಅಂತರಂಗದ ನೋವು, ಹೃದಯಗಳ ಪಿಸುಮಾತು, ಒಂಟಿತನ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಶಾಂತಿಯ ಹುಡುಕಾಟ, ಝೆನ್ ವಿಚಾರಧಾರೆ…. ಮುಂತಾದ ವಿಷಯಗಳು ಇವರ ಅಶಅರ್ ನಲ್ಲಿ ಹೆಪ್ಪುಗಟ್ಟಿವೆ.
ಪ್ರೀತಿ ಸೋಂಕು ತಗುಲದೆ ಯಾವ ವ್ಯಕ್ತಿಯೂ ನೆಮ್ಮದಿಯಾಗಿ ಬದುಕಲಾರ. ಇದೊಂದು ಅಮೂರ್ತ ಅನುಭವವನ್ನು ನೀಡುವ ಪಂಚಮವೇದ. ಯಾರಿಂದಾದರೂ ಪ್ರೀತಿಸಲ್ಪಡುವುದು ಎಂದರೆ ಅದು ನಮಗೆ ಶಕ್ತಿಯನ್ನು ನೀಡುತ್ತದೆ, ಯಾರನ್ನಾದರೂ ಆಳವಾಗಿ ಪ್ರೀತಿಸುವುದು ಎಂದರೆ ಅದು ನಮಗೆ ಧೈರ್ಯವನ್ನು ನೀಡುತ್ತದೆ. ಈ ನೆಲೆಯಲ್ಲಿ ಪ್ರೀತಿ ಎಂಬುದು ಬದುಕಿಗೆ ಒಂದು ಅರ್ಥವನ್ನು ನೀಡುತ್ತದೆ. ಇಲ್ಲಿ ಸುಖನವರ್ ಶ್ರೀ ಪ್ರಭುಲಿಂಗ ನೀಲೂರೆ ಅವರು ನೆನಪಿನಲ್ಲಿ ಅಡಗಿರುವ ಪ್ರೀತಿಯನ್ನು ಸಹೃದಯಿಗಳಿಗೆ ಉಣಬಡಿಸಿದ್ದಾರೆ.
“ನಿನ್ನ ನೆನಪುಗಳನ್ನು ಹೊದ್ದು ಬೆಚ್ಚಗೆ ಮಲಗಿರುವೆ ಎಬ್ಬಿಸಬೇಡ
ಏಕಾಂಗಿಯಾಗಿ ಮನೆಕಟ್ಟಿ ಬಾಳುತಿರುವೆ ಮಾತಾಡಿಸಬೇಡ”
ಪ್ರೀತಿಯು ಅನೇಕ ರುಚಿಗಳನ್ನು ಹೊಂದಿರುವ, ನವರಸವನ್ನೂ ಮೀರಿಸುವ ಅಮೃತವಾಗಿದೆ. ಪ್ರೀತಿಯೊಂದಿದ್ದರೆ ಸಾಕು ಪ್ರೀತಿಸಿದವರಿಗೆ, ಅದರ ಹೊರತು ಬೇರೇನೂ ಬೇಕಾಗದು. ಪ್ರೀತಿಯಲ್ಲಿ ಏಕಾಂಗಿಯ ಅನುಭವವೂ ಪರಮೋಚ್ಚವಾದ ಭಾವವನ್ನು ಮೈ-ಮನಕ್ಕೆ ನೀಡುತ್ತದೆ ಎಂಬುದನ್ನು ತಮ್ಮ ಷೇರ್ ನಲ್ಲಿ ಶಾಯರ್ ನೀಲೂರೆ ಅವರು ಕಟ್ಟಿಕೊಟ್ಟಿದ್ದಾರೆ.
ಪ್ರೀತಿ ಯಾವಾಗಲೂ ತಾಳ್ಮೆ ಮತ್ತು ದಯೆಯನ್ನು ನಿರೀಕ್ಷಿಸುತ್ತದೆ, ಬಯಸುತ್ತದೆ ಕೂಡ. ಇದು ಎಂದಿಗೂ ಅಸೂಯೆಪಡುವುದಿಲ್ಲ. ಅಸೂಯೆ ಪಟ್ಟರೆ ಅದು ಪ್ರೀತಿಯೆಂದು ಅನಿಸಿಕೊಳ್ಳುವುದೆ ಇಲ್ಲ. ಇದು ಜಂಭವಾಗಲಿ, ಅಹಂಕಾರವಾಗಲಿ ಮನೋರಂಜಿಸುವುದಿಲ್ಲ. ಅಂತೆಯೇ ಗಜಲ್ ಕಾರರಾದ ಶ್ರೀ ಪ್ರಭುಲಿಂಗ ನೀಲೂರೆ ಅವರು ಪ್ರೀತಿ ಯಾವತ್ತೂ ಅಸಭ್ಯ ಅಥವಾ ಸ್ವಾರ್ಥಿಯಲ್ಲ ಎಂದು ಹೇಳುತ್ತ, ಪ್ರೀತಿಯ ಒಳ ತುಡಿತವನ್ನು ತಮ್ಮ ಷೇರ್ ಮುಖಾಂತರ ದಾಖಲಿಸಲು ಪ್ರಯತ್ನಿಸಿದ್ದಾರೆ. ಪ್ರೀತಿ ಸದಾ ಮುಖವಾಡ ರಹಿತ ಸತ್ಯವನ್ನು ಆಲಂಗಿಸುತ್ತದೆ. ಈ ಕಾರಣಕ್ಕಾಗಿಯೇ ಇದು ಯಾವಾಗಲೂ ಕ್ಷಮಿಸಲು, ನಂಬಲು, ಭರವಸೆ ನೀಡಲು ಮತ್ತು ಏನೇ ಬಂದರೂ ಸಹಿಸಿಕೊಳ್ಳಲು ಸಿದ್ಧವಾಗಿರುತ್ತದೆ. ಇದು ತೋರಿಕೆಯ ಬೇಲಿಯನ್ನು ದಾಟಿ ಅನುಭಾವದ ನೆಲೆಯಲ್ಲಿ ಅರಳುವುದನ್ನು ಈ ಕೆಳಗಿನ ಷೇರ್ ಪ್ರತಿಧ್ವನಿಸುತ್ತಿದೆ.
“ಬಿಗಿ ಸಾಮಿಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದು
ಮೈ ಮನ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು”
‘ನೋವಿನ ಚಿಕಿತ್ಸೆ ನೋವಿನಲ್ಲಿದೆ’ ಎಂಬ ರೂಮಿ ಯವರ ಮಾತನ್ನು ಗಜಲ್ ಅನಾದಿಕಾಲದಿಂದಲೂ ಪ್ರತಿನಿಧಿಸುತ್ತ ಬಂದಿದೆ. ಕಹಿಯಾದ ಹಣ್ಣನ್ನು ಪ್ರೀತಿಸುವವರೊಂದಿಗೆ ಹಂಚಿಕೊಂಡಾಗ ತಿಂದಾಗ ಅದು ಸಿಹಿಯಾಗುವಂತೆ ಗಜಲ್ ಓದುತಿದ್ದರೆ, ಬರೆಯುತಿದ್ದರೆ ಸಹೃದಯಿಗಳ ಮನಸು ನಿರಾಳವಾಗಿರುತ್ತದೆ. ಈ ದಿಸೆಯಲ್ಲಿ ಸುಖನವರ್ ಪ್ರಭುಲಿಂಗ ನೀಲೂರೆ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.
“ಈ ಜಗತ್ತು ಪ್ರೇಮಕ್ಕಾಗಿಯೆ-ದ್ವೇಷಕ್ಕಾಗಿ ಅಲ್ಲ
ಈ ಜಗತ್ತು ಸತ್ಯಕ್ಕಾಗಿಯೆ-ಅಸತ್ಯಕ್ಕಾಗಿ ಅಲ್ಲ”
–ಅಮನ್ ಹಿಂದೂಸ್ತಾನಿ
ಗಜಲ್ ಬಗೀಚಾದಲ್ಲಿ ಸುತ್ತಾಡುತಿದ್ದರೆ ಗಜಲ್ ನ ಗುಲ್ಶನ್ ನಮ್ಮ ಮೈ ಮನವನ್ನು ಉಲ್ಲಾಸಿತಗೊಳಿಸುವುದು. ಅದರಿಂದ ಮನಸು ಯಾವತ್ತೂ ದಣಿಯಲಾರದು, ಸದಾ ಚೇತೋಹಾರಿಯಾಗಿಯೆ ಇರುವುದು!! ಈ ಗಜಲ್ ನಾಕ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ; ಬೇಕು ಬೇಕೆನಿಸುವ ತುಡಿತ. ಆದರೂ…ವಕ್ತ್ ನ ಸರಪಳಿಯಲ್ಲಿ ಬಂಧಿಯಾಗಿರುವ ಮುಸಾಫಿರ್ ನಾನು. ಇಂದು ನನಗೆ ಇಲ್ಲಿಂದ ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ ಪ್ರೀತಿಯನ್ನರಸುತ ಬರಲು.. ಹೋಗಿ ಬರಲೆ, ಬಾಯ್.. ಟೇಕ್ ಕೇರ್ ದೋಸ್ತೊ…
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ