ನನ್ನ ನೆನಪಿನ ದೀಪಾವಳಿ.

ಅನುಭವ

ನನ್ನ ನೆನಪಿನ ದೀಪಾವಳಿ.

ಹನಿಬಿಂದು

.

                    ಅದು ಎರಡು ಸಾವಿರದ ಹನ್ನೆರಡನೆಯ ಇಸವಿ. ಅಂದರೆ ಹತ್ತು ವರುಷಗಳ ಮುಂಚಿನ ಮೆಲುಕು. ಅಂದು ನವೆಂಬರ್ ತಿಂಗಳ ಹನ್ನೆರಡು-ಹದಿಮೂರನೇ ತಾರೀಕು. ಪ್ರತಿ ವರುಷದ ದೀಪಾವಳಿಯಂತೆ ಆ ವರುಷದ ದೀಪಾವಳಿಯಲ್ಲಿ ನಮಗೆ ಯಾವುದೇ ಖುಷಿ ಇರಲಿಲ್ಲ.ಕಾರಣ ಅಕ್ಟೋಬರ್ ಹದಿನೇಳನೇ ತಾರೀಕಿಗೆ ತಂದೆಯವರ ಅಂತಿಮ ದರ್ಶನಕ್ಕೆ ನಾವು ಅಮ್ಮನ ಮನೆಗೆ ಧಾವಿಸಿದ್ದೆವು. ಮಕ್ಕಳು ಯಾರೂ ಬಳಿಯಲ್ಲಿ ಇಲ್ಲದ ಸಮಯದಲ್ಲಿ ಅಮ್ಮ ಒಬ್ಬರೇ ಇರುವಾಗ ಅಸ್ತಮಾದಿಂದ ಬಳಲುತ್ತಿದ್ದ ಅಪ್ಪ ಮಕ್ಕಳನ್ನು ಕೇಳುತ್ತಾ ರಾತ್ರಿ ಸಮಯದಲ್ಲಿ ಕೊನೆಯುಸಿರೆಳೆದಿದ್ದರು. ಒಂದು ತಿಂಗಳಾಗುತ್ತ ಬಂದಿತ್ತು ಅಷ್ಟೆ. ಆ ನೋವಿನ್ನೂ ನಮ್ಮೆಲ್ಲರ ಮನದಿಂದ ಮಾಸಿರಲೇ ಇಲ್ಲ. ಹಾಗಾಗಿ ಹಬ್ಬ ಆಚರಿಸುವ ಮನಸ್ಸು ನಮ್ಮಲ್ಲಿ ಯಾರಿಗೂ ಇರಲಿಲ್ಲ.

           ನನ್ನ ಅಜ್ಜಿ ಮನೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಳಿಯ ಒಂದು ಪುಟ್ಟ ಗ್ರಾಮ  ಈದುವಿನಲ್ಲಿ ಇದೆ. ನಾನು ಅಲ್ಲಿಯೇ ನನ್ನ ಬಾಲ್ಯದ ದಿನಗಳನ್ನು ಕಳೆದದ್ದು. ಆ ವರ್ಷದಲ್ಲಿ ನಾನು ತುಂಬು ಗರ್ಭಿಣಿ. ನಾನು ಅಜ್ಜಿಯ ಊರಲ್ಲಿ ಈದುವಿನಲ್ಲೇ ಇದ್ದೆ. ದೊಡ್ಡಮ್ಮ ಜೊತೆಗಿದ್ದರು. ಅಮ್ಮ ತಂದೆಯವರ ಅಂತಿಮ ವಿಧಿ ವಿಧಾನಗಳನ್ನು ನಡೆಸಬೇಕಾಗಿ ಇದ್ದುದರಿಂದ ನನ್ನ ಜೊತೆಗಿರಲು ಆಗಲಿಲ್ಲ.

             ನವೆಂಬರ್ ಹದಿಮೂರನೇ ದಿನಾಂಕದಂದೇ ನನಗೆ ಹೆರಿಗೆಗೆ ಡಾಕ್ಟರ್ ದಿನಾಂಕ ಸೂಚಿಸಿದ ಕಾರಣ ಆಸ್ಪತ್ರೆಗೆ ಆ ದಿನಾಂಕದ ಮೊದಲೇ ತೆರಳಬೇಕಿತ್ತು. ಆದರೆ ನನಗೆ ಯಾವುದೇ ರೀತಿಯ ಹೊಟ್ಟೆ ನೋವು ಕಾಣಿಸಿಕೊಳ್ಳದ ಕಾರಣ  ಮೊದಲೇ ಹೋಗಿ ಆಸ್ಪತ್ರೆ ವಾಸ ಮಾಡುವುದು ಸರಿ ಕಾಣಲಿಲ್ಲ. “ಒಂದು ದಿನ ತಡ ಆಗಲಿ ದೇವರೇ, ನವೆಂಬರ್ ಹದಿನಾಲ್ಕನೇ ತಾರೀಖಿಗೆ ಹೆರಿಗೆ ಆಗಲಿ, ಮಕ್ಕಳ ದಿನಾಚರಣೆ ಹಾಗೂ ಚಾಚಾ ನೆಹರು ಅವರ ಜನ್ಮ ದಿನದಂದು ನನ್ನ ಮಗು ಹುಟ್ಟಲಿ..” ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾ ಇದ್ದೆ ನಾನು.

           “ಹನ್ನೆರಡನೇ ತಾರೀಖಿನ ದಿನವೇ ಒಂದು ದಿನ ಮುಂಚಿತವಾಗಿ ಆಸ್ಪತ್ರೆಗೆ ಹೋಗೋಣ. ರಾತ್ರಿ ಹೆರಿಗೆ ನೋವು ಕಾಣಿಸಿದರೆ ಕಾರ್ಕಳಕ್ಕೆ ಹೋಗಲು ದೂರವಿದೆ ಮತ್ತು ಕಷ್ಟ ” ಎಂದರು ದೊಡ್ಡಮ್ಮ. ನಾನೂ ತಯಾರಿಲ್ಲದೆಯೂ ತಯಾರಾಗಬೇಕಿತ್ತು. ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡೆ ಎನ್ನಿ. ಆದರೆ ಮನಸ್ಸು ಏಕೋ ಬೇಡ ಅನ್ನುತ್ತಿತ್ತು. ಹದಿನಾಲ್ಕನೇ ತಾರೀಕಿನ ಟಾರ್ಗೆಟ್ ಇತ್ತಲ್ವಾ!

           ಆಗ ಅಲ್ಲಿದ್ದ ನನ್ನ ಅಜ್ಜ ದೊಡ್ಡಮ್ಮನನ್ನು ತಡೆದರು. “ಹೇಗೂ ಇಷ್ಟು ದಿನ ತಡವಾಯಿತು. ಅವಳಿಗೆ ನೋವೇನೂ ಇಲ್ಲ. ಹಾಗಾಗಿ ಹಬ್ಬದ ದಿನ . ಪಾಡ್ಯದ ದಿನದ ಹಿರಿಯರಿಗೆ ಊಟ ಬಡಿಸುವ ಕ್ರಮ ನಮ್ಮಲ್ಲಿ ಇದೆ. ನಾವು ಮಹಾಲಯದ ಸಮಯದಲ್ಲಿ ಬಡಿಸುವ ಪದ್ದತಿ ಇಲ್ಲ. ಇಲ್ಲಿ ಊಟ ಬಡಿಸಿದ ಬಳಿಕ ಊಟ ಮಾಡಿಯೇ ನಾಳೆ ಆಸ್ಪತ್ರೆಗೆ ಹೋಗಿ ಬಿಡಿ.  ಒಂದು ದಿನ ತಡವಾದರೆ ಏನೂ ಆಗಲಿಕ್ಕಿಲ್ಲ, ನೋಡೋಣ” ಎಂದರು. ನಾನು ಸಂತಸದಿಂದ ಬೀಗಿದೆ. ದೊಡ್ಡಮ್ಮ ಅಜ್ಜನಿಗೆ ತಿರುಗಿ ಮಾತನಾಡುವುದಿಲ್ಲವಾದ್ದರಿಂದ ಹದಿಮೂರನೇ ತಾರೀಖಿನ ದಿನ ಆಸ್ಪತ್ರೆಗೆ ಹೋಗುವ ಕಾರ್ಯಕ್ರಮ ಫಿಕ್ಸ್ ಆಯಿತು. ಈ ನಡುವೆ ದೀಪ, ಪಟಾಕಿ ಎಲ್ಲಾ ಮರೆತೇ ಹೋಗಿತ್ತು! ದೂರದ, ಹತ್ತಿರದ ಮನೆಗಳಿಂದ ಠುಸ್, ಪುಸ್, ಡಿಮಾರ್, ಡಗಾರ್ ಕೇಳಿದ್ದೆ ಬಂತು!

        ಪಟಾಕಿ ಒಡೆದು ಕೆಟ್ಟ ಗಾಳಿಯನ್ನು ಪರಿಸರಕ್ಕೆ ಬಿಡುವ ಕಾರ್ಯ ಕೆಟ್ಟದು ಆದ್ದರಿಂದ ಅದಕ್ಕೆ ವಿರೋಧಿ ನಾನು. ಭೂುಮಿ ಈಗಾಗಲೇ ಬಹಳ ಬಿಸಿ ಆಗಿದೆ ಮತ್ತು ಮನುಷ್ಯನ ಹಲವಾರು ದುರ್ವರ್ತನೆಗಳಿಂದ ಬಿಸಿ ಆಗುತ್ತಲೇ ಇದೆ ಅಲ್ಲವೇ? ಶುದ್ಧ ಗಾಳಿ,ನೀರು, ಮಣ್ಣು ಸಿಗಲು ಅದೆಷ್ಟು ಕಷ್ಟ ಪಡಬೇಕು ಇಂದು! ಮಾನವನ ಚಟುವಟಿಕೆಗಳ ಕ್ರೌರ್ಯ ಮಿತಿ ಮೀರಿ ಹಸಿರು ನಾಶವಾಗಿದೆ, ನಾಶ ಆಗುತ್ತಲೇ ಇದೆ. ದೀಪಾವಳಿಯ ಪಟಾಕಿ ಹಣವನ್ನು ಅನಾಥಾಶ್ರಮಕ್ಕೋ, ಬೀದಿ ನಾಯಿಗಳ ಆಶ್ರಮಕ್ಕೋ, ಪ್ರಾಣಿ ಸಾಕಾಣಿಕೆಗೋ, ಆಸ್ಪತ್ರೆಯಲ್ಲಿ ಇರುವ ರೋಗಿಗಳ ಚಿಕಿತ್ಸೆಗೋ, ಅವರ ಜೊತೆಗೆ ಇರುವವರ ಹೊತ್ತು ಹೊತ್ತಿನ ಊಟಕ್ಕೋ ದಾನ ಮಾಡಿದರೆ ಒಂದು ಪುಣ್ಯದ ಕೆಲಸ ಮಾಡಿದ ಸಂತೃಪ್ತಿ ಆದರೂ ಸಿಗುತ್ತದೆ.

ಆದರೆ ಆ ವರ್ಷ ನನ್ನ ಜೀವನ ಸ್ವಲ್ಪ ಬದಲಾಗಿ ಹಬ್ಬ ಆಚರಿಸುವ  ಬದಲು ಆಸ್ಪತ್ರೆಗೆ  ಗಂಟು ಮೂಟೆ ಕಟ್ಟುವ ಕಾರ್ಯ! ಜೀವನದಲ್ಲಿ ಮೊದಲನೇ ಭಾರಿ! ನೆಂಟರ ಮನೆಗೆ ಲಗ್ಗೇಜ್ ತುಂಬಿಸಿಕೊಂಡು ಹೋದ ಹಾಗೆ ಆಸ್ಪತ್ರೆಗೆ ಹೋಗುವುದು. ಒಂಥರಾ ಖುಷಿ! ಹೊಸ ಮಗುವಿನ ಆಗಮನದ ಕಾತುರ! ಒಂಥರಾ ಬೇಸರ, ಆಸ್ಪತ್ರೆಯಲ್ಲಿ ಹೇಗಿರುವುದೋ ಎಂದು. ಒಂಥರಾ ಕಳವಳ, ಚಿಂತೆ! ಹೆರಿಗೆ ಹೇಗಾಗುವುದೋ ಎಂದು. ನಾನು ಸ್ವಲ್ಪ ದೇಹದ ಗಾತ್ರದಲ್ಲಿ ಎತ್ತರ ಕಡಿಮೆ ಇರುವ ಕಾರಣ( ಅದಕ್ಕೆ ನನಗೇನೂ ಬೇಸರ ಇಲ್ಲ, ದೇವರು ಕೊಟ್ಟ ಸರಿಯಾದ ಅಂಗಾಂಗ ಇರುವ ದೇಹ ಪ್ರಕೃತಿಗೆ ನಾನು ಸದಾ ಋಣಿ) “ಮಗು ಉದ್ದ ಹಾಗೂ ದಪ್ಪ ಬೆಳೆದು ಮೂರೂವರೆ ಕಿಲೋ ಗ್ರಾಂ ಇರುವ ಕಾರಣ ಮಾಮೂಲಿ ಹೆರಿಗೆ ಕಷ್ಟ, ಸಿಸೇರಿಯನ್ ಆಗಬೇಕಾಗಬಹುದೇನೋ” ಎಂದು ಡಾಕ್ಟರ್ ಮೊದಲೇ ಸೂಚನೆ ನೀಡಿದ್ದರು. ಮಾಮೂಲಿ ಇಂಜೆಕ್ಷನ್ ಅಂದರೇನೇ ಭಯ ಪಟ್ಟು ಮಾರು ದೂರ ಓದುತ್ತಿದ್ದ ನಾನು ಆಪರೇಷನ್ ಗೆ ನನ್ನನ್ನು ಸಿದ್ಧಪಡಿಸಿ ಕೊಳ್ಳಬೇಕಿತ್ತು. ಅದೂ ಅಮ್ಮ ಜೊತೆಯಲ್ಲಿ ಇಲ್ಲದ ಸಮಯದಲ್ಲಿ! ಭಯ ಪಡಲಿಲ್ಲ ನಾನು! ಅಮ್ಮನ ನೋವಿನ ಕಷ್ಟದ  ಮುಂದೆ ನನ್ನ ನೊವು,  ಅದೇನೂ ಅಲ್ಲ ಅನ್ನಿಸಿತು. ಧೈರ್ಯ ಮಾಡಿಕೊಂಡೆ. ಅಜ್ಜ ಹೇಳಿದ ಹಾಗೆ ದೀಪಾವಳಿ ಪಾಡ್ಯದ ದಿನದ ಗಟ್ಟಿ ಊಟ ಮುಗಿದ ಕೂಡಲೇ ನಮ್ಮನ್ನು ಕರೆದೊಯ್ಯಲು ಕಾರು ಬಂತು.

           ದೀಪಾವಳಿಯ ಹಬ್ಬದ ಊಟ ಮಾಡಿ ಹೊಟ್ಟೆ ಮತ್ತಷ್ಟು ಭಾರವಾಗಿತ್ತು. ಆಸ್ಪತ್ರೆಯಲ್ಲಿ ಡಾಕ್ಟರ್ “ಲೇಟ್ ಮಾಡಿದ್ದು ಯಾಕೆ” ಎಂದು ಗದರಿದಾಗ ಏನೇನೋ ಸಬೂಬು ಹೇಳಿದ್ದೂ ಆಯಿತು. ಮತ್ತೆ? ಮುಂದೆ?…

           ನನಗಾಗಿ ಒಂದು ಬೆಡ್ ರೆಡಿ ಆಗಿತ್ತು. ಸ್ಪೆಷಲ್ ರೂಮ್ ಬುಕ್ ಮಾಡಿದೆವು. ಮನೆಯವರು ಯಾರಾದರೂ ಬಂದರೆ ಇರಲು ತೊಂದರೆ ಆಗಬಾರದು ಎಂಬಂತೆ. ಮಾವನ ಮನೆಗೆ ಹೋದ ಹಾಗೆ ಆಸ್ಪತ್ರೆಗೆ ಹೋಗಿ ಕುಳಿತು ಆಗಿತ್ತು! ಇನ್ನು? ಜೀವನದಲ್ಲೇ ಮೊದಲ ಬಾರಿ ಈ ಆಸ್ಪತ್ರೆ ವಾಸ! ಶುರುವಾಯಿತು ನೋಡಿ! ಪರೀಕ್ಷೆಗಳು! ಸ್ಕ್ಯಾನಿಂಗ್, ಪಟ್ಟಿ ಪರೀಕ್ಷೆ, ಮಗುವಿನ ಹಾರ್ಟ್ ಬೀಟ್ ಚೆಕ್ ಅಪ್! ಒಂದರ ಬಳಿಕ ಒಂದು! “ಛೆ..ಇವತ್ತೂ ಬರಬಾರದಿತ್ತು…” ಅನ್ನಿಸದೇ ಇರಲಿಲ್ಲ! ಇನ್ನು ಮುಂದೆ ಈ ಆಸ್ಪತ್ರೆ ವಾಸವೇ ಬೇಡ ಎಂದು ನಿರ್ಧಾರ ಮಾಡಿಯೂ ಆಯಿತು! ಹಾಗೆಯೇ ಡಾಕ್ಟರ್, ನರ್ಸ್ ಗಳ ಕಷ್ಟದ ಕೆಲಸ ನೋಡಿ , ‘ನಮ್ಮ ಶಿಕ್ಷಕ ವೃತ್ತಿಯೇ ರೆಕಾರ್ಡ್, ಲೆಕ್ಕಾಚಾರ, ಟಿಸಿ, ಪಾಠ, ಆಟ, ಕಿರಿಕ್, ಗಲಾಟೆ, ಕಿತ್ತಾಟ, ದೂರು, ಅಧಿಕಾರಿಗಳ ದಿಢೀರ್ ಭೇಟಿ, ಹತ್ತನೇ ತರಗತಿ ಫಲಿತಾಂಶ ಕಡಿಮೆ ಬಂದ ಕಾರಣ ಒಂದಷ್ಟು ಹಿತವಚನ ಎಲ್ಲಾ ಇದ್ದರೂ ನಮ್ಮ ಕೆಲಸವೇ ಇದಕ್ಕಿಂತ ನೆಮ್ಮದಿ’ ಅಂತ ಅನ್ನಿಸದೇ ಇರಲಿಲ್ಲ! ಅಲ್ಲಿನ ನರಳಾಟ, ಕೂಗಾಟ, ಕಿರುಚಾಟಗಳ ನಡುವೆಯೇ ಹೊಸ ಬದುಕಿಗೆ ಜೀವ ತುಂಬುವುದರಲ್ಲಿ, ನೋವನ್ನು ಮಾಯಗೊಳಿಸಿ ಮುಖದಲ್ಲಿ ನಗು ತರಿಸುವ  ವೈದ್ಯರು ಹಾಗೂ ದಾದಿಯರ  ಕಾರ್ಯಕ್ಕೆ ನಿಜವಾಗಿಯೂ ಸಲಾಂ ಹೇಳಲೇ ಬೇಕು ಅಂತ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ತಾಳ್ಮೆಯ ಕೆಲಸದ  ಬಗ್ಗೆ ಮೆಚ್ಚುಗೆ ಎನಿಸಿತು. ಆ ಸಮಯದಲ್ಲಿ ದೀಪಾವಳಿ ಮರೆತೇ ಹೋಗಿತ್ತು!

           ಎಷ್ಟೋ ಖರ್ಚು ಮಾಡಿ ಮಕ್ಕಳನ್ನು ಮೆಡಿಕಲ್ ಸೀಟಿಗೆ ಬೇರೆ ಬೇರೆ ರಾಜ್ಯಗಳಿಂದ ತಂದು ಮಣಿಪಾಲ್ ಯೂನಿವರ್ಸಿಟಿಗೆ ಸೇರಿಸುವ ಪೋಷಕರ ಬಗ್ಗೆ, ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೆಮ್ಮೆ ಕೂಡಾ ಮೂಡಿತು. ಹಾಗೇ ಮುಂದೆ ಡಾಕ್ಟರ್ ಆಗುವ ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಅವರ ಜೊತೆಗೆ ಡ್ಯೂಟಿ ಇದ್ದ ನರ್ಸ್ ಆಗಾಗ ಬಂದು ನಮ್ಮನ್ನು ವಿಚಾರಿಸಿಕೊಂಡು ಧೈರ್ಯ ತುಂಬುತ್ತಿದ್ದರು. ಉತ್ತರ ಭಾರತದ ಆ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲೇ ಮಾತನಾಡಬೇಕು ಎಂಬ ಕಂಡೀಷನ್ ಇತ್ತು. ಅವರು ತುಳು ಮತ್ತು ಕನ್ನಡವನ್ನು ಹಿಂದಿಯ ಸ್ಟೈಲ್ ನಲ್ಲಿಯೇ ಮಾತನಾಡುವುದನ್ನು ಕೇಳಿದ ನನಗೆ ನಗು ತಡೆಯಲು ಆಗುತ್ತಿರಲಿಲ್ಲ! ಎಲ್ಲಾ ಕೆಲಸಗಳಿಗೂ ಅದರದ್ದೇ ಆದ ಮಹತ್ವವಿದೆ ಮತ್ತು ನಾವು ನಮ್ಮ ಪಾಲಿಗೆ ಬಂದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು, ಆಗ ದೇವರು ಕೂಡ ಸಂತಸ ಪಡುತ್ತಾರೆ ಅಲ್ಲವೇ? ಸದಾ ಕೆಲಸದಲ್ಲಿ ಮುಳುಗಿ ಹೋಗಿರುತ್ತಿದ್ದ ನನಗೆ ಆಸತ್ರೆಯಲ್ಲಿ ಸುಮ್ಮನೆ ಮಲಗಿದ್ದಾಗ ಹೀಗೆ ಏನೇನೋ ಮನಸ್ಸಿಗೆ ಬರುತ್ತಿದ್ದವು. ನನ್ನೊಳಗೆ ಕೆಲವೊಂದು ವಿಚಾರಗಳ ಬಗ್ಗೆ ಜಿಜ್ಞಾಸೆ, ವಿಮರ್ಶೆ ನಡೆಯುತ್ತಲೇ ಇತ್ತು.

          ನನ್ನ ಗೆಳೆಯರು, ಬಂಧುಗಳು ಆಗಾಗ ಕರೆ ಮಾಡಿ ಏನಾಯಿತು ಎಂದು ವಿಚಾರಿಸಿಕೊಳ್ಳುತ್ತಿದ್ದರು. “ಇನ್ನೂ ಏನೂ ಆಗಿಲ್ಲ ” ಎಂದು ಉತ್ತರ ಕೊಟ್ಟು ನಗುತ್ತಿದ್ದೆ. ಆಸ್ಪತ್ರೆಗೆ ಹೋಗಿ ಮೂರು ದಿನಗಳೇ ಆದರೂ, ಪ್ರತಿದಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದರೂ ಮಗು ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತ ಇರಲಿಲ್ಲ, ಹೆರಿಗೆಯ ನೋವು ನನಗೆ ಪ್ರಾರಂಭ ಆಗಲೇ ಇಲ್ಲ. ಹೆರಿಗೆಯ ನೋವನ್ನು ಕೃತಕವಾಗಿ ಬರಿಸಲು ಇಂಜೆಕ್ಷನ್ ಚುಚ್ಚಲಾಯಿತು. ಊಹೂ..ಮತ್ತೆ ಹಾರ್ಮೋನ್ ಮಾತ್ರೆ ಕೊಡಲಾಯಿತು. ಇಲ್ಲವೇ ಇಲ್ಲ! ನನ್ನ ಗೆಳತಿ ಫೋನ್ ಮಾಡಿದಾಗ ಹೇಳಿದಳು, “ಕೆಟ್ಟು ಹೋದ ಈ ಪ್ರಪಂಚಕ್ಕೆ ಬೇಗ ಬರಲು ಇಷ್ಟ ಇಲ್ವಾ ನಿನ್ನ ಮಗುವಿಗೆ, ಇರಲಿ ಬಿಡು, ಸ್ವಲ್ಪ ದಿನ ಹಾಯಾಗಿ” ಅಂತ! ಸತ್ಯವಾದ ಮಾತು ಅಂತ ಅನ್ನಿಸಿತು ಆಗ.   ಇನ್ನು ಕೆಲವು ಬಂಧುಗಳು, ” ನಿನ್ನ ಹೊಟ್ಟೆಯೊಳಗೆ ಜಾಸ್ತಿ ಜಾಗ ಇದ್ದು ಮಗುವಿಗೆ ಅಲ್ಲೇ ಆರಾಮವಾಗಿ ಇರಬೇಕು, ಅದಕ್ಕೇ ಅದಿನ್ನೂ ಹೊರ ಬರುವ ಪ್ಲಾನ್ ಹಾಕಲಿಲ್ಲ” ಎಂದರು! ಡಾಕ್ಟರ್ ಮಾತ್ರ ನಾರ್ಮಲ್ ಡೆಲಿವರಿ ಆದರೂ ಆಗಬಹುದೇನೋ, ಕಾಯೋಣ, ಎಂದು ಧೈರ್ಯ ನೀಡಿದರು.

          ಆದರೆ ಅಂದು ನವೆಂಬರ್ ಹದಿನೇಳನೆಯ ತಾರೀಕು ಮಕ್ಕಳ ದಿನಾಚರಣೆಯ ಸ್ವೀಟ್ಸ್ ಎಲ್ಲಾ ಮುಗಿದಿರಬಹುದು.ದೀಪಾವಳಿಯ ಪಟಾಕಿ ಕೂಡಾ! ಆ ಸಮಯದಲ್ಲೂ ನನಗೆ ನೋವು ಕಾಣಿಸಿಕೊಳ್ಳದ ಕಾರಣ ಆಸ್ಪತ್ರೆ ನೆಂಟರ ಮನೆಯಂತೆ ಆಗಿತ್ತು! ಉಪ್ಪಿನಲ್ಲಿ ಹಾಕಿ ಇಟ್ಟ  ಹಲಸಿನ ಕಾಯಿ ಸೊಳೆಯ ಪಲ್ಯ ತಿನ್ನಬೇಕು ಅನ್ನಿಸಿ, ದೊಡ್ಡಮ್ಮನನ್ನು ಚಿಕ್ಕಮ್ಮನ ಮನೆಗೆ ರಾತ್ರಿಗೆ ಪಲ್ಯ ತರಲು ಕಳುಹಿಸಿ ಆಗಿತ್ತು. ಮಧ್ಯಾಹ್ನ ಸರಿಯಾಗಿಯೇ ಊಟ ಮಾಡಿದ್ದೆ. ಸಿಸೇರಿಯನ್ ಎಂದು ಫಿಕ್ಸ್ ಆದರೆ ಬೆಳಗ್ಗಿನಿಂದ ಊಟ ಕೊಡದೆ ಹೊಟ್ಟೆ ಖಾಲಿ ಇರಿಸಿಕೊಳ್ಳುತ್ತಾರೆ. ಆದರೆ ನನಗಿನ್ನೂ ನೋವಿರದ ಕಾರಣ ಯಾವ ರಿಸ್ಟ್ರಿಕ್ಷನ್ ಕೂಡಾ ಇರಲಿಲ್ಲ! ಆದರೆ  ಸುಮಾರು ಸಂಜೆ ನಾಲ್ಕು ಗಂಟೆಗೆ ನನ್ನನ್ನು ಪರೀಕ್ಷಿಸಿದ ವೈದ್ಯರು ಹೆದರಿದರು. ಅಂದು “ಗರ್ಭಕೋಶದ ನೀರು ಸೋರಿ ಮಗು ಡ್ರೈ ಆಗಿದೆ ಮತ್ತು ಮಗುವಿನ ಎದೆ ಬಡಿತ ಎರಡರಷ್ಟು ಹೆಚ್ಚಾಗಿದೆ” ಎಂದರು ವೈದ್ಯರು.  ಇನ್ನು ನಾರ್ಮಲ್ ಡೆಲಿವರಿಗೆಂದು ನಾವು ಕಾದರೆ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಎಮರ್ಜೆನ್ಸಿ ಸಿಸೇರಿಯನ್ ಗೆ ಅರೇಂಜ್ ಮಾಡಿದರು. ತಕ್ಷಣವೇ ನನ್ನ ಹೊಟ್ಟೆ ಖಾಲಿ ಮಾಡಿ, ಆಪರೇಶನ್ ಗೆ ತಯಾರು ಮಾಡಿದರು. ನನ್ನೊಡನೆ ಆಗ ಇದ್ದದ್ದು ಪತಿ ಮಾತ್ರ. ದಾಖಲೆ ಪತ್ರಗಳಿಗೆ  ಅವರ ಸಹಿ ಬೇಕಿತ್ತು, ಬಿಳಿ ಬಟ್ಟೆ ಹೊದಿಸಿದ ಬಳಿಕ ಆಪರೇಶನ್ ಥಿಯೇಟರಿಗೆ ಹೋಗುವ ದಾರಿಯಲ್ಲೇ ಬೇಗ ಬೇಗ ಸಹಿ ಹಾಕಿಸಿಕೊಂಡು ಸೆಡೆಟಿವ್ಸ್ ಕೊಟ್ಟು ಸಂಜೆ ನಾಲ್ಕು ಕಾಲಿಗೆ ಹೆಣ್ಣು ಮಗುವಿನ ಕೂಗು ಕೇಳಿಸಿತು. ನನಗೆ ಪ್ರಜ್ಞೆ ಬರುವಾಗ ಆರು ಗಂಟೆ ಕಳೆದಿರಬಹುದು. ಆಗ ಮಗುವನ್ನು ಐಸಿಯುನಲ್ಲಿ ಇರಿಸಿದ್ದರು. “ಮಗು ಚೆನ್ನಾಗಿದೆ, ಕೆಂಪು ಕೆಂಪಾಗಿದೆ, ಹೆಣ್ಣು ಮಗು” ಎಂದರು  ನನ್ನ ಪತಿ, ಅವರಿಗೆ ಮೊದಲ ಮಗು ಗಂಡಾಗಬೇಕು ಎಂಬ ಆಸೆ ಇತ್ತೋ ಏನೋ? ಆದರೆ ತುಂಬಾ ಖುಷಿ ಆಯಿತು ನನಗೆ. ಆ ಸಂತಸದಲ್ಲಿ ನೋವೆಲ್ಲೋ ಹಾರಿ ಹೋಗಿ “ನನ್ನ ಮುದ್ದು ಮಗುವಿನ ಮುಖವನ್ನು ಅದೆಷ್ಟು ಬೇಗ ನೋಡುವೆನೋ” ಎಂದು ಮನಸ್ಸು ಹಾಡಿ ಕುಣಿಯುತ್ತಿತ್ತು. ದೀಪಾವಳಿಯ ಬೆಳಕಿನ ರಂಗು ಆಗ ಮುದ್ದು ಮುದ್ದಾದ ನನ್ನ ಮಗಳ ಮುಖದಲ್ಲಿ ಕಾಣಿಸಿತು! ನಾನು  ಅಮ್ಮನಾದ ಹರುಷವು ಮಾಲೆ ಪಟಾಕಿ ಒಡೆದುದಕ್ಕಿಂತಲೂ ಹೆಚ್ಚಾಗಿತ್ತು!


One thought on “ನನ್ನ ನೆನಪಿನ ದೀಪಾವಳಿ.

Leave a Reply

Back To Top