ಪ್ರಭುರಾಜ ಅರಣಕಲ್- ಮಕ್ಕಳ ಕವಿತೆಗಳು

ಕಾವ್ಯ ಸಂಗಾತಿ

ಗಾಡಿ ಮೋಡಿಯಾಟ

ಪ್ರಭುರಾಜ ಅರಣಕಲ್

ನಾವು ಗೆಳೆಯರು ಆಡುತಿರಲು
ಗಿಲ್ಲಿ ದಾoಡಿನ ಆಟವು
ಗುಡಿಯ ಬಯಲಲಿ ಕೇಳಿಬಂದಿತು
‘ಡಮರುಗದ’ ಮೊರೆ ನಾದವು

ಆಟ ಬಿಟ್ಟು ಅಲ್ಲಿಗೋಡಲು
ಸುತ್ತುಗಟ್ಟಿದ ಜನಗಳು
ನಡುವೆ ‘ಗಾಡಿಮೋಡಿ’ ಯಾಟದ
ವಂಗನಾಡಿನ ಪಟುಗಳು

ನೆಲದಿ ಗುಂಡಿಯ ತೋಡಿಬಿಟ್ಟರು
ನೀರು ತುಂಬಿದರದರಲಿ
ಮಾವು ಗೊರಟೆಯ ಕೆಸರೊಳೂರಿ
ಕುಕ್ಕೆ ಮುಚ್ಚಿದರೆದುರಲಿ

ಮತ್ತೆ ಡಮರುಗ ಮೊರೆಯುತಿರಲು
ಚಿಣ್ಣರಲ್ಲೆಂಥದೊ – ಭಯ
ಹಾಡುತಿರುವವ ಕುಕ್ಕೆ ತೆರೆದಿರೆ —
ಗೊರಟೆ ಚಿಗುರಿದ ವಿಸ್ಮಯ…

ಮತ್ತೆ ಕುಕ್ಕೆಯ ಮುಚ್ಚಿ ತೆರೆಯಲು
ಮೊಳೆತ ಟೊಂಗೆಗೆ ಎಲೆಗಳು
ಎಲೆಗಳೆತ್ತಿ ಮೇಲೆ ತೋರಲು
ಎರಡುಮಾವಿನ ಮಿಡಿಗಳು

ದಂಗುಬಡಿಯಿತು ನಿಂತ ಜನರಲಿ
ವಂಗಪಟುಗಳ ‘ಮೋಡಿಗೆ’…
ಜನರು ನೀಡಿದಹಣದಿ ತುಂಬಿತು
ಮೋಡಿಗಾರರ ಜೋಳಿಗೆ…
—————————–

Leave a Reply

Back To Top