ಅಂಕಣ ಸಂಗಾತಿ

ನೆಲಸಂಪಿಗೆ

ಒಂದು ನಿಗೂಢ ಧ್ವನಿ

ಈ ವರ್ಷ ಎಪ್ರಿಲ್ ಕೊನೆ- ಮೇ ತಿಂಗಳ ಆರಂಭದಲ್ಲೇ ಗುಡುಗು ಮಳೆ ಬಂದು ಅಕಾಲಿಕವಾಗಿ ಮಳೆಗಾಲದ ವಾತಾವರಣವೂ ಕಾಣಿಸಿಕೊಂಡಿತು. ಆ ಸಮಯದಲ್ಲಿ ಒಂದು ರಾತ್ರಿ ನಮ್ಮ ಮನೆಯ ಹಿಂದಿನ ಹಾಡಿಯ ಕಡೆಯಿಂದ ಕೊಕ್‌ ಕೊಕ್‌ ಕೊಕ್ ಎಂಬ ಲಯ ಹಿಡಿದ ನಿರಂತರ ಕೂಗು ಆರಂಭವಾಯಿತು. ಪೊದೆಗಳೆಲ್ಲ  ಪೂರ್ತಿ ಕತ್ತಲುಮಯವಾದ್ದರಿಂದ ಕಣ್ಣಲ್ಲಿ ಕಣ್ಣಿಟ್ಟು  ನೋಡಿದರೂ ಏನೂ ಕಾಣುವಂತಿರಲಿಲ್ಲ. ಆದರೆ ಶೀತವಾಗಿ ಗಂಟಲು ಕಟ್ಟಿದಂತೆ ಕೇಳಿ ಬರುತ್ತಿರುವ ಆ ಕೂಗು ಯಾವುದೋ ನೀರು ಹಕ್ಕಿಯದು ಎಂದು ಊಹಿಸಬಹುದಿತ್ತು. ಮೇಲ್ನೋಟಕ್ಕೆ ಅನಿಸಿದ್ದೆಂದರೆ ಯಾವುದೋ ನೀರುಹಕ್ಕಿ ಪೊದೆಗಳೆಡೆಯಲ್ಲಿ ಮೊಟ್ಟೆಯಿಟ್ಟು, ಅದರ ಮೇಲೆ ಕುಳಿತು ಒಂದೇ ಲಯದಲ್ಲಿ ಬಿಡದೆ ಕೂಗುತ್ತಿದೆ ಎಂದು! ಹಾಗಾದರೆ ಅದು ಯಾವ ಹಕ್ಕಿ? ಸುತ್ತ ಹಬ್ಬಿಕೊಂಡ ಹಾಡಿ, ಕಾಡು ಬಿಟ್ಟರೆ ಕೆರೆ ಮುಂತಾದ ಯಾವುದೇ ನೀರಿನ ಮೂಲವಿಲ್ಲದ ಇಲ್ಲಿ ಯಾಕೆ ಹೀಗೆ ಕೂಗುತ್ತಿದೆ ಎಂದು ಯೋಚಿಸಿ ತಲೆ ಖರ್ಚು ಮಾಡಿಕೊಂಡದ್ದೇ ಬಂತು. ಕೊನೆಗೆ ಧ್ವನಿಯನ್ನು ರೆಕಾರ್ಡ್ ಮಾಡಿ ಹಕ್ಕಿಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದವರಿಗೆ ಕಳಿಸಿ ಕೇಳಿದಾಗ ಅದು ಹುಂಡುಕೋಳಿ ಅಥವಾ ಅದೇ ಜಾತಿಯ ಯಾವುದೋ ಹಕ್ಕಿಯಿರಬಹುದು ಎಂಬ ಉತ್ತರ ಸಿಕ್ಕಿತು. ಆದರೆ ನನಗಂತೂ ಸಮಾಧಾನವಾಗಲಿಲ್ಲ. ಯಾಕೆಂದರೆ ಹರಿಯುವ ನೀರಿನ ಕಲಕಲ, ಜುಳುಜುಳು ನಾದವನ್ನೆಲ್ಲ ಹೊತ್ತುಕೊಂಡಿರುವ ಹುಂಡುಕೋಳ್ಹಕ್ಕಿಯ  ಸಂಭ್ರಮದ ಸ್ವರವೆಲ್ಲಿ! ಶೀತದಿಂದ ಮೂಗು ಕಟ್ಟಿದ ಈ ಕ್ವಾಂಕ್‌ ಕ್ವಾಂಕ್ (ಇದೂ ಒಂತರ ಚೆನ್ನಾಗೇ ಇದ್ದರೂ) ಎಲ್ಲಿ ? ಹಾಗಾದರೆ ಮತ್ಯಾವುದಿದು ಎನ್ನುವ ಕುತೂಹಲದೊಂದಿಗೆ ರಾತ್ರಿ  ಹನ್ನೆರಡು ಗಂಟೆಯವರೆಗೂ ಕತ್ತಲ ಆಳದಿಂದ ಆ ದನಿಯನ್ನು ಕೇಳುತ್ತ ಆಮೇಲೆ ನಿದ್ದೆ ಮಾಡಿದ್ದಾಯಿತು.

       ಮತ್ತೆ ಮರುದಿನ, ಅದರ ಮರುದಿನ ಹೀಗೆ ದಿನವೂ ನಮ್ಮ ಮನೆಯ ಸುತ್ತಿನ ಎಲ್ಲ ಕಾಡುಗಳ ದಿಕ್ಕಿನಿಂದಲೂ ಸಂಜೆ-ರಾತ್ರಿಯ ಹೊತ್ತು ಇದೇ ನಿಗೂಢ ಹಕ್ಕಿಯ ಶ್ರುತಿ ಹಿಡಿದ ದನಿ ರಾತ್ರಿ ಪೂರಾ ಕೇಳಿ ಕೇಳಿ ನಾವಿರುವ ಪರಿಸರವೇ ಪೂರ್ತಿ ಹಕ್ಕಿಯಮಯವಾದಂತೆ ಕಂಡು ಯಾಂತ್ರಿಕ ದಿನಗಳಿಗೆ ಗೆಜ್ಜೆ ಕಟ್ಟಿದಂತೆನಿಸಿತು!  ಹೀಗೇ ಸ್ವಲ್ಪ ದಿನ ಕಳೆದ ಬಳಿಕ ಒಂದು ದಿನ ಮನೆಯಎಡಗಡೆಯ ಲಕ್ಷ್ಮಣ ಫಲದ ಗಿಡದೊಳಗಿಂದ ಹೆಚ್ಚು ಕಮ್ಮಿ ನಮ್ಮ ನಿಗೂಢ ಹಕ್ಕಿಯ ದನಿಯನ್ನೇ ಹೋಲುವ ದನಿ ಬೆಳಗಿನ ಹೊತ್ತಲ್ಲೇ ಕೇಳಿ ಬಂದಿತು! ಈ ಸಲ ಕಳ್ಳ ಸಿಕ್ಕಿಬಿದ್ದ ಎಂದು ಆತುರಾತುರವಾಗಿ ಹೋದರೆ ಮಳೆಯ ದೆಸೆಯಿಂದ ಕಳೆ ಗಿಡದ ಭರ್ತಿ ಪೊದೆಗಳೇ ಪೂರ್ತಿ ಲಕ್ಷ್ಮಣ ಗಿಡವನ್ನು ಆವರಿಸಿಕೊಂಡು ಏನೂ ಕಾಣಲಿಲ್ಲ. ಆದರೂ ಪ್ರಯತ್ನ ಬಿಡದೆ ನಾಯಿಗೆ ತಿಂಡಿ ಹಾಕಿಕೊಂಡು ಬಂದಿದ್ದ ಪ್ಲೇಟನ್ನು ಅಲ್ಲೇ ಬಿಟ್ಟು ಸದ್ದು ಮಾಡದೆ ಒಂದಷ್ಟು ಮುಂದೆ ಹೋಗಿ ನಿಧಾನವಾಗಿ ಇಣುಕಿ  ನೋಡಿದಾಗ ಕಂಡದ್ದು ತಲೆ ಹೊರಹಾಕಿ ನನ್ನನ್ನೇ ಗಮನಿಸುತ್ತಿದ್ದ ಕಳ್ಳ ಹಕ್ಕಿ! ಹಳದಿ ಕೊಕ್ಕು, ಕೆಂಪು ಹಣೆ, ಬಿಳಿ ಕುತ್ತಿಗೆ, ಸ್ಲೇಟಿನ ಬಣ್ಣದ ಗರಿಗಳು ಕಂಡವು!  ಹೌದು, ಸಂಶಯವೇ ಇಲ್ಲ. ಅದೊಂದು ಹುಂಡುಕೋಳಿ!  ಹೆಜ್ಜೆ ಹಿಂದಿಟ್ಟು ಬೇಗಬೇಗನೆ ಮನೆಯೊಳಗೆ ಬಂದುಬಿಟ್ಟೆ. ಏಕೆಂದರೆ ನಮ್ಮ ಬೆಳ್ಳಿಬೆಕ್ಕು ಆಗಲೇ ಹಕ್ಕಿಯ ದನಿಯನ್ನು ಹಿಂಬಾಲಿಸುವ ತಯಾರಿ ಮಾಡಿಕೊಳ್ಳುತ್ತಿದ್ದುದು ಕಾಣಿಸಿತು. ಕೂಡಲೇ ಅದರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಿದೆ. ಆ ಹುಂಡುಕೋಳಿ ಲಕ್ಷ್ಮಣ ಗಿಡದ ಮೇಲೇ ಕುಳಿತಿತ್ತು. ಬಹುಶಃ ಮೊಟ್ಟೆಯಿಟ್ಟು ಮರಿಯೊಡೆಸಿತ್ತು ಕಾಣುತ್ತದೆ. ನಾನು ಒಳಬಂದ ತುಸು ಹೊತ್ತಿಗೇ ಅದರ ಮಾಮೂಲಿ ಸ್ವರ ಅಂದರೆ  ನೀರನ್ನು ಗಂಟಲಲ್ಲಿ  ತುಂಬಿಕೊಂಡ ಅಪೂರ್ವ ಧ್ವನಿ ಕೇಳಿಸಿತು. ಜೊತೆಗೆ ಮರಿಗಳ ಕೂಗೂ! ಸಂತಸದಿಂದ ಮಾತೇ ಹೊರಡಲಿಲ್ಲ. ಅಲ್ಲಿಗೆ ಇಷ್ಟು ದಿನ ರಾತ್ರಿಯೆಲ್ಲಾ ಶೀತವಾದವರಂತೆ ಕೂಗಿ ಸತಾಯಿಸಿದ್ದು ಇದೇ ಹುಂಡುಕೋಳಿ ಎನ್ನುವುದು ಖಚಿತವಾಯಿತು. ಆದರೆ ಅದು ರಾತ್ರಿಯ  ಹೊತ್ತು ಯಾಕೆ ಕ್ವಾಕ್‌ ಕ್ವಾಕ್‌ ಎಂದು ಒಂದೇ  ಲಯದಲ್ಲಿ ನಿರಂತರ ಕೂಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಕಿಟಕಿಯಿಂದ ಈ ಕಳ್ಳನ ಆಪ್ತ ಸ್ವರವನ್ನು ಒಂದಷ್ಟು ರೆಕಾರ್ಡ್  ಮಾಡಿಟ್ಟೆ. ಕುತೂಹಲದಿಂದ ಹುಂಡುಕೋಳಿಯ ವಾಸದ ಪ್ರದೇಶದ ಕುರಿತು ತೇಜಸ್ವಿಯವರ ‘ಹಕ್ಕಿಪುಕ್ಕ’ ಪುಸ್ತಕ ಹುಡುಕಿ ನೋಡಿದಾಗ ‘ಜೌಗು ಪ್ರದೇಶದ ಸುತ್ತಮುತ್ತಲಿನ ಪೊದೆಗಳೆಡೆಯಲ್ಲಿ ಮತ್ತು ಜೊಂಡಿನ ಸಂದುಗೊಂದುಗಳಲ್ಲಿ ಹಗುರ ಹೆಜ್ಜೆಗಳನ್ನಿಡುತ್ತಾ ನಡೆದಾಡುವ ಚುರುಕಾದ ಪಕ್ಷಿ’, ‘ನೀರಿನಲ್ಲಿ ಈಜಾಡುವ ಪಕ್ಷಿಯಲ್ಲದಿದ್ದರೂ ಇದರ ಓಡಾಟ ಮತ್ತು ಆಹಾರನ್ವೇಷಣೆಯಲ್ಲಾ ನೀರಿನ ಹತ್ತಿರವೇ. ಸಂಜೆ ಹೊತ್ತಿನಲ್ಲಿ ಕೇದಿಗೆ ಪೊದೆಯೊಳಗೆ ಕುಳಿತು ಕರ‍್ರೊ ಕೊಕ್‌ ಕೊಕ್ ಎಂದು ಅವಿರತ ಕೂಗುತ್ತದೆ’ ಎಂಬ ಅಮೂಲ್ಯ ಮಾಹಿತಿ ಸಿಕ್ಕಿತು. ಸುತ್ತಮುತ್ತಲ ಹಾಡಿಗಳ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ಈ ಪ್ರದೇಶದಲ್ಲಿ ಅವೀಗ ವಾಸವಾಗಿರಬಹುದು. ಹೀಗೆ ರಾತ್ರಿ ಹೊತ್ತು ನಿರಂತರವಾಗಿ ಕೊಕ್‌ ಕೊಕ್‌ ಕೂಗುವುದನ್ನು ಬೇರೊಂದು ಬಾಡಿಗೆ ಮನೆಯಲ್ಲಿ ಇದ್ದಾಗಲೂ ನಾನು ಕೇಳಿದ್ದೆ. ಆದರೆ ಅದು ಹುಂಡುಕೋಳಿ ಎಂದು ತಿಳಿದದ್ದು ಈಗಲೇ. ಲಕ್ಷ್ಮಣ ಗಿಡದಲ್ಲಿ ಕಂಡ ದಿನದಿಂದ ಇಂದಿನವರೆಗೂ ಸುಮಾರು ಎರಡು ತಿಂಗಳಿನಿಂದ ಪ್ರತೀ ರಾತ್ರಿಯೂ ಲಯಬದ್ಧವಾದ ಇದರ ಕೂಗು ನಮ್ಮನೆಯ ಸುತ್ತಲಿನ ಕಾಡಿನಿಂದ ಕೇಳಿಬರುತ್ತಿದೆ. ಬಹುಶಃ ಈ ಪ್ರದೇಶದಲ್ಲಿ ಅನೇಕ ಹುಂಡುಕೋಳಿಗಳು ಇರಬಹುದು. ಈಗೀಗ ಹಗಲುಹೊತ್ತು ಮನೆಯ ಹಿಂಬಾಗಿಲು ತೆರೆದಾಗ ಒಂದು ಜೋಡಿ ಆಗಾಗ ಹೆದರಿಕೆಯಲ್ಲಿ ಓಡಿಹೋಗುವುದು ಕಾಣುತ್ತದೆ. ಒಮ್ಮೊಮ್ಮೆ ಅವು ಮುಂಭಾಗಕ್ಕೂ ಬಂದು ಹುಲ್ಲಿನ ನಡುವೆ ಏನೋ ಮೇಯುತ್ತವೆ. ಆದರೆ ನಮ್ಮಗುಂಡ, ಕರಡಿ, ಪ್ಯಾಚಿ ನಾಯಿಮರಿಗಳು ಆಟವಾಡುತ್ತಾ ಅವುಗಳನ್ನು ಅಟ್ಟುತ್ತವೆ. ಅಂತಹ ಹೊತ್ತಿನಲ್ಲಿ ‘ಈ ಕೆಟ್ಟನಾಯಿ ಮರಿಗಳನ್ನು ಗೂಡೊಳಗೆ ಹಾಕಿಡಬೇಕು’ ಎಂದು ಸಿಟ್ಟು ಬಂದರೂ ಮತ್ತೆ ಪಾಪ ಅನ್ನಿಸಿ ಸುಮ್ಮನಾಗುತ್ತೇನೆ.

      ಬಾಲ್ಯದ ನಮ್ಮ ಮನೆಯ ಅಂಗಳ ದಾಟಿದರೆ ತೋಟ. ತೋಟದ ಬದಿಯಲ್ಲಿ ತೋಡು. ಮಳೆಗಾಲದಲ್ಲಿ ತೋಡು ತುಂಬಿ ಹರಿಯುತ್ತಿತ್ತು. ಅದಲ್ಲದೆ ಹತ್ತಿರದ ಗದ್ದೆಯಲ್ಲೂ ಬೇಸಗೆ ಹೊರತುಪಡಿಸಿ ಉಳಿದ ಕಾಲದಲ್ಲಿ ನೀರಿರುತ್ತಿತ್ತು. ಚಳಿಗಾಲದಲ್ಲಿ ತೋಡಿಗೆ ಕಟ್ಟು ಹಾಕಿದಾಗಲೂ ನೀರು ತುಂಬಿಕೊಂಡಿರುತ್ತಿತ್ತು. ಆಗೆಲ್ಲ ಸಂಜೆಹೊತ್ತು ಹುಂಡುಕೋಳಿ  ತನ್ನ ವಿಶಿಷ್ಟ ಸ್ವರದಲ್ಲಿ ಕೂಗಿದಾಗ ಆಚೆಮನೆ ದೊಡ್ಡಮ್ಮ “ಅಗಣಿ ಮಕ್ಳೇ, ಹುಂಡ್‌ಕೋಳ್ಹಕ್ಕಿ ಮಗಿನ್ ಮೀಸತ್ತ್ ಕಾಣಿ”  ಎನ್ನುತ್ತಿದ್ದರು. ನನಗಂತೂ ಹುಂಡುಕೋಳಿಯ ಸ್ವರದಲ್ಲಿ ಸಾಕ್ಷಾತ್ ಜೋಗುಳ ಹಾಡಿ ಮಗುವನ್ನು ಮೀಯಿಸಿ ತಟ್ಟಿ ಮಲಗಿಸುವ ಮುದ್ದೇ ಕೇಳಿದಂತಾಗುತ್ತಿತ್ತು. ಈಗಲೂ ಹುಂಡುಕೋಳಿಯ ಸ್ವರ ಕೇಳಿದಾಗೆಲ್ಲ ಅದೇ ಕಲ್ಪನೆ ಮರಳುವುದು ವಿಶಿಷ್ಟ ನೊಸ್ಟಾಲ್ಜಿಯಾ! ಹುಂಡುಕೋಳಿಯ ಗರಿಯ ಸ್ಲೇಟಿನ ಬಣ್ಣವಾಗಲಿ, ಅದರ ನೀಳ ಕಾಯ, ಜಾಳು ನಡಿಗೆಯ ಗತ್ತಾಗಲೀ, ಕತ್ತನ್ನು ಬಳುಕಿಸುವ ಕೊಂಕಾಗಲೀ, ಅದು ಕಾಣಿಸುವ ನೀರಿನ ಪರಿಸರವಾಗಲಿ ಎಲ್ಲವೂ ಬಾಲ್ಯದ ನೊಸ್ಟಾಲ್ಜಿಯಾವೇ ಅನಿಸುವುದಕ್ಕೆ ನಾನು ಬೆಳೆದ ಹಳ್ಳಿಯ ಪರಿಸರವೂ ಕಾರಣವಿರಬಹುದು.

         ಜೂನ್‌ನಿಂದ ಅಕ್ಟೋಬರ್‌ವರೆಗೆ ಕೆರೆದಡದ ಪೊದೆಗಳಲ್ಲಿ, ಜೊಂಡಿನಲ್ಲಿ ಗೂಡು ಮಾಡಿ ಮೊಟ್ಟೆಯಿಡುವ ಹುಂಡುಕೋಳಿ ಸಣ್ಣ ಸದ್ದು ಕೇಳಿದರೂ ಓಡಿ ಹೋಗುವ ಸಂಕೋಚದ, ಹೆದರಿಕೆಯ ಹಕ್ಕಿ. ಸಾಮಾನ್ಯವಾಗಿ ಎಲ್ಲಾ ಪ್ರಾಣಿ ಪಕ್ಷಿಗಳೂ ಅಷ್ಟೇ; ಮನುಷ್ಯನ ಸುಳಿವು ಸಿಕ್ಕೊಡನೆ ಪರಾರಿಯಾಗುತ್ತವೆ. ಅವುಗಳ ದುರ್ಬಲತೆ, ಅಸಹಾಯಕತೆ ಮತ್ತು ನಿಸರ್ಗ ಸಹಜ ಮುಗ್ಧತೆಯನ್ನು ಮನುಷ್ಯರಾದ ನಾವು ದುರುಪಯೋಗ ಪಡಿಸಿಕೊಂಡಿದ್ದೇವೆ. ನಮಗೆ ಅರಿವಾಗಬೇಕಾದದ್ದೆಂದರೆ  ಹುಂಡುಕೋಳಿ ನಿಸರ್ಗದ ಸರಪಳಿಯಲ್ಲಿ ಅತ್ಯಗತ್ಯ; ಆದರೆ ಮನುಷ್ಯರಾದ ನಮಗೆ ಪ್ರಕೃತಿಯಲ್ಲಿ ಅಂತಹ ಪ್ರಾಶಸ್ತ್ಯ ಇಲ್ಲ ಎನ್ನುವುದು!

     ಬೇಸಗೆಯ ದಿನಗಳಲ್ಲಿ ಧಗೆ, ಉರಿ ಅನ್ನಿಸಿ ಕಾಡುವ ನಮ್ಮ ಮನೆಯ ಸುತ್ತಲಿನ ಪರಿಸರವೂ ಸಂಜೆ-ರಾತ್ರಿಯಾದೊಡನೆಯೇ ಪವಾಡ ಸದೃಶವೆಂಬಂತೆ ಬದಲಾಗುತ್ತದೆ! ಈಗಂತೂ ಮಳೆಗಾಲದ ತಂಪು, ಥಂಡಿ ಆವರಿಸಿದೆ. ಅದೃಷ್ಟವಿದ್ದರೆ ರಾತ್ರಿ ಒಮ್ಮೊಮ್ಮೆಗುಮ್ಮನ ದನಿಯೂ ಕೇಳಿಸಿ ರೋಮಾಂಚನಗೊಳಿಸುವುದಿದೆ!  ಹುಂಡುಕೋಳಿಯ ಕೊಕ್‌ ಕೊಕ್ ನಾದವಂತೂ ಕಾಡೇ ನುಡಿಗೊಟ್ಟಂತೆ ಕಾಣಿಸುತ್ತದೆ. ಆದರೆ ಅದು ರಾತ್ರಿಗಳಲ್ಲಿ ಯಾವ ಕಾರಣಕ್ಕೆ ಹಾಗೆ ಎಡೆಬಿಡದೆ ಕೂಗುತ್ತದೆ ಎನ್ನುವುದು ನಿಗೂಢವಾಗೇ ಉಳಿದಿದೆ!


ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

ನಾಯಿಕುರ್ಕನ ನೆರಳಿನಲ್ಲಿ

Leave a Reply

Back To Top