ಜಸ್ಟ್ ಮಾತ್ ಮಾತಲ್ಲಿ

ಲಲಿತ ಪ್ರಬಂಧ

ಜಸ್ಟ್ ಮಾತ್ ಮಾತಲ್ಲಿ

ಜ್ಯೋತಿ ಡಿ ,ಬೊಮ್ಮಾ.

ನುಡಿದರೆ ಮುತ್ತಿನ ಹಾರದಂತಿರಬೇಕೆಂಬ ಬಸವಣ್ಣನ ವಾಣಿಯನ್ನು ನಾವೆಷ್ಟು ಅನುಸರಿಸುತ್ತಿರುವೆವೋ ಅದು ನಮಗೆ ಬಿಟ್ಟದ್ದು.ಮಾತುಗಳು ಎಷ್ಟು ಹತ್ತಿರ ತರಬಲ್ಲವೋ ಅಷ್ಟೇ ವೇಗವಾಗಿ ದೂರಗೊಳಿಸಲು ಬಲ್ಲವು. ಮಾತು ಬಲ್ಲವನಿಗೆ ಜಗಳವಿಲ್ಲವೆಂಬ ಗಾದೆಯೇ ಇದೆ ಅಲ್ಲವೆ .

ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಗೆಳತಿಯರು ಬಹಳ ಮಾತಾಡುತ್ತೆವೆಂದು ಇಬ್ಬರ ಹುಡುಗಿಯರ ನಡುವೆ ಒಬ್ಬ ಹುಡುಗನನ್ನು ಕೂಡಿಸುತಿದ್ದರು. ಆಗ ಹುಡುಗರೊಂದಿಗೆ ಮಾತಾಡಲು ನಮಗೆಲ್ಲ ಸಂಕೋಚವಾಗುತಿತ್ತು. ಒಂದು ಹುಡುಗ ಮತ್ತು ಹುಡುಗಿ ಸ್ನೇಹಿತರಾಗಿರಬಲ್ಲರೂ ಎಂದು ಉಹಿಸದ ದಿನಗಳವು . ಕ್ಲಾಸ್ ನಲ್ಲಿ ಸದಾ ಗುಸುಗುಸು ಮಾತಾಡುವ ನಾವು ನಡುವೆ ಒಬ್ಬ ಹುಡುಗ ಬಂದದ್ದೆ ಗಪ್ ಚಿಪ್ ಬಾಯಲ್ಲಿ ಬೆಲ್ಲ ಇಟ್ಟುಕೊಂಡತೆ ಮೌನವಾಗುತಿದ್ದೆವು. ಪಾಪ ನಡುವೆ ಕುಳಿತ ಹುಡುಗ ಅಡಕತ್ತರಿಯಲ್ಲಿ ಸಿಕ್ಕಿಕೊಂಡತೆ ಚಡಪಡಿಸುತಿದ್ದ.ಸ್ನೇಹಿತರ ಕೊಂಕು ನೋಟ ಎದುರಿಸಲಾರದೆ , ಅಕ್ಕಪಕ್ಕ ಕುಳಿತ ಹುಡುಗಿಯರೊಂದಿಗೂ ಮಾತಾಡಲಾರದೆ ಫಜೀತಿ ಅನುಭವಿಸಿದ್ದಿದೆ .ನಡುವೆ ಹುಡುಗನನ್ನು ತಂದು ಕೂಡಿಸುವ ಪನಿಶ್ ಮೆಂಟ್ ಗೆ ಅಂಜಿಯೇ ನಾವು ಕ್ಲಾಸ್ ಲ್ಲಿ ಮಾತಾಡುತ್ತಿರಲಿಲ್ಲ. ಕಾಲ ಬದಲಾಗುತಿದ್ದಂತೆ ಈಗ ನಾನು ಕೋ ಎಜುಕೇಶ್ ಗೆ ಪ್ರಾಮುಖ್ಯತೆ ಕೊಡುತ್ತೆನೆ. ಹುಡುಗ ಹುಡುಗಿಯರ ನಡುವೆಯು ಸ್ನೇಹವಿರಲೇಬೇಕು .ಎಲ್ಲಾ ಸ್ನೇಹಕ್ಕೂ ತಪ್ಪು ವಾಖ್ಯಾನ ಕೊಡುವ ಅಗತ್ಯವಿಲ್ಲ.ಒಂದು ಗಂಡು ಮತ್ತು ಹೆಣ್ಣು ಆತ್ಮೀಯ ವಾಗಿ , ಮುಕ್ತವಾಗಿ ,ಸ್ನೇಹವನ್ನು ಹೊಂದಿದ್ದೆ ಆದಲ್ಲಿ ಅದನ್ನು ನೋಡುವ ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕು.

ಮಾತನಾಡುವದು ಅವರವರ ಸ್ವಭಾವದ ಮೇಲೆ ಅವಲಂಬಿಸಿರುತ್ತದೆ . ಕೆಲವರು ಅತಿ ಮಾತುಗಾರರು , ಕೆಲವರು ಮಿತಭಾಷಿಗಳು. ಕೆಲವರು ಹಿಂದುಮುಂದು ನೋಡದೆ ಮಾತಾಡಿದರೆ ಕೆಲವರು ಅಳೆದು ತೂಗಿ ಮಾತಾಡುತ್ತಾರೆ. ಕೆಲವರಿಗೆ ದುಃಖ ದುಗುಡವಾದಾಗ ಮಾತಾಡಿ ಹೇಳಿಕೊಂಡು ಹಗುರಾಗುತ್ತಾರೆ . ಮತ್ತೆ ಕೆಲವರು ಮೌನವಾಗಿದ್ದುಕೊಂಡೆ ಅಂತಹ ಸಂದರ್ಬ ಎದುರಿಸತ್ತಾರೆ. ಒಟ್ಟಿನಲ್ಲಿ ಮಾತುಗಳು ಅವರವರ ಆಸ್ತಿ.ಅದನ್ನು ಅವರು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳಬಹುದು . ಮಾತು ಮನವನ್ನು ಎಷ್ಟು ಮುದಗೊಳಿಸುವದೋ ಅಷ್ಟೇ ಘಾಸಿಗೊಳಿಸುವದು ಕೂಡಾ. ಈಗೀಗ ಮಾತಿನ ಇರಿತದ ಬಾಣಗಳೆ ಹೆಚ್ಚಾಗುತ್ತಿವೆ. ತಮ್ಮ ಜಾಣ್ಮೆಯನ್ನು ಮಾತಿನಲ್ಲಿ ತೋರಿಸುವ ಭರದಲ್ಲಿ , ಎದುರಿನವರ ತೇಜೋವಧೆ ಮಾಡಲು ಅಥವಾ ಟೀಕಿಸಲು ಹೇಗೆಬೇಕೋ ಹಾಗೆ ಉಪಯೋಗಿಸಿಕೊಳ್ಳುವವರೆ ಹೆಚ್ಚು. ಅದಕ್ಕೆ ನನಗೆ ಅನಿಸತ್ತದೆ ಒಮ್ಮೊಮ್ಮೆ , ಮಾತಿಗೂ ತೆರಿಗೆ ಇರಬೆಕಿತ್ತೆಂದು .ಆಗ ಬೇಕಿದ್ದಷ್ಟೆ ಉಪಯೋಗಿಸಬಹುದಿತ್ತು.

ಎಷ್ಟೋ ಸಲ ಅಂದುಕೊಳ್ಳುತ್ತೆನೆ ಮಿತವಾಗಿ ಮಾತಾಡಬೇಕು. ಮೆಲ್ಲಗೆ ಮಾತಾಡಬೇಕು. ಯಾರಿಗೂ ಪುಕ್ಕಟ್ಟೆ ಸಲಹೆ ಕೊಡಬಾರದು.ಯಾರ ಬಗ್ಗೆಯೂ ವಯಕ್ತಿಕ ಪ್ರಶ್ನೆ ಕೆಳಬಾರದೆಂದು.

ಆದರೆ ಮನೆಗೆ ಅಥಿತಿಗಳು ಬಂದರೆ ಮುಕ್ತವಾಗಿ ಮಾತಾಡದೆ ಮೇಲಿನ ನಿಯಮ ಪಾಲುಸುತ್ತ ಸುಮ್ಮನೇ ಬಂದವರ ಮುಖ ನೋಡುತ್ತ ಕೂಡಲಾಗುತ್ತದೆಯೇ .ಕೇವಲ ತಿಂಡಿ ತಿನ್ನಿ , ಊಟ ಮಾಡಿ ಅಂದರೆ ಸತ್ಕಾರ ಮಾಡಿದಂತಾಗುತ್ತದೆಯೇ , ಬಂದವರೊಡನೆ ಆತ್ಮೀಯವಾಗಿ ಮಾತಾಡಬೇಕು.ವಯಕ್ತಿಕ ವಿವರಗಳೊಂದಿಗೆ ಆತ್ಮೀಯತೆ ಮೂಡಲು ಸಾದ್ಯ. ಕಡಿಮೆ ಮಾತಾಡಬೇಕು ಎಂದುಕೊಂಡು ಬಂದವರೊಡನೆ ಮಾತಾಡದೆ ಕುಳಿತರೆ ಅಲ್ಲಿ ಅಪಾರ್ಥಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ.

Buy Moment Of Silence Painting at Lowest Price by Deepak Rathore

ಮೊಬೈಲ್ ನಲ್ಲಿ ಅತಿ ಮಾತಾಡುವ ಗೀಳು ವ್ಯಕ್ತಿಗಳು ಪರಸ್ಪರ ಎದುರುಬದುರಾದಾಗ ಮಾತಿಗಾಗಿ ತಡಕಾಡುವಂತಾಗುತ್ತಿದೆ. ಮನೆಯಲ್ಲಿರುವಾಗ ಒಂದೂ  ಮಾತಾಡದ ದಂಪತಿಗಳು ಮನೆ ಹೊರಗೆ ಹೋದ ತಕ್ಷಣ ಪೋನ್ ನಲ್ಲಿ ಮಾತಾಡ ತೊಡಗುತ್ತಾರೆ. ಮುಂಜಾನೆಯಿಂದ ಮನೆಯಲ್ಲಿ ತಿಂಡಿ ತಿನಿಸು ಮುಗಿಸಿ ಆಫಿಸ್ ಅಥವಾ ಅಂಗಡಿಗೆ ಹೋದ ತಕ್ಷಣವೇ  ಹೆಂಡತಿಗೆ ಫೊನ್ ಮಾಡುತ್ತಾರೆ. ಇನ್ನೂ ಮನೆಗೆ ಬರುವವರೆಗೂ ಪೋನ್ ನಲ್ಲೆ ಸಂಭಾಷಣೆ. ಮನೆಗೆ ಬಂದ ತಕ್ಷಣ ಮತ್ತೆ ಇಬ್ಬರು ಪೋನ್ ಅಥವಾ ಟಿ ವಿ ಯಲ್ಲಿ ವ್ಯಸ್ತರು. ನನ್ನ ಸ್ನೇಹಿತರು ಬಹಳ ಜನ ನಾನು ಅವರಿಗೆ ಫೊನ್ ಮಾಡುವದೆ ಇಲ್ಲವೆಂದು ಆರೋಪಿಸುತ್ತಾರೆ.ನನಗೆ ಇರುವ ಸ್ನೇಹಿತರಾರು  ದೂರದೂರ ಊರುಗಳಲಿಲ್ಲ.ಇಲ್ಲೆ ಅಕ್ಕಪಕ್ಕದಲ್ಲಿ ಅಥವಾ ಸ್ವಲ್ಪ ದೂರದ ಊರುಗಳಲ್ಲಿರುವವರು. ನಾನು ಫೋನ್ ನಲ್ಲಿ ಮಾತಾಡದಿದ್ದರು ಅವರು ಇದ್ದ ಸ್ಥಳಗಳಿಗೆ ಹೋದಾಗ ಅವರನ್ನು ಖುದ್ದಾಗಿ ಭೆಟಿಯಾಗುತ್ತೆನೆ.ಅದು ಸ್ವಲ್ಪವೇ ಸಮಯವಾದರು ಸರಿ ಗೆಳೆಯರು ಅಥವಾ ಪರಿಚಿತರನ್ನು ವಯಕ್ತಿಕ ವಾಗಿ ಭೆಟಿಯಾಗಿ ಮಾತಾಡುವದು ನನಗಿಷ್ಟ. ಮುಖ ನೋಡಿಕೊಳ್ಳದೆ ಗಂಟೆಗಟ್ಟಲೆ ಪೋನ್ ನಲ್ಲಿ ಮಾತಾಡಿಕೊಳ್ಳುವದು ನನಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಪೋನ್ ಇದರ ಸಂದರ್ಬದಲ್ಲಿ ಬೇರೆ ಬೇರೆ ಊರುಗಳಲ್ಲಿರುವ ಗೆಳತಿಯರೊಂದಿಗೆ ಪತ್ರವ್ಯವಹಾರ ಇಟ್ಟುಕೊಳ್ಳುತಿದ್ದೆ. ಬರೆದಷ್ಟು ಭಾವನೆಗಳ ಹರಿವು ಹೆಚ್ಚುತಿತ್ತು.ಪೋನ್ ಬಂದ ಮೇಲೆ ಮಾತುಗಳು ಯಾಂತ್ರಿಕವಾಗತೊಡಗಿವೆ.  ಒಬ್ಬೊರ ಮನೆಗೊಬ್ಬರು ಹೊಗದಂತೆ ತಮ್ಮ ತಮ್ಮ ಮನೆಯಿಂದಲೇ ಪೋನ್ ನಲ್ಲಿ ಗಂಟೆಗಟ್ಟಲೆ ಕೊರೆಯುವದರಿಂದ ಸ್ನೇಹಸಂಭಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡುವದೆ ಹೆಚ್ಚು.

ಇಬ್ಬರು ವ್ಯಕ್ತಿಗಳು ಮಾತಾಡುತ್ತಿರುವಾಗ ವಿಷಯ ಸಾಮಾನ್ಯವಾಗಿ ಮೂರನೆ ವ್ಯಕ್ತಿಯ ಬಗ್ಗೆಯೆ ಆಗಿರತ್ತದೆ. ನಾವು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾತಾಡುತಿದ್ದೆವೆಂಬ ಅರಿವಾಗದಷ್ಟು ಸುಲಭವಾಗಿ ಅವರ ಬಗ್ಗೆ ಮಾತಾಡುತ್ತೆವೆ. ಮಾತಾಡುತ್ತ ಕೆಲ ವಿಷಯ ಗಳು ವಿನಿಮಯವಾಗುತ್ತವೆ. ಯಾವ ವ್ಯಕ್ತಿಯ ಕುರಿತು ಮಾತಾಡಿದ್ದೆವೊ ಮತ್ತೆ  ಆ ವ್ಯಕ್ತಿಯ ಜೊತೆಗೆ ಮಾತಾಡುವಾಗ ಅವರಿವರು ಅಂದ ವಿಷಯಗಳು ಪುನರಾವರ್ತನೆ ಯಾಗುತ್ತವೆ .ಅವರು ನಮಗೆ ಹೇಳಿದ ವಿಷಯ ನಮಗರಿವಿಲ್ಲದೆ ಸರಳವಾಗಿಯೆ ಮತ್ತೊಬ್ಬರಿಗೆ ಹೇಳಿದಾಗ ಮೊದಲಿನವರಿಗೆ ಅದು ತಿಳಿದಾಗ ಅಲ್ಲಿ ಸಂಬಂಧ ದಲ್ಲಿ ಬಿರುಕುಂಟಾಗುತ್ತದೆ   .ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮೊಳಗೆ ಇರಲಾಗದ ಯಾವದೊ ಒಂದು ವಿಷಯ ಮತ್ತೊಬ್ಬರಿಗೆ ಹೆಳಿದಾಗ ಅದು ಅವರು ಇನ್ನೊಬ್ಬರಿಗೆ ಹೆಳದಿರಲಿ ಎಂದು ಬಯಸುವದು ಎಷ್ಟು ಸರಿ . ವಿಷಯ ಆ ವ್ಯಕ್ತಿಯ ಅತ್ಯಂತ ವಯಕ್ತಿಕತೆಗೆ ಸಂಭಂಧ ಪಟ್ಟದ್ದೆ ಆದರೆ ಅದನ್ನು ಆದಷ್ಟು ಹೊರಗೆಡಹದಂತೆ ಕಾಪಿಟ್ಟುಕೊಳ್ಳುವದು ಸೂಕ್ತ. ,ಬೆರೆಯವರಂದದ್ದು ಮತ್ತಾರದೊ ಬಾಯಿಂದ ಅವರಿಗೆ ತಿಳಿದರೆ ಗೊಂದಲಗಳು ಸಂಬಂಧಗಳನ್ನು ಕದಡಿಸುತ್ತವೆ. ಅವರು ಅಂದದ್ದೊಂದು , ಇವರು ಕೇಳಿಸಿಕೊಂಡಂದ್ದೊಂದು , ಮತ್ತೊಬ್ಬರು ತಿಳಿದುಕೊಂಡದ್ದೊಂದು . ಇವು ನಮ್ಮ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಘಟಿಸುತ್ತವೆ. ಹೆಚ್ಚು ಮಾತಾಡಿದಷ್ಟು ನೆಮ್ಮದಿ ಹಾಳು . ಜಸ್ಟ ಮಾತ್ ಮಾತ್ ಲ್ಲಿ ಸಂಭವಿಸುವ ಜಗಳಗಳು ಪರಸ್ಪರರು ಮಾತೆ ಬಿಡುವಷ್ಟು ವಿಕೋಪಕ್ಕೆ ಹೊಗುವದುಂಟು.

ಸಾಧುಸಂತರು ತಿಂಗಳಲ್ಲಿ ಕೆಲದಿನ ಮೌನವೃತ ಕೈಗೊಳ್ಳುತ್ತಾರಂತೆ . ಇಡೀ ದಿನ ಮಾತಾಡದೆ ಮೌನವಾಗಿ  ಧ್ಯಾನ ದಲ್ಲಿದ್ದು   ಆತ್ಮಬಲವನ್ನು ಹೆಚ್ವಿಸಿಕೊಳ್ಳುತ್ತಾರಂತೆ. ಒಂದು ಸಲ ನಾನು ಇಡೀ  ದಿನ ಮೌನವಾಗಿರಲು ನಿರ್ದರಿಸಿದೆ. ಮೊದಲಿನ ದಿನವೆ ಮನೆಯವರಿಗೆಲ್ಲ ಹೇಳಿ ಯಾರು ಮಾತಾಡಿಸಕೂಡದೆಂದು ತಿಳಿಸಿದೆ ( ಎಲ್ಲರೂ ಸಂತೋಷದಿಂದ ಒಪ್ಪಿದರು ) . ಮುಂಜಾನೆ ಎದ್ದ ತಕ್ಷಣ ಎಲ್ಲರಿಗೂ ಎಬ್ಬಿಸಿ ಅವರವರ ಕೆಲಸಗಳನ್ನು ಅವರಿಂದ ಮಾಡಿಸುತ್ತ ಸಮಯಕ್ಕೆ ಸರಿಯಾಗಿ ಎಲ್ಲಾ ಸಾಗಿದರೆ ಮಾತ್ರ ನೆಮ್ಮದಿ ನನಗೆ. ನನ್ನ ಶಬ್ದವಿಲ್ಲದೆ ಹಾಸಿಗೆಯಿಂದ ಏಳದೆ ಬಿದ್ದಿರುವ ಮನೆಯವರನ್ನೆಲ್ಲ ಮಾತಿಲ್ಲದೆ ತಿವಿದು ತಿವಿದು ಎಬ್ಬಿಸಬೇಕಾಯಿತು .ಮುಂದೆ ಮಾತಿಲ್ಲದೆ ಇಶಾರೆಯ ಮೂಲಕ ಸಾಯಂಕಾಲದ ವರೆಗೂ ಏಗಿದ್ದಾಯಿತು.ಇನ್ನೇನು ಮಾತುಗಳು ಒಳಗಿರಲಾರೆನೆಂದು ಬೊರ್ಗರೆಯುತ್ತ ನುಗ್ಗಿದವು.ಅರ್ದದಿನವೂ ಮೌನವಾಗಿರಲಾಗದೆ , ನಾನು ಮಾತಾಡದಿದ್ದರೆ ಲೋಕವೇ ಮುಳುಗಿಹೊಗುತ್ತದೆಯೆನೋ ಎಂದು ಭಾವಿಸಿಕೊಂಡು , ತಾನು ಮಾತಾಡದೆ ಮನೆಯಲ್ಲಿ ಎನೆಲ್ಲ ಅಸ್ತವ್ಯಸ್ತ ಸಂಬವಿಸಿದೆ ಎಂದುಕೊಳ್ಳುತ್ತ ಇನ್ನೆಂದೂ ಮೌನವೃತ ಮಾಡಲಾರೆನೆಂದು ನಿರ್ದರಿಸಿದೆ .

ಯಾವಾಗಲೂ ಮೌನವಾಗಿ ನಿರ್ಲಿಪ್ತರಾಗಿರುವದು ಒಂದು ರೀತಿಯ ನೀರಸತೆಗೆ ಕಾರಣವಾಗಿರುತ್ತದೆ. ಗಳಗಳ ಮಾತಾಡುವರು ಬಹಳ ಜನರ ಸ್ನೇಹ ಸಂಪಾದಿಸಿಕೊಳ್ಳುತ್ತಾರೆ. ಹೆಚ್ಚು ಮಾತಾಡದವರಿಗೆ ಸ್ನೇಹಿತರು ಕಮ್ಮಿಯೆ. ಬೊರಿಂಗ್ ಸ್ನೇಹವನ್ನು ಯಾರು ಬಯಸುವದಿಲ್ಲ.  ಮಾತು ಕಡಿಮೆಯಾಡುವವರಿಗೆ ಅಹಂಕಾರಿ ಪಟ್ಟ ಕೊಟ್ಟುಬಿಡುತ್ತಾರೆ. ಪರಿಚಯದವರು ಸಿಕ್ಕಾಗ ಮೊದಲು ವಿನಿಮಯವಾಗುವ ಮಾತು ಆರಾಮ ಎಂಬುವದೆ ಆಗಿರುತ್ತದೆ. ಆದರೆ ನಾನು ಯಾರಿಗೂ ಹೀಗೆ ಕೆಳಲಾರೆ.ಎದುರಿಗೆ ಸೌಖ್ಯ ವಾಗಿ ಕಾಣುತ್ತಿರುವರಿಗೆ ಮತ್ತೆ ಸೌಖ್ಯ ವೇ ಎಂದು ಕೆಳುವದೇನು..! ಅದಕ್ಕೆ ಅವರನ್ನು ನೋಡಿ ಮುಗಳ್ನಕ್ಕು ಬೇರೆ ಮಾತುಗಳಿಗಾಗಿ ತಡಕಾಡುವಷ್ಟರಲ್ಲೆ ಅವರು ನನಗೆ ಅಹಂಕಾರಿ ಎಂಬ ಪಟ್ಟ ಕೊಟ್ಟಾಗಿರುತ್ತದೆ.ಯಾಕೋ ಮಾತುಗಳು ಯಾಂತ್ರಿಕವೆನಿಸತೊಡಗಿ ಮೌನವೆ ಹೆಚ್ಚು ಇಷ್ಟವಾಗುತ್ತಿದೆ. ನನ್ನ ಪರಿಚಯದ ಮಹಿಳೆಯೊಬ್ಬರಿಗೆ ವಿಪರೀತ ಮಾತಾಡುವ ಹಂಬಲ. ಕಂಡ ಎಲ್ಲರನ್ನೂ ಮಾತಿಗೆ ಎಳೆಯುತ್ತಾರೆ. ಅವರೊಂದಿಗೆ ಕುಳಿತು ಮಾತಾಡಿದರೆ ಸಾಕು ಅಂತವರಿಗೆ ಯಾವ ಸಹಾಯ ಮಾಡಲು ಸದಾ ಸಿದ್ದ.  ಬೆರೆಯವರಿಗೆ ಮಾತಾಡಲು ಅವಕಾಶವೇ ಕೊಡದಂತೆ ಸದಾ ತಮ್ಮ ಪುರಾಣವೇ ಕೊರೆಯುತಿದ್ದರೆ ಕೆಳುಗರಿಗಾದರು ಎಷ್ಡು ತಾಳ್ಮೆ ಇರುತ್ತದೆ.ಅವರ ಮಾತಿಗೆ ತಾಳ ಹಾಕುವವರಿಗೆ ಮಾತ್ರ ಮನ್ನಣೆ ಕೊಡುವರವರು. ಅವರು ಹೇಳುವ ವಿಷಯಗಳ ಬಗ್ಗೆ ಕೆಳುಗರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಸರಿ ,  ವಿರೋಧ ಪ್ರತಿಕ್ರಿಯೆ ಬಂತೋ ಅಂತವರಿಗೆ ಗುಂಪಿನಿಂದ ಗೆಟ್ ಪಾಸ್. ಸದಾ ಕುಳಿತು ಹರಟೆ ಹೊಡೆಯುವ ಗಂಪುಗಳಲ್ಲಿ ಭಿನ್ನಾಭಿಪ್ರಾಯಗಳು ಬಹು ಬೇಗ ತಲೆದೂರುತ್ತವೆ.

ನನಗೆ ಮಾತುಗಳು ಆಡುವದಕ್ಕಿಂತ ಕೇಳುವದರಲ್ಲಿ ಆಸಕ್ತಿ ಹೆಚ್ಚು. ಸಾಹಿತ್ಯಿಕ ಸಮಾರಂಭಗಳಲ್ಲಿ ವಾಗ್ಮಿ ಗಳ ಮಾತುಗಳನ್ನು ಕೆಳುವ ಇಚ್ಚೆ ನನಗೆ ಯಾವಾಗಲೂ ಇರುತ್ತದೆ. ಆದರೆ ಈಗಿನ ನುಡಿಜಾತ್ರೆಗಳಲ್ಲಿ  ನುಡಿಗಿಂತ ಬರಿ ಜಾತ್ರೆಯ ಅಬ್ಬರವೆ ಹೆಚ್ಚು. ಕಾರ್ಯಕ್ರಮ ಆಯೋಜಿಸಿ ದವರು ಭಾಷಣಕಾರು ಭಾಷಣ ಶುರುಮಾಡಿದ್ದೆ ತಡ ಮುಗಿಸಬೆಕೆಂದು ಚೀಟಿ ರವಾನಿಸುತ್ತಾರೆ.ಬೇಗ ಕಾರ್ಯಕ್ರಮ ಮುಗಿಸುವ ತರಾತುರಿ ಅವರಿಗೆ. ಕೆಲವರು ಮಾತಾಡುವ ಅವಕಶ ಸಿಕ್ಕರೆ ಸಾಕು ಸುಮ್ಮನೇ ಕೊರೆಯತೊಡಗುತ್ತಾರೆ. ರಾಜಕಾರಣಿಗಳಂತೂ ಸದಾ ತಮ್ಮ  ಆತ್ಮರತಿ ಯಲ್ಲೆ ವ್ಯಸ್ತರು.

ಸುತ್ತಲೂ ಹಬ್ಬಿರುವ  ಶಬ್ದದ ಸಂತೆಯೊಳಗೆ ಹಿತವಾಗಿ ಮಿತವಾಗಿ ಪ್ರೀತಿಯಿಂದ ಆಡುವ ಮಾತುಗಳು ಮಾತ್ರ   ಮನಸ್ಸಿಗೆ ಹತ್ತಿರ ವಾಗುತ್ತವೆ.

————————–

ಜ್ಯೋತಿ  ಡಿ ,ಬೊಮ್ಮಾ.

One thought on “ಜಸ್ಟ್ ಮಾತ್ ಮಾತಲ್ಲಿ

Leave a Reply

Back To Top