ಅಂಕಣ ಸಂಗಾತಿ

ಗಜಲ್ ಲೋಕ

ಮಧುರಾ ಮೂರ್ತಿಯವರ

ಗಜಲ್ ಅಂಗಳದಲ್ಲಿ

..

ಹಲೋ ನನ್ನ ಗಜಲ್ ಕನಸುಗಳೆ… ತಮಗೆಲ್ಲರಿಗೂ ಹೃನ್ಮನದಿ ಸಲಾಮು…

ಕಾಯುವುದು, ಕನವರಿಸುವುದು ಪ್ರೇಮಿಗಳೊಂದಿಗೂ ಕಲಾರಸಿಕರ ಸ್ವತ್ತೂ ಕೂಡ ಹೌದು. ಅಂತೆಯೇ ನೀವೆಲ್ಲರೂ ಈ ವಾರವೂ ಸಹ ಗಜಲ್ ಗೋ ಒಬ್ಬರ ದರ್ಶನಕ್ಕಾಗಿ ಹಂಬಲಿಸುತಿರುವಿರಿ ಎಂದು ಬಲ್ಲೆ ನಾನು. ನಿಮ್ಮ ಇಚ್ಛೆಯಂತೆ ಇಂದು ಮತ್ತೊರ್ವ ಪ್ರತಿಭಾನ್ವಿತ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಾನು ತಮ್ಮ ಮುಂದೆ ಹಾಜರಾಗಿದ್ದೇನೆ. ಎಂದಿನಂತೆ ತಾವು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವಿರಿ ಎಂದು ನಂಬಿರುವೆ. ನಂಬಿಕೆಯೆ ಜೀವನವಲ್ಲವೇ…!!

ನಿನ್ನೆಯೆನ್ನುವುದು ಇಂದಿನ ನೆನಪಲ್ಲದೆ ಬೇರೇನೂ ಅಲ್ಲ

ನಾಳೆಯೆನ್ನುವುದು ಇಂದಿನ ಕನಸಲ್ಲದೆ ಬೇರೇನೂ ಅಲ್ಲ

ಖಲೀಲ್ ಗಿಬ್ರಾನ್

       ಬದುಕು, ಅದರಲ್ಲೂ ವಿಶೇಷವಾಗಿ ಮನುಷ್ಯನ ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಒಂದು ಅಪರೂಪದ ಅವಕಾಶವಾಗಿದೆ. ಇದು ಇಂದಿನ ವರ್ತಮಾನ ಮತ್ತು ಇರುವಿಕೆಯ ಎಲ್ಲ ಕಾಲಘಟ್ಟಗಳೂ ಸೇರಿ ಒಂದಾಗಿ ಇಂದು ಮತ್ತು ನಾಳೆ ಎಂದೆಂದಿಗೂ ಮಾನವ ಚೈತನ್ಯವನ್ನು ಹೊತ್ತು ಕೊಂಡೊಯ್ಯುವ ಹಡಗಾಗಿದೆ. ಈ ನೆಲೆಯಲ್ಲಿ ಜೀವನಕ್ಕೆ ಜೋಕಾಲಿಯನ್ನು ಒದಗಿಸುವ ಸೇತುವೆಯೆಂದರೆ ಅದು ಕಲೆ ಎನ್ನುವ ಕಾಮನಬಿಲ್ಲು. ಈ ಕಲೆಯ ಹೃದಯಭಾಗವೆಂದರೆ ಕಾವ್ಯ.‌ಈ ಕಾವ್ಯವು ಸ್ವರ್ಗದ ಕನಸನ್ನು ನರಕದ ನೋವನ್ನು ಚಿತ್ರಿಸುತ್ತದೆ. ಕಾವ್ಯವು ಓದಿಸಿಕೊಂಡು ಹೋಗುತ್ತದೆ, ತಟ್ಟನೆ ನಿಲ್ಲಿಸುತ್ತದೆ ಮತ್ತು ಯೋಚಿಸಲು ಹಚ್ಚುತ್ತದೆ. ಜೊತೆಗೆ ಅರ್ಥಕ್ಕಿಂತ ಹೆಚ್ಚಾಗಿ ಭಾವಕ್ಕೆ ನಿಷ್ಠವಾಗಿ ಇರುತ್ತದೆ. ಇಲ್ಲಿ ಇಡೀ ಮಾನವ ಜನಾಂಗವೆ ಕುಂಚಕ್ಕೆ ಕ್ಯಾನ್ವಾಸ್ ಆಗಿದೆ. ಇಂಥಹ ಕಾವ್ಯ ಪ್ರತಿ ಭಾಷೆಯ, ಪ್ರತಿ ಸಂಸ್ಕೃತಿಯ ಜೀವನಾಡಿಯಾಗಿದೆ. ಅರಬ್ ನ ಗಜಲ್’ ಅನ್ನು ಭಾರತೀಯ ಮನಸುಗಳು, ಕರುನಾಡಿನ ಕನಸುಗಳು ಪ್ರೀತಿಸುತ್ತಿರುವುದು, ಪೂಜಿಸುತ್ತಿರುವುದು ಸೌಹಾರ್ದತೆಯ ಬಂಧನವಾಗಿದೆ. ಭಾವ ಪ್ರಧಾನವಾದ ಗಜಲ್ ಗಳು ಒಂದು ಸಂಸ್ಕೃತಿಯ ಕೊಡು ಕೊಳ್ಳುವಿಕೆಯ ಭಾಗವಾಗಿ ದೇಶಗಳ ಸರಹದ್ದನ್ನು ದಾಟಿ ಬಂದಿವೆ. ಗಜಲ್ ಕೆನೆಗಟ್ಟಿ, ಶಾಯರ್ ನ ಭಾವಗಳು ಬಂಧುರಗೊಂಡಾಗ ಮಾತ್ರ ಭಾವ ಸಂಗಮವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಸಮರ್ಥನಾದಷ್ಟು ಗಜಲ್ ನವನವೀನದಂತೆ ಮೆರಗು ಪಡೆಯಲು ಸಾಧ್ಯ. ಇಂದು ಕರುನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಗಜಲ್ ಬಾಗ್ ಬನ್ ನಲ್ಲಿ ಮಾಲಿಯಾಗಿ ಗಜಲ್ ಕೃಷಿ ಮಾಡುತ್ತಿದ್ದಾರೆ. ಅಂತಹ ಅಸಂಖ್ಯಾತ ಗಜಲ್ ಪ್ರೇಮಿಗಳಲ್ಲಿ ಮಧುರಾ ಮೂರ್ತಿ ಅವರೂ ಒಬ್ಬರು!!

         ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ೩೫ ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಎಂಬ ಗ್ರಾಮದಲ್ಲಿ ಶ್ರೀಯುತ ರಾಮಕೃಷ್ಣ ಹೆಗಡೆ( ಜ್ಯೋತಿಷ್ಯ ಆಚಾರ್ಯ) ಹಾಗೂ ಕುಸುಮಾ ಹೆಗಡೆಯವರ ಮಗಳಾಗಿ ೧೯೮೭ರ ಮೇ ೨೭ರಂದು ಜನಿಸಿರುವ ಮಧುರಾ ಮೂರ್ತಿ ರವರು ಸ್ವಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೈಸ್ಕೂಲ್ ಶಿಕ್ಷಣವನ್ನು ಶ್ರೀ ಶಾರದಾಂಬಾ ಫ್ರೌಢ ಶಾಲೆಯಲ್ಲಿ ಮುಗಿಸಿ, ಕಾಲೇಜ್ ವಿದ್ಯಾಭ್ಯಾಸವನ್ನು ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರದಲ್ಲಿ ಪೂರ್ಣಗೊಳಿಸಿದರು. ನಂತರ ಯಲ್ಲಾಪುರದಲ್ಲಿ ಜನಿಸಿ ಬೆಂಗಳೂರಿನಲ್ಲಿ ಸ್ವಂತ ಸಿ ಎನ್ ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯನ್ನು ತೆರೆದಿರುವ ನರಸಿಂಹಮೂರ್ತಿ ಅವರನ್ನು ವಿವಾಹವಾಗಿ ಚೈತನ್ಯಾ, ಸಮರ್ಥ ಎಂಬ ಎರಡು ಮಕ್ಕಳ ತಾಯಿಯಾಗಿ, ಗೃಹಿಣಿಯಾಗಿ ತಮ್ಮೆಲ್ಲ ಜವಾಬ್ಧಾರಿಗಳನ್ನು ನಿರ್ವಹಿಸುತ್ತ, ಫ್ಯಾಕ್ಟರಿಯಲ್ಲೂ ನರಸಿಂಹ ಮೂರ್ತಿಯವರಿಗೆ ಸಹಕಾರ ನೀಡುತ್ತ ಕನ್ನಡ ಸಾರಸ್ವತ ಲೋಕದಲ್ಲೂ ಗುರುತಿಸಿಕೊಂಡಿದ್ದಾರೆ.

          ತಮ್ಮ ಆರನೇ ತರಗತಿಯಲ್ಲಿಯೇ ಒಂದೆರಡು ಚುಟುಕು, ಹೈಸ್ಕೂಲ್-ಕಾಲೇಜು ದಿನಗಳಲ್ಲಿ ಬೆರಳೆಣಿಕೆಯಷ್ಟು ಕವಿತೆಗಳನ್ನು ರಚಿಸಿದ ಶ್ರೀಮತಿ ಮಧುರಾ ಮೂರ್ತಿ ಅವರು ತಮ್ಮ ಬಾಲ್ಯದಿಂದಲೇ ಸಾಹಿತ್ಯ ರಚನೆಯ ಕುರಿತು ವಿಶೇಷ ಆಸಕ್ತಿಯನ್ನು ಹೊಂದಿದ್ದರು ಎಂಬುದು ತಿಳಿದು ಬರುತ್ತದೆ. ಅದರ ಫಲವೆಂಬಂತೆ ಇಂದು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಸಾಹಿತ್ಯಿಕವಾಗಿ ಸದುಪಯೋಗ ಪಡಿಸಿಕೊಂಡಿರುವ ಶ್ರೀಯುತರು ಲೇಖನಗಳೊಂದಿಗೆ ಕವನ, ರುಬಾಯಿ, ಚುಟುಕು, ಹನಿಗವನ, ಹಾಯ್ಕುಗಳು, ಭಕ್ತಿಗೀತೆ, ದೇಶ ಭಕ್ತಿಗೀತೆ, ಭಾವಗೀತೆ, ಶಿಶುಗೀತೆ, ಅಬಾಬಿಗಳನ್ನು ಬರೆಯುತ್ತಾ ಛಂದೋಬದ್ಧ ಕಾವ್ಯದಲ್ಲಿ ಷಟ್ಪದಿ ಹಾಗೂ ಮುಕ್ತಕಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಅದರೊಂದಿಗೆ ಗಜಲ್ ಕಾವ್ಯ ಪ್ರಕಾರದಲ್ಲಿಯೂ ಕೃಷಿಯನ್ನು ಮಾಡಿದ್ದು, ಈಗಾಗಲೇ “ಗೋಧೂಳಿ ಗಝಲ್” ಹಾಗೂ “ಮಧುರ ಗಝಲ್” ಎಂಬ ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ೭೦೦ಕ್ಕೆ ಹೆಚ್ಚು ಮಕ್ತಕಗಳನ್ನು ಬರೆದಿರುವ ಇವರು ಅವುಗಳನ್ನು ಹೊತ್ತಿಗೆಯ ರೂಪದಲ್ಲಿ ಹೊರತರುವ ಪ್ರಯತ್ನದಲ್ಲಿದ್ದಾರೆ. ಇವರ ಹಲವಾರು ಕವನ, ಚುಟುಕು, ಗಝಲ್, ಹನಿಗವನಗಳು ಬೇರೆ ಬೇರೆ ಪುಸ್ತಕಗಳಲ್ಲಿ ಪ್ರಕಟವಾಗಿವೆ.

        ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಶ್ರೀಯುತರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ‘ಮಧುರ ಗಜಲ್’ ಎಂಬ ಇವರ ಗಜಲ್ ಸಂಕಲನಕ್ಕೆ ಕಲಬುರಗಿಯ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ (ರಿ) ಪಾಳಾ ವತಿಯಿಂದ ೨೦೨೨ ನೇ ಸಾಲಿನ ರಾಜ್ಯ ಬಸವ ಪುರಸ್ಕಾರ ಲಭಿಸಿದೆ.

      ನಾವಾಡುವ ಮಾತುಗಳು, ಆ ಮಾತಿಗಾಗಿ ಬಳಸುವ ಶಬ್ಧಗಳು ಕಾಲಕ್ಕೆ ಅತೀತವಾದಂತವುಗಳು. ಅವುಗಳ ನಿರಂತರತೆಯ ಕುರಿತಾದ ಎಚ್ಚರವನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾವು ಅವುಗಳನ್ನು ಆಡಬೇಕು, ಜೊತೆಯಲ್ಲಿ ಬರವಣಿಗೆಯಲ್ಲಿ ಬಳಸಬೇಕು. ಈ ಹಿನ್ನೆಲೆಯಲ್ಲಿ ಗಜಲ್ ಶಬ್ಧಗಳ ದುಂದುವೆಚ್ಚ ಬಯಸದ ಅನುಪಮ ಸಾಹಿತ್ಯ ಪ್ರಕಾರ. ಇದು ಮನುಕುಲದ ಮಾನಸಿಕ ಅಂತರವನ್ನು ಕಡಿತಗೊಳಿಸುವ ಸಂಗೀತ ವೀಣೆಯಾಗಿದೆ. ಹೃದಯಗಳನ್ನು ಬೆಸೆದು ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುತ್ತ ಬಂದಿದೆ. ಈ ನಿಟ್ಟಿನಲ್ಲಿ ಗಜಲ್ ಲೋಕವು ಮನುಷ್ಯನ ಬದುಕನ್ನು ಹಸನುಗೊಳಿಸುವ ಮಂತ್ರದಂಡವಾಗಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಶ್ರೀಮತಿ ಮಧುರಾ ಮೂರ್ತಿ ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹ… ಇಲ್ಲಿನ ಅನೇಕ ಗಜಲ್ ಗಳಿಗೆ ವಸ್ತುವಾಗಿದ್ದರೂ ಪ್ರಕೃತಿಯೊಂದಿಗೆ ಸಮ್ಮಿಳಿತಗೊಳ್ಳುವ ಮತ್ತು ಪ್ರಕೃತಿಯ ಸಾಂಗತ್ಯ ಹೊಂದಿದ ಅನೇಕ ಗಜಲ್ ಗಳು ಇಲ್ಲಿವೆ. ಪ್ರೀತಿಯ ಪರಾಕಾಷ್ಠೆ,, ವಿರಹದ ಉತ್ಕಟತೆ, ನೋವು, ನಿರಾಸೆ, ಅಸಮಾಧಾನ, ಹತಾಶೆಯ ಭಾವನೆಗಳು, ಸೃಷ್ಟಿಯ ಸೊಬಗು, ಸಂಕ್ರಾಂತಿ ಹಬ್ಬ, ಊರ ಜಾತ್ರೆಯ ದಿಬ್ಬಣ, ಸಾಮಾಜಿಕ ವ್ಯವಸ್ಥೆಯ ಚಿತ್ರ, ಭ್ರೂಣ ಹತ್ಯೆಯ ಕರಾಳತೆ, ದೈವಭಕ್ತಿ…. ಎಲ್ಲವುಗಳ ಸಂಗಮ ಕಾಣುತ್ತೇವೆ. ಇನ್ನೂ ವಿಶೇಷವೆಂದರೆ ಇವರ ಗಜಲ್ ಗಳಲ್ಲಿ ಭಕ್ತಿಗೀತೆಯ ದಟ್ಟವಾದ ಪ್ರಭಾವವನ್ನು ಗುರುತಿಸಬಹುದು.

ಅಹಂಕಾರದ ಗೋಡೆಯ ಕಟ್ಟಿರಲು ಒಳಗಿನ ಕಣ್ಣನು ತೆರೆಯಲು ಸಾಧ್ಯವೇ

ಅಂಧಕಾರದಲಿ ಮುಳುಗಿ ನರಳುತ ಬೆಂದಿರಲು ನೋವನು ತೊರೆಯಲು ಸಾಧ್ಯವೇ

ಈ ಮೇಲಿನ ಷೇರ್ ಸೂಫಿಸಂನ ನೆಲೆಯಲ್ಲಿ, ದಾಸರ ವಾಣಿಯ ಸೆಲೆಯಲ್ಲಿ ಮೂಡಿಬಂದಿದೆ. ‘ನಾನು’ ಎನ್ನುವ ಅಹಂ ಮನುಷ್ಯನ ಮನದಲ್ಲಿ ಮೊಳಕೆಯೊಡೆದರೆ ಸಾಕು ಅವನ ಅಂತರಂಗದ ಹಾಗೂ ಬಹಿರಂಗದ ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಅವುಗಳಿಗೆ ಸಾತ್ವಿಕ ಲೋಕ ಗೋಚರಿಸುವುದೆ ಇಲ್ಲ. ಆ ಅಹಂಕಾರದ ಮೂಟೆ ಕರಗುವವರೆಗೆ ಕಣ್ಣುಗಳಿಗೆ ಪರಿ ಬಂದಿರುತ್ತದೆ. ಈ ಮದದ ಕೋಟೆಯಲ್ಲಿ ಬಂಧಿತರಾದವರು ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸುವ ಶಕ್ತಿಯನ್ನೇ ಕಳೆದುಕೊಂಡು ಅಂಧಕಾರದಲ್ಲಿ ಮುಳುಗಿ ನರಳುತ ಜೀವನವನ್ನು ಸಾಗಿಸುತ್ತಿರುತ್ತಾರೆ. ಇಂತವರ ಬದುಕನ್ನು ಹಸನುಗೊಳಿಸುವುದು ತುಂಬಾ ಕಷ್ಟ ಎನ್ನುತ್ತಾರೆ ಗಜಲ್ ಗೋ ಅವರು.‌

       ಇಂದು ನಾವು ೨೧ ಶತಮಾನದಲ್ಲಿ, ವೈಜ್ಞಾನಿಕ ಯುಗದಲ್ಲಿ, ಜಾಗತಿಕ ರಂಗದಲ್ಲಿ ಜೀವಿಸುತಿದ್ದರೂ ಮನುಷ್ಯನ ಮೂಲಭೂತ ಗುಣ ಸಹಕಾರ, ಸಹನೆ, ಮಮತೆಯ ಜೀವನವನ್ನೇ ಮರೆತು ಬಿಟ್ಟಿದ್ದೇವೆ. ಅನ್ನ ತಿನ್ನುವ ಬದಲು ವೈಷಮ್ಯ, ಮತ್ಸರದ ವಿಷವನ್ನೇ ಸೇವಿಸುತ್ತಿದ್ದೇವೆ. ಇಂಥಹ ವಿಷ ತುಂಬಿದ ಮನಗಳಲಿ ಪ್ರೀತಿಯನು ಬಿತ್ತಬೇಕಿದೆ ಎನ್ನುತ್ತಾರೆ ಮಧುರಾ ಮೂರ್ತಿಯವರು. ಕಾರಣ, ಪ್ರೀತಿಗೆ ಅಷ್ಟೊಂದು ಶಕ್ತಿಯಿದೆ. ಎಲ್ಲವನ್ನೂ ಅಮೃತವನ್ನಾಗಿ ಮಾಡುವ ದಿವ್ಯ ಶಕ್ತಿ ಅದಕ್ಕಿದೆ ಎಂಬುದನ್ನು ತಮ್ಮ ಷೇರ್ ಮುಖಾಂತರ ವಿಶ್ಲೇಷಿಸಿದ್ದಾರೆ. ಇನ್ನೂ ಮುಂದುವರೆದು ಕತ್ತಲಿರುವ ಕಡೆಗಳಲ್ಲೆಲ್ಲ ಜ್ಞಾನದ ಬೆಳಕು ಚೆಲ್ಲುವ ಮುಖಾಂತರ ಇಡೀ ಮನುಕುಲದಲ್ಲಿ ಶಾಂತಿಯ ತಪೋವನವನ್ನು ನಿರ್ಮಿಸಬೇಕು ಎನ್ನುವ ಮಹದಾಸೆಯನ್ನು ಹೊಂದಿರುವುದು ಅವರ ಈ ಷೇರ್ ಖಾತ್ರಿ ಪಡಿಸುತ್ತದೆ.‌

ನೆತ್ತರುಣ್ಣುವ ಮನುಜರ ಎದೆಯಲಿ ಒಲವ ಬಿತ್ತಬೇಕಿದೆ ನೀನು ನಾನು

ಕತ್ತಲಿರುವ ಹೃದಯದ ಗೂಡಲಿ ಜ್ಞಾನವ ಮೆತ್ತಬೇಕಿದೆ ನೀನು ನಾನು

      ಇಂದು ಕನ್ನಡ ಸಾಹಿತ್ಯವು ತನ್ನ ನೆರೆಹೊರೆಯ ಭಾಷೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಸಾಹಿತ್ಯ ಪ್ರಕಾರಗಳಲ್ಲಿ ಪರಸ್ಪರ ಕೊಡು ಕೊಳ್ಳುವಿಕೆ ಮಾಡುತ್ತಿದೆ. ಅದರ ಫಲವೇ ‘ಗಜಲ್’ ಎಂಬ ಬೇಗಂ ಸಾಹೇಬಳು ನಮ್ಮ ಹೃದಯವನ್ನು ಆಳುತ್ತಿರೋದು! ಇಂಥಹ ‘ಗಜಲ್’ ಜನ್ನತ್ ನಲ್ಲಿ ಪಯಣಿಸುತ್ತಿರುವ ಶ್ರೀಮತಿ ಮಧುರಾ ಮೂರ್ತಿ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಸಂಕಲನಗಳು ಮೂಡಿಬರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. 

ಭಾಗ್ಯವಂತರು ಅವರು ಪ್ರೇಮಪಥದಲಿ ನಶಿಸಿ ಹೋದಂತವರು

ಭಾಗ್ಯವಂತರು ಅವರು ನಿನ್ನ ನೆಲೆಯಲಿ ನೆಲೆ ಕೂಡಿರುವುದು

ನಪೀಸ್ ಬೆಂಗಳೂರೀ 

        ಗಜಲ್ ಕಾರವಾನ್ ನ ರಮಣೀಯತೆ ತಮ್ಮ ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ಏನಂತೀರಿ.. ಹೌದೆಂದು ತಲೆಯಾಡಿಸುತ್ತಿರುವರೊ..ನನಗೊತ್ತು, ನಮ್ಮ ಗಜಲ್ ಮಾಶುಕಗಳ ಮನಸು. ಆದರೂ ವಾಟ್ ಟು ಡು, ಟೈಮ್ ಟೈಮ್ ಕೀ ಬಾತ್ ಹೈ …ಇಂದಿನ ಈ ಪರಿಚಯದ ದೇಹಲಿಜ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ತಮ್ಮ ಮುಂದೆ ಹಾಜರಾಗುವೆ ಎಂದು ವಾದಾ ಮಾಡುತ್ತ, ಇಲ್ಲಿಂದ ನಿರ್ಗಮಿಸುವೆ…!!


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top