ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಶಾಂತಲಾ 

ಕಾದಂಬರಿ   

ಶಾಂತಲಾ        :  ಕಾದಂಬರಿ 

ಲೇಖಕರು       ;  ಕೆ. ವಿ.ಅಯ್ಯರ್ 

ಒಂಭತ್ತನೆಯ ಮುದ್ರಣ೧೯೮೨

ಪ್ರಕಾಶಕರು  :  ವಿನಯ ಪ್ರಕಾಶನ ಬೆಂಗಳೂರು 

 ಶ್ರೀ ಕೆ ವಿ ಅಯ್ಯರ್ ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದ ಕೃತಿಗಳನ್ನು ನೀಡಿದ ದಿಗ್ಗಜರು. ಕೋಲಾರ ವೆಂಕಟೇಶ ಅಯ್ಯರ್ ಅವರು ಜನಿಸಿದ್ದು   ೮.೦೧.೧೮೯೮ರಂದು. 4 ಅನುವಾದ ನಾಟಕಗಳು,  ಸಮುದ್ಯತಾ ಮಹಾ ಶಿಲ್ಪ ವರಪರೀಕ್ಷೆ ಎಂಬ 3 ಕಥಾಸಂಕಲನಗಳನ್ನು ರೂಪದರ್ಶಿ ಲೀಲಾ ಶಾಂತಲೆಯಂತಹ 3 ಮೇರು ಕಾದಂಬರಿಗಳನ್ನು ರಚಿಸಿದ್ದಾರೆ.  ಅಂಗಸಾಧಕರಾಗಿದ್ದ ಇವರು ವ್ಯಾಯಾಮ ಶಾಲೆಯನ್ನು ಸ್ಥಾಪಿಸಿದ್ದು ಟೀ ಪಿ ಕೈಲಾಸಂ  ಮತ್ತು ಆಗಿನ ಮೈಸೂರು ಅರಸರು  ಭೇಟಿ ಇತ್ತಿದ್ದರಂತೆ.  ಇಂಗ್ಲಿಷಿನಲ್ಲಿ ಅಂಗಸಾಧನೆಯ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

೧೯೯೦ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ  ೧೯೯೪ ರಲ್ಲಿ ಕೆ ವಿ ಅಯ್ಯರ್ ಸಂಸ್ಮರಣ ಗ್ರಂಥ ಪ್ರಕಟಣೆ ಇವರಿಗೆ ಸಂದ ಪುರಸ್ಕಾರಗಳು. ೦೩.೦೧.೧೯೮೦ ರಂದು ನಿಧನ ಹೊಂದಿದರು.

ಕರ್ನಾಟಕ ಎಂದರೆ ಶಿಲ್ಪಕಲೆಗಳ ಬೀಡು ಬೇಲೂರು ಹಳೆಬೀಡು ಹಾಗೂ ಸುತ್ತಮುತ್ತಲಿನ ಅನೇಕ ದೇವಾಲಯಗಳು ಹೊಯ್ಸಳ ರಾಜ ಮನೆತನದ ಕಾಣಿಕೆಯಾಗಿವೆ.  ಹೊಯ್ಸಳರ ಪ್ರಮುಖ ಅರಸು ಬಿಟ್ಟಿದೇವ ನಂತರ ವೈಷ್ಣವ ಮತಾನುಯಾಯಿಯಾಗಿ

ವಿಷ್ಣುವರ್ಧನನಾಗಿ ಪ್ರಸಿದ್ಧ.  ಇವನ ರಾಣಿ ಶಾಂತಲೆ ಸಂಗೀತ ನೃತ್ಯಾದಿ ಕಲಾ ಪ್ರವೀಣೆ . ಇವಳ ಜೀವನ ವೃತ್ತಾಂತದ ಕಥೆಯೇ ಈ ಕಾದಂಬರಿ. 

ಓದುಗರನ್ನು ಅಂದಿನ ಕಾಲಕ್ಕೆ ಕರೆದೊಯ್ದು ಕಣ್ಣೆದುರಿನಲ್ಲೇ ಘಟನೆಗಳು ನಡೆಯುತ್ತವೆ ಏನೋ ಅನ್ನಿಸುವಷ್ಟು ಸಹಜ ನಿರೂಪಣೆ . ಪಾತ್ರಗಳೊಂದಿಗೆ ನಾವೇ ತಾಧ್ಯಾತ್ಮ ಹೊಂದಿದಂತಹ ಭಾವ ಬಂಧುರತೆಯ ಈ ಕಾದಂಬರಿ ಕನ್ನಡದ ಕ್ಲಾಸಿಕ್ ಕಾದಂಬರಿಗಳಲ್ಲೊಂದು.  ಕನ್ನಡ ಸಾಹಿತ್ಯದ ಓದು ಆರಂಭಿಸುತ್ತೇವೆ ಎನ್ನುವವರಿಗೆಲ್ಲಾ ನಾನು ಮೊದಲು ಓದಿ ಎಂದು ಸಲಹೆ ಕೊಡುವ ಪುಸ್ತಕ ಇದು.  ಮೊದಲ ಬಾರಿ ಹೈಸ್ಕೂಲಿನಲ್ಲಿದ್ದಾಗ ನಾನು ಓದಿದ್ದು. ತದನಂತರ ಅದೆಷ್ಟು ಓದುಗಳಾಗಿ ಹೋಗಿದೆಯೋ ಲೆಕ್ಕ ಇಲ್ಲ.  ಈ ಬಾರಿ ಪರಾಮರ್ಶೆಗೆ ಅಂಥ ಮತ್ತೆ ಓದಿದಾಗಲೂ ಅದೇ ಭಾವ ತೀವ್ರತೆ ಹುಟ್ಟಿಸಿದ, ಬಿಕ್ಕಿಬಿಕ್ಕಿ ಅಳುವಂತೆ ಮಾಡಿಸಿದ ಕಾದಂಬರಿ ಇದು .ಓದಿ ಎಷ್ಟೋ ದಿನಗಳಾದರೂ ಅದೇ ಯೋಚನೆಯ ತಿರುಗಣಿಯಲ್ಲಿ ಸುತ್ತುವಂತೆ ಮಾಡುವುದು ಇದರ ವೈಶಿಷ್ಟ .

ಎರೆಯಂಗ ಪ್ರಭುಗಳ ಮೊದಲೆರಡು ಮಕ್ಕಳು ಬಹಳ ಬೇಗ ದೈವಾಧೀನರಾದ ಮೇಲೆ ಕಿರಿಯ ಮಗ ಬಿಟ್ಟಿದೇವ ರಾಜನಾಗುತ್ತಾನೆ.  ವಂಶ ಮುಂದುವರೆಸಬೇಕೆಂಬ ಅಭಿಲಾಷೆಯಿಂದ ಅವನನ್ನು ಮದುವೆಯಾಗಲು ಒಪ್ಪಿಸುವ ರಾಜಮಾತೆ ಮಹಾ ಚೋಳ ದೇವಿ ರಾಜ್ಯದ ದಂಡನಾಯಕ ಮಾರಸಿಂಗಮಯ್ಯನವರ ಮಗಳು ಶಾಂತಲೆಯನ್ನು ತಂದುಕೊಳ್ಳ ಬಯಸುತ್ತಾಳೆ.  ದೈವಾ ಯೋಗ ಸಂಬಂಧ,  ಲಕ್ಷ್ಮೀ ಶಾಂತಲೆಯರ ಅನುಪಮ ಸ್ನೇಹದಿಂದಾಗಿ ಅವರಿಬ್ಬರೂ ರಾಜನ ಕೈ ಹಿಡಿಯುತ್ತಾರೆ. ವೇಲಾಪುರದ ಸೌಮ್ಯಕೇಶವ ಚೆನ್ನಕೇಶವ ದೇವಸ್ಥಾನದ ಪ್ರತಿಷ್ಠಾಪನಾ ಸಂಧರ್ಭದಲ್ಲಿ ಶಾಂತಲೆಯಿಂದ ದೈವೀಕ ನೃತ್ಯ ಸಮರ್ಪಣೆಯೂ ಆಗಿ ಅವಳ ಭಾವ ಭಂಗಿಗಳಿಂದ ಸ್ಫೂರ್ತಿಗೊಂಡ ಶಿಲ್ಪಿಗಳಿಂದ ದೇವಾಲಯದ ಪ್ರಾಂಗಣ ಸುತ್ತ ಶಿಲಾಬಾಲಿಕೆಯರ  ಕೆತ್ತನೆಯೂ ನಡೆಯುತ್ತದೆ. ದಂಡ ಯಾತ್ರೆ ಮುಗಿಸಿ ಬಂದ ಪ್ರಭುಗಳಿಗೆ ಮಾತೃ ವಿಯೋಗವಾಗುತ್ತದೆ.  ಕೇತಮಲ್ಲ ನಾಯಕನೆಂಬ ದಂಡಾಧೀಶನು ಹೊಯ್ಸಳೇಶ್ವರ ಶಾಂತಲೇಶ್ವರ ಬೃಹತ್ ದೇವಾಲಯವನ್ನು ಕಟ್ಟಿ ರಾಜ ರಾಣಿಯರಿಗೆ ಸಮರ್ಪಿಸುವ ಯೋಜನೆ ಹಾಕಿಕೊಂಡಿರುತ್ತಾನೆ.  ಎರೆಯಂಗ ರಾಜರಿಗಾಗಿ ಪ್ರಾಣತೆತ್ತಿದ್ದ ಚನ್ನಮ ದಂಡಾಧೀಶ ಹಾಗೂ ಮಹಾಸತಿಯಾದ ಅವರ ಪತ್ನಿ ಇವರ ಮಗ ಕುವರವಿಷ್ಣು. ಅವನನ್ನು ವಿಷ್ಣುವರ್ಧನರು ಮಗನೆಂದೇ ಭಾವಿಸಿ ನಡೆದುಕೊಳ್ಳುತ್ತಿರುತ್ತಾರೆ ಶಾಂತಲೆ ಹಾಗೂ ಲಕ್ಷ್ಮಿಯರಿಗೆ ಅವನು ಅಚ್ಚುಮೆಚ್ಚಿನ ತಮ್ಮ. ಅವನ ಪತ್ನಿ ಸೋವಲೆ .ಶಾಂತಲೆಗೆ ಎಷ್ಟು ದಿನಗಳಾದರೂ ಪುತ್ರಭಾಗ್ಯ ವಾಗದಿದ್ದಾಗ ಹೊಯ್ಸಳ ರಕ್ತ ಮುಂದುವರೆಸುವುದಾಗಿ ರಾಜಮಾತೆಗೆ ಕೊಟ್ಟಿದ್ದ ಮಾತು ಚುಚ್ಚುತ್ತಿರುತ್ತದೆ.  ಲಕ್ಷ್ಮಿಯನ್ನು ಪಟ್ಟದರಾಣಿ ಮಾಡಿಕೊಳ್ಳಿ ಎನ್ನುವ ಅವಳ ಬೇಡಿಕೆ ವಿಷ್ಣುವರ್ಧನನಿಗೆ ಸಮ್ಮತವಾಗುವುದಿಲ್ಲ ಕುವರ ವಿಷ್ಣುವನ್ನೇ ದತ್ತು ತೆಗೆದುಕೊಳ್ಳುವ ಅನ್ನುವಷ್ಟರಲ್ಲಿ ಅವನು ಹೇಳದೆ ಕೇಳದೆ ಗರುಡನಾಗಿರುತ್ತಾನೆ.  ಹೊಯ್ಸಳ ರಾಜ್ಯ ಮುಂದುವರಿಸಲು ಬೇರೇನೂ ತೋಚದೆ ಭೃಗುಪತನ ರೀತಿಯಲ್ಲಿ ಅಂದರೆ ಬೆಟ್ಟದ ಮೇಲಿಂದ ಬಿದ್ದು ಸಾಯುವ ನಿರ್ಧಾರ ಕೈಗೊಂಡು ಶಿವಗಂಗೆ ಬೆಟ್ಟದ ಮೇಲಿನಿಂದ ಹಾರಿ ಅಸುನೀಗುತ್ತಾಳೆ. ಅವಳೊಂದಿಗೆ ಅವಳ ಜತೆ ಹೋಗಿದ್ದ ಕುವರವಿಷ್ಣು ಇವಳ ಸಾವನ್ನು ಕಂಡು ತಾನೂ ಹಾರಿ ಪ್ರಾಣಬಿಡುತ್ತಾನೆ.  ಹೆಣಗಳನ್ನು ರಾಜಧಾನಿಗೆ ಕಳುಹಿಸಲಾಗುತ್ತದೆ.  ಕುವರವಿಷ್ಣುವಿನ ಪತ್ನಿ  ಅವನ ಚಿತೆಗೆ ಹಾರಿ ಮಹಾಸತಿಯಾಗುತ್ತಾಳೆ . ಪ್ರಭುಗಳು ಲಕ್ಷ್ಮಿಗೆ ಆಘಾತದ ಅರಿವಾಗದಿರದು ಮೂರ್ಛೆಯ ಔಷಧಿ ಕೊಟ್ಠು ಶಾಂತಲೆಯ ಕಳೇಬರದೊಂದಿಗೆ ಶಿವಗಂಗೆ ಬೆಟ್ಟಕ್ಕೆ ಬಂದು ಅವಳಿಗಾಗಿ ಪ್ರಲಾಪಿಸುತ್ತಾ ಪರಿತಪಿಸುತ್ತಾ ಹಲಬುತ್ತ ಹುಚ್ಚರಂತೆ ಅಲೆಯುತ್ತಿರುತ್ತಾರೆ . ಸೂರ್ಯಾಸ್ತವಾದ ನಂತರ ಪ್ರಾಣ ಕಳೆದುಕೊಳ್ಳುವ ನಿರ್ಧಾರ ತಳೆದು ಶಿಖರದ ತುದಿಯಲ್ಲಿ ನಿಂತಿರುತ್ತಾರೆ.  ಪ್ರಭುಗಳಿರದ ವಿಷಯ ತಿಳಿದ ಹೇಮಾದ್ರಿ ಗೋವಿಂದ ಭಟ್ಟ ಮುಂತಾದ ಅಮಾತ್ಯರು ತಕ್ಷಣವೇ ಲಕ್ಷ್ಮಿಯನ್ನು ಕರೆದುಕೊಂಡು ಶಿವಗಂಗೆಗೆ ಹೊರಟು ಪ್ರಭು ಗಳಿದ್ದ ಜಾಗಕ್ಕೆ ಬರುತ್ತಾರೆ .ವಿಷ್ಣುವರ್ಧನನನ್ನು ಬಿಟ್ಟು ಹೋಗಲಾಗದ ಶಾಂತಲೆಯ ಆತ್ಮ ತನ್ನ ಶರೀರಕ್ಕೆ ಸೇರಲಾಗದೆ ಪರಿತಪಿಸುತ್ತಿರುತ್ತದೆ. ಲಕ್ಷ್ಮಿಯನ್ನು ಕಂಡು ಅವಳ ದೇಹದಲ್ಲಿ ವಿಲೀನವಾಗುತ್ತದೆ ಪ್ರಭುಗಳು ಪ್ರಾಣತ್ಯಾಗದ ಯೋಚನೆಯಿಂದ ದೂರ ಸರಿಸುತ್ತಾರೆ.ಮುಂದೆ ಚೇತರಿಸಿಕೊಂಡ ಪ್ರಭುಗಳಿಗೆ ಶಾಂತಲೆಯ ತಾಯಿಯ ಸಾಕುಮಗಳು ಚಂದಲೆ ಯೊಂದಿಗೆ ವಿವಾಹವಾಗುತ್ತದೆ. ಅವಳಿಗೆ ಹೆಣ್ಣುಮಗುವೂ ಲಕ್ಷ್ಮಿಗೆ ಸಾಮ್ರಾಟನಾಗುವ ಮಗನೂ ಜನಿಸುತ್ತಾನೆ .ಹೊಯ್ಸಳ ಸಾಮ್ರಾಜ್ಯ ಮತ್ತೂ ಉಚ್ಛ್ರಾಯ ಮಟ್ಥಕ್ಕೇರುತ್ತದೆ . ಇದೆಲ್ಲದಕ್ಕೂ ಶಾಂತಲೆಯ ತ್ಯಾಗವೇ ಕಾರಣವೆನಿಸಿ ಚರಿತ್ರೆಯಲ್ಲಿ ಆಕೆ ಅಜರಾಮರಳಾಗುತ್ತಾಳೆ 

ಶಾಸನಗಳು,  ಸಿಕ್ಕಿದ ಚರಿತ್ರಾರ್ಹ ಸಂಗತಿಗಳಿಂದ ಕಥೆ ಕಟ್ಟುವುದು ಸುಲಭ ಸಾಧ್ಯದ ಮಾತಲ್ಲ.  ಅದನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿರುವ ಈ ಕೃತಿ ಓದುಗರನ್ನು ಇತಿಹಾಸದ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ  ಕಾದಂಬರಿಯ ತುಂಬ ಹರಿದಿರುವುದು ಪ್ರೀತಿ ವಿಶ್ವಾಸ ನಿಷ್ಠೆ ಭಕ್ತಿ ಅಂತಕರಣದ ಸರಿತೆಯೇ.   ಒಂದಿನಿತೂ ಋಣಾತ್ಮಕ ಭಾವನೆಯಿರದ  ಧನಾತ್ಮಕ ಗುಣದ ಪಾತ್ರಗಳ ಚಿತ್ರಣ  ಹಾಯೆನಿಸುವ ತಂಬೆಲರಾಗಿ ಬೀಸುತ್ತದೆ . ತಾಯಿ ಮಕ್ಕಳ ಅವ್ಯಾಜ ಪ್ರೇಮ ಮಾಚಿಕಬ್ಬೆ ತಾಯಿಯಿಲ್ಲದ ಲಕ್ಷ್ಮಿಗೆ ತೋರುವ ಪ್ರೀತಿ ನಂತರ ಚಂದಲೆಯ ಕಡೆ ಹರಿಸುವ ಮಮತೆ,  ಸಾಯುವಾಗಲೂ ಅವಳ ಹಿತಚಿಂತನೆ ತೋರುವುದು ಇವುಗಳಲ್ಲಿ ಅಡಕವಾಗುತ್ತದೆ . ಇನ್ನು ರಾಜ ಮಾತೆ ಮಹಾ ದೇವಿ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಷ್ಟೇ ಅಲ್ಲದೆ ಕುವರ ವಿಷ್ಣುವನ್ನು ನೋಡಿಕೊಳ್ಳುವ ರೀತಿ ಯುದ್ಧದಲ್ಲಿ ಅವನಿಗೆ ಏನೋ ಕೆಡಕು ಸಂಭವಿಸಿದೆ ಎಂದು ತಿಳಿದು ಎದೆಯೊಡೆದು ಸಾಯುವುದು ಅವರ ಆ ಮಾತೃ ಪ್ರೇಮಕ್ಕೊಂದು ಜ್ವಲಂತ ನಿದರ್ಶನ.  ಇನ್ನು ಅರಸು ಮಂತ್ರಿಗಳ ಸಂಬಂಧ ಎರೆಯಂಗ ಗಂಗರಾಜರ ನಡುವೆ ನಂತರ ವಿಷ್ಣುವರ್ಧನ ಗಂಗರಾಜರು ಹೇಮಾದ್ರಿ ಗಳು ಅಚ್ಯುತ ಗೋವಿಂದ ಭಟ್ಟರ ನಡುವೆ ತುಂಬಾ ಸೂಕ್ತವಾಗಿ ಚಿತ್ರಿತವಾಗಿದೆ . ರಾಜ ದಂಡನಾಯಕರುಗಳ ಮದ್ಯದ ಬಾಂಧವ್ಯ ಎರೆಯಂಗ ಚನ್ನಮ್ಮ ದಂಡಾಧೀಶ ರ ವಿಷ್ಣುವರ್ಧನ ಕುವರವಿಷ್ಣು ಬೊಪ್ಪಣ ಗಂಗರಾಜ ಮಾರಸಿಂಗಮಯ್ಯ ಕೇತುಮಲ್ಲ ನಾಯಕ ಇವರುಗಳ ಪಾತ್ರಗಳಲ್ಲಿ ಬಿಂಬಿತವಾಗಿದೆ.  ಸ್ನೇಹ ಸೋದರತೆಯ ಸುಂದರ ಉದಾಹರಣೆ ಲಕ್ಷ್ಮೀ ಶಾಂತಲೇ ಲಕ್ಷ್ಮೀ ಶಾಂತಲೇ ಕುವರವಿಷ್ಣು ಇವರ ಮಧ್ಯೆ ಬಿಂಬಿತವಾಗುತ್ತದೆ.  ಸುಂದರ ದಾಂಪತ್ಯ ಅನುಬಂಧದ ಸೊಗಡು ಮಾಚಿಕಬ್ಬೆಮಾರಸಿಂಗಮಯ್ಯ , ಕುವರವಿಷ್ಣುಸೋವಲೆ ವಿಷ್ಣುವರ್ಧನ ಶಾಂತಲೆ ಲಕ್ಷ್ಮಿಯರ ಮೂಲಕ ಹೊರಸೂಸಿದೆ . ರಕ್ತ ಸಂಬಂಧವಷ್ಟೇ ಸಂಬಂಧವಲ್ಲ ಅದರಾಚೆಗೂ ಬಂಧುತ್ವದ ಮಾಧುರ್ಯ ಪಡಿಮೂಡುತ್ತದೆ ಎನ್ನುವುದು ಪಾತ್ರಗಳ ಹಿರಿಮೆಯಲ್ಲಿ ತೋರಿಸುತ್ತಾರೆ. ಇದ್ದರೆ ಶಾಂತಲೆ ಲಕ್ಷ್ಮಿಯರಂತಹ ಗೆಳತಿಯರು, ಕುವರವಿಷ್ಣುವಿನನಂತಹ ಸೋದರ, ವಿಷ್ಣುವರ್ಧನ ನಂತಹ ಪತಿ  ಇರಬೇಕೆಂದು ಹಂಬಲಿಸುವಂತೆ ಮಾಡುತ್ತದೆ.  ಸ್ನೇಹಕ್ಕಾಗಿ ಪತಿಯನ್ನೇ ಅವಳೊಂದಿಗೆ ಹಂಚಿಕೊಳ್ಳುವ ಹಿರಿಗುಣದ, ಅವಳಿಗಾಗಿ ಪ್ರಾಣ  ತ್ಯಾಗವನ್ನೇ ಮಾಡುವಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಶಾಂತಲೆ  ಮೈತ್ರಿಯ ಮಹೋನ್ನತ ಉಪಮೆ ಯಾಗಿ ಎದ್ದು ನಿಲ್ಲುತ್ತಾಳೆ. ಸ್ವಹಿತಕ್ಕಿಂತ ಸೇರಿದ ಮನೆಯ ಉದ್ಧಾರಕ್ಕೆ ಮನ ಕೊಡುವ ಅವಳು ಭಾರತೀಯ ನಾರಿಯರ ತ್ಯಾಗ ಬಲಿದಾನದ ದ್ಯೋತಕವೆನಿಸುತ್ತಾಳೆ..  ಪತ್ನಿಯನ್ನು ಅಪರಿಮಿತವಾಗಿ ಪ್ರೀತಿಸುವ ಪತಿಯಾಗಿ ತಾನೂ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವ ವಿಷ್ಣುವರ್ಧನ ಉದಾತ್ತ ಪ್ರೇಮಿ_ ಪತಿಯಾಗಿ ಔನ್ನತ್ಯ ಮೆರೆಯುತ್ತಾನೆ.  ಅದರಲ್ಲೂ ಅವಳ ಸಾವಿನ ನಂತರ ಕಳೇಬರವನ್ನು ಹೊತ್ತು ಇಡೀ ಶಿವಗಂಗೆ ಬೆಟ್ಟವನ್ನೇ ಸುತ್ತುವ ಅವಳಿಗಾಗಿ ಪರಿಪರಿಯಲ್ಲಿ ಹಲುಬುವ ಆ ದೃಶ್ಯ ಎಂಥ ಕಟುಕರ ಕಣ್ಣಲ್ಲಿಯೂ ನೀರು ತರಿಸುತ್ತದೆ .ರಾಜ ನಿಷ್ಠೆ ತೋರಿ ಗರುಡನಾಗಿ ಅಕ್ಕನ ಸಾವು ಸಹಿಸಲಾಗದೆ ತಾನೂ ಪ್ರಾಣತ್ಯಾಗ ಮಾಡುವ ಕುವರವಿಷ್ಣು ವಿಶಿಷ್ಟನಾಗಿ ನಿಲ್ಲುತ್ತಾನೆ . ಒಂದೊಂದು ಪಾತ್ರವೂ ಸಾರುವ ನೀತಿ ಹೇಳುವ ಕಥೆ.  ವಿಭಿನ್ನ ಮಹೋನ್ನತ ಭಾವಗಳ ಪರಸ್ಪರ ಅನುರಾಗ ಪ್ರೀತಿ ವಿಶ್ವಾಸದ ದ್ಯೋತಕ ಮಹಾನ್ ತ್ಯಾಗದ ಪರಾಕಾಷ್ಠತೆಯ ಉತ್ಕ್ರಷ್ಟ ನಂಟುಗಳ ಬೆಸುಗೆಯ ಪ್ರತೀಕವಾಗುತ್ತದೆ.  

ದಂಡಯಾತ್ರೆ ಹೋಗುವ ಸಂದರ್ಭದಲ್ಲಿನ ರಣನೀತಿ, ರಾಜ ಕೌಶಲ್ಯತೆ ಭೇದೋಪಾಯಗಳು ಮನಸೆಳೆಯುತ್ತದೆ.  ಅಂದಿನ ಕಾಲದ ಯುದ್ಧಗಳು ಹೇಗೆ ನಡೆಯುತ್ತಿದ್ದವೆಂಬ  ಚಿತ್ರಣವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.  

ಇಡೀ ಕಾದಂಬರಿಯಲ್ಲಿ ಕನಸುಗಳು ತುಂಬಾ ಮಹತ್ವದ ಪಾತ್ರವಹಿಸಿದೆ .ಅವು ಭವಿಷ್ಯದ ಸೂಚನೆಯೂ ಆಗಿರುವುದು ಗಮನಾರ್ಹ . ಮೊದಲಿಗೆ ಕುವರವಿಷ್ಣುವಿನ ಉಪನಯನ ಸಂದರ್ಭದಲ್ಲಿ ಹಿಂದಿನ ದಿನ ಶಾಂತಲೆ ಕಾಣುವ ಕನಸು ಮಾರನೆಯ ದಿನ ಮಹಾರಾಜರ ಪ್ರಥಮ ದರ್ಶನದ ಸೂಚನೆ.   ದೇಹವೆರಡು ಆತ್ಮವೊಂದು ಅನ್ನುವಂತಿದ್ದ  ಲಕ್ಷ್ಮೀ ಶಾಂತಲೆಯರಿಬ್ಬರೂ ರಾಜರನ್ನು ವರಿಸುವ ಯೋಚನೆ ಯೋಜನೆ ಕಾಣುವುದು ಗಂಗರಾಜರ ಕನಸಿನಲ್ಲಿ.  ಹೊಯ್ಸಳೇಶ್ವರ ಶಾಂತಲೇಶ್ವರ ದೇವಸ್ಥಾನಕ್ಕೆ ನಂದಿಗಳನ್ನು ಕೆತ್ತಿದ ಸ್ಥಳದಿಂದ ದೇವಾಲಯದ ವರೆಗೆ ಚಂದ್ರಗಿರಿಯ ಗೋಮಟನೇ ಓಡಿಸಿಕೊಂಡು ಬಂದ ಹಾಗೆ,ದೇವಾಲಯದ ಮೂರ್ತಿಗಳೆಲ್ಲ ಜೀವತಳೆಯುವ, ಶಾಂತಲೆ ದೈವಾಂಶ ಸಂಭೂತೆ ಎಂದು ಸಾರುವ ಹಾಗಿನ ಕುವರ ವಿಷ್ಣು ಕಾಣುವ ಕನಸಿನ ವರ್ಣನೆಯಂತೂ ಅಮೋಘವಾಗಿದೆ.  ಮುಂದೆ ಶಾಂತಲೆಯ ಕನಸಿನಲ್ಲಿ ಮಹರ್ಷಿಯೊಬ್ಬರು ಬಂದು ಇರುವ ಒಂದೇ ಫಲವನ್ನು ಯಾರಿಗೆ ನೀಡಲಿ ಎಂದಾಗ ಶಾಂತಲೆ ಅದನ್ನು ಲಕ್ಷ್ಮಿಗೆ ಕೊಡಿರೆಂದು ಹೇಳುವುದು ಸಹ ಮುಂದಾಗುವುದರ ಮುನ್ನುಡಿಯೇ     

    ಕಥೆಯಲ್ಲಿ ನೀ ಹೀಗೆ ದುಡುಕಬಾರದಿತ್ತು ಎಂದು ಶಾಂತಲೆಯ ಆತ್ಮದೊಂದಿಗೆ ವಿಷ್ಣುವರ್ಧನ ನಡೆಸುವ ಸಂವಾದ ಇಡೀ ಕಥಾನಕಕ್ಕೆ ಅಗೋಚರವಾದ ಅದೃಶ್ಯ ಶಕ್ತಿಯ ಕಾಣದ ಕೈಗಳ ಕೈವಾಡವೇ ಕಾರಣವೆಂದು ಹೇಳುತ್ತಾ ಹೀಗೆ ಮಾಡಬಹುದಿತ್ತು ಹಾಗೆ ಮಾಡಬಾರದಿತ್ತು ಎನ್ನುವ ಅನಿಸಿಕೆಗಳಿಗೆ ತಡೆ ಹಾಕುತ್ತಾ ಒಳ್ಳೆಯ ಉಪಸಂಹಾರ ಕೊಟ್ಟಿದೆ . ಎಲ್ಲವೂ ದೈವ ನಿಯಾಮಕ ವಿಧಿಲಿಖಿತ ಎನ್ನುತ್ತದೆ. 

ಎಷ್ಟು ಬಾರಿ ಓದಿದರೂ ಪ್ರತಿ ಓದು ಮೊದಲನೆಯದೇ ಎನಿಸುವಷ್ಟು ನಿತ್ಯ ನಾವೀನ್ಯದ ಕಥೆ ಶಿಲ್ಪಕಲೆಯಲ್ಲಿ ಜಕಣ ಡಕಣರು ಶಾಂತಲೆಯ ಭಂಗಿಗಳನ್ನು ಅಜರಾಮರ ಗೊಳಿಸಿದರೆ ಈ ಕಾದಂಬರಿಯು ಶಾಂತಲೆಯ ಭಾವ ಆತ್ಮ ಸ್ವರೂಪದ ಸುಂದರ ಅನಾವರಣ .ಬೆನ್ನುಡಿಯಲ್ಲಿ ನುಡಿದಂತೆ “ತಂದೆಯಾದ ಮಾರಸಿಂಗಮಯ್ಯ ತಮ್ಮ ಮುದ್ದು ಮಗಳ ಶಾಂತಲೆಯ ನೆನಪಿಗೆ ಅಕ್ಷರ ರೂಪದ 1ಮಾಸ್ತಿಕಲ್ಲನ್ನು ಸ್ಥಾಪಿಸಿದ್ದ ಆದರೆ ಅದು ಈ ಶಾಂತಲಾ ರೂಪದಲ್ಲಿ ಇದ್ದಿರಬಹುದು “ಎನ್ನಿಸುತ್ತೆ .  ಖಂಡಿತಾ ನಿಜ ಶಾಂತಲೆ ಎಲ್ಲರ ಮನಸ್ಸಿನಲ್ಲೂ ಸದಾ ಕಾಲ ಉಳಿಯುವಂತೆ ಆಗಿರುವುದು ಈ ಕಾದಂಬರಿಯಿಂದಲೇ 

ಈ ಕಾದಂಬರಿ ಓದಿಯಾದ ಮೇಲೆ ಬೇಲೂರು ಹಳೇಬೀಡುಗಳಿಗೆ ಭೇಟಿಕೊಟ್ಟಾಗ ಕಾದಂಬರಿಯ ಪ್ರತಿಯೊಂದು ದೃಶ್ಯಗಳು ಕಣ್ಣ ಮುಂದೆ ಹಾದು ಹೋದಂತಾಯಿತು . ಇಲ್ಲಿಯೇ ಇವೆಲ್ಲವೂ ನಡೆದಿತ್ತು ಎಂಬ ಭಾವನೆಯಲ್ಲಿ ನಾವೂ ಒಂದು ಪಾತ್ರವೇನೋ  ಎಂದೆನಿಸಿ ಮೈ ಜುಮ್ಮೆನಿಸಿದ್ದು ಖಂಡಿತಾ ಅತಿಶಯವಲ್ಲ.. 


             ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top