ವಿಶೇಷ ಲೇಖನ
ಬಿ.ಕೃಷ್ಣಪ್ಪಅವರಜನ್ಮದಿನನಿಮಿತ್ತ
ಒಂದುಹೋರಾಟದನೆನಪು
ಬಡವರ ಗುಡಿಸಲಲ್ಲಿ ಹೋರಾಟದ ಹಣತೆ
ಹಚ್ಚಿದ ಪ್ರೊಫೆಸರ್
ಎಪ್ಪತ್ತರ ದಶಕದಲ್ಲಿ ಕರ್ನಾಟಕಕ್ಕೆ, ಕನ್ನಡದ ತಳಸಮುದಾಯಗಳ ಕೇರಿ ಕೇರಿಗಳಿಗೆ, ಮನಸುಗಳಿಗೆ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಕ್ರಾಂತಿಕಾರಕ ವಿಚಾರಗಳನ್ನು ಕೊಟ್ಟು, ಸಾವಿರಾರು ವರ್ಷಗಳ ಕಾಲ ಅಸ್ಪೃಶ್ಯತೆ, ಅವಮಾನ, ಹಸಿವು, ಬಡತನ, ಜೀತಗಾರಿಕೆ, ಹಿಂಸೆ, ದೌರ್ಜನ್ಯಗಳನ್ನು ಅನುಭವಿಸಿ ಶಾಶ್ವತವಾಗಿ ಅಕ್ಷರಶಃ ಗುಲಾಮರಂತೆ ಬದುಕಿದ್ದ ದಲಿತರನ್ನು ಎಚ್ಚರಿಸಿ, ಅವರ ಗುಡಿಸಲುಗಳಲ್ಲಿ ಹೋರಾಟದ ಕಿಡಿ ಮತ್ತು ಕಿಚ್ಚನ್ನು ಹಚ್ಚಿದ ಧೀಮಂತ ದಲಿತ ನಾಯಕನಿದ್ದರೆ ಅದು ಪ್ರೊಫೆಸರ್ ಬಿ ಕೃಷ್ಣಪ್ಪನವರು ಮಾತ್ರ. ಬಿಕೆಯವರ ಸಂಘರ್ಷದ ಕರೆಗೆ ಓಗೊಟ್ಟ ದಲಿತರು ಹಿಂದುಳಿದವರು ಮತ್ತು ಮಹಿಳೆಯರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಒಂದುಗೂಡಿದರು ಮತ್ತು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಬಂದು ಸೇರಿದರು. ಪರಿಣಾಮವಾಗಿ ಕರ್ನಾಟಕದಲ್ಲಿ ದಲಿತ ಚಳವಳಿಯ ಕ್ರಾಂತಿ ಕಿಡಿ ಹುಟ್ಟಿ ಹೆಮ್ಮರವಾಗಿ ಬೆಳೆಯಿತು. ಅಷ್ಟೇ ಅಲ್ಲ, ಅದು ನಾಲ್ಕು ದಶಕಗಳ ಕಾಲ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಪ್ರಭಾವಿಸಿತು.
ಬಿಕೆ ಎನ್ನುವುದು ಈ ನೆಲದ ದಲಿತರ ರಕ್ತದ ಕಣಕಣದಲ್ಲೂ ಬಹಳ ಪ್ರೀತಿಯಿಂದ ಮಾರ್ದನಿಸುತ್ತದೆ. ಯಾವುದೇ ಊರಿಗೆ ಬೇಕಾದರೂ ಹೋಗಿ.. ಬಿಕೆ ಎಂದರೆ ಸಾಕು ಜನ ಈ ಹೊತ್ತಿಗೂ ರೋಮಾಂಚಿತರಾಗುತ್ತಾರೆ. ಅಷ್ಟರ ಮಟ್ಟಿಗೆ ಪ್ರೊಫೆಸರ್ ಇಲ್ಲಿಯ ಮನೆಮನಗಳ ಸ್ಪೂರ್ತಿ, ಪ್ರೇರಣೆ ಮತ್ತು ಪ್ರಭಾವವಾಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಈ ದೇಶದ ಚರಿತ್ರೆ, ಪುರಾಣ, ರಾಜಕಾರಣ, ಸಮಾಜ, ಸಂಸ್ಕೃತಿ, ಆರ್ಥಿಕತೆ ಹೀಗೆ ಹತ್ತು ಹಲವು ಸಂಗತಿಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿ ದಲಿತರ ಬಿಡುಗಡೆಯ ಚಿಂತನೆಯನ್ನು ಮತ್ತು ರಾಜಕಾರಣವನ್ನು ಕಟ್ಟಿಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರು ಈ ದೇಶದ ಮೂಲೆ ಮೂಲೆಗೆ, ಹಟ್ಟಿ, ಹಾಡಿಗಳಿಗೆ ತಲುಪಲು ಈಗಿರುವಂತೆ ಅಂದು ಯಾವ ಮಾಧ್ಯಮಗಳೂ ಇರದಿದ್ದ ಕಾರಣ ಬಹುತೇಕ ಅಶಿಕ್ಷಿತರಾಗಿ , ಅನಕ್ಷರಸ್ಥ ರಾಗಿದ್ದ ದಲಿತರಿಗೆ ಅಪರಿಚಿತರಾಗಿಯೇ ಉಳಿದಿದ್ದರು. ಇಂತಹ ಕ್ರಾಂತಿಕಾರಿ ಮತ್ತು ಮನುಕುಲದ ಬಿಡುಗಡೆಯ ಕನಸುಗಾರನ ಬೃಹತ್ ಚಿಂತನೆ ಮತ್ತು ದರ್ಶನಗಳು ಅಕ್ಷರರೂಪದಲ್ಲಿ ಇದ್ದವು. ಆ ಎಲ್ಲ ಚಿಂತನೆಗಳನ್ನು ಅಕ್ಷರವೇ ಇಲ್ಲದಿದ್ದ ಕರ್ನಾಟಕದ ದಲಿತರ ಬೃಹತ್ ಸಮೂಹಕ್ಕೆ ಮೌಖಿಕ ಪರಂಪರೆಯ ಅಸ್ತ್ರ ಗಳಾದ ಭಾಷಣ, ಹಾಡು, ಕಥೆ, ಲಾವಣಿಗಳ ಮುಖಾಂತರ ಮನವರಿಕೆ ಮಾಡಿಕೊಟ್ಟಿದ್ದು ಪ್ರೊ. ಬಿ.ಕೃಷ್ಣಪ್ಪ. ಅಷ್ಟೇ ಅಲ್ಲ, ಇಲ್ಲಿಯ ತನ್ನ ಅನಾಥ, ಬಾಯಿಯಿಲ್ಲದ ದಲಿತ ಲೋಕಕ್ಕೆನಾಯಕತ್ವ ನೀಡಿ, ಅದನ್ನು ಶತಶತಮಾನಗಳಿಂದ ಸುಲಿಗೆ ಮಾಡುತ್ತಲೇ ಬಂದ ಶೋಷಕರು, ಪುರೋಹಿತಶಾಹಿಗಳು, ಭೂಮಾಲಿಕರು, ಜಾತಿವಾದಿಗಳು, ಪಾಳೆಗಾರರ, ಜನವಿರೋಧಿ ಮತ್ತು ಜಡಗೊಂಡ ಪ್ರಭುತ್ವದ ವಿರುದ್ಧ ನಿಲ್ಲಿಸಿ ಐತಿಹಾಸಿಕ ದಲಿತ ಸಂಘರ್ಷವನ್ನು ಕಟ್ಟಿದ್ದೂ ಸಹ ಬಿ.ಕೃಷ್ಣಪ್ಪ ನವರು.
ಈ ಅಪ್ರತಿಮ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪನವರು ಈ ನೆಲದಲ್ಲಿ ನಡೆಸಿದ ಹೋರಾಟಗಳು, ಧರಣಿಗಳು, ಪ್ರತಿಭಟನೆಗಳು ಸಾವಿರ ಸಾವಿರ ಸಂಖ್ಯೆಯಲ್ಲಿವೆ. ಇವತ್ತಿಗೂ ನೊಂದವರ ಎದೆಯಲ್ಲಿ ಹೋರಾಟದ ಕೆಚ್ಚನ್ನು, ಧೈರ್ಯವನ್ನು ಕೊಡುವ ಕೃಷ್ಣಪ್ಪನವರು ವರ್ತಮಾನದ ಮಹಾನ್ ಪ್ರೇರಕ ಶಕ್ತಿ. ಅವರು ಮಾಡಿದ ಹೋರಾಟಗಳು ಮತ್ತು ಚಿಂತನೆಗಳು ಆಳುವ ಸರ್ಕಾರದ ಆಲೋಚನೆಗಳನ್ನು ಬದಲಾಯಿಸುವಷ್ಟು ಮಟ್ಟಿಗೆ ಪ್ರಭಾವಶಾಲಿಯಾಗಿದ್ದವು. ಅವೇ ಎಷ್ಟು ಸಲ ಸರ್ಕಾರದ ನೀತಿ ನಿರೂಪಣೆಗಳಾಗಿಯೂ, ಕಾಯ್ದೆ ಕಾನೂನುಗಳಾಗಿಯೂ ಬದಲಾಗಿವೆ. ದಲಿತರ ಭೂಮಿ ಪರಬಾರೆ ನಿಷೇಧ ಕಾಯ್ದೆ, ದಲಿತರ ಮೇಲಿನ ದೌರ್ಜನ್ಯ ವಿರೋಧಿ ಕಾಯಿದೆ, ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧ, ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯ, ದಲಿತ ಭೂರಹಿತರಿಗೆ ಸರಕಾರಿ ಭೂಮಿ ಹಂಚಿಕೆ…. ಹೀಗೆ ಲೆಕ್ಕವಿಲ್ಲದಷ್ಟು ಸುಧಾರಣೆಗಳು ನೀತಿ ನಿರೂಪಣೆಗಳು ಬಿ.ಕೆ.ಅವರ ಹೋರಾಟದ ಫಲವೆಂದರೆ ತಪ್ಪಲ್ಲ.
ಬಿ.ಕೆಯವರು ಸದಾ ಹೇಳುತ್ತಿದ್ದ ಮಾತು… ”ದಲಿತರು ಬಡವರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ, ಅದು ಎಂದಿಗೂ ಆರದಂತೆ ನೋಡಿಕೊಳ್ಳಿ”. ಇದನ್ನು ದಲಿತರು ತಮ್ಮ ಮನೆಮನಸುಗಳ ಗೋಡೆಯಲ್ಲಿ ಬರೆದಿಟ್ಟುಕೊಳ್ಳಬೇಕು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರ ದಾರಿಯಲ್ಲಿ ಸಾಗಿದ ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಒಬ್ಬ ಮಹಾನ್ ಸಾಮಾಜಿಕ ಸುಧಾರಕ, ರಾಜಕೀಯ ಚಿಂತಕ, ದಲಿತರ ನಾಯಕ, ಅಪ್ರತಿಮ ವಾಗ್ಮಿ, ಅಪರೂಪದ ಸಾಹಿತಿ, ನಾಡಿನಾದ್ಯಂತ ಲಕ್ಷ ಲಕ್ಷ ಜನರನ್ನು ಹೋರಾಟಕ್ಕೆ ಇಳಿಸಿದ ಧೀಮಂತ ಜನನಾಯಕ. ಸಾಮಾಜಿಕ ನ್ಯಾಯ ಪ್ರತಿಪಾದಕ ಮತ್ತು ಮಹಾನ್ ಮಾನವತಾವಾದಿ.
……………………………
ಬಿ.ಎಲ್. ರಾಜು